ಮೂಡಬಿದಿರೆ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ಯಾರಿಗೆ?
Team Udayavani, Sep 5, 2017, 8:30 AM IST
ಮಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೂಡಬಿದಿರೆ ಕ್ಷೇತ್ರವನ್ನು ಶಾಸಕ ಅಭಯಚಂದ್ರ ಜೈನ್ ಬಿಟ್ಟುಕೊಡುವುದಾದರೆ ಅದನ್ನು ಪಕ್ಷದ ಹೈಕಮಾಂಡ್‌ನ ಅಭಯ ಗಳಿಸಿ ಗಿಟ್ಟಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ನಲ್ಲಿ ಈಗ ಆಕಾಂಕ್ಷಿಗಳ ದೊಡ್ಡ ದಂಡು ಸಿದ್ಧವಾಗಿದೆ.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೂಡಬಿದಿರೆ ಕ್ಷೇತ್ರದ ಮೇಲೆ ಈಗಾಗಲೇ ಕಣ್ಣಿಟ್ಟಿದ್ದಾರೆ. ಅವರಲ್ಲದೆ ಮಂಗಳೂರು ಮೇಯರ್ ಕವಿತಾ ಸನಿಲ್ ಹಾಗೂ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರ ಹೆಸರು ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಆದರೆ ಮುಂದಿನ ವಿಧಾನಸಭೆ ಚುನಾವಣೆಗೆ ಹಾಲಿ ಶಾಸಕ ಅಭಯಚಂದ್ರ ಜೈನ್ ಅವರು ಸ್ಪರ್ಧಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದೇ ಈಗ ಯಕ್ಷಪ್ರಶ್ನೆ. ಈ ವಿಚಾರದಲ್ಲಿ ಸ್ವತಃ ಅಭಯಚಂದ್ರ ಜೈನ್ ಕೂಡ ಮೌನಕ್ಕೆ ಶರಣಾಗಿರುವುದು ವಿಶೇಷ.
ದಕ್ಷಿಣ ಕನ್ನಡದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಸುಳ್ಯ ಹೊರತುಪಡಿಸಿ ಉಳಿದ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕ ರಿದ್ದಾರೆ. ಇವರ ಪೈಕಿ ಬಹುತೇಕ ಶಾಸಕರು ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಒಂದು ವೇಳೆ, ಯಾರಾದರೂ ಸ್ಪರ್ಧೆಯಿಂದ ಹಿಂದೆ ಸರಿದರೆ ಅಥವಾ ಹೈಕಮಾಂಡ್ ಹಿಂದೆ ಸರಿಸಿದರೆ ಆಗ ಮಾತ್ರ ಹೊಸಬರಿಗೆ ಅವಕಾಶ ಸಿಗಬಹುದು. ಈ ಲೆಕ್ಕಾಚಾರ ಇಟ್ಟುಕೊಂಡು ನೋಡಿದರೆ ಮೂಡಬಿದಿರೆ ಕ್ಷೇತ್ರದ ಮೇಲೆ ಬಹಳಷ್ಟು ಮಂದಿ ಕಾಂಗ್ರೆಸ್ ಆಕಾಂಕ್ಷಿಗಳು ಕಣ್ಣಿಟ್ಟಿ ದ್ದಾರೆ. ಹಾಲಿ ಶಾಸಕ ಅಭಯಚಂದ್ರ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಉತ್ಸುಕ ರಾಗಿಲ್ಲ ಎಂಬ ಲೆಕ್ಕಾಚಾರದಡಿ ಟಿಕೇಟು ಆಕಾಂಕ್ಷಿಗಳನ್ನು ಆ ಕ್ಷೇತ್ರದತ್ತ ದೌಡಾ ಯಿಸುವಂತೆ ಮಾಡಿದೆ. ಆದರೆ ಅಭಯಚಂದ್ರ ಅವರು ಬಹಿರಂಗವಾಗಿ ಎಲ್ಲೂ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಲ್ಲ. ತಾನು ಸ್ಪರ್ಧಿಸುವುದಿಲ್ಲ ಎಂದು ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ. ಒಂದೊಮ್ಮೆ ಅವರು ಬಿಟ್ಟುಕೊಟ್ಟರೆ ಈ ಅವಕಾಶಕ್ಕಾಗಿ ಅಲ್ಲಿ ನೆಲೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಆಕಾಂಕ್ಷಿಗಳು ಈಗಾಗಲೇ ಪ್ರಯತ್ನ ಆರಂಭಿಸಿದ್ದಾರೆ.
ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸಕ್ರಿಯ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಕಳೆದ ಒಂದ ವರ್ಷದ ಮೊದಲೇ ಮೂಡಬಿದಿರೆ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯ ರಾಗಿದ್ದಾರೆ. ಅಭಯಚಂದ್ರ ಜೈನ್ ಅವರ ಜತೆ ಹೆಚ್ಚು ಗುರುತಿಸಿಕೊಂಡಿರುವ ಅವರು ಕ್ಷೇತ್ರ ದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘ ಟಿಸುತ್ತಿದ್ದಾರೆ. ಇತರರು ಸಂಘಟಿಸುತ್ತಿರುವ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಕಳೆದ ದೀಪಾವಳಿ ಸಂದರ್ಭ ಗೋದಾನ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದರು. ಇದಲ್ಲದೆ ಯುವ ಕಾರ್ಯಕರ್ತರ ವಲಯದಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿರುವುದು ಕೂಡಾ ಮಿಥುನ್ ರೈ ಅವರ ಸ್ಪರ್ಧೆಗೆ ಹೆಚ್ಚಿನ ಬಲ ತಂದು ಕೊಡುತ್ತಿದೆ. ಇದಲ್ಲದೆ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರ ಅಪ್ತ ವಲಯಲ್ಲೂ ಮಿಥುನ್ ರೈ ಗುರುತಿಸಿ ಕೊಂಡಿದ್ದಾರೆ. ಜತೆಗೆ ಬಂಟ ಸಮು ದಾಯದ ಸಾಕಷ್ಟು ಮತದಾರರು ಇಲ್ಲಿರು ವುದು ಅವರನ್ನು ಇನ್ನಷ್ಟು ಉತ್ತೇಜಿಸುವುದಕ್ಕೆ ಕಾರಣವಾಗಿದೆ.
ಇನ್ನೊಂದೆಡೆ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ ಅವರು ಕೂಡ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಆಂಕಾಕ್ಷಿಯಾಗಿದ್ದು, ತನ್ನ ಗಮನ ವನ್ನು ಮೂಡಬಿದಿರೆ ಕ್ಷೇತ್ರದತ್ತ ಹರಿಸಿದ್ದಾರೆ. ಮೂಲತಃ ಮೂಡಬಿದಿರೆಯ ಹತ್ತಿರದ ಮುದರಂಗಡಿಯವರಾದ ಐವನ್ ಡಿ’ಸೋಜ ಅವರು ಈ ಹಿಂದೆ ಮುದರಂಗಡಿ ಗ್ರಾಮ ಪಂಚಾ ಯತ್ ಅಧ್ಯಕ್ಷರಾಗಿ, ಕುತ್ಯಾರು ಮಂಡಲ ಪಂಚಾಯತ್ ಸದಸ್ಯನಾಗಿ ಕಾರ್ಯ ನಿರ್ವ ಹಿಸಿದವರು.
