ಮುಂಗಾರು ಮಳೆ: ಸಂಭಾವ್ಯ ಪ್ರವಾಹ, ಭೂಕುಸಿತ ಪ್ರದೇಶಗಳಲ್ಲಿ ನಿಗಾ
ನೋಡಲ್ ಅಧಿಕಾರಿಗಳ ನೇಮಕ; ನಿಯಂತ್ರಣ ಕೊಠಡಿ ಸನ್ನದ್ಧ ; ದ.ಕ.ದ 96, ಉಡುಪಿಯ 82 ಊರುಗಳಲ್ಲಿ ನೆರೆ ಭೀತಿ
Team Udayavani, Jun 15, 2022, 7:25 AM IST
ಮಂಗಳೂರು/ಉಡುಪಿ: ಮುಂಗಾರು ಮಳೆಯ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿನೀರು ನುಗ್ಗಿ ನೆರೆ ಹಾಗೂ ಗುಡ್ಡಕುಸಿತ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಲಾಗಿದ್ದು ಸಂಭಾವ್ಯ ಪರಿಸ್ಥಿತಿಗಳನ್ನು ಎದುರಿಸಲು ವಿಶೇಷ ನಿಗಾದೊಂದಿಗೆ ಪೂರಕ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ.
ಜಿಲ್ಲೆಯ ಒಟ್ಟು 9 ತಾಲೂಕುಗಳಲ್ಲಿ ನೇತ್ರಾವತಿ, ಫಲ್ಗುಣಿ, ಶಾಂಭವಿ, ಕುಮಾರ ಧಾರಾ ಸೇರಿದಂತೆ ವಿವಿಧ ನದಿಗಳಿಗೆ ಸಮೀಪ ವಿರುವ ಅಕ್ಕಪಕ್ಕದ 96 ಗ್ರಾಮಗಳನ್ನು ನೆರೆ ಹಾಗೂ ಗುಡ್ಡಕುಸಿತ ಸಾಧ್ಯತೆಗಳ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದ ಸಂದರ್ಭ ಈ ಗ್ರಾಮಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತದೆ. ನೆರೆ ಅಥವಾ ಭೂಕುಸಿತ ಸಂದರ್ಭ ಸಂತ್ರಸ್ತರನ್ನು ಸ್ಥಳಾಂತರಿಸಲು ಮಂಗಳೂರಿನಲ್ಲಿ 21, ಬಂಟ್ವಾಳದಲ್ಲಿ 11, ಪುತ್ತೂರಿನಲ್ಲಿ 7, ಬೆಳ್ತಂಗಡಿ 24, ಸುಳ್ಯ 8 ಮೂಡುಬಿದಿರೆ 7 ಹಾಗೂ ಕಡಬದಲ್ಲಿ 6 ಹಾಗೂ ಮೂಲ್ಕಿಯಲ್ಲಿ 4 ಸೇರಿದಂತೆ 88 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲೂ ವಿವಿಧ ವಾರ್ಡ್‌ಗಳಲ್ಲಿ ತಗ್ಗು ಪ್ರದೇಶ, ಭೂಕುಸಿತ ಪ್ರದೇಶಗಳನ್ನು ಗುರುತಿಸಿ ನೋಡಲ್ ಅಧಿಕಾರಿಗಳನ್ನು ನಿಯುಕ್ತಿ ಗೊಳಿಸಲಾಗಿದೆ.
ಉಡುಪಿ: 82 ಊರುಗಳಲ್ಲಿ ನೆರೆ ಭೀತಿ
ವಿವಿಧ ಹಂತದಲ್ಲಿ ಸಭೆ ನಡೆಸಿ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದಲಾಗಿದೆ. ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ ಪ್ರವಾಹ ಭೀತಿ ಎದುರಿಸಲಿರುವ ಊರುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಕಾರ್ಕಳ, ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ 63 ಗ್ರಾಮಗಳಲ್ಲಿ 82 ಊರುಗಳಲ್ಲಿ ನೆರೆ ಭೀತಿ ಎದುರಾಗಬಹುದು ಎಂಬ ಪಟ್ಟಿ ಸಿದ್ಧಪಡಿಸಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.
ನಿತ್ಯದ ಮಳೆ ಹಾನಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಮೂಲಕ ಸಂಗ್ರಹಿಸಿ ಜಿಲ್ಲಾ ಮಟ್ಟದಲ್ಲಿ ನಿರ್ಮಿಸಿರುವ ಕಂಟ್ರೋಲ್ ರೂಂನಲ್ಲಿ ದಾಖಲೀಕರಿಸಲಾಗುತ್ತದೆ. ತಾಲೂಕು ಹಂತದಲ್ಲೂ ಇದನ್ನು ಇನ್ನಷ್ಟು ಚುರುಕು ಗೊಳಿಸಲು ಕ್ರಮ ಆಗುತ್ತಿದೆ. ಪ್ರವಾಹ ಮುನ್ಸೂಚನೆ ಸಿಕ್ಕ ತತ್‌ಕ್ಷಣವೇ ಎಲ್ಲ ರೀತಿಯ ಕಾರ್ಯಾಚರಣೆಗೆ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾಡಳಿತದಿಂದ ನಿರ್ದೇಶನ ನೀಡಲಾಗಿದೆ.
