ಮೂಳೂರು ರಸ್ತೆ ಕಾಮಗಾರಿ ಸ್ಥಗಿತ; ಸಂಚಾರ ಸಂಕಷ್ಟ
14 ಕೋಟಿ ರೂ. ವೆಚ್ಚದ ಕಾಮಗಾರಿ
Team Udayavani, Feb 9, 2020, 5:36 AM IST
ಮುಡಿಪು: ಮಳೆಗಾಲದಲ್ಲಿ ಕೆಸರು ರಸ್ತೆ, ಬೇಸಗೆಯಲ್ಲಿ ಧೂಳಿನ ಸಿಂಚನ ಇದು ಇರಾ-ಮೂಳೂರು ಕೈಗಾರಿಕೆ ವಲಯ ಸಂಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿಯ ದುಃಸ್ಥಿತಿ. ಅತ್ತ ಹಳೆ ಡಾಮರು ರಸ್ತೆಯೂ ಇಲ್ಲದೆ ಇತ್ತ ಕಾಮಗಾರಿ ಸ್ಥಗಿತದಿಂದ ಚತುಷ್ಪಥ ಕಾಮಗಾರಿಗೆ ಗುಡ್ಡ ಸಮತಟ್ಟು ಮಾಡಿದ ಮಣ್ಣು ಸಂಪೂರ್ಣ ರಸ್ತೆಯಲ್ಲಿ ತುಂಬಿಕೊಂಡು ಮೂಳೂರು, ಇರಾ, ಮಂಚಿಗೆ ತಲುಪುವ ವಾಹನಗಳು ಸಹಿತ ಪ್ರಯಾಣಿಕರು ಧೂಳಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
ಮುಡಿಪುವಿನಿಂದ ಮೂಳೂರು ಸಂಪ ರ್ಕಿಸುವ ಮೂಳೂರು ಕೈಗಾರಿಕೆ ವಲಯದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡು ವರ್ಷ ಕಳೆದಿವೆ. ಆರಂಭದಲ್ಲಿ ವೇಗವಾಗಿ ನಡೆಯುತ್ತಿದ್ದ ಕಾಮಗಾರಿ ಇದೀಗ ಆಮೆಗತಿಯಲ್ಲಿ ನಡೆದು ಕಳೆದ ಒಂದು ವಾರದಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ ಮುಡಿಪು ಕ್ರಾಸ್‌ನಿಂದ ಮೂಳೂರು ವರೆಗಿನ ಹಳೆ ರಸ್ತೆಯನ್ನು ಸಂಪೂರ್ಣ ತೆಗೆದಿದ್ದು ಅತ್ತರಸ್ತೆಯೂ ಇಲ್ಲದೆ ಇತ್ತ ಕಾಮಗಾರಿಯೂ ನಡೆಯದೆ ಕೈಗಾರಿಕೆ ವಲಯದ ರಸ್ತೆ ಸಂಪೂರ್ಣ ಅತಂತ್ರ ಸ್ಥಿತಿಯಲ್ಲಿದ್ದು, ಸುಮಾರು ಒಂದು ಕಿ.ಮೀ. ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ.
