ಕೈಕೊಟ್ಟ ಮುಂಗಾರು: ಮನೆ-ಮನೆಗಳಲ್ಲಿ ಮಳೆಕೊಯ್ಲಿಗೆ ಮೊರೆ ಹೋಗಿ
Team Udayavani, Jun 30, 2019, 5:38 AM IST
ಮಹಾನಗರ: ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಮಳೆಗಾಲದ ಋತು ಪ್ರಾರಂಭಗೊಂಡು ಒಂದು ತಿಂಗಳು ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಹಳಷ್ಟು ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವತ್ತ ನಗರವಾಸಿಗಳು ಮುಂದಾಗುತ್ತಿದ್ದಾರೆ.
ಉದಯವಾಣಿಯು ಮಳೆ ನೀರಿನ ಸಂರಕ್ಷಣೆ ಕುರಿತಂತೆ ನಡೆಸುತ್ತಿರುವ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಆರಂಭಗೊಂಡು ಇದೀಗ ಮೂರು ವಾರ ಕಳೆದಿವೆ. ಈಗಾಗಲೇ ಅನೇಕರು ಈ ಅಭಿಯಾನಕ್ಕೆ ಸ್ಪಂದಿಸಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವತ್ತ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನೊಂದೆಡೆ, ಮುಂಗಾರು ಕೂಡ ಕೈಕೊಟ್ಟಿದ್ದು, ಮುಂದಿನ ಬೇಸಗೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಏನು ಎನ್ನುವ ಚಿಂತೆ ಶುರುವಾಗಿದೆ. ಹಾಗಾಗಿ ನಗರದಲ್ಲಿ ಮುಂದಿನ ಬೇಸಗೆಯಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಈಗಲೇ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯ ಎದುರಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮಳೆಕೊಯ್ಲು ವ್ಯವಸ್ಥೆ ಒಂದು ಉತ್ತಮ ಪರಿಹಾರವಾಗಬಹುದು ಎನ್ನುವುದು ಜಲ ತಜ್ಞರ ಅಭಿಪ್ರಾಯ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 1ರಿಂದ ಸೆಪ್ಟಂಬರ್ ಕೊನೆಯವರೆಗೆ ಸಾಮಾನ್ಯವಾಗಿ 3,441 ಮಿ.ಮೀ. ವಾಡಿಕೆ ಮಳೆ ಸುರಿಯಬೇಕು. ಆದರೆ, ಈ ವರ್ಷ ಮುಂಗಾರು ಕಾಲಿಟ್ಟು ತಿಂಗಳು ಕಳೆಯುತ್ತಿದ್ದರೂ ಉತ್ತಮ ಮಳೆಯಾಗುತ್ತಿಲ್ಲ. ಮಂಗಳೂರು ತಾಲೂಕಿನಲ್ಲಿ ಶೇ.47 ಮಳೆ ಕೊರತೆ ಇದ್ದರೆ, ಬೆಳ್ತಂಗಡಿ ತಾಲೂಕಿನಲ್ಲಿ ಶೇ.48, ಬಂಟ್ವಾಳ ತಾಲೂಕಿನಲ್ಲಿ ಶೇ.49, ಪುತ್ತೂರು ತಾಲೂಕಿನಲ್ಲಿ ಶೇ.64 ಮತ್ತು ಸುಳ್ಯ ತಾಲೂಕಿನಲ್ಲಿ ಶೇ.65ರಷ್ಟು ಮಳೆ ಕೊರತೆ ಇದೆ. ಇದೇ ಪರಿಸ್ಥಿತಿ ಜುಲೈ ತಿಂಗಳಲ್ಲಿಯೂ ಮುಂದುವರಿದರೆ ಅಂತರ್ಜಲ ಮಟ್ಟ ಬರಿದಾಗಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಸದ್ಯಕ್ಕೆ ಆಗಾಗ ಬಂದು ಹೋಗುವ ಮಳೆ ನೀರು ಪೋಲಾಗದಂತೆ ಬಾವಿ ಅಥವಾ ಬೋರ್‌ವೆಲ್ಗೆ ಇಂಗಿಸುವ ಪ್ರಯತ್ನ ಮಾಡಬೇಕಿದೆ. ಆ ಮೂಲಕ ಎಲ್ಲರ ಮನೆಗಳಲ್ಲಿಯೂ ಮಳೆಕೊಯ್ಲು ಅಳವಡಿಸಿಕೊಂಡು ಜಲ ಸಾಕ್ಷರಾಗಬೇಕೆನ್ನುವುದು ಉದಯವಾಣಿಯ ಆಶಯ ಮತ್ತು ಕಳಕಳಿಯಾಗಿದೆ.