ಕಾರ್ಯಾಚರಣೆ ಪಡೆ ಸಿದ್ಧ
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ 20 ಸದಸ್ಯರ ಎನ್‌ಆರ್‌ಡಿಎಫ್ ತಂಡ, 36 ಸದಸ್ಯರ ಎಸ್‌ಡಿಆರ್‌ಎಫ್, ಎಲ್ಲ ತಾಲೂಕುಗಳಲ್ಲಿ ಆಗ್ನಿ ಶಾಮಕ ದಳ, ಗೃಹರಕ್ಷಕ ದಳ ಕಾರ್ಯ ಸನ್ನದ್ಧವಾಗಿವೆ. 23 ಬೋಟು ಗಳು, 72 ಲೈಫ್‌ಬೋಟ್, 341 ಲೈಫ್ ಜಾಕೆಟ್, 89 ಸರ್ಚ್‌ಲೈಟ್, 27 ಅಸ್ಕಾ ಲೈಟ್, 14 ಪೊರ್ಟೆಬಲ್ ಜನರೇಟರ್, 29 ಪೊರ್ಟೆಬಲ್ ಪಂಪ್, 21 ಅಲ್ಯೂಮಿನಿಯಂ ಏಣಿ, 17 ಒಬಿಎಂ, 3 ಸ್ಕೂಬಾ ಡೈವಿಂಗ್ ಸೆಟ್ ಸೇರಿದಂತೆ ಪ್ರವಾಹ ಹಾಗೂ ಭೂಕುಸಿತ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅವಶ್ಯವಿರುವ ಸಾಮಗ್ರಿಗಳನ್ನು ಸಿದ್ಧಗೊಳಿಸಿಡಲಾಗಿದೆ.
ಅಣಕು ಪ್ರದರ್ಶನ
ನೆರೆ ಬಂದ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಹೇಳಲು ಎಲ್ಲ ತಾಲೂಕುಗಳಲ್ಲೂ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ. ಪ್ರವಾಹ ಬಂದಾಗ ಪರಿಹಾರ ಕಾರ್ಯಾಚರಣೆಗಳು ಹೇಗೆ ನಡೆಯಲಿವೆ ಮತ್ತು ಯಾವ ರೀತಿ ನಿಭಾಯಿಸಲಿದ್ದಾರೆ. ಸಾರ್ವಜನಿಕರ ಸ್ಪಂದನೆ ಹೇಗಿರಬೇಕು ಇತ್ಯಾದಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಮಳೆಗಾಲವನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಹಾಗೆಯೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇವೆ. ಜಿಲ್ಲಾ ಕಂಟ್ರೋಲ್ ರೂಂ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಪ್ರವಾಹ ಪರಿಸ್ಥಿತಿ ಎದುರಾದಾಗ ಏನೇನು ಮಾಡಬೇಕು ಎಂಬುದರ ನಿರ್ದೇಶನವನ್ನು ಈಗಾಗಲೇ ನೀಡಲಾಗಿದೆ.
– ಕೂರ್ಮಾ ರಾವ್ ಎಂ., ಉಡುಪಿ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಮಳೆಗಾಲವನ್ನು ಎದುರಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಉಸ್ತುವಾರಿ ಸಚಿವರ ಹಾಗೂ ನನ್ನ ಅಧ್ಯಕ್ಷತೆಯಲ್ಲಿ ಎರಡು ಸಭೆಗಳನ್ನು ಮಾಡಿ ಸಿದ್ಧತೆಗಳನ್ನು ಪರಿಶೀಲಿಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ಪ್ರವಾಹ ಸಂದರ್ಭದಲ್ಲಿ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ತಂಡ ರಚಿಸಿ ಸಿ ದ್ಧತೆಗಳನ್ನು ಮಾಡಿಕೊಳ್ಳಲಾಗಿದೆ..
-ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
ಪೊಲೀಸ್ ಕಂಟ್ರೋಲ್ ರೂಂ
– ಪೊಲೀಸ್: 100
- ಮೆಸ್ಕಾಂ: 1912
ವಿಪತ್ತು ನಿರ್ವಹಣ ಪ್ರಾಧಿಕಾರದ ನಿಯಂತ್ರಣ ಕೊಠಡಿ
– ದ.ಕ. ಜಿಲ್ಲಾಡಳಿತ-1077
– 0824-2442590, 9483908000
0824-2220319
ಉಡುಪಿ ಜಿಲ್ಲಾ ಹೆಲ್ಪ್ ಲೈನ್-
1077 / 0820-2574802
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.