ಮಳಲಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಪತ್ರಕ್ಕೆ ಮೋದಿ ಸ್ಪಂದನೆ
Team Udayavani, Jul 10, 2018, 11:21 AM IST
ಕೈಕಂಬ : ಜಲಕ್ಷಾಮ, ಅರಣ್ಯನಾಶ ಹಾಗೂ ಪರಿಸರ ಮಾಲಿನ್ಯದ ಕುರಿತಾಗಿ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಮಳಲಿ ಇಲ್ಲಿನ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಈಗ ಸ್ಪಂದನೆ ಸಿಕ್ಕಿದೆ. ವಿದ್ಯಾರ್ಥಿಗಳ ಪರವಾಗಿ ಚೈತ್ರಾ ಪತ್ರ ಬರೆದರೆ ಗಣೇಶ್ ಎನ್ನುವ ವಿದ್ಯಾರ್ಥಿ ಪರಿಸರದ ಕುರಿತ ಚಿತ್ರ ಬರೆದು ಅದಕ್ಕೆ ವಿದ್ಯಾರ್ಥಿಗಳ ಸಹಿ ಹಾಕಿಸಿ ಪತ್ರ ಬರೆದಿದ್ದರು.
ಪತ್ರದಲ್ಲೇನಿದೆ?
ಮೋದಿಯವರನ್ನು ‘ಅಜ್ಜ’ ಎಂದು ಸಂಬೋಧಿಸಿ ಕನ್ನಡದಲ್ಲಿ ಬರೆಯಲಾದ ಪತ್ರದಲ್ಲಿ ದೇಶ, ಕೈಗಾರಿಕಾ ರಾಷ್ಟ್ರವಾಗುತ್ತಿರುವ ಬೆನ್ನಲ್ಲೇ ಅರಣ್ಯ ನಾಶ, ಜಲಕ್ಷಾಮ ಹಾಗೂ ಪರಿಸರ ಮಾಲಿನ್ಯಕ್ಕೆ ತುತ್ತಾಗುವ ಅಪಾಯವನ್ನು ಉಲ್ಲೇಖೀಸಲಾಗಿದೆ. ಜಲಕ್ಷಾಮ ಹಾಗೂ ಪರಿಸರ ಮಾಲಿನ್ಯ ದೇಶಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಬಿಸಿಲ ಬೇಗೆ ತಾಳಲಾಗುತ್ತಿಲ್ಲ. ಇದನ್ನೆಲ್ಲ ನೋಡಿದಾಗ ಭವಿಷ್ಯವೇನಾಗುತ್ತದೋ ಎಂಬ ಭಯ ಕಾಡುತ್ತದೆ. ನೀವು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಶ್ರಮಿಸುತ್ತಿದ್ದೀರಿ. ಆದರೆ ಕೈಗಾರಿಕೀಕರಣದಿಂದ ಅರಣ್ಯ ನಾಶವಾಗುತ್ತಿದೆ. ಅರಣ್ಯ ಬೆಳೆಸಲು ನಾವು ಮುಂದಾಗುತ್ತಿಲ್ಲ. ಇದರಿಂದ ನಮ್ಮ ಮೊಮ್ಮಕ್ಕಳು ಭವಿಷ್ಯದ ಕನಸು ಕಾಣುವುದು ಬೇಡವೇ? ನೀವು ನಮ್ಮಂತಹ ಪುಟ್ಟ ಮಕ್ಕಳ ಅಳಲು ಕೇಳಿಸಿಕೊಳ್ಳುತ್ತೀರಿ ಎಂದು ಒಕ್ಕಣೆಯಿರುವ ಪತ್ರದಲ್ಲಿ ಪರಿಸರ ಸಂರಕ್ಷಣೆಗೆ ಏನುಮಾಡಬೇಕು ಹಾಗೂ ವಿದ್ಯಾರ್ಥಿಗಳೇ ಕೈಗೊಂಡ ಕಾರ್ಯಗಳ ಬಗ್ಗೆ ಉಲ್ಲೇಖವಿದೆ.
ಪತ್ರದ ಕೊನೆಯಲ್ಲಿ, ನಗರೀಕರಣ, ಕೈಗಾರಿಕೀಕರಣಕ್ಕಿಂತ ಮೊದಲು ಶುದ್ಧ ನೀರು, ಶುದ್ಧ ಪರಿಸರ ದೊರಕಿಸಿಕೊಡಿ ಎಂಬ ಭಿಕ್ಷೆ ಬೇಡುತ್ತಿದ್ದೇವೆ. ನಮ್ಮ ಶಾಲೆಯ 130 ವಿದ್ಯಾರ್ಥಿಗಳು ಜಲಸಂರಕ್ಷಣೆಗಾಗಿ ಕೈಗೊಂಡ ಕಾರ್ಯದ ಬಗ್ಗೆ ಪತ್ರದ ಜತೆಗೆ ಲಗತ್ತಿಸಿದ್ದೇವೆ. ನಮ್ಮ ಭರವಸೆ ಈಡೇರಿಸಿ. ಸ್ವಚ್ಛ, ಸುಂದರ, ಸದೃಢ, ಜಲಕ್ಷಾಮ ರಹಿತ ನವಭಾರತ ನಿರೀಕ್ಷೆಯಲ್ಲಿ ಎಂದು ಪತ್ರವನ್ನು ಕೊನೆಗೊಳಿಸಲಾಗಿದೆ.
