ಅಶಕ್ತರ ಪಾಲಿನ ಆಶಾಕಿರಣ ಸೇವಾರೂಪದ ಅಭಯ ಚೇತನ ; MLC ಕೆ. ಹರೀಶ್ ಕುಮಾರ್
ಎಂಎಲ್‌ಸಿ ಕೆ. ಹರೀಶ್ ಕುಮಾರ್ ಅವರಿಂದ ನೆರವಿನ ಮಹಾಪೂರ
Team Udayavani, Jun 8, 2020, 3:20 AM IST
ಮ ರಣ ಮೃದಂಗವನ್ನೇ ಬಾರಿಸುತ್ತಿರುವ ಕೋವಿಡ್-19 ಜಾಗತಿಕವಾಗಿ ಇನ್ನಿಲ್ಲದಂತೆ ನಿಬ್ಬೆರಗಾಗಿಸಿದೆ.
ಸೋಂಕು ಹರಡದಂತೆ ದೇಶಾದ್ಯಂತ ಕೇಂದ್ರ ಸರಕಾರ ಮಾರ್ಚ್ ಅವಧಿಯಲ್ಲಿ ಕೈಗೊಂಡ ಲಾಕ್‌ಡೌನ್ ಕ್ರಮದಿಂದ ಬೆಳ್ತಂಗಡಿ ತಾಲೂಕಿನ ಜನತೆ ಅಗತ್ಯ ದಿನಬಳಕೆ ಸಾಮಗ್ರಿ ಖರೀದಿಸುವಲ್ಲಿ ಇನ್ನಿಲ್ಲದಂತೆ ಹಪಹಪಿಸುವಂತಾಗಿತ್ತು.
ಇದನ್ನು ಮನಗಂಡು ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ನೆರವಿನ ಹಸ್ತ ಚಾಚಿದವರೇ ಕರ್ನಾಟಕ ವಿಧಾನಪರಿಷತ್ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್.
ಸರಕಾರಗಳು ಪಡಿತರ ಸಹಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೂ ಅದೆಷ್ಟೋ ಕುಟುಂಬಗಳು ಖರೀದಿಸುವ ಶಕ್ತಿ ಇಲ್ಲದೆ ಒಳಗೊಳಗೆ ಕೊರಗುತ್ತಿದ್ದವು. ಇದನ್ನೆಲ್ಲ ಸೂಕ್ಷ್ಮವಾಗಿ ಕಂಡ ಹರೀಶ್ ಕುಮಾರ್ ಎಂಬ ಸೇವಾ ಧುರೀಣ ತನ್ನ ಬೆಂಬಲಿಗರೊಂದಿಗೆ ನೆರವಿಗೆ ಧಾವಿಸಿದರು. ಸಂಘಸಂಸ್ಥೆಗಳು, ದಾನಿಗಳ ನೆರವಿಲ್ಲದೆ ತನ್ನ ಕ್ಷೇತ್ರದ ಜನ ಹಸಿವಿನಿಂದ ಬಳಲುವಂತಾಗಬಾರದು ಎಂಬ ತೀರ್ಮಾನಕ್ಕೆ ಬಂದಿದ್ದರು.
ರಾಜಕಾರಣಿಗಳೆಂದರೆ ಪರಸ್ಪರ ಪಕ್ಷ, ರಾಜಕೀಯ ಇವೆಲ್ಲದರ ಮಧ್ಯೆ ಆರೋಪ- ಪ್ರತ್ಯಾರೋಪಗಳಲ್ಲೇ ತಲ್ಲೀನ ಹೆಚ್ಚು. ಆದರೆ ರಾಜಕೀಯದ ಸಿದ್ಧಾಂತದಲ್ಲೇ ಸ್ವಲ್ಪ ವಿಭಿನ್ನತೆಯಲ್ಲಿ ಗುರುತಿಸಿಕೊಳ್ಳುವವರು ಹರೀಶ್ ಕುಮಾರ್. ಸರಳ ಹಾಗೂ ತನ್ನನ್ನು ಆಶ್ರಯಿಸಿ ಬಂದವರಿಗೆ ಬರಿಗೈಯಲ್ಲಿ ಹಿಂದಿರುಗಿಸದವರಾಗಿ ಜನಾನುರಾಗಿಯಾದವರು.
