ಮೂಡುಬಿದಿರೆ: ಭಕ್ತಿ ಭಾವದ ಹೊನಲು ಹರಿಸಿದ ಭಜನಾ ದಿಂಡಿ ಸಂಚಲನ
ಮೂಡುವೇಣುಪುರ ದೇವಾಲಯದಲ್ಲಿ ಅಖಂಡ ಭಜನಾ ಸಪ್ತಾಹ ; ಡಿ.2ರಿಂದ ಕಾಶೀ ಮಠಾಧೀಶರ ಮೊಕ್ಕಾಂ
Team Udayavani, Nov 27, 2022, 9:29 PM IST
ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಶ್ರೀ ವೇಂಕಟರಮಣ ಭಜನಾ ಮಂಡಳಿಯ ವಜ್ರ ಮಹೋತ್ಸವದ ಪೂರ್ವಭಾವಿಯಾಗಿ ರವಿವಾರ ಸಂಜೆ ಭಜನಾ ದಿಂಡಿ ಮೆರವಣಿಗೆ ಜರಗಿತು.
ಕೊಂಬು, ಕಹಳೆ ಸಹಿತ ಮಂಗಲವಾದ್ಯ, ಚೆಂಡೆ ಮತ್ತಿತರ ವಾದ್ಯವಾದನಗಳೊಂದಿಗೆ ಜಿಎಸ್‌ಬಿ ಸಮಾಜದ ಪುರುಷರು ಪಂಡರಾಪುರದ ಟೊಪ್ಪಿಗೆ, ಕಚ್ಚೆ ಪಂಚೆಯಲ್ಲಿ ತಾಳ ಹಿಡಿದು ಭಜನೆ ಮಾಡುತ್ತ ಬಂದರೆ ಮಹಿಳೆಯರು ಮಹಾರಾಷ್ಟ್ರದ ಶೈಲಿಯಲ್ಲಿ ಸೀರೆಯ ಕಚ್ಛೆ ಉಟ್ಟು ದಿಂಡಿ ನೃತ್ಯ ಮಾಡುತ್ತ, ಕೋಲಾಟವಾಡುತ್ತ ಸಂಭ್ರಮದಿಂದ ಹೆಜ್ಜೆ ಹಾಕಿದರು. ಪುಟಾಣಿಗಳ ಉತ್ಸಾಹವೂ ಗಮನಾರ್ಹವಾಗಿತ್ತು. ಅನೇಕ ಭಜನ ಮಂಡಳಿಗಳ ಭಜನೆ, ವಿಶೇಷವಾಗಿ ಕುಣಿತ ಭಜನೆ ಮೆರವಣಿಗೆಗೆ ಮೆರುಗು ನೀಡಿತು. ವಿಠೋಭದೇವರ ರಜತಪೀಠ, ಎದುರಿಗೆ ಪಂಚದೀವಟಿಗೆ, ಶ್ರೀ ವೆಂಕಟರಮಣ ದೇವರ ಸ್ವರ್ಣ ಪೀಠ, ಸ್ವರ್ಣ ಪ್ರಭಾವಳಿ ಇವುಗಳು ಮೆರವಣಿಗೆಯಲ್ಲಿದ್ದವು.
ದೇವಸ್ಥಾನ ವ್ಯಾಪ್ತಿಯ ವಿವಿಧೆಡೆಗಳಿಂದ, ಅವಿಭಜಿತ ದ.ಕ. ಜಿಲ್ಲೆ ಮಾತ್ರವಲ್ಲ ಹೊರಗಿನ ಭಕ್ತರೂ ಸೇರಿದಂತೆ ಸುಮಾರು ೪,೦೦೦ ಮಂದಿ ದಿಂಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ, ಟ್ರಸ್ಟಿಗಳು, `ಭಜನ ಮಂಡಳಿಯ ಅಧ್ಯಕ್ಷ ವಿಘ್ನೇಶ ಪ್ರಭು, ಕಾರ್ಯದರ್ಶಿ ತುಕಾರಾಮ ಮಲ್ಯ, ಖಜಾಂಚಿ ನಾಗೇಂದ್ರ ಭಟ್, ಸದಸ್ಯರ ಸಹಿತ ವಿವಿಧ ಸೇವಾ ಟ್ರಸ್ಟ್, ಸಮಿತಿಗಳ ಪ್ರಮುಖರು, ಪ್ರಧಾನ ಅರ್ಚಕ ವೇ.ಮೂ. ಹರೀಶ ಭಟ್ ಉಪಸ್ಥಿತರಿದ್ದರು.
ಸೋಮವಾರ ಬೆಳಗ್ಗೆ ಆರು ಗಂಟೆಗೆ ದೀಪಪ್ರಜ್ವಲನದೊಂದಿಗೆ ಅಖಂಡ ಭಜನಾ ಸಪ್ತಾಹ ಪ್ರಾರಂಭವಾಗಿ ಡಿ .5 ರಂದು ಸಮಾಪನಗೊಳ್ಳಲಿದೆ. ಸಪ್ತಾಹದಲ್ಲಿ ನಿರಂತರವಾಗಿ ಭಜನ ಮಂಡಳಿಗಳಿಂದ ಭಜನೆ, ಸಂಜೆ 6 ರಿಂದ9 ರವರೆಗೆ ಪ್ರಸಿದ್ಧ ಕಲಾವಿದರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಸಂಯೋಜಿಸಲಾಗಿದೆ.
ಕಾಶೀ ಮಠಾಧೀಶರ ಮೊಕ್ಕಾಂ
ಡಿ.2ರಿಂದ 5 ರವರೆಗೆ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ದೇವಸ್ಥಾನದಲ್ಲಿ ಮೊಕ್ಕಾಂ ಇದ್ದು ಭಕ್ತಾದಿಗಳನ್ನು ಹರಸಲಿದ್ದಾರೆ.
ನ.30 ರಂದು ಸಪರಿವಾರ ಶ್ರೀ ವೆಂಕಟರಮಣ ದೇವರಿಗೆ ವಿಶೇಷ ಹೂವಿನ ಪೂಜೆ, ಡಿ.1 ರಂದು ಬೃಹತೀ ಸಹಸ್ರಯಾಗ, ರಾತ್ರಿ ವಿಶೇಷ ರಂಗಪೂಜೆ, ಡಿ.2 ರಂದು ಕುಂಕುಮಾರ್ಚನೆ, ಭಜನ ಪ್ರದಕ್ಷಿಣೆ, ಚೇಂಪಿ ರಾಮಚಂದ್ರ ಭಟ್ ಇವರಿಂದ ಗಿಂಡಿ ನೃತ್ಯ, ಡಿ.4ಕ್ಕೆ ವಿಶೇಷ ದೀಪಾಲಂಕಾರ ಸೇವೆ ಏರ್ಪಡಿಸಲಾಗಿದೆ.
ಸಪ್ತಾಹದ ಎಲ್ಲ ದಿನ ಬೆ.ಗಂ.6ರಿಂದ 8 ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.