ಕಾರ್ಯಗಳೇನು?
.ಜಲಕ್ಷಾಮ ನಿವಾರಣೆಗಾಗಿ 2016-17ನೇ ಸಾಲಿನಲ್ಲಿ 250, 2018ನೇ ಸಾಲಿನಲ್ಲಿ 250 ಇಂಗುಗುಂಡಿ ಸ್ಥಾಪಿಸಿದ್ದು, 3 ವರ್ಷಗಳಿಂದ ಜಲಸಂರಕ್ಷಣಾ ಕಾರ್ಯ ನಡೆಯುತ್ತಿದೆ.
.ವಿಜ್ಞಾನ, ನಾಟಕ ಸ್ಪರ್ಧೆಯ ಮೂಲಕ ತಮ್ಮ ಯೋಜನೆಯ ತಿಳಿವಳಿಕೆ.
.ನೇಚರ್ ಗಾರ್ಡ್ ಸ್ವಯಂ ಸೇವಾದಳ ಕಟ್ಟಿ, ಇದಕ್ಕೆ ಆಸಕ್ತರನ್ನು ಸೇರಿಸಿ ಗೌರವ ಧನ ನೀಡಬೇಕು.
.ಇಂಗುಗುಂಡಿಗಳ ನಿರ್ಮಾಣಕ್ಕೆ ಪ್ರೋತ್ಸಾಹ ಸಿಗಬೇಕು.
.ಅರಣ್ಯೀಕರಣಕ್ಕಾಗಿ ಮರು ಅರಣ್ಯೀಕರಣ ಯೋಜನೆ ಸ್ಥಾಪಿಸಿ.
.ಜಲ ಸಂರಕ್ಷಣೆಯ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಅವುಗಳ ಹಸ್ತಪ್ರತಿ ಬಿಡುಗಡೆ.
ಪರಿಸರ ಜಾಗೃತಿ ಮಕ್ಕಳಿಂದಲೇ ಮೂಡಲಿ
‘ಪರಿಸರ ಜಾಗೃತಿ ಮಕ್ಕಳಿಂದಲೇ ಮೂಡಬೇಕೆಂಬ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಎರಡು ವರ್ಷಗಳಿಂದ ಮಕ್ಕಳು ಇಂಗುಗುಂಡಿ ನಿರ್ಮಿಸುತ್ತಿದ್ದು, ಇದು 2.5 ಅಡಿ ಉದ್ದ, 1.5 ಅಡಿ ಅಗಲ ಹಾಗೂ 1.5 ಅಡಿ ಆಳ ಹೊಂದಿದೆ. ಶನಿವಾರ ಆಯಾಯ ಊರಿನಲ್ಲಿ ಮಕ್ಕಳ ಹೆತ್ತವರನ್ನು ಜತೆಗಿರಿಸಿ ಬೇರೆ ಬೇರೆ ತಂಡಗಳ ಮೂಲಕ ಇಂಗುಗುಂಡಿ ನಿರ್ಮಿಸುತ್ತಿದ್ದೇವೆ. ‘ಜಲ ಸಾಕ್ಷರತಾ ಆಂದೋಲನಾ’ ಎನ್ನುವ ವಾಟ್ಸಾಪ್ ಗ್ರೂಪ್‌ನಲ್ಲಿ ಚಿತ್ರವನ್ನು ಅಪ್‌ಲೋಡ್ ಮಾಡುತ್ತಿದ್ದೇವೆ. ಇದರಲ್ಲಿ ಶ್ರೀಪಡ್ರೆ ಸೇರಿ ಪರಿಸರ ಜಾಗೃತಿಗಾಗಿ ಕೆಲಸ ಮಾಡುವವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದಾರೆ.
– ಪದ್ಮಶ್ರೀ, ಸಹಶಿಕ್ಷಕಿ
ಇಷ್ಟು ಬೇಗ ಸ್ಪಂದಿಸುತ್ತಾರೆಂದು ಯೋಚಿಸಿಲ್ಲ
ಮಕ್ಕಳ ಪತ್ರಕ್ಕೆ ನರೇಂದ್ರ ಮೋದಿ ಇಷ್ಟು ಬೇಗ ಸ್ಪಂದಿಸುತ್ತಾರೆಂದು ಯೋಚಿಸಿಯೇ ಇರಲಿಲ್ಲ. ಮಕ್ಕಳು ಪತ್ರ ಬರೆದ 30 ದಿನಗಳ ಅಂತರದಲ್ಲಿ ಅವರಿಂದ ಉತ್ತರ ಲಭಿಸಿದೆ. ಮಕ್ಕಳ ಕಾರ್ಯಯೋಜನೆಗಳು ನರೇಂದ್ರ ಮೋದಿಯವರನ್ನು ಸೆಳೆದಿದೆ ಎನ್ನುವುದಕ್ಕೆ ಪತ್ರವೇ ಸಾಕ್ಷಿ. ಮಕ್ಕಳ ಅಪೇಕ್ಷೆಯನ್ನು ಅವರು ನೆರವೇರಿಸುವ ಭರವಸೆ ಇದೆ.
– ಶ್ರೀಪತಿ,
ಮುಖ್ಯೋಪಾಧ್ಯಾಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.