ಮೂಡಬಿದಿರೆ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಕ್ರೈಸ್ತ ಮತದಾರರಿರುವುದು ಅವರನ್ನು ಇನ್ನಷ್ಟು ಉತ್ತೇಜಿತಗೊಳಿಸಿದೆ. ಐವನ್ ಡಿ’ಸೋಜ ಅವರು ವಿಧಾನ ಪರಿಷತ್ ಸದಸ್ಯನಾಗಿ ತಮ್ಮ ಮೂರು ವರ್ಷಗಳ ಸಾಧನೆ ಸಮಾವೇಶವನ್ನು ಕೂಡ ಕ್ಷೇತ್ರದ ಅಲಂಗಾರಿನಲ್ಲಿ ಆಯೋಜಿಸಿ ಸ್ಪರ್ಧೆಗೆ ಪೂರ್ವ ಪೀಠಿಕೆಯನ್ನು ಹಾಕಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿ ಪ್ರವಾಸ ಮಾಡು ತ್ತಿದ್ದಾರೆ. ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಮೂಲ್ಕಿ, ನೀರುಡೆ, ಕಿನ್ನಿಗೋಳಿ, ಅಲಂಗಾರು, ಬಜಪೆ, ತಾಕೊಡೆ ಸೇರಿದಂತೆ 21 ಕಡೆಗಳಲ್ಲಿ ಅಲ್ಪಸಂಖ್ಯಾಕರಿಗಾಗಿ ಮೀಸಲಿಟ್ಟ ಯೋಜನೆಗಳ ಮಾಹಿತಿ ಅಭಿಯಾನ ನಡೆಸಿ ದ್ದಾರೆ. ಇದನ್ನೆಲ್ಲ ಗಮನಿಸುವಾಗ, ಐವನ್ ಡಿ’ಸೋಜ ಮುಂದಿನ ಚುನಾವಣೆಯಲ್ಲಿ ಮೂಡಬಿದಿರೆ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
ಇವರಿಬ್ಬರ ಹೊರತಾಗಿ ಮೇಯರ್ ಕವಿತಾ ಸನಿಲ್ ಹಾಗೂ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆ ಗಾರ ದಿನೇಶ್ ಅಮೀನ್ ಮಟ್ಟು ಅವರ ಹೆಸರುಗಳು ಕೂಡ ಇದೀಗ ಈ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಮೇಯರ್ ಆಗಿ ಕೆಲವು ದಿಟ್ಟ ಹೆಜ್ಜೆಗಳ ಮೂಲಕ ಮಂಗಳೂರು ಮಾತ್ರವಲ್ಲದೆ ಜಿಲ್ಲೆ ಹಾಗೂ ಪಕ್ಷದ ವಲಯ ದಲ್ಲಿ ಸಾಕಷ್ಟು ಗಮನ ಸೆಳೆದಿರುವ ಕವಿತಾ ಸನಿಲ್ ಕೂಡ ಇದೀಗ ವಿಧಾನಸಭಾ ಚುನಾ ವಣೆಯಲ್ಲಿ ಒಂದು ಅವಕಾಶ ಪಡೆಯುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಅವರು ಕೂಡ ಮೂಡಬಿದಿರೆ ಕ್ಷೇತ್ರದ ಮೇಲೆಯೇ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಈ ಉದ್ದೇಶದಿಂದಲೇ ಅವರು ಮೂಡಬಿದಿರೆ ಕ್ಷೇತ್ರಕ್ಕೆ ಆಗಾಗೆÂ ಭೇಟಿ ನೀಡುತ್ತಿದ್ದಾರೆ. ಮೂಡ ಬಿದಿರೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಬಿಲ್ಲವ ಸಮುದಾಯ ಮೊದಲ ಸ್ಥಾನದಲ್ಲಿದ್ದು ಕವಿತಾ ಸನಿಲ್ ಅವರ ಟಿಕೇಟು ಆಕಾಂಕ್ಷೆಗೆ ಈ ಜಾತಿ ಲೆಕ್ಕಾಚಾರ ಕೂಡ ಒಂದು ಕಾರಣವಾಗಿದೆ.