ಮೂಲಸೌಕರ್ಯ ಕೊರತೆ
ಬಂಟ್ವಾಳ ತಾಲೂಕಿನ ಇರಾ ಮೂಳೂರು ಕೈಗಾರಿಕೆ ವಲಯಕ್ಕೆ ಸುಮಾರು 585 ಎಕ್ರೆ ಪ್ರದೇಶ ಭೂಸ್ವಾಧೀನ ನಡೆದಿದ್ದು, ಕೇಂದ್ರ ಕಾರಾಗೃಹ ಮತ್ತು ಕೆಎಸ್‌ಆರ್‌ಪಿ ಹೊರತು ಪಡಿಸಿದರೆ ಯಾವುದೇ ಕೈಗಾರಿಕೆ ಯೋಜನೆಗಳು ಈ ಪ್ರದೇಶದಲ್ಲಿ ಕಾರ್ಯಗತವಾಗಿಲ್ಲ. ಸುಮಾರು ಕೈಗಾರಿಕೆ ವಲಯ ಘೋಷಣೆಯಾಗಿ 10 ವರ್ಷ ಕಳೆದಿದ್ದು, ಸಾರ್ವಜನಿಕ ವಲಯದ ಬಹುನಿರೀಕ್ಷೆ ಇಟ್ಟುಕೊಂಡಿದ್ದ ಫಾರ್ಮಾ ಪಾರ್ಕ್ ಯೋಜನೆ ಮೂಲಸೌಕರ್ಯದ ಕೊರತೆಯಿಂದ ಕೈ ತಪ್ಪಿ ಹೋಗಿತ್ತು. ಇದಕ್ಕೆ ಪ್ರಮುಖ ಕಾರಣ ಕೈಗಾರಿಕೆ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ದುರಾವಸ್ಥೆ ಮತ್ತು ಇನ್ನಿತರ ಮೂಲಸೌಕರ್ಯದ ಕೊರತೆ. ಮೂಲಸೌಕರ್ಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮುಡಿಪುವಿನ ಇರಾ ರಸ್ತೆ ಕ್ರಾಸ್‌ನಿಂದ ಕೈಗಾರಿಕೆ ವಲಯ ಇರುವ ಮೂಳೂರು ಸಂಪರ್ಕಿಸುವ ಒಂದು ಕಿ.ಮೀ. ರಸ್ತೆಯನ್ನು ಸುಸಜ್ಜಿತವಾಗಿ ಚತುಷ್ಪಥ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಶಾಸಕ ಯು.ಟಿ. ಖಾದರ್ ಅವರ ಪ್ರಯತ್ನದ ಫಲವಾಗಿ ಕೆಐಡಿಬಿಐಯಿಂದ 10.5 ಕೋಟಿ ರೂ. ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಮೂಲಸೌಕರ್ಯ ಅಭಿವೃದ್ಧಿಯಾದರೆ ಕೈಗಾರಿಕೆ ವಲಯಕ್ಕೆ ಕಂಪೆನಿಗಳು ಬರುವ ನಿರೀಕ್ಷೆಯಿದೆ.
ಮಳೆಗಾಲದ ಚಿಂತೆ
ಕಾಮಗಾರಿ ಕಳೆದ ಮಳೆಗಾಲದ ಮೊದಲೇ ಆರಂಭಗೊಂಡಿದ್ದರಿಂದ ಮಳೆ ಗಾಲದ ಸಂದರ್ಭದಲ್ಲಿ ರಸ್ತೆ ಸಂಪೂರ್ಣ ಕೆಸರು ಹೊಂಡಮಯವಾಗಿ ಕೆಲವೊಮ್ಮೆ ಸಂಚಾರವೇ ಸ್ಥಗಿತವಾಗಿ ಪ್ರಯಾಣಿಕರು ವಾಹನಗಳು ಪರದಾಡುವಂತಾಗಿತ್ತು. ಕಾಮಗಾರಿ ಆರಂಭವಾಗಿ ಒಂದು ವರ್ಷ ಸಮೀಪಿಸುತ್ತಿದ್ದು, ಈ ಮಳೆ ಗಾಲದ ಮೊದಲು ಕಾಮಗಾರಿ ಪೂರ್ಣ ಗೊಳ್ಳಬೇಕಿತ್ತು. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಒಂದೆಡೆ ಬಿಸಿಲಿನ ಝಳಕ್ಕೆ ಧೂಳುಮಯ ರಸ್ತೆಯಿಂದ ಸಮಸ್ಯೆಯಾದರೆ. ಮುಂದಿನ ಮಳೆಗಾಲದಲ್ಲಿ ಸಂಚಾರ ಹೇಗೆ ಎನ್ನುವ ಸಮಸ್ಯೆ ಇರಾ, ಮಂಚಿ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ರಸ್ತೆ ವಿನ್ಯಾಸ ಬದಲಾಗದಿರುವುದು ಕಾರಣ
