ಸಚಿವರ ಭೇಟಿಗೆ ಸಂಸದರ ಭರವಸೆ
ನೈಋತ್ಯ ರೈಲ್ವೇಯಲ್ಲಿ ಮಂಗಳೂರು ವಿಲೀನ ಬೇಡಿಕೆ
Team Udayavani, Dec 5, 2020, 6:08 AM IST
ಸಾಂದರ್ಭಿಕ ಚಿತ್ರ
ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಂಗಳೂರು ರೈಲ್ವೇ ಜಾಲವನ್ನು ನೈಋತ್ಯ ರೈಲ್ವೇ ಜತೆಗೆ ಸೇರ್ಪಡೆಗೊಳಿಸಬೇಕು ಎಂಬ ಆಗ್ರಹ-ಅಭಿಯಾನಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ. ಇನ್ನೀಗ ಇದರತ್ತ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಕಾರ್ಯವನ್ನು ಆಗು ಮಾಡಿಕೊಡ ಬೇಕಿರುವುದು ಜನಪ್ರತಿನಿಧಿಗಳ ಕರ್ತವ್ಯ. ಪೂರಕವಾಗಿ ಸ್ಪಂದಿಸಬೇಕಿರುವುದು ಸರಕಾರ- ರೈಲ್ವೇಯ ಕರ್ತವ್ಯ.
ಮಂಗಳೂರು: ಹಲವು ವರ್ಷಗಳಿಂದ ನಿರೀಕ್ಷಿತ ರೈಲ್ವೇ ಸವಲತ್ತುಗಳು ದೊರೆಯದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಂಗಳೂರು ರೈಲ್ವೇ ಭಾಗವನ್ನು ನೈಋತ್ಯ ರೈಲ್ವೇಯ ಜತೆ ವಿಲೀನ ಗೊಳಿಸಬೇಕೆಂಬ ಕರಾವಳಿಗರ ಬೇಡಿಕೆಯನ್ನು ಮುಂದಿಟ್ಟು “ಉದಯವಾಣಿ’ ನಡೆ ಸಿದ “ಬಲಗೊಳ್ಳಲಿ ಕರಾವಳಿ ರೈಲು ಜಾಲ’ ಅಭಿಯಾನಕ್ಕೆ ದಕ್ಷಿಣ ಕನ್ನಡ, ಉಡುಪಿಗಳ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ. ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.
ವಿಲೀನಕ್ಕೆ ಪ್ರಯತ್ನ ಮುಂದುವರಿದಿದೆ
ಕರಾವಳಿ ಭಾಗದ ರೈಲ್ವೇ ಕೆಲಸಗಳಿಗೆ ಸಂಬಂಧ ಪಟ್ಟಂತೆ ಮೂರು ರೈಲ್ವೇ ವಿಭಾಗಗಳನ್ನು ಸಂಪರ್ಕಿಸ ಬೇಕಾದ ಸ್ಥಿತಿಯನ್ನು ಮಂಗಳೂರು ಭಾಗ ಎದು ರಿಸುತ್ತಿದೆ. ಇದಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ರೈಲ್ವೇ ಸಚಿವರು ಮತ್ತು ಇಲಾಖೆಯ ಜತೆ ನಾನು ನಿರಂತರ ಸಂಪರ್ಕದಲ್ಲಿದ್ದು ಪ್ರಯತ್ನಗಳನ್ನು ನಡೆಸು ತ್ತಿದ್ದೇನೆ. ಮಂಗಳೂರು ಭಾಗವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವ ರಾಗಿದ್ದ ಸುರೇಶ್ ಅಂಗಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಅವರು ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಆರಂಭಿಸಿದ್ದರು. ಮಂಗಳೂರು ವಿಲೀನದ ಬಗ್ಗೆ ಚರ್ಚಿಸಲು ಎರಡು ಬಾರಿ ಸಭೆ ಕೂಡ ನಡೆಸಲಾಗಿತ್ತು. ಆದರೆ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ವಿಚಾರದಲ್ಲಿ ನನ್ನ ಪ್ರಯತ್ನಗಳನ್ನು ಈಗಲೂ ಮಂದುವರಿಸಿದ್ದೇನೆ.
ರೈಲ್ವೇ ಸಚಿವ ಪೀಯೂಷ್ ಗೋಯಲ್ ಅವರ ಜತೆ ಸಂಪರ್ಕದಲ್ಲಿದ್ದು, ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಕಾರ್ಯೋನ್ಮುಖನಾಗಿದ್ದೇನೆ. ಸಂಸತ್‌ನ ಚಳಿಗಾಲದ ಅಧಿವೇಶನದ ವೇಳೆ ಈ ಭಾಗದ ಸಂಸದರೆಲ್ಲರೂ ಒಟ್ಟು ಸೇರಿ ರೈಲ್ವೇ ಸಚಿವರನ್ನು ಭೇಟಿಯಾಗಲಿದ್ದೇವೆ ಎಂಬುದಾಗಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲು ಭರವಸೆ ನೀಡಿದ್ದಾರೆ.
