ಮೂಡುಕೋಡಿ ಗ್ರಾಮಸ್ಥರಿಂದ ಯೋಧನ ಮನೆಯಲ್ಲಿ ಹಬ್ಬ
Team Udayavani, Oct 21, 2017, 5:11 PM IST
ಬೆಳ್ತಂಗಡಿ: ದೇಶದ ಗಡಿಯಲ್ಲಿ ಸೈನಿಕರ ಜತೆ ಪ್ರಧಾನಿ ನರೇಂದ್ರ ಮೋದಿಯವರು ದೀಪಾವಳಿ ಆಚರಣೆಯಲ್ಲಿ ತೊಡಗಿದ್ದರೆ, ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಡ್ತಿಕಲ್ಲು – ಮೂಡುಕೋಡಿ ಗ್ರಾಮಸ್ಥರು ಯೋಧರೊಬ್ಬರ ಮನೆಯಲ್ಲಿ ವಿನೂತನ ರೀತಿಯಲ್ಲಿ ದೀಪಾವಳಿ ಆಚರಣೆಗೆ ಮುಂದಾಗಿದ್ದಾರೆ.
ಬೆಳಕಿನ ಹಬ್ಬವನ್ನು ನಾವು ಮನೆಯಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದರೆ, ಈ ಗ್ರಾಮಸ್ಥರು ದೇಶ ಸೇವಕನ ಮನೆಯಲ್ಲಿ ಆಚರಿಸಿ ‘ನಿಮ್ಮೊಂದಿಗೆ ನಾವಿದ್ದೇವೆ’
ಎಂದು ಧೈರ್ಯ ತುಂಬಲು ಹೊರಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಯೋಧರಾದ ರಾಧಾಕೃಷ್ಣ ದೋಟ ಅವರ ತೋಟದಲ್ಲಿರುವ ಪಾಂಚಜನ್ಯ ಮನೆಯಲ್ಲಿ ಅ. 21ರಂದು ಸಂಜೆ 6 ರಿಂದ 10 ಗಂಟೆಯವರೆಗೆ ‘ಯೋಧನ ಮನೆಯಲ್ಲಿ ನಮ್ಮ ದೀಪಾವಳಿ’ ಯಡಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ದೀಪಾವಳಿ ಆಚರಣೆಯ ಮಹತ್ವದ ಕುರಿತು ಉಪನ್ಯಾಸವಲ್ಲದೇ ಹಣತೆ ಹಚ್ಚಿ ಸಂಭ್ರಮಿಸಲಾಗುತ್ತಿದೆ. ಸೇನೆಯಲ್ಲಿ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯೋಧ ರಾಧಾಕೃಷ್ಣ ಅವರನ್ನು ಸಮ್ಮಾನಿಸಲಾಗುತ್ತಿದೆ. ಬಳಿಕ ಗಡಿಯಲ್ಲಿನ ಅನುಭವಗಳು, ಸೈನ್ಯದಲ್ಲಿನ ಕೆಲಸದ ಬಗ್ಗೆ ರಾಧಾಕೃಷ್ಣ ಅವರು ಸ್ಫೂರ್ತಿಯ ಮಾತುಗಳನ್ನಾಡುವರು. ಸಿಹಿತಿಂಡಿ ಸೇರಿದಂತೆ ದೀಪಾವಳಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಗ್ರಾಮಸ್ಥರೇ ಒಟ್ಟಾಗಿ ಮಾಡುತ್ತಿರುವುದೇ ವಿಶೇಷ.