ಇಂತಹ ಮೇರುವ್ಯಕ್ತಿತ್ವದ ಹರೀಶ್ ಕುಮಾರ್ ತನ್ನ ಜನ ಸಂಕಷ್ಟದಲ್ಲಿದ್ದಾರೆ ಎಂದರಿತ ಕೂಡಲೇ ಹಳ್ಳಿ ಹಳ್ಳಿಗೆ ಧಾವಿಸಿ ಗ್ರಾಮೀಣರ ಸಂಕಷ್ಟ ಅರಿತರು. ತಡ ಮಾಡದೆ ತನ್ನ ಕಾರ್ಯಕರ್ತರು, ಬೆಂಬಲಿಗರಿಗೆ ಆಹಾರ ಕಿಟ್ ಸಿದ್ಧಪಡಿಸಲು ಸೂಚಿಸಿದರು. ಪಕ್ಷ, ರಾಜಕೀಯ ಲಾಭ ಹೊರತಾಗಿ ಸಂಕಷ್ಟದಲ್ಲಿದ್ದ ಪ್ರತಿಯೊಬ್ಬರಿಗಾಗಿ ಮಿಡಿದರು. ಪೌರ ಕಾರ್ಮಿಕರಿಂದ ಹಿಡಿದು ಆಟೋ ಚಾಲಕರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಗೃಹರಕ್ಷಕ ದಳ, ಟ್ಯಾಕ್ಸಿ ಚಾಲಕರು, ಫೋಟೋಗ್ರಾಫರ್, ವಲಸೆ ಕಾರ್ಮಿಕರ ಸಹಿತ ಎಲ್ಲರ ಸಂಕಷ್ಟದ ಬೊಗಸೆಗೆ ಅಕ್ಷಯ ಪಾತ್ರೆಯಾದರು.
ವಿಧಾನ ಪರಷತ್ ಸದಸ್ಯನಾಗಿ ತನಗೆ ಸರಕಾರ ನೀಡುವ ವೇತನ ಹಾಗೂ ಸಾರಿಗೆ ವೆಚ್ಚವನ್ನು ಸಂಪೂರ್ಣವಾಗಿ ನೆರವಿಗಾಗಿಯೇ ಮೀಸಲಿಟ್ಟ ಅಪರೂಪದ ರಾಜಕಾರಣಿಯಾಗಿ ಕರ್ತವ್ಯ ಮೆರೆದರು. ತಾನು ಪಕ್ಷದ ಹುದ್ದೆ ಅಲಂಕರಿಸುವ ಮುನ್ನ ಕ್ಷೇತ್ರದ ಮನೆ ಮನೆಗೆ ಮತ ಪಡೆಯಲು ತೆರಳಿದಂತೆ ಅದೇ ಮತ ಹಾಕಿದ ಕೈಗಳು ಇಂದು ಉದ್ಯೋಗವಿಲ್ಲದೆ ಬರಿದಾದಾಗ ಋಣಸಂದಾಯಕ್ಕೊಂದು ಇದು ಸೂಕ್ತ ಎಂಬಂತೆ ಗ್ರಾಮೀಣರ ಪಾಲಿನ ಅಭಯ ಸಿಂಧುವಾದರು.
ಕಳೆದ 50 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಬೆಳ್ತಂಗಡಿಯ ಆರೋಗ್ಯ ಸೈನಿಕರನ್ನು ಗುರುತಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದರಲ್ಲದೆ, ಆಶಾ ಕಾರ್ಯಕರ್ತೆಯರಿಗೆ ತಲಾ 500 ರೂ. ಗಳಂತೆ 1.25 ಲಕ್ಷ ರೂ. ಸಹಾಯಧನ ಒದಗಿಸಿದರು. ಪ್ರತಿದಿನ ಮುಂಜಾನೆ ಒಂದೊಂದು ಗ್ರಾಮವನ್ನು ಗುರುತಿಸಿ ಅಲ್ಲಿರುವ ಸಂಕಷ್ಟಕ್ಕೊಳಗಾದವರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸಿದರು.
ಹರೀಶ್ ಕುಮಾರ್ ರಾಜಕೀಯದಲ್ಲಿದ್ದರೂ ಬಡವರ ಜೀವನದ ವಿಚಾರದಲ್ಲಿ ಎಂದೂ ರಾಜಕೀಯ ಮಾಡಿದ ಉದಾಹರಣೆಗಳಿಲ್ಲ. ಕೋವಿಡ್-19ರಿಂದ ಸಂಕಷ್ಟಕ್ಕೊಳಗಾದವರನ್ನು ಸರಕಾರ ಸೂಕ್ತ ಸಮಯದಲ್ಲಿ ಉಪಚರಿಸಿಲ್ಲ ಎಂದು ಧರಣಿ ಕುಳಿತುಕೊಳ್ಳದೆ ತಾನೇ ಸಂಕಷ್ಟದಲ್ಲಿದ್ದವರ ಕಣ್ಣೀರೊರೆಸಲು ಮುಂದಾಗುವ ಮೂಲಕ ಸಮಾಜಕ್ಕೊಂದು ಸಂದೇಶ ನೀಡಿದರು.