ರೈಲ್ವೇ ಸಚಿವರಿಗೆ ಪತ್ರ ಬರೆದಿದ್ದೇನೆ
ಕರಾವಳಿ ಕರ್ನಾಟಕದ ಅಭಿವೃದ್ಧಿಯ ನಿಟ್ಟಿನಲ್ಲಿ ಮಂಗಳೂರು ಭಾಗವನ್ನು ನೈಋತ್ಯ ರೈಲ್ವೇ ವಲಯಕ್ಕೆ ಸೇರ್ಪಡೆಗೊಳಿಸುವುದು ಮತ್ತು ಕೊಂಕಣ ರೈಲ್ವೇ ಭಾಗ ಸೇರಿಸಿಕೊಂಡು ಮಂಗಳೂರು ವಿಭಾಗ ರಚನೆ ಆಗುವುದು ಅವಶ್ಯ. ಈ ನಿಟ್ಟಿನಲ್ಲಿ ನಾನು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇನೆ ಮತ್ತು ಈ ಬಗ್ಗೆ ರೈಲ್ವೇ ಸಚಿವರಿಗೂ ಪತ್ರ ಬರೆದಿದ್ದೇನೆ. ಎಲ್ಲ ಸರಕಾರಗಳ ಅವಧಿಯಲ್ಲಿಯೂ ಆಗಿನ ರೈಲ್ವೇ ಸಚಿವರುಗಳ ಜತೆ ಈ ವಿಷಯವನ್ನು ಪ್ರಸ್ತಾವಿಸುತ್ತಾ ಬಂದಿದ್ದೇನೆ. ಮಂಗಳೂರು ನೈಋತ್ಯ ರೈಲ್ವೇಗೆ ಸೇರ್ಪಡೆಯಾದರೆ ಪ್ರಸ್ತುತ ದಕ್ಷಿಣ ರೈಲ್ವೇ ಪಾಲಾಗುತ್ತಿರುವ ನವಮಂಗಳೂರು ಬಂದರಿನ ಆದಾಯ ಕರ್ನಾಟಕದ ಪಾಲಿಗೆ ದೊರೆಯಲಿದೆ ಮತ್ತು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಮಂಗಳೂರು ವಿಭಾಗ ರಚನೆಯಾದರೆ ಈ ಭಾಗದ ರೈಲ್ವೇ ಸೌಲಭ್ಯಗಳಲ್ಲೂ ಅಭಿವೃದ್ಧಿಯಾಗಲಿದೆ. ಈ ದಿಸೆಯಲ್ಲಿ ನನ್ನ ಪ್ರಯತ್ನ ನಿರಂತರ ಮುಂದುವರಿಯಲಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಜನಸ್ಪಂದನೆಯ ಯಶಸ್ಸು; ಆಡಳಿತದಿಂದ ಸ್ಪಂದನೆಯ ಭರವಸೆ
ಕರಾವಳಿ ಭಾಗದ ರೈಲ್ವೇ ಸಮಸ್ಯೆಗೆ ಸಂಬಂಧಪಟ್ಟು “ಬಲಗೊಳ್ಳಲಿ ಕರಾವಳಿ ರೈಲು ಜಾಲ’ ಅಭಿಯಾನದ ಮೂಲಕ ಜನರ ಭಾವನೆಗಳು, ಬೇಡಿಕೆಗೆ ಧ್ವನಿಯಾಗುವ ಪ್ರಯತ್ನವನ್ನು “ಉದಯವಾಣಿ’ ಮಾಡಿದೆ. ಇಲ್ಲಿ ಯಾವುದೇ ಪ್ರಾದೇಶಿಕತೆಯ ಸಂಕುಚಿತ ಮನೋಭಾವ ಇಲ್ಲ. ರೈಲ್ವೇಗೆ ಸಂಬಂಧಪಟ್ಟಂತೆ ತ್ರಿಶಂಕು ಸ್ಥಿತಿಯಿಂದಾಗಿ ಸೌಲಭ್ಯಗಳಿಂದ ವಂಚಿತವಾಗಿರುವ ಈ ಪ್ರದೇಶ ಒಂದಷ್ಟು ಸೌಲಭ್ಯಗಳನ್ನು ಪಡೆಯಲಿ ಮತ್ತು ಇದಕ್ಕೆ ಪೂರಕವಾಗಿ ಒಂದು ವ್ಯವಸ್ಥೆಯಡಿ ಈ ಭಾಗ ಸೇರ್ಪಡೆಯಾಗಲಿ ಎಂಬ ಕಳಕಳಿ ಅಭಿಯಾನದ ಉದ್ದೇಶ.
ಒಟ್ಟು 14 ದಿನಗಳ ಈ ಅಭಿಯಾನದ ಮೊದಲ ಹಂತ ಇಂದಿಗೆ ಕೊನೆಗೊಳ್ಳುತ್ತಿದೆ. ಇದಕ್ಕೆ ಕರಾವಳಿ ಕರ್ನಾಟಕ ಮಾತ್ರವಲ್ಲದೆ ಹೊರಜಿಲ್ಲೆಗಳು, ಹೊರ ರಾಜ್ಯದಲ್ಲಿರುವ ಕನ್ನಡಿಗರಿಂದಲೂ ಅಭೂತಪೂರ್ವ ಬೆಂಬಲ, ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಂತ್ರಿಕ ಅಂಶಗಳನ್ನು ಒಳಗೊಂಡಿರುವುದರಿಂದ ಈ ರೈಲ್ವೇ ಭಾಗ ವಿಲೀನ ಪ್ರಕ್ರಿಯೆಗೆ ಒಂದಷ್ಟು ಕಾಲಾವಕಾಶವೂ ಬೇಕಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ದೊರೆಯುವ ವರೆಗೂ ಈ ಅಭಿಯಾನಕ್ಕೆ ಪೂರಕವಾಗಿ ಮುಂದಿನ ದಿನಗಳಲ್ಲಿ ನಿರಂತರವಾಗಿ ಫಾಲೋಅಪ್ ಮಾಡುವ ಪ್ರಯತ್ನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.