ಜಲಾಶ್ರಯವಿದ್ದರೂ ಬತ್ತುತ್ತಿದೆ ಮೊಗಪ್ಪೆ ಕೆರೆ
ಅನುದಾನದ ಕೊರತೆಯಿಂದ ಹೂಳೆತ್ತುವ ಕಾರ್ಯವೂ ಆಗಿಲ್ಲ
Team Udayavani, May 5, 2019, 6:32 AM IST
ಬತ್ತಿದ ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಟ್ಟಾರಿನಲ್ಲಿರುವ ಮೊಗಪ್ಪೆ ಕೆರೆ.
ಬೆಳ್ಳಾರೆ: ಮೊಗೆದರೆ ಬಗೆದಷ್ಟೂ ನೀರು ಚಿಮ್ಮುಸುವ ಮೊಗಪ್ಪೆ ಕೆರೆಯಲ್ಲಿ ಪ್ರಸಕ್ತ ವರ್ಷ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೆರೆ ಹೂಳೆತ್ತುವ ಕಾರ್ಯ ಕಳೆದ ಎರಡು ವರ್ಷಗಳಿಂದ ಆಗದೇ ಇರುವುದರಿಂದ ಮೊಗಪ್ಪೆ ಕೆರೆ ಮತ್ತೆ ಬತ್ತಿದೆ.
ಬೆಳ್ಳಾರೆ ಗ್ರಾ.ಪಂ. ವ್ಯಾಪ್ತಿಯ ನೆಟ್ಟಾರಿನಲ್ಲಿರುವ ಮೊಗಪ್ಪೆ ಕೆರೆಗೆ ಶತಮಾನದ ಇತಿಹಾಸವಿದೆ. ಪಂಚಾಯತ್ ದಾಖಲೆಗಳಲ್ಲಿ ಕೆರೆ ಪ್ರದೇಶ 10.02 ಎಕ್ರೆ ವ್ಯಾಪಿಸಿದೆ. ನೆಟ್ಟಾರು, ಬೆಳ್ಳಾರೆ, ಪೆರುವಾಜೆ ಗ್ರಾಮದ ಜಲ ಸಂಜೀವಿನಿಯಾದ ಮೊಗಪ್ಪೆ ಕೆರೆ ಸಂರಕ್ಷಣೆಯ ಊರವರ ಕಾರ್ಯ ಸಫಲವಾದರೂ ಅನುದಾನದ ಕೊರತೆಯಿಂದ ಮೊಗಪ್ಪೆ ಕೆರೆ ಹೂಳೆತ್ತುವ ಕಾರ್ಯ ಎರಡು ವರ್ಷಗಳಿಂದ ಆಗಿಲ್ಲ.
ಮಹತ್ವಾಕಾಂಕ್ಷೆಯ ಚಿಂತನೆ
ಎರಡು ವರ್ಷಗಳ ಹಿಂದೆ ಸಂಘ-ಸಂಸ್ಥೆಗಳು, ದಾನಿಗಳು ಈ ಕೆರೆಯ ಹೂಳೆತ್ತುವ ನಿರ್ಧಾರ ಕೈಗೊಂಡರು. ಮೊಗಪ್ಪೆ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಸ್ವಯಂಪ್ರೇರಿತ ನೆಲೆಯಲ್ಲಿ ಕೆರೆ ಸಂರಕ್ಷಣೆಗೆ ಮುಂದಾದರು.
ಇದರ ಫಲವಾಗಿ ಹತ್ತಾರು ಅಡಿಗಳಷ್ಟು ಮಣ್ಣು ತೆಗೆಯಲಾಗಿತ್ತು. ಹೂಳೆತ್ತಿದ ಸ್ಥಳ ಕೆರೆ ಸ್ವರೂಪ ಪಡೆದುಕೊಂಡು ನೀರು ನಿಂತಿದೆ. ಮೊಗಪ್ಪೆ ಕೆರೆಯಲ್ಲಿ ಜಲ ಇಂಗಿಸುವ, ಹತ್ತೂರಿಗೆ ಹರಿಸುವ, ಪ್ರವಾಸಿ ನೆಲೆಯಾಗಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಜನರೇ ಮುಂದಾಗಿದ್ದರು. ಹೂಳೆತ್ತಲು ಜನರು ಆರ್ಥಿಕ ಸಹಾಯವನ್ನೂ ನೀಡಿದ್ದರು. 6 ಎಕ್ರೆಷ್ಟು ಪ್ರದೇಶದಲ್ಲಿ ಇದೇ ಆಳದಲ್ಲಿ ಕೆರೆ ಹೂಳೆತ್ತಿದ್ದರೆ ಬೇಸಗೆಯಿಡೀ ಈ ಕೆರೆಯಲ್ಲಿ ನೀರು ಬತ್ತದು. ಕೆರೆ ಉಳಿದಿರುವ ಪ್ರದೇಶದ ಹೂಳು ತೆಗೆದರೆ ಕನಿಷ್ಠ ಹತ್ತೂರಿಗಾದರೂ ನೀರು ಹರಿಯಬಲ್ಲದು ಎಂದು ಊರುವರು ಹೇಳುತ್ತಾರೆ.