ಹಸಿದವನಿಗೆ ಒಂದೊತ್ತು ಉಪಚರಿಸುವುದಕ್ಕಿಂತ ಮಿಗಿಲಲ್ಲ ಎಂಬುದನ್ನು ಈ ಮೂಲಕ ಸಾರಿದರು. ಇದು ಕೇವಲ ಇಂದಿಗೆ ಮಾತ್ರವಲ್ಲ, ಕಳೆದ ಬಾರಿ ತಾಲೂಕಿಗೆ ನೆರೆ ಬಂದು ಅಪ್ಪಳಿಸಿದಾಗ ನಿರಾಶ್ರಿತರಾದ ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡಿ ತನ್ನಿಂದಾದ ಸಹಾಯಹಸ್ತ ಚಾಚಿ ನೆರೆ ಪ್ರದೇಶದ ಮಂದಿಗೆ ಮರು ಬದುಕು ಕಟ್ಟಿಕೊಟ್ಟಿದ್ದರು. ಇದು ಅವರ ಸೇವಾ ಕ್ಷಮತೆಗೆ ಮತ್ತೂಂದು ಉದಾಹರಣೆ.
ಹಗಲಿರುಳು ದುಡಿದ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ನಿರಾಶ್ರಿತರು, ಕೋವಿಡ್-19 ರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಸೀಲ್‌ಡೌನ್ ಆದ ಕರಾಯ ಗ್ರಾಮದ ಜನತಾ ಕಾಲನಿಯ 88 ಕುಟುಂಬಗಳಿಗೆ, ಗುತ್ತಿಗೆ ನೌಕರರಿಗೆ, ಹಗಲಿರುಳು ದುಡಿದ ಸೇವಾ ಸಿಬಂದಿಗೆ, ಕೂಲಿ ಕಾರ್ಮಿಕರಿಗೆ ಜಾತಿ ಭೇದ ಮರೆತು, ಪಕ್ಷ ಭೇದ ಮರೆತು ಸಂಕಷ್ಟದಲ್ಲಿರುವ ಜನತೆಯನ್ನು ಸಂತೈಸಿರುವುದು ಇವರ ಸತ್ಕಾರ್ಯ.
ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅವರ ಮನದಾಳದ ಮಾತು
ಪರಿಸರದಿಂದ ಮನುಷ್ಯ ಸಂಕುಲಕ್ಕೆ ಉಂಟಾದ ಹಾನಿಯಿಂದ ಮನುಷ್ಯನೇ ಅದನ್ನು ಸುಧಾರಣೆಗೆ ತರಬೇಕಿದೆ. ಜನತೆ ಸಂಕಷ್ಟದ ಹಾದಿಯಲ್ಲಿ ಪರಿತಪಿಸುತ್ತಿರುವಾಗ ಜನಪ್ರತಿನಿಧಿ ಅಥವಾ ಸದೃಢರು ನೆರವಿನ ಹಸ್ತ ಚಾಚಬೇಕಾದದ್ದು ಹೊಣೆಗಾರಿಕೆಯಾಗಿದೆ. ಅದೇ ಕರ್ತವ್ಯವನ್ನು ಇಂದು ನಾನು ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ಸಶಕ್ತರಿರುವ ನಾಗರಿಕರು ಅಶಕ್ತರಿಗೆ ಸಹಾಯ ಮಾಡುವ ಮೂಲಕ ಕೋವಿಡ್ ಸಂದರ್ಭದಲ್ಲಿ ಆಸರೆಯಾಗಬೇಕಿದೆ. ತಾಲೂಕಿನ ಜನತೆ ನಮ್ಮೆಲ್ಲರ ಆರೋಗ್ಯ ರಕ್ಷಣೆಗಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ಜಾಗೃತರಾಗಬೇಕು. ಅನಗತ್ಯವಾಗಿ ತಿರುಗಾಟವನ್ನು ನಡೆಸದೆ ಸರಕಾರದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದರ ಮೂಲಕ ಕೊರೊನಾ ಮಹಾಮಾರಿಯಿಂದ ಪಾರಾಗಬೇಕು.
-ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯರು
1. ಕೋವಿಡ್ ಆರಂಭದ ಸ್ಥಿತಿಗತಿ, ಮುಂದೆ ಸರಕಾರ ನಿರ್ವಹಿಸ ಬೇಕಾದ ಕ್ರಮಗಳ ಬಗ್ಗೆ ನಿಮ್ಮ ಸಲಹೆ ಏನು?
ಕೋವಿಡ್ ಭಾರತಕ್ಕೆ ಕಾಲಿಡುವ ಮುನ್ನ ಮತ್ತು ಬಳಿಕದ ದಿನಗಳನ್ನು ಗಮನಿಸಿದಾಗ ಪ್ರಸಕ್ತ ಕೇಂದ್ರ ಸರಕಾರ ಕೈಚೆಲ್ಲಿ ಕುಳಿತಂತಿದೆ. ಆರ್ಥಿಕತೆ ಸಮತೋಲನಕ್ಕೆ ಕೇಂದ್ರ ದಿಟ್ಟ ನಿರ್ಧಾರಗಳನ್ನು ತಾಳಬೇಕಿದೆ. ಶಿಕ್ಷಣ ಕ್ಷೇತ್ರದ ಚೇತರಿಕೆ, ವಿದೇಶದ ಹೂಡಿಕೆ, ಉದ್ಯೋಗ ಸೃಷ್ಟಿಯೆಡೆಗೆ ವಿಶೇಷ ಪ್ಯಾಕೇಜ್‌ಗಳ ಆವಶ್ಯಕತೆಯಿದೆ.
