ಮಂಗಳೂರು-ಮುಂಬಯಿ ಎಐ ವಿಮಾನ 81 ದಿನ ರದ್ದು
Team Udayavani, Jul 6, 2018, 10:44 AM IST
ಮಂಗಳೂರು: ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯು ಜುಲೈ 12ರಿಂದ ಸೆಪ್ಟಂಬರ್ 30ರ ವರೆಗೆ ಮಂಗಳೂರು- ಮುಂಬಯಿ ನಡುವಿನ ವಿಮಾನಯಾನ ಸೇವೆಯನ್ನು ದಿಢೀರನೆ ರದ್ದುಗೊಳಿಸಿದ್ದು, ಈಗಾಗಲೇ ಟಿಕೆಟ್ ಬುಕ್ ಮಾಡಿರುವ ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. “ನಿರ್ವಹಣೆಯ ಕಾರಣಗಳಿಗಾಗಿ (ಆಪ ರೇಶನಲ್ ರೀಸನ್)’ 81 ದಿಗಳ ಕಾಲ ಮಂಗಳೂರು- ಮುಂಬಯಿ ನಡುವಿನ ವಿಮಾನ ಯಾನವನ್ನು ರದ್ದುಪಡಿಸಲಾಗಿದೆ’ ಎಂದಷ್ಟೇ ಏರ್ ಇಂಡಿಯಾ ಸಂಸ್ಥೆಯ ಮಂಗಳೂರಿನ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಶೀಘ್ರದಲ್ಲೇ ಹಜ್ ಯಾತ್ರೆ ಕೂಡ ಆರಂಭವಾಗಲಿದ್ದು, ಇಂತಹ ಸಂದರ್ಭದಲ್ಲಿಯೇ ವಿಮಾನ ಯಾನ ರದ್ದು ಪಡಿಸಿರುವ ಸಂಸ್ಥೆಯ ನಿರ್ಧಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನೊಂದೆಡೆ ಹಜ್ ಯಾತ್ರೆಗೆ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಏರ್ ಇಂಡಿಯಾ ಮಾತ್ರ ಈ ದಿಢೀರ್ ನಿರ್ಧಾರಕ್ಕೆ ಬಲವಾದ ಕಾರಣ ನೀಡದಿರುವುದು ಸಂಶಯಕ್ಕೆ ಎಡೆಮಾಡಿದೆ.
ಜೂ. 25ರ ತನಕವೂ ಏರ್ ಇಂಡಿಯಾ ಸಂಸ್ಥೆಯು ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್‌ಗೆ ಅವಕಾಶ ಕಲ್ಪಿಸಿತ್ತು. ಜೂ. 26ರಂದು ಮಂಗಳೂರು- ಮುಂಬಯಿ ವಿಮಾನ ಯಾನ ವನ್ನು ಜುಲೈ 12ರಿಂದ ರದ್ದು ಮಾಡುತ್ತಿರುವುದಾಗಿ ಟಿಕೆಟ್ ಬುಕ್ ಮಾಡಿದವರಿಗೆ ದಿಢೀರನೆ ಏರ್ ಇಂಡಿಯಾ ಕಡೆಯಿಂದ ಸಂದೇಶ ರವಾನೆಯಾಗಿದೆ.
ಟಿಕೆಟ್ ಹಣ ವಾಪಸ್
ಟಿಕೆಟ್ ಬುಕ್ ಮಾಡಿದವರಿಗೆ ಏರ್ ಇಂಡಿಯಾ ಸಂಸ್ಥೆಯು ಪ್ರಯಾಣ ಕೈಗೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಬದಲಾಗಿ ಟಿಕೆಟ್ ಹಣವನ್ನು ಪೂರ್ತಿ ಮರು ಪಾವತಿಸಲು ಅವಕಾಶ ಕಲ್ಪಿಸಿದೆ ಎಂದು ಸಂಸ್ಥೆಯ ಓರ್ವ ಅಧಿಕಾರಿ ತಿಳಿಸಿದ್ದಾರೆ.
ಏರ್ ಇಂಡಿಯಾ ಆಯ್ಕೆ ಯಾಕೆ?
ಏರ್ ಇಂಡಿಯಾವು ಮಂಗಳೂರು-ಮುಂಬಯಿ ನಡುವೆ ಪ್ರತಿದಿನ ಮಧ್ಯಾಹ್ನ 12.45ಕ್ಕೆ ಒಂದು ಟ್ರಿಪ್ ಸಂಚರಿಸುತ್ತಿದೆ. ಬೇರೆ ವಿಮಾನಯಾನಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಯಾಣ ದರ ಸ್ವಲ್ಪ ಕಡಿಮೆ. ಜತೆಗೆ ಕರಾವಳಿ ಭಾಗದ ಹೆಚ್ಚಿನ ಸಂಖ್ಯೆಯ ಜನರು ಮುಂಬಯಿಯಲ್ಲಿ ನೆಲೆಸಿರುವುದರಿಂದ ಅಲ್ಲಿಗೆ ಹೋಗಿ ಬರಲು ಈ ವಿಮಾನವನ್ನೇ ಅವಲಂಬಿಸಿದ್ದಾರೆ. ಸಾಕಷ್ಟು ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದರೆ ಟಿಕೆಟ್ ದರದಲ್ಲಿ ಉಳಿತಾಯ ಆಗುವುದರಿಂದ ಹಲವಾರು ಮಂದಿ ಮಂಗಳೂರು- ಮುಂಬಯಿ- ಮಂಗಳೂರು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಅಲ್ಲದೆ ಏರ್ ಇಂಡಿಯಾದ ದೇಶಿಯ ಯಾನದಲ್ಲಿ 25 ಕೆ.ಜಿ. ತೂಕದ ಲಗೇಜ್ ಕೊಂಡೊ ಯ್ಯಲು ಅವಕಾಶ ಇರುವುದರಿಂದ ಹೆಚ್ಚಿನ ಪ್ರಯಾಣಿಕರು ಏರ್ ಇಂಡಿಯಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಾತ್ರವಲ್ಲದೆ ಈ ವಿಮಾನಕ್ಕೆ ಮುಂಬಯಿಯಲ್ಲಿ ಸಾಕಷ್ಟು ಸಂಪರ್ಕ ವಿಮಾನಗಳ ಲಭ್ಯತೆಯೂ ಇರುವುದು ಜನತೆ ಪ್ರಯಾಣಕ್ಕೆ ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಕಾರಣ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.