ಈ ನಡುವೆ, ದಿನೇಶ್ ಅಮೀನ್ ಮಟ್ಟು ಅವರ ಹುಟ್ಟೂರು ಮೂಲ್ಕಿ-ಮೂಡಬಿದಿರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾದ ಮಟ್ಟು. ಪತ್ರಕರ್ತರಾಗಿದ್ದ ಅವರು, ಬಳಿಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾಗಿ, ಇದೀಗ ಚುನಾವಣಾ ಕಣ ಕ್ಕಿಳಿಯುವ ಇರಾದೆ ಹೊಂದಿದ್ದಾರೆ ಎನ್ನ ಲಾಗಿದೆ. ಅದರಂತೆ, ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯತ್ತ ಹೆಚ್ಚು ಕೇಂದ್ರೀಕರಿಸಿರುವ ದಿನೇಶ್ ಅಮೀನ್ ಅವರ ಹೆಸರು ಕೂಡ ಮೂಡಬಿದಿರೆಯಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರತೊಡಗಿರುವುದು ಗಮ ನಾರ್ಹ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಟ್ಟು ಅವರು ಕೂಡಾ ಬಿಲ್ಲವ ಸಮುದಾಯದವರಾಗಿದ್ದು, ಪ್ರಗತಿ ಪರರು ಮತ್ತು ಅಲ್ಪಸಂಖ್ಯಾಕ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ದ.ಕ.ದಲ್ಲಿ ಕಾಂಗ್ರೆಸ್ ಸಮಾವೇಶಗಳಲ್ಲಿ, ಪ್ರಗತಿಪರರ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇನ್ನೂ 8 ತಿಂಗಳಿದೆ
ಈಗಾಗಲೇ ಒಟ್ಟು ನಾಲ್ವರು ಮೂಡಬಿದಿರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದು ವಿಶೇಷ. ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ ಎಂಟು ತಿಂಗಳು ಬಾಕಿಯಿದೆ. ಹೀಗಿರುವಾಗ, ಇನ್ನು ಚುನಾವಣೆಗೆ ಕ್ಷಣಗಣನೆ ಶುರುವಾದರೆ, ಈ ಒಂದೇ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಅದೆಷ್ಟು ಮಂದಿ ಲಾಬಿ ನಡೆಸುತ್ತಾರೆ ಹಾಗೂ ಆ ಪೈಕಿ ಯಾರು ಟಿಕೆಟ್ ಪಡೆದುಕೊಳ್ಳುತ್ತಾರೆ ಎನ್ನುವುದು ಕೂಡ ಕುತೂಹಲದ ಸಂಗತಿ.
ಸುಳ್ಯ ಮೀಸಲು ಕ್ಷೇತ್ರ. ಹಾಗಾಗಿ ಅಲ್ಲಿ ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ ಅವಕಾಶವಿಲ್ಲ. ಮೂಡಬಿದಿರೆಯು ಸೇರಿದಂತೆ ಉಳಿದ 7 ಕ್ಷೇತ್ರಗಳಲ್ಲಿ ಈಗಾಗಲೇ ಹಾಲಿ ಶಾಸಕರು ಇದ್ದಾರೆ. ಈ ಹಿನ್ನೆಲೆಯಲ್ಲಿ ಮೂಡಬಿದಿರೆ ಕ್ಷೇತ್ರದಲ್ಲಿ ಪ್ರಚಲಿತದಲ್ಲಿರುವವರಿಗೆ ವದಂತಿಯೊಂದು ಆಕಾಂಕ್ಷಿಗಳಿಗೆ ಆಶಾಕಿರಣವಾಗಿ ಗೋಚರಿಸಿದೆ. ವದಂತಿ ನಿಜವಾಗಿ ಪರಿಣಮಿಸಿದರೆ ಮೂಡಬಿದಿರೆ ಕ್ಷೇತ್ರ ತೀವ್ರ ರಾಜಕೀಯ ಬೆಳವಣಿಗೆಗಳ ಕಣವಾಗಿ ಪರಿಣಮಿಸಲಿದೆ.
– ಕೇಶವ ಕುಂದರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.