2. ಕೋವಿಡ್ ಪ್ರಮಾಣ ತಗ್ಗಿಸುವಲ್ಲಿ ಆಸ್ಪತ್ರೆ ಹಾಗೂ ವೈದ್ಯರ ಸವಲತ್ತುಗಳನ್ನು ಹೇಗೆ ಹೆಚ್ಚಿಸಬಹುದು?
ಕೋವಿಡ್-19 ನಿಂದಾಗಿ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಸರಕಾರದ ವಿಶೇಷ ಪ್ಯಾಕೇಜ್ ಕುರಿತು ಭರವಸೆ ಇಲ್ಲದಂತಾಗಿದೆ. ಕೋವಿಡ್ ಮೂರನೇ ಹಂತಕ್ಕೆ ತಲುಪುವ ಮುನ್ನ ಪ್ರತಿ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಘಟಕ ತೆರೆಯಬೇಕು. ಭವಿಷ್ಯದ ಮಾರಕ ಕಾಯಿಲೆ ಸಂದರ್ಭದಲ್ಲೂ ಪ್ರಯೋಜನಕಾರಿಯಾಗಲಿದೆ. ಕೋವಿಡ್ 19 ವಾರಿಯರ್ಸ್‌ಗಳಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಅವರ ಕುಟುಂಬದ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು.
3. ಆದಾಯವಿಲ್ಲದೆ ಖಾಸಗಿ ಸಾರಿಗೆ ಹಾಗೂ ಕಂಪೆನಿಗಳ ತೆರಿಗೆ ವಿನಾಯಿತಿ ಬಗೆಗೆ ನಿಮ್ಮ ನಿಲುವು?
ಖಾಸಗಿ ಬಸ್ ಮಾಲಕರಿಗೆ ಆರ್ಥಿಕ ನಷ್ಟ ಎದುರಿಸಲು ಆರು ತಿಂಗಳ ರೋಡ್ ಟ್ಯಾಕ್ಸ್ ಹಾಗೂ ಇನ್ಸೂರೆನ್ಸ್ ಮನ್ನಾ ಮಾಡಬೇಕು. ಖಾಸಗಿ ಕಂಪೆನಿಗಳು ನಷ್ಟದಿಂದ ಹೊರಬರಲಾಗದೆ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಸರಕಾರ ಉದ್ಯೋಗ ಭದ್ರತೆ ಒದಗಿಸುವ ಸಲುವಾಗಿ ತೆರಿಗೆ ವಿನಾಯಿತಿ ನೀಡಬೇಕು. ಹಾಗಾದಲ್ಲಿ ಮಾತ್ರ ಸ್ವದೇಶಿ ಕಂಪೆನಿಗಳು ಉಳಿಯಲಿವೆ.
4. ಕೋವಿಡ್ ತಡೆಗಟ್ಟುವಲ್ಲಿ ಸರಕಾರದೊಂದಿಗೆ ಜನಪ್ರತಿನಿಧಿ ಯಾಗಿ ನೀವು ಕೈಗೊಂಡ ನಿರ್ಧಾರಗಳೇನು?
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಕೋವಿಡ್ ನಿಯಂತ್ರಣದಲ್ಲಿ ಆರಂಭದಲ್ಲಿ ಸಫಲತೆ ಕಂಡರೂ ಪ್ರಸಕ್ತ ಸಂಪೂರ್ಣ ವಿಫಲವಾಗಿದೆ. ನಾನೊಬ್ಬ ಜನ ಪ್ರತಿನಿಧಿಯಾಗಿ ಕ್ಷೇತ್ರದ ಜನತೆಯ ಸಂಕಷ್ಟದ ಸಂದರ್ಭ ಜಾಗೃತಿಯ ಜೊತೆಗೆ ಅಗತ್ಯ ಆಹಾರದ ಆವಶ್ಯಕತೆ ಪೂರೈಸಿದ್ದೇನೆ. ಇದಕ್ಕೂ ಮಿಗಿಲಾಗಿ ಕೋವಿಡ್ ವಾರಿಯರ್ಸ್‌ಗಳ
ಕಷ್ಟ ಆಲಿಸಿ ಸಮಸ್ಯೆಗೆ ಸ್ಪಂದಿಸಿದ್ದೇನೆ.