ಸೈನಿಕರ ನೆನಪಿನಲ್ಲಿ ಆಚರಣೆ
ಇಲ್ಲಿಯ ಶ್ರೀ ರಾಮ ಭಜನಾ ಮಂಡಳಿ ನೇತೃತ್ವ ವಹಿಸಿಕೊಂಡಿದೆ. ಮಂಡಳಿಯ ಪದಾಧಿಕಾರಿ ಉಮೇಶ್ ಅವರ ಪ್ರಕಾರ, ‘ನಾವು ವಿವಿಧ ಹಬ್ಬಗಳನ್ನು ಸಂಭ್ರಮಿಸುತ್ತೇವೆ. ಆದರೆ ದೇಶ ಕಾಯುವ ಯೋಧರಿಗೆ ಅದ್ಯಾವುದೂ ಇರದು. ನಮ್ಮೂರಿನ ಯೋಧರಾದ ರಾಧಾಕೃಷ್ಣ ದೋಟ ಅವರು ಈ ಬಾರಿಯ ದೀಪಾವಳಿಗೆ ಊರಿಗೆ ಬಂದಿದ್ದಾರೆ. ಹಾಗಾಗಿ ಸೈನಿಕರ ನೆನಪಿನಲ್ಲಿ ಅವರ ಮನೆಯಲ್ಲೇ ದೀಪಾವಳಿ ಆಚರಣೆಗೆ ಮುಂದಾಗಿದ್ದೇವೆ. ಆ ಮೂಲಕ ದೇಶ
ರಕ್ಷಕರೊಂದಿಗೆ ನಾವೆಲ್ಲರೂ ಇದ್ದೇವೆ ಎಂಬ ಸಂದೇಶ ಸಾರುವ ಉದ್ದೇಶ ಎಂದು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಕಳೆದ ವರ್ಷ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ದುರ್ಗಮ, ಗುಡ್ಡಗಾಡು ಪ್ರದೇಶವಾದ ಬಾಂಜಾರುಮಲೆಗೆ ತೆರಳಿ ಅಲ್ಲಿನ ನಿವಾಸಿಗಳೊಂದಿಗೆ ದೀಪಾವಳಿ ಆಚರಿಸಲಾಗಿತ್ತು.
16 ವರ್ಷಗಳಿಂದ ದೇಶಸೇವೆ
ಯೋಧ ರಾಧಾಕೃಷ್ಣ ಅವರು ವೇಣೂರಿನ ದೋಟ ಲೋಕಯ್ಯ ಪೂಜಾರಿ ಮತ್ತು ಸುನಂದಾ ಅವರ ಪುತ್ರ. ಹದಿನಾರು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2003-06ರ ತನಕ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ, 2006-09ರ ವರೆಗೆ ಪಶ್ಚಿಮ ಬಂಗಾಳ, 2009-12ರ ವರೆಗೆ ಜಮ್ಮು ಕಾಶ್ಮೀರದ ಅಕ್ಕೂರ್, 2012-16ರವರೆಗೆ ಪಠಾಣ್‌ಕೋಟ್‌ನಲ್ಲಿ ಹಾಗೂ 2016ರಿಂದ ಅಸ್ಸಾಂನಲ್ಲಿ ಕಾರ್ಯ ನಿರತರಾಗಿದ್ದಾರೆ. 2018ರ ಎಪ್ರಿಲ್ 30 ರಂದು ಸೇವೆಯಿಂದ ನಿವೃತ್ತಿ ಹೊಂದಲಿರುವರು.
ಹೆಮ್ಮೆಯಾಗುತ್ತಿದೆ
ಪ್ರಧಾನಿಯವರು ಪ್ರತೀ ಬಾರಿ ಗಡಿಗೆ ತೆರಳಿ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಾರೆ. ಸೈನ್ಯಕ್ಕೆ ಸೇರಿದ ಅನಂತರ ಎರಡು ಬಾರಿ ಊರಿನಲ್ಲಿ ದೀಪಾವಳಿ ಆಚರಿಸಿದ್ದೇನೆ. ಇದೀಗ ನಡ್ತಿಕಲ್ಲು- ಮೂಡುಕೋಡಿ ಗ್ರಾಮಸ್ಥರು ನನ್ನ ಮನೆಯಲ್ಲಿ ದೀಪಾವಳಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ದೇಶಕ್ಕಾಗಿ ದುಡಿಯುವ ನಮಗೆ ಜನರಿಂದ ಇಂತಹ ಸ್ಫೂರ್ತಿ ತುಂಬುವ ವಾತಾವರಣ ಸಿಗುತ್ತಿರುವುದು ಖುಷಿಯ ವಿಷಯ.
-ರಾಧಾಕೃಷ್ಣ ದೋಟ, ಯೋಧ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.