ವಿಶೇಷ ಗುರುತಿನ ಚೀಟಿ ನೀಡಲು ಆಂದೋಲನ
ದ.ಕ., ಉಡುಪಿಯಲ್ಲಿ 33,159 ಮಂದಿ ಅಂಗವಿಕಲರು
Team Udayavani, Dec 22, 2021, 7:35 AM IST
ಸಾಂದರ್ಭಿಕ ಚಿತ್ರ.
ಬೆಳ್ತಂಗಡಿ: ಅಂಗವಿಕಲರ ಹಕ್ಕು ಮತ್ತು ಸಮಾನತೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1992ರಿಂದ ಡಿ. 3ನ್ನು ವಿಶ್ವ ಅಂಗವಿಕಲರ ದಿನವಾಗಿ ಆಚರಿಸುತ್ತಿದೆ. ಅವರಿಗೂ ಸಮಾಜದ ಇತರರಂತೆ ಸಮಾನ ಅವಕಾಶಗಳು ಸಿಗಬೇಕು. ಯೋಗ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ಇದರ ಉದ್ದೇಶ.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಯುಡಿಐಡಿ (Unique Disability ID) ವಿಶೇಷ ಅಂಗವಿಕಲರ ಗುರುತಿನ ಚೀಟಿಯನ್ನು ಜಾರಿಗೊಳಿಸಿದೆ. ರಾಜ್ಯ ದಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಬೆಳ್ತಂಗಡಿ ತಾಲೂಕಿನ 48 ಗ್ರಾ.ಪಂ. ವ್ಯಾಪ್ತಿಯಲ್ಲಿ ಅತ್ಯಧಿಕ 1,800 ಅಂಗವಿಕಲರಿದ್ದು, ಗುರುತಿನ ಚೀಟಿ ನೀಡಲು ಈಗಾಗಲೇ 36 (ವಿಆರ್‌ಡಬ್ಲ್ಯು) ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಿಸಿ ಜವಾಬ್ದಾರಿ ವಹಿಸಲಾಗಿದೆ. ದ.ಕ.ದಲ್ಲಿ ಒಟ್ಟು 20,629 ಮಂದಿ ಅಂಗವಿಕಲರಿದ್ದು, ಅವರೆಲ್ಲರಿಗೂ ಯುಡಿ ಐಡಿ ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ಜಿಲ್ಲಾಡಳಿತ ಹೊಂದಿದೆ. ಉಡುಪಿ ಜಿಲ್ಲೆಯಲ್ಲಿ 12,530 ಮಂದಿ ಅಂಗವಿಕಲರನ್ನು ಗುರುತಿಸಲಾಗಿದ್ದು 9,570 ಮಂದಿಗೆಯುಡಿ ಐಡಿ ಕಾರ್ಡ್ ವಿತರಿಸಲಾಗಿದೆ. ವೈದ್ಯಕೀಯ ತಪಾಣೆಯಲ್ಲಿ ಪಾಲ್ಗೊಳ್ಳದವರು ಕಡ್ಡಾಯವಾಗಿ ಭಾಗಿಯಾಗುವಂತೆ ಸೂಚಿಸಲಾಗಿದೆ.
ಗುರುತಿನ ಚೀಟಿಗೆ ದಾಖಲೆ
ಈವರೆಗೆ ಯುಡಿ ಐಡಿ ಗುರುತುಚೀಟಿಯನ್ನು ಪಡೆದುಕೊಳ್ಳದ ಅಂಗವಿಕಲರು ಆಧಾರ್ ಕಾರ್ಡ್,2013ರ ಅನಂತರದ ಅಂಗವಿಕಲರ ಗುರುತಿನಚೀಟಿ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಸಂಬಂಧಪಟ್ಟ ಗ್ರಾ.ಪಂ.ಗೆ ಸಲ್ಲಿಸಬೇಕು. ಅಲ್ಲಿ ದಾಖಲೆ ಪತ್ರಗಳನ್ನು ನಿಗದಿತ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ ದಿನಾಂಕ ನಿಗದಿ ಪಡಿಸಿ ಅಂದು ಅಂಗವಿಕಲರು ಅಗತ್ಯ ದಾಖಲೆ ಗಳೊಂದಿಗೆ ಗ್ರಾ.ಪಂ.ಗೆ ಬರುವಂತೆ ತಿಳಿಸುವರು.ಬಳಿಕ ಎಲ್ಲ ದಾಖಲೆಗಳನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಒದಗಿಸಲಾಗುತ್ತದೆ. ಮುಂದಿನ ಹಂತದಲ್ಲಿ ಜಿ.ಪಂ. ಸಂಪೂರ್ಣ ದಾಖಲೆ ಪರಿಶೀಲಿಸಿ, ಹೈದರಾಬಾದ್ ಏಜೆನ್ಸಿಯಿಂದ ಮುದ್ರಿತ ಕಾರ್ಡ್ ಅಂಚೆ ಮೂಲಕ ಫಲಾನುಭವಿಯ ಕೈಸೇರಲಿದೆ. ಇದು ದೇಶಾದ್ಯಂತ ಇರುವ ವಿಕಲಾಂಗರಿಗೆ ಒಂದೇ ಮಾದರಿಯದಾಗಿರುತ್ತದೆ.