ಹೂಳೆತ್ತಲು ಸಕಾಲ
ಜಲಕ್ಷಾಮದ ಭೀಕರತೆ ನಗರ ಪ್ರದೇಶದಿಂದ ಗ್ರಾಮೀಣ ಭಾಗದ ಮನೆಗಳನ್ನು ಮುಟ್ಟುತ್ತಿರುವ ದಿನಗಳಲ್ಲಿ ಸಮೃದ್ಧ ಜಲರಾಶಿಯನ್ನೇ ಒಡಲಲ್ಲಿ ತುಂಬಿಕೊಂಡಿರುವ ಮೊಗಪ್ಪೆ ಕೆರೆ ಹೂಳೆತ್ತಲು ಈಗ ಸಕಾಲ. ಇದಕ್ಕೆ ಸಾಕ್ಷಿ ಎನ್ನುವಂತೆ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಜನರೇ ಹೂಳು ತೆಗೆದ ಸ್ಥಳದಲ್ಲಿ ಈಗಲೂ ನೀರು ನಿಂತಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಹೂಳು ತೆಗೆಯುವ ಕಾರ್ಯವಾಗಿಲ್ಲ. ಜನರ ಉತ್ಸಾಹಕ್ಕೆ ಆಡಳಿತದ ಸಹಕಾರ ದೊರೆತಲ್ಲಿ ಮೊಗಪ್ಪೆ ಕೆರೆಯಲ್ಲಿ ಮೊಗೆದಷ್ಟು ನೀರು ಸಿಗುವುದು ನಿಶ್ಚಿತ ಎನ್ನುತ್ತಾರೆ ಊರವರು.
10 ಲಕ್ಷ ರೂ. ನೆರವು
ಎರಡು ವರ್ಷಗಳ ಹಿಂದೆ ಕೆರೆ ಹೂಳೆತ್ತುವ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಘ-ಸಂಸ್ಥೆಗಳು ಹಾಗೂ ಊರುವರು ಚಾಲನೆ ನೀಡಿದ ಬೆನ್ನಲ್ಲೇ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸಂಘ ಸಂಸ್ಥೆಗಳು ಹಾಗೂ ಊರವರಿಂದ ನೆರವು ಹರಿದು ಬಂತು. ಸುಮಾರು 10 ಲಕ್ಷದಷ್ಟು ನೆರವಿನೊಂದಿಗೆ ಕೆರೆ ಹೂಳೆತ್ತುವ ಕಾರ್ಯ ನಡೆದಿದೆ.
ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಈ ಸರಕಾರಿ ಕೆರೆ ವ್ಯವಸ್ಥಿತ ರೀತಿಯಲ್ಲಿ ಹೂಳೆತ್ತುವ ಕಾರ್ಯ ಮಾಡಿದರೆ ಯಥೇಚ್ಛ ನೀರು ಸಂಗ್ರಹಗೊಳ್ಳುತ್ತದೆ. ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುವ ಜತೆಗೆ ಕೆರೆ ಸುತ್ತಲೂ ಹಣ್ಣಿನ ಗಿಡ, ಪಾರ್ಕ್, ವಾಕಿಂಗ್ ಮಾರ್ಗ, ತೂಗು ಸೇತುವೆ ನಿರ್ಮಿಸುವ ಚಿಂತನೆಯೊಂದಿಗೆ ಸರಕಾರದ ಅನುದಾನದ ನಿರೀಕ್ಷೆ ಕೆರೆ ಅಭಿವೃದ್ಧಿ ಸಮಿತಿಯವರದ್ದಾಗಿತ್ತು. ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಕೆರೆಯ ಪ್ರದೇಶಕ್ಕೆ ಭೇಟಿ ಕೊಟ್ಟು ಅಭಿವೃದ್ಧಿಯ ಭರವಸೆಯನ್ನೂ ನೀಡಿದ್ದರು. ಸರಕಾರದಿಂದಲೂ ಅನುದಾನಕ್ಕಾಗಿ ಪ್ರಯತ್ನ ಮಾಡಲಾಗಿತ್ತು.
ಕೆರೆ ಅಭಿವೃದ್ಧಿಯಾದಲ್ಲಿ ಹತ್ತೂರಿನ ನೀರಿನ ಬರ ನೀಗಿಸಬಹುದು. ಮೊಗಪ್ಪೆ ಕೆರೆ ಮಾದರಿ ಕೆರೆಯಾಗಿ ಬದಲಾವಣೆ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ಕೆರೆ ಸದ್ಬಳಕೆಯ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದು ನೆಟ್ಟಾರು ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಚಾವಡಿಬಾಗಿಲು ತಿಳಿಸಿದ್ದಾರೆ.
