ಜಾರ್ಜ್ ವಿರುದ್ಧ ಹೋರಾಟ; ಮಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ
Team Udayavani, Nov 10, 2017, 6:00 AM IST
ಮಂಗಳೂರು: ಬೆಳಗಾವಿಯಲ್ಲಿ ನ. 13ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣವನ್ನು ಮುಂದಿಟ್ಟು ಸಚಿವ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ತೀವ್ರ ಸ್ವರೂಪದ ಹೋರಾಟ ನಡೆಸಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ತೀರ್ಮಾನಿಸಿದೆ.
ಇದೇ ಮೊದಲ ಬಾರಿಗೆ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕೇಂದ್ರ ಸಚಿವರು ಹಾಗೂ ರಾಜ್ಯ ಬಿಜೆಪಿ ಚುನಾವಣಾ ಪ್ರಭಾರಿ ಗಳಾದ ಪ್ರಕಾಶ್ ಜಾಬ್ಡೇಕರ್, ಪಿಯೂಷ್ ಗೋಯಲ್ ನೇತೃತ್ವದಲ್ಲಿ ಗುರುವಾರ ನಡೆದ ಪಕ್ಷದ ಈ ಮಹತ್ವದ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ. ಸದಾನಂದ ಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ವಿಧಾನಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ನಳಿನ್ ಕುಮಾರ್ ಕಟೀಲು, ಪ್ರಮುಖರಾದ ಮುರಳೀಧರ ರಾವ್, ಸಿ.ಎಂ. ಉದಾಸಿ, ಅರವಿಂದ ಲಿಂಬಾವಳಿ, ಸಂತೋಷ್, ಅರುಣ್ ಕುಮಾರ್, ಆರ್. ಅಶೋಕ್, ಸಿ.ಟಿ. ರವಿ ಭಾಗವಹಿಸಿದ್ದರು.
ಈ ನಡುವೆ ಕಳೆದ ತಿಂಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ನಿಗದಿಯಾಗಿದ್ದ ಬಿಜೆಪಿಯ ಉನ್ನತ ಮಟ್ಟದ ಸಭೆ ಕೊನೆಯ ಕ್ಷಣದಲ್ಲಿ ರದ್ದುಗೊಂಡಿತ್ತು.
ಗುರುವಾರದ ಸಭೆಯಲ್ಲಿ ಮುಂಬರುವ ಚುನಾವಣೆ ಎದುರಿಸಲು, ಪಕ್ಷ ಸಂಘಟನೆಗೆ ಏನೆಲ್ಲ ಕಾರ್ಯತಂತ್ರ ರೂಪಿಸಬೇಕು ? ಆಡಳಿತ ಪಕ್ಷದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಡುವುದು ಸಹಿತ ಹಲವಾರು ವಿಚಾರಗಳ ಬಗ್ಗೆ ಪಕ್ಷದ ನಾಯಕರು ಪರಸ್ಪರ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರ ಹಾಗೂ ನಾನಾ ರೀತಿಯ ಗೊಂದಲಗಳಿಂದಾಗಿ ಪಕ್ಷದ ವಲಯದಲ್ಲಿ ಟೀಕೆಗಳಿಗೆ ಗುರಿಯಾಗಿ ಮುಜುಗರಕ್ಕೆ ಎಡೆ ಮಾಡುತ್ತಿರುವ
ಬಿಜೆಪಿಯ ಪರಿವರ್ತನ ಯಾತ್ರೆಯನ್ನು ಕೂಡ ಹೇಗೆ ಮುಂದಿನ ದಿನಗಳಲ್ಲಿ ಯಶಸ್ವಿಗೊಳಿಸಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ ಪಕ್ಷದ ಕೋರ್ ಸಮಿತಿ ಸಭೆ ನಡೆ ಯುತ್ತಿರಬೇಕಾದರೆ, ತುರ್ತು ಕಾರ್ಯಕ್ರಮದ ನಿಮಿತ್ತ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸಭೆ ಮುಕ್ತಾಯಗೊಳ್ಳುವುದಕ್ಕೂ ಮೊದಲೇ ನಿರ್ಗಮಿಸಿದ್ದರು. ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪಕ್ಷದ ಕೋರ್ ಸಮಿತಿ ಸಭೆ ನಡೆದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಸ್ಥಳೀಯ ನಾಯಕರು ಕೂಡ ಹೊಟೇಲ್ ಬಳಿ ಬೆಳಗ್ಗಿನಿಂದಲೇ ಕಾದು ಕುಳಿತಿದ್ದರು.
