ಮಳೆರಾಯನ ಅಬ್ಬರ ಮರ ಬಿದ್ದು ವಿದ್ಯುತ್ ಸ್ಥಗಿತ
Team Udayavani, Jun 9, 2018, 2:45 AM IST
ನರಿಮೊಗರು: ನಿರಂತರ ಸುರಿಯುತ್ತಿರುವ ಮಳೆಯಿಂದ ಭೂಮಿ ತೇವಗೊಂಡು ಬೇರು ಸಡಿಲಗೊಂಡು ಅಲ್ಲಲ್ಲಿ ಮರಗಿಡಗಳು ಬೀಳುವದರಿಂದ ಹೆಚ್ಚು ಸಮಸ್ಯೆಗಳಾಗುತ್ತವೆ.ಇಂತಹ ಸಮಸ್ಯೆ ಸವಣೂರು ಮೆಸ್ಕಾಂ ಉಪವಿಭಾಗಕ್ಕೆ ಬಂದಿತ್ತು. ಪುರುಷರಕಟ್ಟೆ ಸಮೀಪ ಆನಡ್ಕ ಎಂಬಲ್ಲಿ ಕಾಡಿನ ಮದ್ಯೆ ಹಾದುಹೋಗಿರುವ ವಿದ್ಯುತ್ ಮುಖ್ಯತಂತಿಗೆ ಬೃಹತ್ ಮರವೊಂದು ಮುರಿದು ಬಿದ್ದು ಕಂಬಗಳು ಮುರಿದಿತ್ತು.
ಗುರುವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಟಿಎಲ್ ಮತ್ತು ಎಸ್.ಎಸ್. ವಿಭಾಗ ಮಂಗಳೂರು ಇದರ ವತಿಯಿಂದ 110 ಕೆವಿ ನೆಟ್ಲಮುಟ್ನೂರು – ಪುತ್ತೂರು ದ್ವಿಮಾರ್ಗದಲ್ಲಿ ವಾಹಕದ ಮರುಜೋಡಣೆ ಕಾಮಗಾರಿ ನಿಮಿತ್ತ ಬೆಳಗ್ಗೆ 8ರಿಂದ ಅಪರಾಹ್ನ 4ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗಿತ್ತು. ಇದರಿಂದಾಗಿ ಸವಣೂರು ಉಪ ವಿದ್ಯುತ್ ಕೇಂದ್ರ ಸಹಿತ ಹಲವು ವಿವಿಧ ಉಪಕೇಂದ್ರಗಳಿಂದ ಸರಬರಾಜಾಗುವ ವಿದ್ಯುತ್ ಕಡಿತವಾಗಿತ್ತು.
ಸಂಜೆ ವೇಳೆ ಲೈನ್ ಚಾರ್ಜ್ ಸಂದರ್ಭ ವಿದ್ಯುತ್ ವಿತರಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದ ಮೆಸ್ಕಾಂಗೆ ಪುರುಷರಕಟ್ಟೆ ಸಮೀಪದ ಆನಡ್ಕದಲ್ಲಿ ಬೃಹತ್ ಮರ ಬಿದ್ದಿರುವುದು ಕಂಡು ಬಂತು. ಆದಾಗಲೇ ನಿರಂತರವಾಗಿ ಮಳೆ ಸುರಿಯುತ್ತಿತ್ತು. ಮರಬಿದ್ದ ಪ್ರದೇಶಕ್ಕೆ ವಾಹನ ಸಮಪರ್ಕ ಇಲ್ಲ. ಲೈನ್ ಹಾಗೂ ಕಂಬದ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಮೆಸ್ಕಾಂ ಸಿಬಂದಿ ಹರಸಾಹಸ ಪಡುತ್ತಿದ್ದರು. ರಾತ್ರಿ ವೇಳೆಗೆ ಮರ ತೆರವು ಮಾಡಿದ್ದರೂ ಲೈನ್ ದುರಸ್ತಿ, ಕಂಬ ಮರುಜೋಡಣೆಗೆ ಮಧ್ಯರಾತ್ರಿಯಲ್ಲಿಯೇ ಕಾರ್ಯಾಚರಣೆ ಮಾಡುತ್ತಿದ್ದರು. ಸುಮಾರು ಮಧ್ಯ ರಾತ್ರಿ 1ರವರೆಗೂ ವಿದ್ಯುತ್ ಮರುಪೂರೈಕೆಗೆ ಶ್ರಮಿಸಿದ್ದರು. ಮೆಸ್ಕಾಂನ ಈ ಕಾರ್ಯವೈಖರಿಗೆ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.
