ದಿನದಿಂದ ದಿನಕ್ಕೆ ದಾಂಗುಡಿಯಿಡುತ್ತಿರುವ ಬಿಸಿಲು
Team Udayavani, Oct 13, 2017, 2:18 PM IST
ನಗರ: ಬಿರು-ಬಿಸಿಲು ನಡುನೆತ್ತಿ ಸುಡುತ್ತಿದ್ದು, ಎಳನೀರಿಗೆ ಬೇಡಿಕೆ ದುಪ್ಪಟ್ಟಾಗುತ್ತಿದೆ. ನಗರದಲ್ಲಿ ಮಾರಾಟ ಪ್ರಮಾಣ ಹೆಚ್ಚಿದ್ದು, ಬಾಯಾರಿಕೆ ನೀಗಲು ಜನರು ಸಹಜವಾಗಿ ಎಳನೀರಿನತ್ತ ಮನಸ್ಸು ಮಾಡಿದ್ದಾರೆ.
ಊರಿನ ಬೊಂಡಕ್ಕೆ 35 ರೂ. ಧಾರಣೆ ಇದ್ದರೆ, ತಮಿಳು ನಾಡಿನಿಂದ ಬರುವ ಗೆಂದಾಲೇ ಬೊಂಡಕ್ಕೆ 40 ರೂ. ಧಾರಣೆ ಇದೆ. ಸೀಯಾಳವು ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯ ಆಗದಿರುವ ಕಾರಣ, ದರದಲ್ಲಿ ಇನ್ನಷ್ಟು ಏರಿಕೆ ಕಾಣಲಿದೆ ಎನ್ನುತ್ತಾರೆ ಕೆಲ ವ್ಯಾಪಾರಿಗಳು.
ಮಧ್ಯಾಹ್ನದ ಹೊತ್ತು ಬೇಡಿಕೆ ಹೆಚ್ಚು. ಒಂದೆರಡು ದಿನದಿಂದ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಇದಕ್ಕೆ ಮುಖ್ಯ ಕಾರಣ. ಬಹುತೇಕ ಸೀಯಾಳ ಸಂಜೆ ವೇಳೆಗೆ ಬಿಕರಿ ಆಗುತ್ತಿದೆ ಎನ್ನುತ್ತಾರೆ ಮಾಣಿ-ಮೈಸೂರು ರಸ್ತೆ ಬದಿಯಲ್ಲಿ ಸೀಯಾಳ ಮಾರುತ್ತಿರುವ ಶೀನಪ್ಪ.
ಕೆಲ ಬೊಂಡಗಳು ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ. ರೋಗದ್ದು ಇರುತ್ತವೆ. ಹಾಗಾಗಿ ಗ್ರಾಹಕರಿಗೆ ನೀಡಲು ಸಾಧ್ಯವಾಗುವುದಿಲ್ಲ. ಔಷಧೀಯ ಗುಣ ಇರುವ ಕಾರಣ ಜೀಕೆ, ಗೆಂದಾಲೆಯಂತಹ ಬೊಂಡಕ್ಕೆ ಬೇಡಿಕೆ ಹೆಚ್ಚು ಎನ್ನುತ್ತಾರೆ ವ್ಯಾಪಾರಿ ಐತ್ತಪ್ಪ.
ಪೂರೈಕೆ ಕೊರತೆ
ತಮಿಳುನಾಡಿನಲ್ಲಿ ತೆಂಗು ಉತ್ಪಾದನೆ ಕುಸಿತ ಕಂಡ ಕಾರಣ, ದೇಶದ ಅತಿ ದೊಡ್ಡ ತೆಂಗು ಮಾರುಕಟ್ಟೆ ಕೊಯಮುತ್ತೂರು ಹಾಗೂ ಕಾಂಗಯಂಗಳಲ್ಲಿ ಬೇಡಿಕೆಗೆ ತಕ್ಕಂತೆ ತೆಂಗಿನಕಾಯಿ ಸಿಗುತ್ತಿಲ್ಲ. ಹೀಗಾಗಿ ಕರ್ನಾಟಕ, ಕೇರಳದಿಂದ ಬೇಡಿಕೆ ಹೆಚ್ಚಾಗಿದೆ. ದೇಶದ ಪ್ರಮುಖ ತೆಂಗು ಉತ್ಪಾದನ ರಾಜ್ಯಗಳಾದ ಕೇರಳ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಉತ್ಪಾದನೆ ಪ್ರಮಾಣ ಗಣನೀಯ ಇಳಿಕೆ ಕಂಡಿದೆ ಅನ್ನುತ್ತದೆ ಈಗಿನ ಅಂಕಿ-ಅಂಶ.