ಇದನ್ನೂ ಓದಿ:“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್ ಚಾನೆಲ್, 2 ವೆಬ್‌ಸೈಟ್ ಬ್ಲಾಕ್
ಹಾಸಿಗೆ ಹಿಡಿದವರಿಗೆ ಸವಾಲು
ಸರಕಾರದ ಯೋಜನೆ ಅರ್ಹರಿಗೆ ತಲುಪುವನಿಟ್ಟಿನಲ್ಲಿ ವಿಶೇಷ ಕಾರ್ಡ್ ಉತ್ತಮ ಯೋಜನೆಯಾಗಿದೆ. ಆದರೆ ಈಗಾಗಲೇ ಅನೇಕ ಅಂಗವಿಕಲರು ಹಾಸಿಗೆ ಹಿಡಿದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಕಾರ್ಡ್ ಪಡೆಯುವುದು ಸವಾಲಾಗಿದೆ. ಪಡೆಯದಿದ್ದರೆ ಕಾಲಕ್ರಮೇಣ ಸರಕಾರದ ಯೋಜನೆಗಳು ಕೈತಪ್ಪುವ ಭೀತಿಯೂ ಇದೆ. ಹೀಗಾಗಿ ಅವರ ಸಹಿ ಅಥವಾ ಹೆಬ್ಬೆಟ್ಟನ್ನು ಪಡೆಯುವ ವಿಚಾರವಾಗಿಯೂ ಇಲಾಖೆ ಚಿಂತಿಸಿದೆ.
ಆಧಾರ್‌ನಂತೆ ಯುಡಿ ಐಡಿ ಕಾರ್ಡ್ ಕೂಡ ಮಹತ್ವದ್ದಾಗಿದೆ. ಎಲ್ಲ ವಿಕಲಾಂಗರು ತ್ವರಿತಗತಿಯಲ್ಲಿ ಕಾರ್ಡ್ ಮಾಡಿಸಿಕೊಳ್ಳಲು ಮುಂದೆ ಬರಬೇಕು. ಈಗಾಗಲೇ ಜಿಲ್ಲೆಯಲ್ಲಿ 6,678 ಮಂದಿಗೆ ಕಾರ್ಡ್ ವಿತರಿಸಲಾಗಿದೆ. ಉಳಿದ 20 ಸಾವಿರ ಮಂದಿಗೆ ವಿತರಿಸಲು ಗ್ರಾ.ಪಂ. ಮಟ್ಟದಲ್ಲೀ ಆಂದೋಲನ ಹಮ್ಮಿಕೊಳ್ಳಲಾಗಿದೆ.
– ಗೋಪಾಲಕೃಷ್ಣ,
ದ.ಕ. ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ
ಉಡುಪಿ ಜಿಲ್ಲೆಯಾದ್ಯಂತ ಆಂದೋಲನ ಯಶಸ್ವಿಯಾಗಿ ನಡೆಯುತ್ತಿದ್ದು ವಾರಕ್ಕೆ 2 ದಿನಗಳಂತೆ ವೈದ್ಯಕೀಯ ಮಂಡಳಿ ಸಹಭಾಗಿತ್ವದಲ್ಲಿ ವೈದ್ಯಕೀಯ ತಪಾಸಣೆಯೊಂದಿಗೆ ಯುಡಿಐಡಿ ಕಾರ್ಡ್ ನೀಡುವ ಪ್ರಕ್ರಿಯೆ ಕಾರ್ಯಗತವಾಗಿದೆ.
– ರತ್ನಾ ಸುವರ್ಣ, ಉಡುಪಿ
ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.