ಮೂಡಬಿದಿರೆ: ಭೀತಿ ಮೂಡಿಸಿದ ಸುಳಿಗಾಳಿ!
Team Udayavani, Feb 14, 2017, 8:44 AM IST
ಮೂಡಬಿದಿರೆ: ಸ್ವರಾಜ್ಯ ಮೈದಾನದ ನೂತನ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉದ್ಭವಿಸಿದ ಕೆಂಧೂಳಿಯೊಡಗೂಡಿದ ಸುಳಿಗಾಳಿ ವೀಕ್ಷಕರಲ್ಲಿ ಅಚ್ಚರಿ, ಕುತೂಹಲ, ಕೌತುಕ ಮೂಡಿಸಿತು.ಮೂಡಬಿದಿರೆ ಇಲೆವೆನ್ ಕ್ರಿಕೆಟರ್ ಆಶ್ರಯದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡಿದ್ದವರು ಕೆಲವು ಹೊತ್ತು ಅಚ್ಚರಿ, ಕುತೂಹಲದೊಂದಿಗೆ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು. ಒಂದೊಮ್ಮೆ ಅವರೆಲ್ಲರ ಲಕ್ಷ್ಯ ಈ ಕೆಂಬಣ್ಣದ ಸುಳಿಗಾಳಿಯ ಹೊಯ್ದಾಟದತ್ತಲೇ ಇದ್ದು, ಹತ್ತು ನಿಮಿಷ ಆಟವನ್ನು ದಿಗ್ಭ್ರಮೆ, ಖುಷಿಯೊಂದಿಗೆ ನಿಲುಗಡೆ ಮಾಡಿಸುವಂತಾಯಿತು.
ನಿಜಕ್ಕಾದರೆ ಇದೊಂದು ವೈಜ್ಞಾನಿಕ ವಿದ್ಯಮಾನ. ಯಾವುದೋ ಒಂದು ಪ್ರದೇಶ, ತಾಣದಲ್ಲಿ ತಾಪಮಾನ ವಿಪರೀತ ಏರಿಕೆಯಾದಾಗ ಅಲ್ಲಿನ ಗಾಳಿಯ ಸಾಂದ್ರತೆ ಕುಸಿಯುತ್ತ, ಒತ್ತಡವೂ ಕಡಿಮೆಯಾಗುತ್ತದೆ. ಈ ವೇಳೆಗೆ ಹೆಚ್ಚಿನ ಒತ್ತಡವಿರುವ ಸುತ್ತಲಿನ ಎಲ್ಲ ದಿಕ್ಕುಗಳಿಂದ ಗಾಳಿ ಈ ಒತ್ತಡ ಕುಸಿತವುಂಟಾದ ತಾಣದತ್ತ ನುಗ್ಗುತ್ತದೆ. ಇದು ಎಲ್ಲ ದಿಕ್ಕುಗಳಿಂದಲೂ ಏಕಕಾಲಕ್ಕೆ ನಡೆಯುವಾಗ ಅಲ್ಲಿ ಗಾಳಿ ಸುತ್ತುತ್ತಲೇ ಮುಂದೆ ಹೋಗಲಾಗದೆ ಮೇಲಕ್ಕೇರುವ ಪ್ರಕ್ರಿಯೆ ನಡೆಯುತ್ತದೆ. ಹೀಗೆ ಸುತ್ತುತ್ತ ಮೇಲಕ್ಕೇರುವಾಗ ನೆಲದಲ್ಲಿರುವ ಹಗುರವಾದ ಕಣ, ಕಸ, ವಸ್ತುಗಳನ್ನು ಸೆಳೆದುಕೊಳ್ಳುವುದೂ ನಡೆಯುತ್ತದೆ. ಇದಕ್ಕೆ ವರ್ಲಿವಿಂಡ್ (whirly-Wind) ಎನ್ನುತ್ತಾರೆ ಎಂದು ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ ಸದ್ಯ ಮೂಡಬಿದಿರೆ ಶ್ರೀ ಮಹಾವೀರ ಪ.ಪೂ. ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ| ಎಂ. ರಮೇಶ ಭಟ್.
ಸ್ವರಾಜ್ಯ ಮೈದಾನದಲ್ಲಿ ಸುಳಿಗಾಳಿ ಇದೇನೂ ಹೊಸದಲ್ಲ. ಈ ಹಿಂದೆ ಖಾಲಿ ಗುಡ್ಡವಾಗಿದ್ದಾಗಲೂ ಈ ತೆರನ ಸುಳಿಗಾಳಿ ಉದ್ಭವಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಸೋಮವಾರ ಇದರ ಅಬ್ಬರ ಮಾತ್ರ ಜೋರಾಗಿತ್ತು. 2003ರಲ್ಲಿ ಸ್ವರಾಜ್ಯ ಮೈದಾನವನ್ನು 71ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅಗೆದು ಸಮತಟ್ಟಾಗಿಸಿ ಮೂರು ಹಂತಗಳ ಮೈದಾನಗಳನ್ನು ರೂಪಿಸಿದ ಬಳಿಕ ಮೇಲ್ಗಡೆಯ ಮೈದಾನವನ್ನು ಕ್ರಿಕೆಟಿಗರಿಗಾಗಿ ವಿಸ್ತರಿಸಿ ನಿರ್ಮಾಣ ಮಾಡಲಾಯಿತು. (ನಡುವಿನ ಮೈದಾನ ಕ್ರೀಡಾ ಇಲಾಖೆಯಿಂದ ಸಿಂಥೆಟಿಕ್ ಟ್ರ್ಯಾಕ್ ಹೊದ್ದುಕೊಂಡಿದೆ). ವಾರ ವಾರವೂ ಇಲ್ಲಿ ಕ್ರಿಕೆಟ್ ಪಂದ್ಯಾಟ, ನಿತ್ಯವೂ ವಾಹನ ಚಾಲನೆಯ ತರಬೇತಿ ನಡೆಯುತ್ತಲೇ ಇರುವುದರಿಂದ ಮಣ್ಣು ನಶ್ಯದಂತೆ ಧೂಳು ಧೂಳಾಗಿದೆ. ಹಾಗಾಗಿ ಸೋಮವಾರ ಎದ್ದ ಸುಳಿಗಾಳಿಗೆ ಈ ಕೆಂಧೂಳು ಸಿಲುಕಿಕೊಂಡು ನಯನ ಮನೋಹರ ದೃಶ್ಯವನ್ನು ನಿರ್ಮಿಸಿತು.
ಸುಮಾರು ನಾಲ್ಕು ನಿಮಿಷಗಳಷ್ಟು ಕಾಲ ‘ಜನಮನ ರಂಜಿಸುತ್ತಲೇ’ ಒಂದಷ್ಟು ದೂರ ಸುಳಿ ಸುಳಿದು ಸಾಗಿದ ಈ ಸುಳಿಗಾಳಿ ಮರಗಿಡಗಳಿರುವ ಬಿಎಸ್‌ಎನ್‌ಎಲ್ ಟವರ್ ಬಳಿ ತನ್ನ ಅಬ್ಬರವನ್ನು ಇಳಿಸಿಕೊಂಡು ಮರಗಿಡಗಳ ನಡುವೆ ಅಂತರ್ಧಾನವಾಯಿತು. ಈ ಎಲ್ಲ ಸಂಗತಿಗಳಿಗೆ ಕ್ರಿಕೆಟ್ ಉದ್ಘೋಷಕರು ರನ್ನಿಂಗ್ ಕಮೆಂಟ್ರಿ ಕೊಡುತ್ತಲೇ ಇದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.