ಹದಗೆಟ್ಟ ಮುಡಿಪಿರೆ-ದೇವರಗುಂಡಿ ರಸ್ತೆ
Team Udayavani, Jul 30, 2018, 1:15 AM IST
ಮಡಂತ್ಯಾರು: ಬೆಳ್ತಂಗಡಿ ತಾ|ನ ಮುಡಿಪಿರೆ-ದೇವರಗುಂಡಿ ರಸ್ತೆಯ ಪೆರ್ನಡ್ಕಕಟ್ಟೆ ಸಮೀಪ ಸಂಪೂರ್ಣ ಹದಗೆಟ್ಟಿದೆ. ವಾಹನ ಸಂಚಾರ ಸ್ಥಗಿತವಾಗಿದ್ದು, ಜನರು ನಡೆದುಕೊಂಡು ಹೋಗುವಂತಾಗಿದೆ. ತಾತ್ಕಾಲಿಕ ಕಾಮಗಾರಿ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಮಗಾರಿಯಿಂದ ತೊಂದರೆ
ದೇವರಗುಂಡಿ ನಾಳ ರಸ್ತೆಗೆ ಜಿ.ಪಂ. ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುವಾಗ ಸಾಮಗ್ರಿಗಳನ್ನು ಮಚ್ಚಿನ – ಮುಡಿಪಿರೆ ರಸ್ತೆಯಾಗಿ ಕೊಂಡೊಯ್ಯಲಾಗಿದ್ದು, ಘನ ವಾಹನ ಸಂಚಾರದಿಂದ ರಸ್ತೆ ಹದಗೆಟ್ಟಿದೆ ಎನ್ನುತ್ತಾರೆ ಸ್ಥಳೀಯರು.
ಮಚ್ಚಿನದ ಮೊದಲ ಸಂಪರ್ಕ ರಸ್ತೆ
15 ವರ್ಷಗಳ ಹಿಂದೆ ಶ್ರೀಕಂಠಪ್ಪ ಸಂಸದರಾಗಿದ್ದಾಗ ದೇವರಗುಂಡಿ – ನಾಳ ಸಂಪರ್ಕ ರಸ್ತೆಯ ದೇವರಗುಂಡಿ ಸೇತುವೆಗೆ 15 ಲ. ರೂ. ಮಂಜೂರು ಮಾಡುವ ಮೂಲಕ ಇದು ಮಚ್ಚಿನದ ಮೊದಲ ಸಂಪರ್ಕ ರಸ್ತೆ ಎಂದೆನಿಸಿಕೊಂಡಿದೆ. ಬಳಿಕ ಈ ರಸ್ತೆ ಅಭಿವೃದ್ಧಿ ಕಂಡಿರಲಿಲ್ಲ.
150ಕ್ಕೂ ಹೆಚ್ಚು ಮನೆಗಳು
ಈ ಭಾಗದಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, ಶಾಲಾ ಮಕ್ಕಳ ಸಂಖ್ಯೆ ಕೂಡ ಹೆಚ್ಚಿದೆ. ಮಡಂತ್ಯಾರು, ಪುಂಜಾಲಕಟ್ಟೆ, ಮಚ್ಚಿನ ಶಾಲೆಗೆ ಹೋಗುವ ಮಕ್ಕಳು ನಿತ್ಯ ಪರದಾಡುವಂತಾಗಿದೆ. ಶಾಲಾ ವಾಹನದಲ್ಲಿ ಹೋಗುವ ಸುಮಾರು 35 ಮಕ್ಕಳು ನಡೆದುಕೊಂಡು ಬರುವಂತಾಗಿದೆ. ಚಿಕ್ಕ ಮಕ್ಕಳನ್ನು ಎತ್ತಿಕೊಂಡೇ ರಸ್ತೆ ದಾಟಿಸಬೇಕು. ವಾಹನ ಮುಡಿಪಿರೆಯಲ್ಲಿ ಇಟ್ಟು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಅಂಗವಿಕಲರೊಬ್ಬರ ಅಂಗಡಿಯಿದ್ದು, ರಸ್ತೆ ಹದಗೆಟ್ಟ ಕಾರಣ ಸಾಮಗ್ರಿ ತರಲು ಆಟೋದವರು ಬರದೆ ತೊಂದರೆಗೀಡಾಗಿದ್ದಾರೆ.
ಗ್ರಾಮಸಭೆಗೆ ಅವಕಾಶವಿಲ್ಲ
ರಸ್ತೆ ಹದಗೆಟ್ಟಿದೆ. ನಾವು ವಾಹನ ಬೇರೆ ಕಡೆ ಇಟ್ಟು ನಡೆದುಕೊಂಡು ಹೋಗುತ್ತಿದ್ದೇವೆ. ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಮಸಭೆ ಮೊದಲು ಕಾಮಗಾರಿ ನಡೆಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದುವರೆಗೂ ಸುದ್ದಿ ಇಲ್ಲ. ಕಾಮಗಾರಿ ನಡೆಸದಿದ್ದರೆ ಗ್ರಾಮಸಭೆ ನಡೆಸಲು ಬಿಡುವುದಿಲ್ಲ.
– ಹೆನ್ರಿ ಮೊಂತೆರೋ, ಒನಿಯಡ್ಕ
ತಾತ್ಕಾಲಿಕ ಕಾಮಗಾರಿ
ಕಾಂಕ್ರೀಟ್ ರಸ್ತೆ ಆಗುವಾಗ ಘನ ವಾಹನ ಹೋದ ಕಾರಣ ರಸ್ತೆ ಹದಗೆಟ್ಟಿದೆ. ಮಳೆಗಾಲ ಕಳೆದ ಬಳಿಕ ನಡೆಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಪಂ.ನಲ್ಲಿ ಅನುದಾನ ಕಡಿಮೆ. 1 ಲ.ರೂ. ವೆಚ್ಚದಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸಲಾಗಿತ್ತು. ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಮಳೆಗಾಲ ಕಾರಣ ತಾತ್ಕಾಲಿಕ ಕಾಮಗಾರಿ ನಡೆಸುತ್ತೇವೆ.
– ಹರ್ಷಲತಾ, ಅಧ್ಯಕ್ಷರು, ಗ್ರಾ. ಪಂ., ಮಚ್ಚಿನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.