ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ
Team Udayavani, Mar 7, 2018, 12:39 PM IST
ಕಡಬ : ರಾಷ್ಟ್ರೀಯ ಸ್ವಚ್ಛತಾ ಮಿಷನ್‌ನಿಂದ ಜಿಲ್ಲಾ ಪಂಚಾಯತ್ ಮೂಲಕ ಜಿಲ್ಲೆಯ ಗ್ರಾ.ಪಂ. ಗಳಿಗೆ ಕಾಂಪೋಸ್ಟ್ ಪೈಪ್ ಖರೀದಿಯ ವೇಳೆ ನಡೆದಿದೆ ಎನ್ನಲಾದ ಲಕ್ಷಾಂತರ ರೂ. ಅವ್ಯವಹಾರದ ತನಿಖೆ ಕುಟ್ರಾಪ್ಪಾಡಿ ಗ್ರಾ.ಪಂ.ನಿಂದ ಆರಂಭಗೊಂಡು ಇದೀಗ ಪುತ್ತೂರು ಮತ್ತು ಸುಳ್ಯ ತಾಲೂಕಿನ ಹಲವು ಗ್ರಾ.ಪಂ. ಗಳಿಗೆ ವಿಸ್ತರಣೆಯಾಗುವ ಮೂಲಕ ಹಗರಣಕ್ಕೆ ಸಂಬಂಧಿಸಿದ ಹಲವರಲ್ಲಿ ನಡುಕ ಉಂಟಾಗಿದೆ.
ಕುಟ್ರಾಪ್ಪಾಡಿಯಲ್ಲಿ ಬೆಳಕಿಗೆ
ಪುತ್ತೂರು ತಾಲೂಕಿನ ಕುಟ್ರಾಪ್ಪಾಡಿ ಗ್ರಾ.ಪಂ.ಗೆ ಕಾಂಪೋಸ್ಟ್ ಪೈಪ್ ಖರೀದಿ ಮಾಡಿದ ವೇಳೆ ಅವ್ಯವಹಾರ ನಡೆದಿದೆ ಎನ್ನುವ ದೂರಿನಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. 2015-16ನೇ ಸಾಲಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯಡಿ ಪೈಪ್ ಕಾಂಪೋಸ್ಟ್ ಘಟಕ ಆರಂಭಿಸಲು ಸಿಮೆಂಟ್ ಕಾಂಪೋಸ್ಟ್ ಪೈಪ್ ಖರೀದಿಸಬೇಕೆಂದು ಜಿ.ಪಂ.ನಿಂದ ಗ್ರಾ.ಪಂ.ಗೆ ಸುತ್ತೋಲೆ ಬಂದಿತ್ತು. ಅದೇ ಸಂದರ್ಭದಲ್ಲಿ ಜಿ.ಪಂ. ನೆರವು ಘಟಕದ ಸಮಾಲೋಚಕ ಎ.ಆರ್. ರೋಹಿತ್ ಅವರು ಮೈಸೂರಿನ ಪಿ.ಜಿ. ಟ್ರೇಡರ್ ಎನ್ನುವ ಸಂಸ್ಥೆಯ ಬಿಲ್ ನೀಡಿ 1 ಲಕ್ಷ ರೂ. ಮೌಲ್ಯದ ಸಿಮೆಂಟ್ ಕಾಂಪೋಸ್ಟ್ ಪೈಪ್ ಗಳನ್ನು ಸರಬರಾಜು ಮಾಡಿದ್ದರು.
ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅನಂತರ ನಡೆದ ಗ್ರಾಮಸಭೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಕ್ಸೇವಿಯರ್ ಬೇಬಿ ಹಾಗೂ ಇತರರು ಆರೋಪಿಸಿದ್ದರು. ವಿಚಾರ ಬಳಿಕ ನಡೆದ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ, ಪೈಪ್ ಸರಬರಾಜು ಮಾಡಿದ್ದರೆನ್ನಲಾದ ಎ.ಆರ್.ರೋಹಿತ್ ಅವರು ಹೆಚ್ಚುವರಿಯಾಗಿ ಪಡೆದಿದ್ದರೆನ್ನಲಾದ 13 ಸಾವಿರ ರೂ.ಗಳನ್ನು ಪಂಚಾಯತ್‌ಗೆ ಮರುಪಾವತಿ ಮಾಡಿಸಿಕೊಳ್ಳಲಾಗಿತ್ತು.