5. ಕೋವಿಡ್ ಜಾಗತಿಕ ಸಮಸ್ಯೆ ಮಧ್ಯೆ ಉದ್ಯೋಗ ಕಳೆದುಕೊಳ್ಳು ತ್ತಿರುವ ಯುವಜನತೆಗೆ ನಿಮ್ಮ ಸಲಹೆ?
ಪ್ರಾಕೃತಿಕವಾಗಿ ಕೆಟ್ಟ ಆಘಾತ ಎದುರಿಸ ಬೇಕಾಗಿ ಬಂದಿದೆ. ಕೋವಿಡ್ ಹಿಮ್ಮೆಟ್ಟಿಸುವಲ್ಲಿ ಸ್ವಯಂ ಜಾಗೃತಿ ಕಠಿನ ಪಾಲನೆಯಾಗಬೇಕು. ಯುವ ಸಮೂಹ ಕೃಷಿ ಹಾಗೂ ತಂತ್ರಜ್ಞಾನದತ್ತ ವಾಲಬೇಕಿದೆ. ಎಷ್ಟೋ ಬರಡು ಭೂಮಿ ಇಂದು ಹಸಿರಾಗಿಸಲು ಸಕಾಲ. ಇದಕ್ಕೆ ಸರಕಾರ ಈಗಾಗಲೇ ಶೂನ್ಯಬಡ್ಡಿ ಸಾಲದೊಂದಿಗೆ ಯಾಂತ್ರಿಕ ಪ್ರಯೋಗಶೀಲತೆಗೆ ಆದ್ಯತೆ ನೀಡಬೇಕು.
6. ಕೊರೊನಾ ವಿರುದ್ಧದ ಸಮರದ ಬಗ್ಗೆ ಜನತೆಗೆ ನಿಮ್ಮ ಸಲಹೆಯೇನು?
ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಹೊಟೇಲ್, ದೇವಸ್ಥಾನ, ಮಾರುಕಟ್ಟೆ, ಶುಭ ಕಾರ್ಯಕ್ರಮಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ನಮಗೆ ನಾವೇ ರಕ್ಷಕರಾಗಿ ಕೋವಿಡ್ ವಿರುದ್ಧ ಹೋರಾಡಬೇಕಿದೆ. ಕೋವಿಡ್ ಸಂದರ್ಭ ಕಾರ್ಯನಿರ್ವಹಿಸಿದ ಕೋವಿಡ್ ವಾರಿಯರ್ಸ್‌ಗಳಾದ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ದಾದಿಯರ ಸೇವೆಯನ್ನು ಜನತೆ ಗೌರವಿಸಬೇಕಿದೆ.
ರೈತರ ಹಿತ ಕಾಯ್ದ ಹರೀಶ್ ಕುಮಾರ್
ಲಾಕ್‌ಡೌನ್‌ನಿಂದ ಅನ್ನ ಆಹಾರವಿಲ್ಲದೆ ಸಂಕಷ್ಟಕ್ಕೊಳಗಾದವರಿಗೆ ಆಹಾರ ಒದಗಿಸುವ ಮೂಲಕ ಮಾನವೀಯತೆ ಮೆರೆಯುವುದು ಒಂದೆಡೆಯಾದರೆ, ಅಡಿಕೆ, ಕೊಕ್ಕೋ, ರಬ್ಬರ್, ಗೇರು ಬೀಜ ಮಾರಾಟಕ್ಕೆ ಮಾರುಕಟ್ಟೆ ಕೊರತೆ ಕಂಡುಬಂದಾಗ ಮೊದಲು ಧ್ವನಿಯಾದರು. ತಹಶೀಲ್ದಾರ್ ಮೂಲಕ ಕಾಂಗ್ರೆಸ್ ನಿಯೋಗ ಶೀಘ್ರ ಮಾರುಕಟ್ಟೆ ಒದಗಿಸುವಂತೆ ಸರಕಾರದ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಎಪಿಎಂಸಿ ಸಹಿತ ಮಾರುಕಟ್ಟೆ ತೆರೆಯಲು ಇದು ಕಾರಣವಾಯಿತು. ರಾಜಕೀಯ ಧುರೀಣನಾಗಿ ತನ್ನ ಕ್ಷೇತ್ರದ ಹಿತ ಕಾಯುವುದರೊಂದಿಗೆ ರಾಜ್ಯದ ಕೃಷಿ ವರ್ಗದ ಚೇತರಿಕೆಯೆಡೆಗೂ ದೂರದೃಷ್ಟಿ ಚಿಂತನೆ ಇವರ ರಾಜಕೀಯ ಪ್ರಬುದ್ಧತೆ ಹಾಗೂ ಅನುಭವವನ್ನು ತೆರೆದಿಟ್ಟಿತು.
ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ರಕ್ಷಕ ಸಿಬಂದಿ, ವೈದ್ಯಾಧಿಕಾರಿಗಳಿಗೆ ವಿವಿಧ ದಾನಿಗಳ ನೆರವಿನಿಂದ ಸುಮಾರು 50 ಸಾವಿರ ರೂ. ಮೌಲ್ಯದ ಮಾಸ್ಕ್, ಸ್ಯಾನಿಟೈಸರ್ ವಿತರಿಸುವ ಸಂದರ್ಭ ತನ್ನ ಧನಸಹಾಯವನ್ನು ಈ ಮೂಲಕ ಆರೋಗ್ಯ ಸೇವೆಗಾಗಿ ಮುಡುಪಿಟ್ಟು ಕರ್ತವ್ಯಪ್ರಜ್ಞೆ ಮೆರೆದರು.
ಮಧ್ಯಮ ವರ್ಗದ ಮಂದಿಗೂ ಸಂಕಷ್ಟ ಎದುರಾದಾಗ ಹರೀಶ್ ಕುಮಾರ್ ಮಧ್ಯಮವರ್ಗದ ಸಂಕಷ್ಟಕ್ಕೀಡಾದವರ ಪಟ್ಟಿ ತಯಾರಿಸಿದರಲ್ಲದೆ, ಆಹಾರ ಕೊರತೆ ಕಂಡುಬಂದ ಕ್ಷೇತ್ರದ ಮಧ್ಯಮ ವರ್ಗವಿರಲಿ ಶ್ರೀಮಂತರಿರಲಿ ನೆರವು
ಬಯಸಿ ತನ್ನನ್ನು ಸಂಪರ್ಕಿಸುವಂತೆ ಕರೆ ನೀಡಿದರು. ಇದಾದ ಬಳಿಕ ಸುಮಾರು 10,000ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ಒದಗಿಸಿ ರಾಜ್ಯದ ಯಾವೊಬ್ಬ ಎಂಎಲ್‌ಸಿಯೂ ಮಾಡದ ಕೆಲಸವನ್ನು ಕೈಗೆತ್ತಿಕೊಳ್ಳುವ ಮೂಲಕ ಆದರ್ಶರಾದರು.
ಧೈರ್ಯ ತುಂಬುವ ಕಾರ್ಯ
ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಕೋವಿಡ್ ಸೋಂಕಿನ ಪ್ರಕರಣ ಕಾಣಿಸಿಕೊಂಡ ಸಂದರ್ಭದಲ್ಲೇ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಸ್ಥಳೀಯ ಗ್ರಾ.ಪಂ. ಹಾಗೂ ಗ್ರಾಮಕ್ಕೆ 5 ಬಾರಿ ಭೇಟಿ ಕೊಟ್ಟು ನಮ್ಮಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಜನಪ್ರತಿನಿಧಿಗಳು, ಕೋವಿಡ್ ವಾರಿಯರ್ಸ್‌ಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಕೊರೊನಾ ಮುಕ್ತ ಪಂಚಾಯತ್‌ಯನ್ನಾಗಿಸಲು ಅವರ ಶ್ರಮ ವಿಶೇಷವಾಗಿದೆ. ಆಹಾರ ಕಿಟ್, ವೈದ್ಯಕೀಯ ನೆರವಿನ ಜತೆಗೆ ಕೋವಿಡ್ ಪೀಡಿತ ಪ್ರದೇಶದ ನೀರಿನ ಬರ ನೀಗಿಸಲು ಕೊಳವೆಬಾವಿಗೂ ಅನುದಾನ ನೀಡಿದ ಅವರ ಕಾಳಜಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
– ಜಯವಿಕ್ರಮ್ ಕಲ್ಲಾಪು,ಅಧ್ಯಕ್ಷರು, ಗ್ರಾ.ಪಂ. ತಣ್ಣೀರುಪಂತ
ಕೋವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್ ಅವರು ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಒಟ್ಟು 1,25,000 ರೂ.ಗಳ ಸಹಾಯಧನವನ್ನು ನೀಡಿ ನಿರಂತರ ಪ್ರೋತ್ಸಾಹಿಸಿದ್ದಾರೆ. ಅವರಿಂದ ಮುಂದೆಯೂ ಪ್ರೋತ್ಸಾಹದ ನಿರೀಕ್ಷೆಯಲ್ಲಿರುವ ಆಶಾ ಕಾರ್ಯಕರ್ತೆಯರ ಪರ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
– ಶ್ರೀಮತಿ ಶೋಭಾ, ನಡ, ಆಶಾ ಕಾರ್ಯಕರ್ತೆ
ಕೋವಿಡ್-19 ಸಂದರ್ಭದಲ್ಲಿ ಕೆ.ಹರೀಶ್ ಕುಮಾರ್ ಅವರ ಸೇವೆಯನ್ನು ಕಂಡು ತುಂಬಾ ಖುಷಿಯಾಗಿದೆ. ಆರ್ಥಿಕ ವಾಗಿ ತೀರಾ ಕಡು ಬಡತನದಲ್ಲಿದ್ದವರನ್ನು ಗುರುತಿಸಿ ಅವರಿಗೆ ಆಹಾರ ದಾನ ಮಾಡಿದ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು.