ಸರಕಾರದ ಅನುದಾನ ನಿರೀಕ್ಷೆ
ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಈ ಸರಕಾರಿ ಕೆರೆ ವ್ಯವಸ್ಥಿತ ರೀತಿಯಲ್ಲಿ ಹೂಳೆತ್ತುವ ಕಾರ್ಯ ಮಾಡಿದರೆ ಯಥೇಚ್ಛ ನೀರು ಸಂಗ್ರಹಗೊಳ್ಳುತ್ತದೆ. ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುವ ಜತೆಗೆ ಕೆರೆ ಸುತ್ತಲೂ ಹಣ್ಣಿನ ಗಿಡ, ಪಾರ್ಕ್, ವಾಕಿಂಗ್ ಮಾರ್ಗ, ತೂಗು ಸೇತುವೆ ನಿರ್ಮಿಸುವ ಚಿಂತನೆಯೊಂದಿಗೆ ಸರಕಾರದ ಅನುದಾನದ ನಿರೀಕ್ಷೆ ಕೆರೆ ಅಭಿವೃದ್ಧಿ ಸಮಿತಿಯವರದ್ದಾಗಿತ್ತು. ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಕೆರೆಯ ಪ್ರದೇಶಕ್ಕೆ ಭೇಟಿ ಕೊಟ್ಟು ಅಭಿವೃದ್ಧಿಯ ಭರವಸೆಯನ್ನೂ ನೀಡಿದ್ದರು. ಸರಕಾರದಿಂದಲೂ ಅನುದಾನಕ್ಕಾಗಿ ಪ್ರಯತ್ನ ಮಾಡಲಾಗಿತ್ತು.
ಉದ್ಯೋಗ ಖಾತರಿ ಯೋಜನೆಯಲ್ಲಿ ಕೆರೆ ಹೂಳೆತ್ತುವ ಯೋಜನೆ ರೂಪಿಸಿದ್ದೇವೆ. ಕೆರೆ ಅಭಿವೃದ್ಧಿಪಡಿಸಲು ಸರಕಾರಕ್ಕೆ ಪಂಚಾಯತ್‌ನಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಮೊಗಪ್ಪೆ ಕೆರೆ ಹೂಳೆತ್ತಿ ನೆಟ್ಟಾರು ಭಾಗಕ್ಕೆ ಕುಡಿಯುವ ನೀರು ಒದಗಿಸಲು ಯೋಜಿಸಲಾಗಿದೆ
– ಶಕುಂತಳಾ ನಾಗರಾಜ್ ಗ್ರಾಮ ಪಂಚಾಯತ್ ಅಧ್ಯಕ್ಷೆ
ಕೆರೆ ಅಭಿವೃದ್ಧಿ ಸಮಿತಿಯ ರೂಪುರೇಷೆಯಂತೆ ಮೊಗಪ್ಪೆ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿ. ಕೆರೆ ಅಭಿವೃದ್ಧಿಪಡಿಸಿ ಹತ್ತೂರಿಗೆ ನೀರು ಹರಿಸುವ ಹಾಗೂ ಪ್ರವಾಸಿ ತಾಣವಾಗಿಸಲು ಸರಕಾರದ ಅನುದಾನ ತರಿಸುವ ಪ್ರಯತ್ನ ಮುಂದುವರಿಸಲಾಗುವುದು. ಮಕ್ಕಳಿಗೂ ನೀರಿನ ಸದ್ಬಳಕೆಯ ಹಾಗೂ ನೀರಿಂಗಿಸುವ ಮಾಹಿತಿ ನೀಡುವ ಕಾರ್ಯವನ್ನು ಅಭಿವೃದ್ಧಿ ಸಮಿತಿಯಿಂದ ನಡೆಸಲಾಗುವುದು.
– ಬಿ. ಸುಬ್ರಹ್ಮಣ್ಯ ಜೋಶಿ ಪ್ರ.ಕಾರ್ಯದರ್ಶಿ, ಕೆರೆ ಅಭಿವೃದ್ಧಿ ಸಮಿತಿ
ಕೆರೆಯ ಒಟ್ಟು ವಿಸ್ತಾರ 10.02 ಎಕ್ರೆ
ಊರವರೇ ಒಟ್ಟುಗೂಡಿಸಿದರು 10 ಲಕ್ಷ ರೂ.
ಹೂಳೆತ್ತಿದರೆ ಸಿಗಲಿದೆ ಯಥೇಚ್ಛ ನೀರು
ಯೋಜನೆ ಸಿದ್ಧಪಡಿಸಿದೆ ಗ್ರಾಮ ಪಂಚಾಯತ್
ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.