ಹಲವು ಪಂಚಾಯತ್‌ಗಳಲ್ಲಿ ಅವ್ಯವಹಾರ
ಪುತ್ತೂರು-ಸುಳ್ಯ ತಾ|ಗಳ ಗ್ರಾ.ಪಂ.ಗಳಿಗೆ ಕಾಂಪೋಸ್ಟ್ ಪೈಪ್ ಪೂರೈಸುವ ಜವಾಬ್ದಾರಿ ಹೊಂದಿದ್ದ ಎ.ಆರ್. ರೋಹಿತ್ ಅವರು ಪುತ್ತೂರು ತಾ|ನ ಕುಟ್ರಾಪ್ಪಾಡಿ, ಪೆರಾಬೆ, ಕೊಯಿಲ, ಆರ್ಯಾಪು, ಕೋಡಿಂಬಾಡಿ, ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಹಾಗೂ ಜಾಲ್ಸೂರು ಸಹಿತ ಎರಡು ತಾ|ಗಳ ಅನೇಕ ಗ್ರಾ.ಪಂ. ಗಳಿಗೆ ಕಾಂಪೋಸ್ಟ್ ಪೈಪ್ ಪೂರೈಕೆಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಂಚಾಯತ್‌ಗಳಿಗೆ ನಕಲಿ ಕೊಟೇಶನ್ ಸಲ್ಲಿಸಿ, ಮೈಸೂರಿನ ಪಿ.ಜಿ. ಟ್ರೇಡರ್ ಮತ್ತು ಸುಂದ್ರು ಮಾರ್ಕೆಟಿಂಗ್ ಎಂಬ ಬೋಗಸ್ ಕಂಪೆನಿಗಳ ಹೆಸರಿನಲ್ಲಿ ಕಡಿಮೆ ಬೆಲೆಯ ಪೈಪ್ ಗಳನ್ನು ಖರೀದಿ ಮಾಡಿ, ಹೆಚ್ಚು ಬಿಲ್ ತಯಾರಿಸಿ ಪಂಚಾಯತ್‌ನಿಂದ ಹಣ ಪಡೆದುಕೊಂಡು ವಂಚಿಸಲಾಗಿದೆ. ಆ ಪೈಕಿ ಪಿ.ಜಿ. ಟ್ರೇಡರ್ ಎಂಬುದು ರೋಹಿತ್ ಅವರ ಸಂಬಂಧಿಗೆ ಸೇರಿದ ಸುಬ್ರಹ್ಮಣ್ಯ ಸಮೀಪ ತೆಂಗಿನ ಕಾಯಿ ವ್ಯಾಪಾರ ನಡೆಸುವ ಅಂಗಡಿ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಅಂಗಡಿ ಮಾಲಕ ಚೇತನ್ ಎಂಬುವರನ್ನೂ ಎಸಿಬಿ ಪೊಲೀಸರು ತನಿಖೆಗೊಳಪಡಿಸಿದ್ದಾರೆ.
ರೋಹಿತ್ ಮೂಲಕ ಕಾಂಪೋಸ್ಟ್ ಪೈಪ್‌ಗ್ಳನ್ನು ಖರೀದಿ ಮಾಡಿರುವ ಹಲವು ಗ್ರಾ.ಪಂ.ಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿರುವ ಎಸಿಬಿ ಅಧಿಕಾರಿಗಳು ಅಲ್ಲಿಯೂ ಆರ್ಥಿಕ ಅವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಿದ್ದಾರೆ. ಆಗ ಗ್ರಾ.ಪಂ.ಗಳಲ್ಲಿ ಅಧಿಕಾರದಲ್ಲಿದ್ದ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿಗಾಗಿ ಎಸಿಬಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ತನಿಖೆಗೆ ದೊರೆತ ವೇಗ
ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಅಸ್ತಿತ್ವದಲ್ಲಿ ಇಲ್ಲದ ಅಂಗಡಿಯ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ, ಪೈಪ್ ಗಳಿಗೆ ನೈಜ ದರಕ್ಕಿಂತ ಹೆಚ್ಚು ಹಣ ನೀಡಲಾಗಿದೆ ಎಂದು ಕ್ಸೇವಿಯರ್ ಬೇಬಿ ಅವರು ಎಸಿಬಿಗೆ ದೂರು ನೀಡಿದ್ದರು. ಅದರಂತೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಆಗಿನ ಕಾರ್ಯದರ್ಶಿ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿಕೊಂಡಿತ್ತು. ಅವರಿಬ್ಬರೂ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು. ತನಿಖೆ ಮುಂದುವರಿದು ಕೆಲ ದಿನಗಳ ಹಿಂದೆ ಜಿ.ಪಂ. ನೆರವು ಘಟಕದ ಸಮಾಲೋಚಕ, ಐತ್ತೂರಿನ ಅಂತಿಬೆಟ್ಟು ನಿವಾಸಿ ಎ.ಆರ್. ರೋಹಿತ್ ಎಂಬುವರನ್ನು ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್‌ಕುಮಾರ್ ನೇತೃತ್ವದ ತಂಡ ಬಂಧಿಸುವ ಮೂಲಕ ತನಿಖೆ ಇನ್ನಷ್ಟು ವೇಗ ಪಡೆದುಕೊಂಡಿದೆ.
ಅನುಮತಿಗಾಗಿ ಪತ್ರ
ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಅವ್ಯವಹಾರದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ವೇಳೆ ಅದೇ ರೀತಿ ಸುಳ್ಯ ಮತ್ತು ಪುತ್ತೂರು ತಾಲೂಕಿನ ಹಲವು ಗ್ರಾ.ಪಂ.ಗಳಲ್ಲಿ ಸರಕಾರಿ ಅನುದಾನವನ್ನು ಕಬಳಿಸಿರುವುದು ಬೆಳಕಿಗೆ ಬಂದಿತ್ತು. ಅವ್ಯವಹಾರ ನಡೆದಿರುವ ಎಲ್ಲ ಗ್ರಾ.ಪಂ. ಗಳಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳುವುದಕ್ಕಾಗಿ ಸರಕಾರದ ಅನುಮತಿಗಾಗಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ.
– ಯೋಗೀಶ್‌ಕುಮಾರ್
ಎಸಿಬಿ ಇನ್‌ಸ್ಪೆಕ್ಟರ್
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.