ಕೂಲ್ ಎಂಜಿನಿಯರ್
ವಿದ್ಯುತ್ ಕಡಿತ ಹಿನ್ನೆಲೆಯಲ್ಲಿ ನಿರಂತರವಾಗಿ ಸವಣೂರು ಉಪಕೇಂದ್ರಕ್ಕೆ ಹಾಗೂ ಮೆಸ್ಕಾಂ ಎಂಜಿನಿಯರ್ ಅವರಿಗೆ ನಿರಂತರವಾಗಿ ಕರೆಗಳು ಬರುತ್ತಿದ್ದರೂ ಸಾವಧಾನದಿಂದಲೇ ಉತ್ತರಿಸುತ್ತಿದ್ದರು. ಎಷ್ಟು ಹೊತ್ತಾದರೂ ಲೈನ್ ಚಾರ್ಜ್ ಮಾಡಿಯೇ ತೆರಳುತ್ತೇವೆ ಎಂದು ಗ್ರಾಹಕರಿಗೆ ತಿಳಿಸುತ್ತಿದ್ದರು. ಇಂತಹ ಜನಸ್ನೇಹಿ ಅಧಿಕಾರಿ ಇದ್ದರೆ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಯಬಹುದು ಎನ್ನುತ್ತಾರೆ ಗ್ರಾಹಕರು.
ಮಳೆಗಾಲದಲ್ಲಿ ಸಮಸ್ಯೆ
ಮಳೆಗಾಲದಲ್ಲಿ ಮೆಸ್ಕಾಂ ಇಲಾಖೆಗೆ ಹಲವು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಗುರುವಾರವೂ ಇಂತಹದೇ ಸಮಸ್ಯೆಯಾಗಿತ್ತು. 110 ಕೆವಿ ನೆಟ್ಲಮುಟ್ನೂರು-ಪುತ್ತೂರು ದ್ವಿಮಾರ್ಗದಲ್ಲಿ ವಾಹಕದ ಮರುಜೋಡಣೆಯ ನಿಮಿತ್ತ ಬೆಳಗ್ಗೆಯಿಂದಲೇ ವಿದ್ಯುತ್ ಪೂರೈಕೆ ಇರಲಿಲ್ಲ. ಸಂಜೆ ವೇಳೆಯೂ ಬಾರದಿದ್ದಾಗ ಜನತೆ ಮೆಸ್ಕಾಂ ಸಂಪರ್ಕಿಸುತ್ತಾರೆ. ಬೆಳಗ್ಗೆಯಿಂದಲೇ ವಿದ್ಯುತ್ ಇರದಿದ್ದರಿಂದ ಜನರಿಗೆ ಸಮಸ್ಯೆಯಾಗಿತ್ತು. ಗ್ರಾಹಕರಿಗೆ ಸಮಸ್ಯೆಯ ಕುರಿತು ವಿವರಿಸಿದರೆ ಅವರೂ ಸಹಕರಿಸುತ್ತಾರೆ. ಸ್ಪಂದಿಸಿದರೆ ಯಾವ ಲೋಪವೂ ಆಗುವುದಿಲ್ಲ. ಗ್ರಾಹಕರ ಎಲ್ಲ ದೂರವಾಣಿ ಕರೆಗಳನ್ನೂ ಸ್ವೀಕರಿಸುತ್ತೇವೆ. ಕೆಲವೊಮ್ಮೆ ಅನಿವಾರ್ಯ ಸಂದರ್ಭ ಅನನುಕೂಲತೆಯಾಗುತ್ತದೆ.
– ನಾಗರಾಜ್, JE, ಸವಣೂರು ಉಪಕೇಂದ್ರ
— ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.