ಕೈಗಾರಿಕೆ ವಲಯದ ಆರಂಭವಾಗುವ ಮೂಳೂರು ಬಳಿ ಸುಮಾರು 10ಕ್ಕೂ ಹೆಚ್ಚು ಮನೆಗಳನ್ನು ವಿನಾಕಾರಣ ಕೈಗಾರಿಕೆ ವಲಯಕ್ಕೆ ಸೇರಿಸಿದ್ದರಿಂದ ಅಲ್ಲಿನ ಜನರು ಆತಂಕದಲ್ಲಿದ್ದು, ಈ ಮನೆಗಳನ್ನು ಬಿಟ್ಟು ರಸ್ತೆ ವಿನ್ಯಾಸವನ್ನು ಬದಲಾವಣೆ ಮಾಡಲು ಅವಕಾಶವಿದ್ದರೂ ಇದಕ್ಕೆ ಸಂಬಂಧಿಸಿದ ವಿನ್ಯಾಸ ಬದಲಾವಣೆಯ ಪ್ರಸ್ತಾವನೆ ಸರ ಕಾರಕ್ಕೆ ಕಳುಹಿಸಿದ್ದು ಈವರೆಗೂ ಅನುಮತಿ ಸಿಕ್ಕಿಲ್ಲ. ರಸ್ತೆ ವಿನ್ಯಾಸದ ಸಮಸ್ಯೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದ್ದು, ಮನೆಗಳನ್ನು ಉಳಿಸಿ ಕೊಂಡು ವಿನ್ಯಾಸ ಬದಲಾವಣೆಯ ಕಾರ್ಯ ತ್ವರಿತಗತಿಯಲ್ಲಿ ಆಗಲು ಇಲ್ಲಿನ ಜನಪ್ರತಿನಿಧಿಗಳು, ಸರಕಾರ ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿ ಗಳು ಕ್ರಮ ಕೈಗೊಳ್ಳಬೇಕಾಗಿದ್ದು, ಮುಂದಿನ ಮೂರು ತಿಂಗಳೊಳಗೆ ಈ ಕಾಮಗಾರಿ ಪೂರ್ಣ ಗೊಂಡರೆ ಸ್ಥಳೀಯ ಪ್ರಯಾ ಣಿಕರು ಮತ್ತು ವಾಹನಗಳು ಮಳೆಗಾಲದ ಆತಂಕದಿಂದ ಹೊರಬರುವ ಸಾಧ್ಯತೆ ಇದೆ.
ಮಳೆಗಾಲ ಆರಂಭದೊಳಗೆ ಕಾಮಗಾರಿ ಪೂರ್ಣ
ಮುಡಿಪು ಇರಾ – ಮಂಚಿಯು ಮಂಗಳೂರು ವಿಧಾನಸಭಾ ಕ್ಷೇತ್ರವಾಗಿ ಪುನರ್‌ವಿಂಗಡಣೆಯಾದ ಬಳಿಕ ಈ ಪ್ರದೇಶ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದು, ಸಂಪೂರ್ಣ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಒಂದು ಕಿ. ಮೀ. ಇರಾ ಸಂಪರ್ಕಿಸುವ ಮೂಳೂರು ರಸ್ತೆ ಕೆಐಡಿಬಿಗೆ ಒಳಪಡುವುದರಿಂದ ಕೆ.ಜೆ. ಜಾರ್ಜ್ ಸಚಿವರಾಗಿದ್ದಾಗ 10.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಚತುಷ್ಪಥ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ಪ್ರಸ್ತುತ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಮಳೆಗಾಲದೊಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
- ಯು.ಟಿ.ಖಾದರ್,ಶಾಸಕರು,ಮಂಗಳೂರು ವಿಧಾನಸಭಾ ಕ್ಷೇತ್ರ
-ವಸಂತ ಎನ್.ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.