HPCL ತೆಕ್ಕೆಗೆ MRPL?
Team Udayavani, May 25, 2018, 3:35 AM IST
ಮಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ MRPL (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಶೀಘ್ರವೇ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೊಂದಿಗೆ (HPCL) ವಿಲೀನಗೊಳ್ಳುವ ಸಂಭವವಿದೆ. ಕಳೆದ 22 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗೆ ಅತೀ ದೊಡ್ಡ ಸರಕಾರಿ ಕಂಪೆನಿಯಾಗಿ ಗುರುತಿಸಿರುವ MRPL ಮತ್ತೂಂದು ಕಂಪೆನಿ ಜತೆ ವಿಲೀನಕ್ಕೆ ಮುಂದಾಗಿರುವುದು ಇಡೀ ಕರ್ನಾಟಕದ ಉದ್ಯಮ ವಲಯದಲ್ಲೇ ಸಾಕಷ್ಟು ಕುತೂಹಲ ಮತ್ತು ಸಂಚಲನಕ್ಕೆ ಎಡೆಮಾಡಿದೆ.
ಎರಡು ದೊಡ್ಡ ಕಂಪೆನಿಗಳು ನಿರ್ವಹಣ ವೆಚ್ಚ ಕಡಿಮೆಗೊಳಿಸುವ ಜತೆ ತಮ್ಮ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಒಂದಾಗುತ್ತಿರುವುದು ದೇಶ ಹಾಗೂ ರಾಜ್ಯದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಹೆಚ್ಚು ಮಹತ್ವಪೂರ್ಣವೆನಿಸಲಿದೆ. HPCL ಮುಖ್ಯಸ್ಥ ಎಂ.ಕೆ. ಸುರಾನಾ ದಿಲ್ಲಿಯಲ್ಲಿ ಮಾಧ್ಯಮಕ್ಕೆೆ ನೀಡಿರುವ ಸಂದರ್ಶನವೊಂದರಲ್ಲಿ ‘ONGCಯ ಅಂಗಸಂಸ್ಥೆಯಾದ ಎಂಆರ್‌ಪಿಎಲ್ ಅನ್ನು ಖರೀದಿಸಲು ಈಗಾಗಲೇ ಕಂಪೆನಿ ಆಸಕ್ತಿ ತೋರಿದೆ. ಇದರಿಂದಾಗಿ ರಿಫೈನರಿಯ ಸಂಸ್ಕರಣೆ ಸಾಮರ್ಥ್ಯ ವೃದ್ಧಿಯಾಗಲಿದೆ. ಈ ಖರೀದಿ ಪ್ರಕ್ರಿಯೆಯು ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದಿದ್ದಾರೆ.
ಬದಲಾವಣೆ?
‘ಪ್ರಸ್ತುತ HPCL ಹಾಗೂ MRPL ಕಂಪೆನಿಗಳು, ONGC ಅಧೀನಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತಿವೆ. MRPLನ ಒಂದಷ್ಟು ಷೇರು ಈಗಾಗಲೇ ಎಚ್‌ಪಿಸಿಎಲ್ ಬಳಿಯಿದೆ. ಆದರೆ HPCL ಜತೆ MRPLನ ವಿಲೀನದ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ’ ಎಂದು ಈ ಬಗ್ಗೆ MRPLನ ಉನ್ನತ ಮಟ್ಟದ ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ.
ಏನು ಲಾಭ?
ಪ್ರಸ್ತುತ HPCLನ ತೈಲ ಸಂಸ್ಕರಣಾ ಘಟಕಗಳು ಮುಂಬಯಿ ಹಾಗೂ ವಿಶಾಖಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆ ವ್ಯಾಪ್ತಿಯಲ್ಲಿ ತನ್ನ ಕಂಪೆನಿಯ ಪೆಟ್ರೋ ಸಂಬಂಧಿತ ಉತ್ಪನ್ನವನ್ನು HPCL ಮಾರಾಟ ಮಾಡುತ್ತದೆ. ಆದರೆ ಬೆಂಗಳೂರು, ಮೈಸೂರು ಸಹಿತ ಹಲವು ಭಾಗಗಳಲ್ಲಿ MRPL ಉತ್ಪನ್ನಗಳನ್ನು HPCL ಖರೀದಿಸಿ ಮಾಡಿ ಮಾರಾಟ ಮಾಡುತ್ತಿದೆ. ಮುಂದೆ ಖರೀದಿ/ವಿಲೀನ ನಡೆದರೆ ಎಂಆರ್‌ಪಿಎಲ್‌ನ ಉತ್ಪನ್ನಗಳನ್ನು HPCL ದೇಶವ್ಯಾಪಿ ಮಾರಾಟ ಮಾಡಲು ಶಕ್ತವಾಗುತ್ತದೆ. ಜತೆಗೆ ONGC ಅಡಿಯಲ್ಲಿ ಒಂದೇ ಕಂಪೆನಿಯು ಕಾರ್ಯನಿರ್ವಹಿಸುವಂತಾದರೆ, ಇನ್ನಷ್ಟು ಪರಿಣಾಮಕಾರಿಯಾಗಿ ಉದ್ಯಮ ನಡೆಸಲು ಸಾಧ್ಯವಾಗಬಹುದು ಎಂಬ ನೆಲೆಯಲ್ಲಿ ವಿಲೀನ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಯುತ್ತಿದೆ.