ಮುಂಗಾರು ಆಗಮನದ ವೇಳೆ ಮಳೆಕೊಯ್ಲು ಅಳವಡಿಸಿದರೆ ಅದರ ಲಾಭವನ್ನು ಬೇಸಗೆಯಲ್ಲಿ ಪಡೆಯಬಹುದು. ಏಕೆಂದರೆ ದ.ಕ. ಜಿಲ್ಲೆಯಲ್ಲಿ ಮುಂಗಾರು ಪೂರ್ಣಗೊಂಡ ಬಳಿಕವೂ ಅಂದರೆ, ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳಿನವರೆಗೆ ಹಿಂಗಾರು ಮಳೆಯಾಗುತ್ತದೆ. ಈ ವೇಳೆ ಜಿಲ್ಲೆಯಲ್ಲಿ ವಾಡಿಕೆಯಂತೆ 334.5 ಮಿ.ಮೀ. ಮಳೆ ಸುರಿಯಬೇಕು. ಮುಂಗಾರು ಮತ್ತು ಹಿಂಗಾರು ಮಳೆ ನೀರನ್ನು ಪೋಲಾಗಲು ಬಿಡದೆ ಮಳೆಕೊಯ್ಲು ವ್ಯವಸ್ಥೆ ಮುಖೇನ ಸಂರಕ್ಷಿಸಿದರೆ ಮುಂದಿನ ದಿನಗಳಲ್ಲಿ ಬರುವ ಬೇಸಗೆಯ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿದೆ.
ಉದಯವಾಣಿ ಹಮ್ಮಿಕೊಂಡಿರುವ ‘ಮನೆ-ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಇದೀಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹೊರತಾಗಿ ರಾಜ್ಯದ ಇತರ ಜಿಲ್ಲೆಗಳಿಂದಲೂ ಸ್ಪಂದನೆ ವ್ಯಕ್ತವಾಗುತ್ತಿದೆ. ಅದರಲ್ಲಿಯೂ ದೂರದ ಜಿಲ್ಲೆಗಳಾದ ತುಮಕೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದಲೂ ಮಳೆಕೊಯ್ಲು ಬಗ್ಗೆ ಹೆಚ್ಚಿನ ಮಾಹಿತಿ ಕೋರಿ ಹಾಗೂ ಅದನ್ನು ಅಳವಡಿಸಿಕೊಳ್ಳುವುದಕ್ಕೆ ನೆರವಾಗುವಂತೆ ಮೊಬೈಲ್ ಕರೆಗಳು ಬರುತ್ತಿವೆ. ಹೀಗಾಗಿ, ಉದಯವಾಣಿಯ ಈ ಜಲಸಾಕ್ಷರತೆ ಅಭಿಯಾನವು ಇದೀಗ ರಾಜ್ಯದ ಹಲವೆಡೆ ಜನ ಜಾಗೃತಿ ಮೂಡಿಸುತ್ತಿದ್ದು, ಮುಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ‘ಮನೆ ಮನೆಗಳಲ್ಲಿ ಮಳೆಕೊಯ್ಲು’ ಸಂದರ್ಭೋಚಿತ ಎನಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.