ಕರಾವಳಿಯಲ್ಲಿ ಮುಂಗಾರು ಬಿರುಸು: ಇನ್ನೂ 2 ದಿನ ಆರೆಂಜ್ ಅಲರ್ಟ್
Team Udayavani, Jun 23, 2022, 1:15 AM IST
ಮಂಗಳೂರು/ ಉಡುಪಿ/ ಕುಂಬಳೆ: ಒಂದೆರಡು ದಿನಗಳಿಂದ ಚುರುಕಾಗಿರುವ ಮುಂಗಾರು ಬುಧವಾರ ಮತ್ತಷ್ಟು ಬಿರುಸು ಪಡೆದುಕೊಂಡಿದೆ.
ಮಂಗಳವಾರ ತಡರಾತ್ರಿ ಯಿಂದೀಚೆಗೆ ಮಂಗಳೂರು, ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕಿನ ವಿವಿಧೆಡೆ ಮಳೆ ಉತ್ತಮವಾಗಿ ಸುರಿದಿದೆ.
ಉಡುಪಿ ಜಿಲ್ಲೆಯಲ್ಲೂ ಮಂಗಳವಾರ ತಡರಾತ್ರಿ, ಬುಧವಾರ ಧಾರಾಕಾರ ಮಳೆ ಸುರಿದಿದೆ. ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಸಿದ್ದಾಪುರ, ಪಡುಬಿದ್ರಿ, ಹೆಬ್ರಿ, ಕಾಪು ಭಾಗದಲ್ಲಿ ಬಿಟ್ಟುಬಿಟ್ಟು ಮಳೆಯಾಗಿದೆ. ಗ್ರಾಮೀಣ ಭಾಗ ಕೃಷಿ ಭೂಮಿ, ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು.
ತಗ್ಗು ಪ್ರದೇಶ ಜಲಾವೃತ
ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯು ತ್ತಿದೆ. ತಗ್ಗು ಪ್ರದೇಶಗಳು ಜಲಾವೃತ ಗೊಂಡಿವೆ. ಹೆದ್ದಾರಿ ಕಾಮಗಾರಿ ನಡೆದ ಸ್ಥಳಗಳಲ್ಲಿ ಕೆಸರು ನೀರು ರಸ್ತೆಯಲ್ಲಿ ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಉಪ್ಪಳ ಬಸ್ ನಿಲ್ದಾಣದಲ್ಲಿ ಕೆಸರು ನೀರು ತುಂಬಿದೆ.
ಉಜಿರೆ: ನದಿಯಂತಾದ ರಾಷ್ಟ್ರೀಯ ಹೆದ್ದಾರಿ
ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಕಂಡುಬಂದಿದ್ದು ಭಾರೀ ಮಳೆಯಾಗಿದ್ದು, ಮುಖ್ಯ ರಸ್ತೆಯೇ ನೀರಿನಲ್ಲಿ ಮುಳುಗಿ ಹೋಗಿದೆ. ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಉಜಿರೆ ಜನಾರ್ದನ ಶಾಲೆಯ ಮುಂಭಾಗದಿಂದ ಸುಮಾರು 500 ಮೀ. ದೂರದವರೆಗೆ ನೀರು ರಸ್ತೆಯಲ್ಲಿ ಹರಿದ ಕಾರಣ ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸಿದರು. ರಸ್ತೆ ಪಕ್ಕದ ಅಂಗಡಿ, ಮನೆಗಳ ಮಂದಿಯೂ ಸಮಸ್ಯೆ ಎದುರಿಸಿದರು.
ಇನ್ನೂ 2 ದಿನ ಆರೆಂಜ್ ಅಲರ್ಟ್
ಕರಾವಳಿಯಲ್ಲಿ ಇನ್ನೂ ಎರಡು ದಿನ ಆರೆಂಜ್ ಅಲರ್ಟ್ ಇದೆ. ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.