1996ರಲ್ಲಿ MRPL ಆರಂಭ
ಪೆಟ್ರೋಕೆಮಿಕಲ್ ಉತ್ಪನ್ನ ತಯಾರಿಕೆಯ ದೃಷ್ಟಿಯಿಂದ 1996ರ ಮಾರ್ಚ್‌ನಲ್ಲಿ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ MRPL ಕಾರ್ಯಾರಂಭ ಮಾಡಿತ್ತು. ಬಿರ್ಲಾ ಹಾಗೂ HPCLನವರ ಸಮಾನ ಷೇರುಗಳೊಂದಿಗೆ ಪ್ರಾರಂಭವಾದ MRPL ಅನಂತರ 2003ರಲ್ಲಿ ಬಿರ್ಲಾದವರ ಷೇರುಗಳನ್ನು ONGC ಖರೀದಿ ಮಾಡಿತ್ತು. ಆ ಬಳಿಕ MRPL ಅನ್ನು ONGCಯವರು ಪ್ರವರ್ಧಮಾನಕ್ಕೆ ತರುವಂತೆ ಮಾಡಿದರು. ಪ್ರಸ್ತುತ ಸುಮಾರು 1,900ಕ್ಕೂ ಅಧಿಕ ನೇರ ಉದ್ಯೋಗಿಗಳು MRPLನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಚ್ಚಾ ತೈಲವನ್ನು ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಡಾಮರು ಸಹಿತ ಸಂಸ್ಕರಿಸುವ ಹಾಗೂ ಪೆಟ್ರೋಕೆಮಿಕಲ್ ಉತ್ಪನ್ನ ಉತ್ಪಾದನೆಯಲ್ಲಿ MRPL ತೊಡಗಿಸಿಕೊಂಡಿದೆ.
60 ಸಾವಿರ ಕೋಟಿ ರೂ. ವಹಿವಾಟು
MRPL ವಾರ್ಷಿಕ ಸುಮಾರು 60 ಸಾವಿರ ಕೋಟಿ ರೂ.ನಷ್ಟು ವಹಿವಾಟು ನಡೆಸುತ್ತಿದ್ದು, ಸುರತ್ಕಲ್ ನಲ್ಲಿ ಸುಮಾರು 1,600 ಎಕರೆ ಕ್ಯಾಂಪಸ್ ಹೊಂದಿದೆ. 1996ರಲ್ಲಿ ಮೊದಲ ಹಂತ, 1999ರಲ್ಲಿ 2ನೇ ಹಂತ ಹಾಗೂ 2012-14ರಲ್ಲಿ 3ನೇ ಹಂತದಲ್ಲಿ ವಿಸ್ತರಿಸಲಾಗಿದೆ. ಕದ್ರಿ, ಪಣಂಬೂರು ಸಹಿತ ರಾಜ್ಯದಲ್ಲಿ ಒಟ್ಟು 6 ಕಡೆ MRPL ಪೆಟ್ರೋಲ್ ಬಂಕ್ ಗಳಿವೆ. ಪ್ರತಿದಿನ ಸುಮಾರು 5 ಲಕ್ಷ ಸಿಲಿಂಡರ್ ಭರ್ತಿ ಮಾಡುವಷ್ಟು ಅಡುಗೆ ಅನಿಲ ಉತ್ಪಾದನೆ ಮಾಡುತ್ತಿದೆ. ರಾಜ್ಯದಲ್ಲೇ ಅತೀ ದೊಡ್ಡ ಕಂಪೆನಿಯಾಗಿರುವ MRPL ಕೇಂದ್ರ ಹಾಗೂ ರಾಜ್ಯಕ್ಕೂ ತೆರಿಗೆ ಮೂಲಕ ಅತೀ ಹೆಚ್ಚು ಆದಾಯವನ್ನು ತಂದುಕೊಡುತ್ತಿರುವ ಕಂಪೆನಿಯೂ ಹೌದು.
— ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.