ದ.ಕ. 10, ಉಡುಪಿಯ 6 ಕಡೆ ನಮ್ಮ ಕ್ಲಿನಿಕ್‌ಗೆ ಚಾಲನೆ
Team Udayavani, Dec 15, 2022, 12:09 AM IST
ಮಂಗಳೂರು: ಹೊಸದಿಲ್ಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ಕರ್ನಾಟಕದಲ್ಲಿ “ನಮ್ಮ ಕ್ಲಿನಿಕ್’ ಆರಂಭಗೊಂಡಿದ್ದು, ದ.ಕ. ಜಿಲ್ಲೆಯ 10 ಕಡೆಗಳಲ್ಲಿ ಬುಧವಾರ ಚಾಲನೆ ನೀಡಲಾಯಿತು.
ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಮಂಗಳೂರಿನ ಸೂಟರ್‌ಪೇಟೆಯಲ್ಲಿ ನಿರ್ಮಾಣಗೊಂಡ ನಮ್ಮ ಕ್ಲಿನಿಕ್‌ನಲ್ಲಿ ಚಾಲನೆ ನೀಡಿದರು.
ದ.ಕ. ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸೂಟರ್ ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್, ಮೀನಕಳಿಯ, ಸುಳ್ಯದ ದುಗ್ಗಲಡ್ಕ, ಮೂಡುಬಿದಿರೆಯ ಗಂಟಾಲಕಟ್ಟೆ, ಉಳ್ಳಾಲದ ಕೆರೆಬೈಲು, ಕಡಬದ ಕೋಡಿಂಬಾಳದಲ್ಲಿ ಬುಧವಾರ ನಮ್ಮ ಕ್ಲಿನಿಕ್‌ಗೆ ಚಾಲನೆ ಸಿಕ್ಕಿದೆ. ಸ್ಥಳೀಯ ಜನಪ್ರತಿನಿಧಿಗಳು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುತ್ತೂರಿನ ಬನ್ನೂರು ಮತ್ತು ಕುಂಜತ್ತಬೈಲಿನಲ್ಲಿ ಕೆಲವೊಂದು ತೊಂದರೆ ಕಾರಣ ಈ ಮಾಸಾಂತ್ಯಕ್ಕೆ ಕಾರ್ಯಾರಂಭಿಸಲಿದೆ.
ವಿವಿಧ ಸೇವೆಗಳು
ನಮ್ಮ ಕ್ಲಿನಿಕ್‌ನಲ್ಲಿ ಗರ್ಭಿಣಿ ಆರೈಕೆ ಹಾಗೂ ಬಾಣಂತಿ ಸೇವೆ, ನವಜಾತ ಶಿಶು ಆರೈಕೆ ಹಾಗೂ ಚುಚ್ಚುಮದ್ದು ಸೇವೆ, ಮಕ್ಕಳ ಹಾಗೂ ಹದಿಹರೆಯದವರಿಗೆ ನೀಡುವ ಆರೋಗ್ಯ ಸೇವೆ, ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ, ಎಲ್ಲ ರಾಷ್ಟ್ರೀಯ ಆರೋಗ್ಯ ಸೇವೆಗಳ ಅನುಷ್ಠಾನ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಹಿರಿಯ ನಾಗರಿಕರ ಆರೈಕೆ ಹಾಗೂ ಉಪಶಾಮಕ ಆರೈಕೆ, ಕಣ್ಣಿನ, ದಂತ ಆರೋಗ್ಯ ಸೇವೆಗಳ ಅನುಷ್ಠಾನ, ತುರ್ತು ವೈದ್ಯಕೀಯ ಸೇವೆ, ಮಾನಸಿಕ ಆರೋಗ್ಯ ಸೇವೆ, ಉಚಿತ ಔಷಧ, ಉಚಿತ ಸಾಮಾನ್ಯ ಪ್ರಯೋಗಶಾಲಾ ಪರೀಕ್ಷೆ ಸೌಲಭ್ಯಗಳು ಇರಲಿವೆ.
ಕ್ಲಿನಿಕ್‌ನಲ್ಲಿ ಎಂಬಿಬಿಎಸ್ ವೈದ್ಯರು, ಶುಶ್ರೂಷಕಿ ಪ್ರಯೋಗಶಾಲಾ ತಂತ್ರಜ್ಞರು, ಗ್ರೂಪ್ ಡಿ ಸಿಬಂದಿ ಇರಲಿದ್ದಾರೆ. ನಮ್ಮ ಕ್ಲಿನಿಕ್ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ವರೆಗೆ ಕಾರ್ಯನಿರ್ವಹಿಸಲಿದೆ. ಸರಕಾರಿ ರಜಾ ದಿನ, ರವಿವಾರ ಮುಚ್ಚಿರುತ್ತದೆ.
ಉಡುಪಿ: ಯಾವುದೇ ರೋಗ ಬಂದ ಅನಂತರದಲ್ಲಿ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಎಚ್ಚರ ವಹಿಸುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ನಮ್ಮ ಕ್ಲಿನಿಲ್‌ನ ಸೌಲಭ್ಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಜಿಲ್ಲಾ ಆಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಬೀಡಿನಗುಡ್ಡೆಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಉಡುಪಿಯಲ್ಲಿ 3, ಕುಂದಾಪುರದಲ್ಲಿ 2 ಹಾಗೂ ಕಾರ್ಕಳದಲ್ಲಿ 1 ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಲಿದೆ. ಇದರಿಂದ ಸಾರ್ವಜನಿಕರಿಗೆ ತಮ್ಮ ವಾಸಸ್ಥಳದ ಸಮೀಪದಲ್ಲಿಯೇ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಉದ್ಘಾಟಿಸಿ ಮಾತನಾಡಿ, ಎಲ್ಲರಿಗೂ ಆರೋಗ್ಯ ಸೇವೆಯನ್ನು ಸರಳವಾಗಿ ಪಡೆಯಲು ಅನುಕೂಲವಾಗುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ ಎಂದರು.
ನಗರಸಭಾ ಸದಸ್ಯ ಗಿರೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯೆ ರಜನಿ ಹೆಬ್ಟಾರ್, ಆರೋಗ್ಯ ಇಲಾಖೆಯ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ಡಿಎಚ್‌ಒ ಡಾ| ನಾಗಭೂಷಣ ಉಡುಪ ಸ್ವಾಗತಿಸಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನಾ ಪ್ರಸ್ತಾವನೆಗೈದರು. ತಾಲೂಕು ಆರೋಗ್ಯಾಧಿಕಾರಿ ಡಾ| ವಾಸುದೇವ ಉಪಾಧ್ಯಾಯ ವಂದಿಸಿದರು.
ಬುಧವಾರ ನಗರಸಭಾ ವ್ಯಾಪ್ತಿಯ ನಿಟ್ಟೂರು, ಕಕ್ಕುಂಜೆಯಲ್ಲಿಯೂ ನಮ್ಮ ಕ್ಲಿನಿಕ್ ಗಳ ಉದ್ಘಾಟನೆಯನ್ನು ನಗರಸಭೆಯ ಅಧ್ಯಕ್ಷರು, ಸ್ಥಳೀಯ ಸದಸ್ಯರು ನೆರವೇರಿಸಿದರು. ಕುಂದಾಪುರ, ಕಾರ್ಕಳದಲ್ಲಿಯೂ ಉದ್ಘಾಟನೆ ನಮ್ಮ ಕ್ಲಿನಿಕ್ ನೆರವೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.