ಕೋರ್ ಸಮಿತಿ ಸಭೆ ಬಳಿಕ ಪತ್ರಕರ್ತರೊಂದಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬೆಳಗಾವಿ ಅಧಿವೇಶನ ದಲ್ಲಿ ಸದನದ ಹೊರಗೆ ಹಾಗೂ ಒಳಗೆ ಬಿಜೆಪಿ ವಿಪಕ್ಷವಾಗಿ ಹೇಗೆ ಹೋರಾಟ- ಪ್ರತಿಭಟನೆಗಳನ್ನು ಮಾಡಬೇಕು ಎಂಬ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಆಯೋಜಿಸಿರುವ ಪರಿವರ್ತನ ಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನ. 10ರಿಂದ ಕರಾವಳಿ ಭಾಗದಲ್ಲಿ ಪರಿವರ್ತನ ಯಾತ್ರೆ ಮತ್ತೆ ಮುಂದುವರಿಯಲಿದೆ. ಎಲ್ಲ ಕಡೆಗಳಲ್ಲಿ ಜನರು ಬಿಜೆಪಿಯ ಯಾತ್ರೆಗೆ ಅಭೂತಪೂರ್ವ ಸ್ವಾಗತ ನೀಡುತ್ತಿದ್ದಾರೆ. ಅಧಿವೇಶನ ನಡೆಯುವ ಸಂದರ್ಭ ಯಾತ್ರೆಯು ಬೆಳಗಾವಿ ಜಿಲ್ಲೆಗೆ ತಲುಪಲಿದೆ. ಡಿ. 21ಕ್ಕೆ ಹುಬ್ಬಳ್ಳಿಯಲ್ಲಿ ಯಾತ್ರೆಯ ಸಮಾರೋಪ ಬೃಹತ್ ಸಮಾವೇಶದ ಮೂಲಕ ನಡೆಯಲಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೇರಳದಲ್ಲಿ ನಡೆದ ಸೋಲಾರ್ ಹಗರಣಕ್ಕೆ ಸಂಬಂಧಿಸಿ ಜಸ್ಟಿಸ್ ಜಿ. ಶಿವರಂಜನ್ ಕಮಿಶನ್ ವರದಿ ನೀಡಿದ್ದು. ಅದರಲ್ಲಿ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಸಹ ಉಸ್ತುವಾರಿಗಳಾದ ಪಿ.ಸಿ. ವಿಷ್ಣುನಾಥ್ ಅವರು ಹಗರಣ ಮಾಡಿರುವ ಬಗ್ಗೆ ವಿವರ ಕೊಟ್ಟಿದ್ದಾರೆ. ಹಾಗೂ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಿ ಸಿಎಂ ಪಿಣರಾಯಿ ವಿಜಯನ್ ಅವರಲ್ಲಿ ವರದಿ ನೀಡಲಾಗಿದೆ. ಹೀಗಾಗಿ ಅತ್ಯಾಚಾರ ಪ್ರಕರಣ ದಲ್ಲಿರುವವರನ್ನು ಕಾಂಗ್ರೆಸ್‌ನವರು ಕರ್ನಾಟಕಕ್ಕೆ ಕರೆತರುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದು ಈಗಿನ ಪ್ರಶ್ನೆ. ಜತೆಗೆ ಚಿಕ್ಕಮಗಳೂರಿನಲ್ಲಿ ಅವರು ಸಭೆ ಆಯೋಜಿಸಿದ್ದಾರೆ. ಅವರು ಸಭೆ ನಡೆಸಲು ಹೋಗುತ್ತಾರೋ ಅಥವಾ ಇನ್ನೇನು ಮಾಡುವುದಕ್ಕೆ ಹೋಗುತ್ತಾರೋ ಅಂತ ನಮಗೆ ಭಯ ಆರಂಭವಾಗಿದೆ. ಹೀಗಾಗಿ ಕೇಂದ್ರ ಕಾಂಗ್ರೆಸ್‌ನವರು ದಯವಿಟ್ಟು ಅವರನ್ನು ವಾಪಸ್ ಕಳುಹಿಸಬೇಕು ಎಂದು ಲಿಂಬಾವಳಿ ಹೇಳಿದರು.