ಕರ್ನಾಟಕ, ಕೇರಳ ಹಾಗೂ ಆಂದ್ರಪ್ರದೇಶದಲ್ಲಿ ತೆಂಗಿನಕಾಯಿ ಕಟಾವು ಹೊತ್ತಲ್ಲಿ, ತಮಿಳುನಾಡಿನಲ್ಲಿ ತೆಂಗು ಹೂ ಬಿಡುವ ಕಾಲ. ಇತ್ತೀಚೆಗೆ ತಮಿಳುನಾಡಿನಲ್ಲಿ ನೆರೆ ಉಂಟಾದ ಕಾರಣ, ಅಲ್ಲಿ ಇಳುವರಿ ಕಡಿಮೆ ಆಗಿದೆ. ಹೀಗಾಗಿ ತೆಂಗು ಮಾರುಕಟ್ಟೆ ಕೊಯಮುತ್ತೂರು ಹಾಗೂ ಕೋಕನೆಟ್ ಸಿಟಿ ಖ್ಯಾತಿಯ ಕಾಂಗಯಂ ಮಾರುಕಟ್ಟೆಗೆ ಕೇರಳ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ತೆಂಗು ಅನಿವಾರ್ಯವಾಗಿರುವುದು ಕೂಡ ಸೀಯಾಳ ಕೊರತೆಗೆ ಕಾರಣ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಸೀಯಾಳ ಪೂರೈಕೆ
ನಗರಕ್ಕೆ ಎರಡು-ಮೂರು ದಿವಸಕೊಮ್ಮೆ ಸೀಯಾಳ ಪೂರೈಕೆ ಆಗುತ್ತದೆ. ಮಂಗಳೂರು, ಕೆಲವೊಮ್ಮೆ ಮೈಸೂರು, ಗ್ರಾಮಾಂತರ ಪ್ರದೇಶದಿಂದ ಪೂರೈಕೆ ಆಗುತ್ತದೆ. ಕೆಂದಾಳೆ ತಮಿಳುನಾಡಿನಿಂದ ಬರುತ್ತಿದ್ದು, ವಾರಕ್ಕೊಮ್ಮೆ ವಿಲೇವಾರಿ ಮಾಡಲಾಗುತ್ತದೆ. ಸೀಜನ್ ಗೆ ತಕ್ಕಂತೆ ಖರೀದಿಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಮಂಗನ ಹಾವಳಿ
ಮಂಗನ ವಿಪರೀತ ಹಾವಳಿಯಿಂದ ತೆಂಗಿನ ಮರ ಬರಿದಾಗಿರುವುದು ಊರಿನ ಸಿಯಾಳ ಕೊರತೆ ಮುಖ್ಯ ಕಾರಣ. ಮಂಗ ಓಡಿಸಲು ಏನೇ ಪ್ರಯೋಗ ಮಾಡಿದರೂ, ಅದರಿಂದ ಪ್ರಯೋಜನ ಸಿಗುತ್ತಿಲ್ಲ. ಹಾಗಾಗಿ ತೋಟದಲ್ಲಿನ ತೆಂಗಿನ ಮರದಲ್ಲಿ ಸೀಯಾಳ ಇಲ್ಲ. ಮುಂದಕ್ಕೆ ತೆಂಗಿನ ಕಾಯಿಯು ಸಿಗದು. ಕಳೆದ ಬಾರಿ 200 ಕ್ಕೂ ಅಧಿಕ ಸೀಯಾಳ ಮಾರಿದ್ದೆ. ಈ ಬಾರಿ ಮಂಗನ ಕಾಟದಿಂದ ಮಾರಿಲ್ಲ ಅನ್ನುತ್ತಾರೆ ಪ್ರಗತಿಪರ ಕೃಷಿಕ ಶ್ರೀಧರ ನೀರ್ಕಜೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.