ಮೂಡುಬಿದಿರೆ ಜಾಂಬೂರಿ ಸಂಪನ್ನ: ತ್ಯಾಜ್ಯ ವಿಲೇವಾರಿಯೂ ಪೂರ್ಣ
ತ್ಯಾಜ್ಯ ವಿಂಗಡಿಸುವ ಒಟ್ಟು 60 ಘಟಕಗಳನ್ನು, 50 ಡ್ರಮ್‌ಗಳನ್ನು ಸ್ಥಾಪಿಸಲಾಗಿತ್ತು.
Team Udayavani, Dec 29, 2022, 11:22 AM IST
ಮೂಡುಬಿದಿರೆ: ವಿದ್ಯಾಗಿರಿ ಯಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಮುಗಿದ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ತ್ಯಾಜ್ಯ ವಿಲೇವಾರಿಯಲ್ಲೂ ಯಶಸ್ಸು ಕಂಡಿದೆ.
ನೂರು ಎಕ್ರೆ ಜಾಗದಲ್ಲಿ ವಿವಿಧ ಮೇಳಗಳು, ವೇದಿಕೆಗಳು, ಸ್ಟಾಲುಗಳು, ಪ್ರದರ್ಶನಾಂಗಣಗಳು, ಕಾರ್ಯಾಗಾರದ ತಾಣಗಳು, ಅರಣ್ಯಲೋಕ ಎಂದು ಮುಂತಾದ ಹಲವು ಆಕರ್ಷಣೆಗಳನ್ನು ಹೊಂದಿ ಒಂದೂವರೆ ಲಕ್ಷ ಮಂದಿಯ ಓಡಾಟ, ಊಟೋಪಚಾರ ಜನಮನ ಸೆಳೆದಿದೆ. ಸಂಘಟಕರಿಗೆ ಸುಸ್ತಾದರೂ ಸಂತಸವಿದೆ, ಸಂತೃಪ್ತಿ ಇದೆ. ಈ ಎಲ್ಲ ಸಾರ್ಥಕತೆಯ ಒಳಗೊಳಗೇ ಎಂಟು ದಿನಗಳಲ್ಲಿ ಸಹಜವಾಗಿ ತಲೆಶೂಲೆಯಾಗಲಿದ್ದ ತ್ಯಾಜ್ಯ ವಿಲೇವಾರಿ ಅತ್ಯಂತ ಸಮರ್ಪಕವಾಗಿ ನಡೆದಿರುವುದನ್ನು ಗಮನಿಸಬೇಕಾಗಿದೆ.
ಸುಮಾರು 60,000 ಪ್ರಶಿಕ್ಷಣಾರ್ಥಿಗಳು, ಶಿಕ್ಷಕರಿದ್ದ 21 ಹಾಸ್ಟೆಲ್‌ಗಳ ಎಂದಿನ ಸಿಬಂದಿಗಳ ಸಹಿತ ಒಟ್ಟು 900 ಮಂದಿ ಸ್ವಚ್ಛತ ಕಾರ್ಮಿಕರು ಕೆಲಸ ಮಾಡಿದ್ದಾರೆ. 6 ಟ್ರಾಕ್ಟರ್‌ಗಳು ನಿರಂತರವಾಗಿ ಓಡಾಟ ನಡೆಸಿವೆ.
ಹಸಿಕಸ, ಒಣಕಸ, ನಿರುಪಯುಕ್ತ ಕಸ ಎಂದು ಅಲ್ಲಲ್ಲಿಯೇ ತ್ಯಾಜ್ಯ ವಿಂಗಡಿಸುವ ಒಟ್ಟು 60 ಘಟಕಗಳನ್ನು, 50 ಡ್ರಮ್‌ಗಳನ್ನು ಸ್ಥಾಪಿಸಲಾಗಿತ್ತು. ಹಸಿಕಸದ ಚೀಲಕ್ಕೆ ಹಸುರು, ಒಣಕಸಕ್ಕೆ ನೀಲಿ ಮತ್ತು ನಿರುಪಯುಕ್ತ ತ್ಯಾಜ್ಯವಸ್ತುಗಳಿಗೆ ಕೆಂಪು ರಂಗನ್ನು ಬಳಿಯಲಾಗಿದ್ದು ಜನರಿಗೂ ಇದೊಂದು ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಕುರಿತಾದ ಪ್ರಾತ್ಯಕ್ಷಿಕೆಯಂತೆ ತೋರಿತ್ತು. ಮಹಿಳೆಯರ ವಾಸಸ್ಥಾನಗಳಲ್ಲಿ ಸ್ಯಾನಿಟರಿ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿತ್ತು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾಗಿರಿಯಲ್ಲಿ ಇದೇ ಮೊದಲ ಬಾರಿಗೆ ಮೂರು ಬಗೆಯ ತ್ಯಾಜ್ಯವಸ್ತುಗಳನ್ನು ಪ್ರತ್ಯೇಕಿಸುವ ಸೆಪರೇಟರ್ ಸ್ಥಾಪಿಸಲಾಗಿತ್ತು. ಉಂಡ ಲಕ್ಷ ಲಕ್ಷ ಹಾಳೆತಟ್ಟೆಗಳನ್ನು ಕಾಂಪೋಸ್ಟ್ ಮಾಡಲಾಗಿದ್ದು ದಿನವಹಿ ಏನಿಲ್ಲವೆಂದರೂ 6ರಿಂದ 7 ಟನ್ ತ್ಯಾಜ್ಯ ವಿಲೇವಾರಿ ಆಗಿದೆ. ಡಾ| ಎಂ. ಮೋಹನ ಆಳ್ವ ಅವರ ಸೂತ್ರ, ಮಾರ್ಗದರ್ಶನದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್ ನೇತೃತ್ವದಲ್ಲಿ ಸುಧಾಕರ ಪೂಂಜಾ ಮಿಜಾರು, ಪ್ರೇಮನಾಥ ಶೆಟ್ಟಿ ಮೊದಲಾದ ಸ್ವಯಂಸೇವಕರ ದಂಡು ಸಮಗ್ರ ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಸಿಕೊಂಡಿದೆ.
ವಿಶೇಷವಾಗಿ ಸ್ವಚ್ಛ ಭಾರತ್ ಪರಿಕಲ್ಪನೆಯ ಶೀರ್ಷಿಕೆ ಹೊತ್ತ ದ್ವಿಚಕ್ರ ವಾಹನದಲ್ಲಿ ಸುಧಾಕರ ಪೂಂಜಾ ಓಡಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದುದು ಗಮನಾರ್ಹವಾಗಿತ್ತು.ಒಟ್ಟಿನಲ್ಲಿ ವಿದ್ಯಾಗಿರಿಯಲ್ಲಿ ಈ ಹಿಂದೆ ನಡೆದಿದ್ದ ನುಡಿಸಿರಿ, ವಿರಾಸತ್ ಸಹಿತ ಯಾವುದೇ ಸಮ್ಮೇಳನಗಳಲ್ಲಿ ನಡೆದಿದ್ದ ತ್ಯಾಜ್ಯ ವಿಲೇವಾರಿಯ ಪರಂಪರೆಯ ಯಶಸ್ವಿ ಮುಂದುವರಿಕೆ ಅಂತಾರಾಷ್ಟ್ರೀಯ ಜಾಂಬೂರಿಯಲ್ಲೂ ಆಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.