– ದೀಪಕ್ ಜಿ., ಅಖಿಲ ಕರ್ನಾಟಕ ರಾಜಕೇಸರಿ ಸಂಸ್ಥಾಪಕರು ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ- ಉಪ್ಪಿನಂಗಡಿ ಬಸ್ ನೌಕರರ ಸಂಘ
ಕೋವಿಡ್ ಲಾಕ್‌ಡೌನ್‌ನಂಥ ಸಂಕಷ್ಟದ ಸ್ಥಿತಿಯಲ್ಲಿ ವಿಧಾನ ಪರಿಷತ್ ಸದಸ್ಯರು ಮಾಡಿದ ಸಹಾಯದಿಂದ ನಮಗೆ ಸಾಕಷ್ಟು ನೆರವಾಗಿದೆ. ಮುಂದಿನ ದಿನಗಳಲ್ಲೂ ನಮ್ಮ ಕಷ್ಟಗಳಿಗೆ ನಿಮ್ಮ ಸಹಕಾರವನ್ನು ನಿರೀಕ್ಷಿಸುತ್ತೇನೆ.
– ಸುರೇಶ್, ಅಧ್ಯಕ್ಷರು, ಪೌರ ಕಾರ್ಮಿಕ ನೌಕರರ ಸಂಘ, ಪಟ್ಟಣ ಪಂಚಾಯತ್, ಬೆಳ್ತಂಗಡಿ
ಮಹಾರಾಷ್ಟ್ರದ ಮುಂಬೈಯಿಂದ ಬಂದು ಕರ್ನಾಟಕದ ನಿಪ್ಪಾಣಿಯಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡು ಅನೇಕ ನಾಯಕರನ್ನು ಸಂಪರ್ಕ ಮಾಡಿ ನಿರಾಸೆಗೊಂಡಿದ್ದ ನಮಗೆ ಕೆ. ಹರೀಶ್ ಕುಮಾರ್ ಅವರು ಪಾಸ್‌ನ ವ್ಯವಸ್ಥೆ ಮಾಡಿ ಕುಟುಂಬ ಸಮೇತರಾಗಿ ಊರಿಗೆ ಬರಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕಷ್ಟಕಾಲದಲ್ಲಿ ನಮ್ಮ ನೆರವಿಗೆ ಬಂದ ಅವರ ಸೇವೆಯನ್ನು ನಮ್ಮ ಸಂಪೂರ್ಣ ಕುಟುಂಬ ಎಂದು ಮರೆಯಲು ಸಾಧ್ಯವಿಲ್ಲ.
– ದೇವರಾಜ್ ಕೋಟ್ಯಾನ್, ಹೊಟೇಲ್, ಉದ್ಯಮಿ ಮುಂಬಯಿ
ವಿಧಾನಪರಿಷತ್ತಿನ ಸದಸ್ಯ ಕೆ. ಹರೀಶ್ ಕುಮಾರ್ ಅವರು ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸಿ ಕೋವಿಡ್-19 ತಡೆಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಲಾಕ್‌ಡೌನ್ ಸಂದರ್ಭ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ಗೃಹರಕ್ಷಕ ದಳದ ಸಿಬಂದಿಗೆ ಆಹಾರ ಕಿಟ್‌ಗಳನ್ನೂ ವಿತರಿಸಿದ್ದಾರೆ. ಅಲ್ಲದೆ ತಾಲೂಕಿನ ವಿವಿಧ ಕಡೆಗಳಲ್ಲಿ ನೊಂದ ಕುಟುಂಬಗಳಿಗೆ ಕಿಟ್ ವಿತರಿಸಿದ್ದಾರೆ. ತಾಲೂಕಿನ ಜನರ ಆಶೋ ತ್ತರಗಳನ್ನು ಈಡೇರಿಸುವಲ್ಲಿ ಬಹಳಷ್ಟು ಶ್ರಮ ವಹಿಸಿ ತಮ್ಮಕರ್ತವ್ಯವನ್ನು ಸಕ್ರಿಯವಾಗಿ ನಿರ್ವಹಿಸುತ್ತಿರುವ ಅವರಿಗೆ ಗೃಹರಕ್ಷಕ ದಳದ ಘಟಕಾಧಿಕಾರಿಯಾದ ನಾನು ಧನ್ಯವಾದ ಸಲ್ಲಿಸುತ್ತೇನೆ.
