ಪ್ರೊಟೋಕಾಲ್ ದಿಸೆಯಿಂದ ಮಾಜಿಗಳ ವಿಶೇಷ ಉಪಸ್ಥಿತಿಗೂ ಅವಕಾಶವಿಲ್ಲ !
Team Udayavani, Nov 24, 2018, 10:28 AM IST
ಮೂಡಬಿದಿರೆ: ರವಿವಾರ ಉದ್ಘಾಟನೆಗೊಳ್ಳಲಿರುವ ಮೂಡಬಿದಿರೆ ತಾಲೂಕು ರಚನೆ ಹಿನ್ನೆಲೆಯಲ್ಲಿ ಸುದೀರ್ಘ ಕಾಲ ಹೋರಾಟ ಮಾಡಿದ್ದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹಾಗೂ ಈ ಹೋರಾಟವನ್ನು ಮುಂದುವರಿಸಿದ ಕೆ. ಅಭಯಚಂದ್ರ ಅವರ ಹೆಸರುಗಳು ಆಮಂತ್ರಣ ಪತ್ರಿಕೆಯಲ್ಲಿ ಕಾಣಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ.
ಸರಕಾರಿ ಶಿಷ್ಟಾಚಾರದಲ್ಲಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ 19 ಮಂದಿ ಈ ಆಮಂತ್ರಣ ಪತ್ರಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಮರನಾಥ ಶೆಟ್ಟಿ , ಅಭಯಚಂದ್ರ ಅವರಿಗೆ ವಿಶೇಷ ಉಪಸ್ಥಿತಿಯ ಗೌರವವಾದರೂ ಇರಬೇಕಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ತಾಲೂಕು ಪುನರ್ ವಿಂಗಡಣೆ ಸಮಿತಿ ರಚಿಸುವಲ್ಲಿ ಒತ್ತಡ ಹೇರಿದ್ದ ಅಮರನಾಥ ಶೆಟ್ಟಿ ಅನಂತರದ ಎಲ್ಲ ಸಮಿತಿಗಳಲ್ಲೂ ಮೂಡಬಿದಿರೆ ತಾಲೂಕು ರಚನೆಗೆ ಶಿಫಾರಸು ದೊರಕುವಲ್ಲಿ ಪರಿಶ್ರಮಿಸಿದ್ದರು.
1997ರಲ್ಲಿ ಉಡುಪಿ ಜಿಲ್ಲೆಯಾದಾಗ ಕಾರ್ಕಳ ತಾಲೂಕಿನಿಂದ ಮೂಡಬಿದಿರೆಯನ್ನು ಪ್ರತ್ಯೇಕಿಸಿ ಮಂಗಳೂರಿಗೆ ವರ್ಗಾಯಿಸಿ ತಾಲೂಕು ಸ್ಥಾನಮಾನದ ಅರ್ಹತೆಯನ್ನು ಉಳಿಸಿಕೊಳ್ಳಲು ಸರಕಾರದ ಮೇಲೆ ಒತ್ತಡ ಹೇರಿದ್ದರು. ಇನ್ನೊಂದೆಡೆ ಮಾಜಿ ಶಾಸಕ ಶಿರ್ತಾಡಿ ಧರ್ಮಸಾಮ್ರಾಜ್ಯರಿಂದ ಆರಂಭಿಸಿ ಅಭಯಚಂದ್ರ ಅವರು ಈ ಹೋರಾಟವನ್ನು ಮುಂದುವರಿಸಿದ್ದರು. “ಈ ಬೆಳವಣಿಗೆಯಿಂದ ಕೊಂಚ ಬೇಸರವಾಗಿದೆಯಾದರೂ ಸರಕಾರವನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹೇಳಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಅವರೂ ಸಾಮಾನ್ಯ ಕಾರ್ಯಕರ್ತನಾಗಿ ಪಾಲ್ಗೊಳ್ಳುವೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.