ಪರಿಷತ್ ಅಭ್ಯರ್ಥಿ ಘೋಷಣೆ ವಿಳಂಬ
ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಗುರುವಾರದ ಕೋರ್ ಕಮಿಟಿ ಸಭೆಯಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಈಗಾಗಲೇ ರಚಿಸಿರುವ ಕೆಲವು ಉಪ ಸಮಿತಿ ಸಭೆಗಳು ಆಗಿದ್ದು, ಇನ್ನೂ ಕೆಲವು ಉಪಸಮಿತಿ ಸಭೆ ನಡೆಯಬೇಕಿದೆ. ಎರಡು ಮೂರು ದಿನದೊಳಗೆ ಈ ಉಪಸಮಿತಿ ಸಭೆ ನಡೆದು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ವರದಿ ನೀಡಬೇಕಿದೆ. ಚಿತ್ರದುರ್ಗ, ತುಮಕೂರು, ದಾವಣಗೆರೆ, ಗುಲ್ಬರ್ಗ, ಮೈಸೂರು ಉಪಸಮಿತಿ ಸಭೆ ಆಗಿಲ್ಲ.
ಮಂಗಳೂರು, ಬೆಂಗಳೂರು, ಶಿವಮೊಗ್ಗ ಉಪಸಮಿತಿ ಸಭೆ ಈಗಾಗಲೇ ಆಗಿದ್ದು, ಇನ್ನೊಂದು ಹಂತದ ಸಭೆ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಸಮಿತಿ ಸಭೆಯ ವರದಿಯನ್ನು ರಾಜ್ಯ ಅಧ್ಯಕ್ಷರು ಬಿಜೆಪಿ ಸಂಘಟನಾ ಉಸ್ತುವಾರಿ ಮುರಳೀಧರ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾಬ್ಡೇಕರ್, ಪಿಯೂಸ್ ಗೋಯೆಲ್ ಅವರ ಜತೆಗೆ ಚರ್ಚೆ ಮಾಡಿ, ಜಿಲ್ಲಾ ಪ್ರಮುಖರ ಜತೆಗೂ ಚರ್ಚಿಸಿ ಪಟ್ಟಿ ಸಿದ್ಧಗೊಳಿಸಿ ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಬಳಿಕವಷ್ಟೇ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದು ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.
ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ಕೋರ್ ಕಮಿಟಿ ಸಭೆ
ಪರಿವರ್ತನ ಯಾತ್ರೆಯಲ್ಲಿ ನಾಯಕರ ಮಧ್ಯೆ ಒಗ್ಗಟ್ಟಿಲ್ಲ ಎಂಬ ಆರೋಪ ಕೇಳಿ ಬರು ತ್ತಿರುವ ಸಂದರ್ಭದಲ್ಲಿಯೇ ಮಂಗಳೂರಿ ನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಒದಗಿಸಿತು. ಪ್ರಹ್ಲಾದ್ ಜೋಶಿ, ಡಿ. ಪುರಂದೇಶ್ವರಿ ಹಾಗೂ ಗೋವಿಂದ ಕಾರಜೋಳ ಹೊರತುಪಡಿಸಿ ಉಳಿದ ಎಲ್ಲ 15 ಸದಸ್ಯರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವ ಮೂಲಕ ಬಿಜೆಪಿ ಒಗ್ಗಟ್ಟು ಪ್ರದರ್ಶಿಸಿದರು. 12.30ಕ್ಕೆ ಆರಂಭವಾಗಬೇಕಿದ್ದ ಸಭೆ ಅಪರಾಹ್ನ 1.15ರ ವೇಳೆಗೆ ಆರಂಭ ಗೊಂಡಿತು. ಬಳಿಕ 2.30ರ ವೇಳೆಗೆ ಊಟ ಮುಗಿಸಿದ ಅನಂತರ ಮತ್ತೆ ಸಭೆ ಆರಂಭವಾಗಿ ಸಂಜೆ 5ರ ವರೆಗೆ ಮುಂದು ವರಿಯಿತು. ಬಿಜೆಪಿಯ ಜಿಲ್ಲಾ ನಾಯಕರ ಸಹಿತ ಪ್ರಮುಖರು ಖಾಸಗಿ ಹೊಟೇಲ್‌ನ ಮುಂಭಾಗದಲ್ಲಿ ಉಳಿದುಕೊಂಡರು.
ವೇಣುಗೋಪಾಲ್ ರಾಜೀನಾಮೆ ನೀಡದಿದ್ದರೆ ಮುತ್ತಿಗೆ
ಅತ್ಯಾಚಾರ ಆರೋಪವೆದುರಿಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ತನ್ನ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡದಿದ್ದರೆ ಅವರು ಪಾಲ್ಗೊ ಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಸ್ಟಿಸ್ ಶಿವರಂಜನ್ ವರದಿ ಪ್ರಕಾರ ವೇಣುಗೋಪಾಲ್ ವಿರುದ್ಧ ಅತ್ಯಾಚಾರ ಆರೋಪ ಸಾಬೀತಾಗಿದೆ. ಹಾಗಾಗಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.