– ಜಯಾನಂದ ಪೂಜಾರಿ, ಗೃಹರಕ್ಷಕದಳದ ಘಟಕಾಧಿಕಾರಿ, ಬೆಳ್ತಂಗಡಿ
ಕೋವಿಡ್ ಮಹಾಮಾರಿ ವೈರಸ್‌ನಿಂದಾಗಿ ದೇಶವೇ ಲಾಕ್‌ಡೌನ್ ಆಗಿ ತೀರಾ ಸಂಕಷ್ಟದಲ್ಲಿದ್ದ ಸಂದರ್ಭ ಛಾಯಾ
ಚಿತ್ರ ಗ್ರಾಹಕರು, ಬೆಳ್ತಂಗಡಿ ತಾಲೂಕಿನ ಛಾಯಾಗ್ರಾಹಕರ ಸಂಘದ ಮನವಿಗೆ ತತ್‌ಕ್ಷಣ ಸ್ಪಂದಿಸಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್‌ಕುಮಾರ್ ಅವರು ಆಹಾರ ಕಿಟ್ ನೀಡುವ ಮೂಲಕ ಛಾಯಾಗ್ರಾಹಕರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಅವರ ಇಂತಹ ಸೇವೆಗೆ ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ಪರವಾಗಿ ಬೇಡಿಕೊಳ್ಳುತ್ತೇನೆ.
– ಸುರೇಶ್ ಕೌಡಂಗೆ, ಅಧ್ಯಕ್ಷರು, ಛಾಯಾಗ್ರಾಹಕರ ಸಂಘ, ಬೆಳ್ತಂಗಡಿ ತಾಲೂಕು
ನಮ್ಮ ಪಕ್ಷ, ಜಾತಿ ಅಥವಾ ಧರ್ಮ ಯಾವುದೆಂದು ನೋಡದೆ ಕೋವಿಡ್ ವಾರಿಯರ್ಸ್‌ಗಳ ರೂಪದಲ್ಲಿ ಕಾರ್ಯಾಚರಿಸುತ್ತಿರುವ ಆ್ಯಂಬುಲೆನ್ಸ್ ಚಾಲಕರನ್ನು ಗುರುತಿಸಿ, ಕಷ್ಟಕಾಲದಲ್ಲಿ ನಮ್ಮ ನೆರವಿಗೆ ಬಂದಂತಹ ಕೆ. ಹರೀಶ್‌ಕುಮಾರ್ ಅವರ ಸೇವೆಯನ್ನು ಎಲ್ಲಾ ಆ್ಯಂಬುಲೆನ್ಸ್ ಚಾಲಕರ ಪರವಾಗಿ ಅಭಿನಂದಿಸಲು ಸಂತೋಷ ಪಡುತ್ತೇನೆ.
– ಹಮೀದ್, ಆ್ಯಂಬುಲೆನ್ಸ್ ಚಾಲಕ
ಜಾತಿ, ಧರ್ಮದ ಭೇದ ಭಾವ ಬಿಟ್ಟು ಎಲ್ಲ ಆಟೋ ರಿಕ್ಷಾ ಚಾಲಕರಿಗೆ ಆಹಾರ ಕಿಟ್ ವಿತರಿಸಿರುವುದು ಬಹಳಷ್ಟು ಸಂತೋಷವಾಗಿದೆ. ಲಾಕ್‌ಡೌನ್‌ನಿಂದ ಸುಮಾರು 40 ದಿನಗಳ ಕಾಲ ಸಂಕಷ್ಟ ಎದುರಿಸಿದ ನಮಗೆ ಕೆ.ಹರೀಶ್ ಕುಮಾರ್ ಪ್ರಥಮವಾಗಿ ನಮ್ಮ ಸಂಕಷ್ಟವನ್ನು ಅರಿತು ಸಹಾಯಹಸ್ತ ಚಾಚಿರುವುದು ನಮಗೆಲ್ಲಾ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.
– ಬಾಬು ಗೌಡ, ರಿಕ್ಷಾ ಚಾಲಕರು, ಸಂತೆಕಟ್ಟೆ, ಬೆಳ್ತಂಗಡಿ
ಅನಿರೀಕ್ಷಿತವಾಗಿ ಬಂದೆರಗಿದ ಲಾಕ್‌ಡೌನ್‌ನಿಂದ ಬಾಡಿಗೆ ಇಲ್ಲದೆ ಕುಟುಂಬ ನಿರ್ವಹಿಸಲು ಕಷ್ಟ ಪಡುತ್ತಿದ್ದ ಸಂದರ್ಭ ದಲ್ಲಿ ಹರೀಶ್‌ಕುಮಾರ್ ಅವರು ಆಹಾರ ಕಿಟ್ ನೀಡಿ ಬಹಳ ಪುಣ್ಯದ ಕೆಲಸ ಮಾಡಿದ್ದಾರೆ. ನಿಮಗೆ ಧನ್ಯವಾದಗಳು.
– ಮೊಹಮ್ಮದ್, ಆಶೀರ್ವಾದ್ ಟೆಂಪೊ, ಸಂಜಯನಗರ, ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.