ಇಕ್ಕಟ್ಟಾಗಿ ರಸ್ತೆ ನಿರ್ಮಾಣ ಆರೋಪ: ಎಸಿಯಿಂದ ಸ್ಥಳ ಪರಿಶೀಲನೆ
Team Udayavani, Mar 14, 2017, 5:22 PM IST
ಉಪ್ಪಿನಂಗಡಿ: ಕೋಡಿಂಬಾಡಿ ಯಲ್ಲಿ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಕಾಮಗಾರಿ ಸಂದರ್ಭ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸದೇ ಇಕ್ಕಟ್ಟಾಗಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಅಲ್ಲದೇ, ಫುಟ್‌ಪಾತ್, ಚರಂಡಿಯ ನಿರ್ಮಾಣ ಕೂಡ ಆಗಿಲ್ಲ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಸಮಸ್ಯೆಯನ್ನೆದುರಿಸು ವಂತಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುತ್ತೂರು ಪ್ರಭಾರ ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಸೋಮವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ 950 ಮೀಟರ್ ರಸ್ತೆಯನ್ನು 1.77 ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಿ ಪುನರ್‌ನಿರ್ಮಾಣ ಗೊಳಿಸಲಾಗಿದೆ. ಆದರೆ ಈ ಹೊಸ ರಸ್ತೆಯಲ್ಲಿ ಕೆಲವು ಕಡೆ ಫುಟ್‌ಪಾತ್‌ಗಳಿಲ್ಲ. ಈ ರಸ್ತೆಯ ಒಂದು ಪಾರ್ಶ್ವದಲ್ಲಿ ಆಳವಾದ ತೋಡಿದ್ದು, ಇನ್ನೊಂದು ಬದಿಯಲ್ಲಿ ಸರಕಾರಿ ಜಾಗವಿದೆ. ಆದರೆ ಈ ಜಾಗ ಖಾಸಗಿ ವ್ಯಕ್ತಿಗಳಿಂದ ಅತಿಕ್ರಮಣಕ್ಕೊಳಗಾಗಿದ್ದು, ಇಲ್ಲಿ ಅನಧಿಕೃತ ಅಂಗಡಿ ಕಟ್ಟಡಗಳಿವೆ. ಆದರೂ ಅದರ ತೆರವಿಗೆ ಮುಂದಾಗದ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ತೋಡಿನ ಬದಿಯಲ್ಲಿಯೇ ರಸ್ತೆ ನಿರ್ಮಿಸಿದ್ದಾರೆ.
ಫುಟ್‌ಪಾತ್ ಕೂಡ ಇಲ್ಲದೆ ಇದು ತೀರಾ ಅಪಾಯಕಾರಿಯಾಗಿದ್ದು, ತಿರುವು ರಸ್ತೆಯಾಗಿರುವ ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವಾಹನಗಳು ಕಂದಕಕ್ಕೆ ಉರುಳುವ ಸಂಭವವಿದೆ. ರಸ್ತೆ ಬದಿ ಚರಂಡಿ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಖಾಸಗಿಯವರ ಅನಧಿಕೃತ ಕಟ್ಟಡಗಳ ತೆರವಿಗೆ ಮುಂದಾಗದ ಅಧಿಕಾರಿಗಳು ಮಾತ್ರ ಈ ಕಟ್ಟಡದ ಮಧ್ಯದಲ್ಲಿದ್ದ ಸಾರ್ವಜನಿಕ ಬಸ್ ತಂಗುದಾಣವನ್ನು ಸಂಪೂರ್ಣ ಕೆಡವಿ ಹಾಕಿದ್ದಾರೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವ ಜನಿಕರು ರಸ್ತೆಯಲ್ಲಿಯೇ ನಿಂತು ಬಸ್ ಕಾಯುವಂತಾಗಿದೆ. ಅಲ್ಲದೇ, ಇಲ್ಲೇ ತಿರುವಿನಲ್ಲಿ ಮೋರಿಯೊಂದಿದ್ದು, ಇದಕ್ಕೆ ತಾಗಿಕೊಂಡೇ ರಸ್ತೆ ಹಾದು ಹೋಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ಒಟ್ಟಾರೆಯಾಗಿ ಇಲ್ಲಿ ರಸ್ತೆ ಪುನರ್ ನಿರ್ಮಾಣದ ವೇಳೆ ಸಾಕಷ್ಟು ಅವ್ಯವಹಾರ ನಡೆದಿದ್ದು, ಅವೈಜ್ಞಾನಿಕವಾಗಿ ನಡೆಸಲಾಗಿದೆ ಎಂದು ಆರೋಪಿಸಿದ ಸಾರ್ವಜನಿಕರು ಪುತ್ತೂರು ಉಪ ವಿಭಾಗಾ ಧಿಕಾರಿಗೆ ದೂರು ನೀಡಿ ದ್ದರು.
ಡಿಸಿ ಗಮನಕ್ಕೆ ತರಲಾಗುವುದು
ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಗಾರ್ಗಿ ಜೈನ್, ಇಲ್ಲಿ ಸರಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡಗಳಿದ್ದು, ಅವುಗಳ ತೆರವಿಗೆ ಜಿಲ್ಲಾಧಿಕಾರಿಯವರೊಂದಿಗೆ ಪ್ರಸ್ತಾವ ಮಾಡಲಾಗುವುದು. ರಸ್ತೆ ಬದಿ ಚರಂಡಿ ನಿರ್ಮಿಸಿ ಮೋರಿಯಿಂದ ಮೋರಿಗೆ ಸಂಪರ್ಕ ಕಲ್ಪಿಸಲು, ತಡೆಗೋಡೆ ನಿರ್ಮಿಸು ವುದು ಸೇರಿದಂತೆ ಇಲ್ಲಿನ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಪ್ರಸ್ತಾವನೆ ಸಲ್ಲಿಸಲಾಗುವುದು
ಲೋಕೋಪಯೋಗಿ ಇಲಾಖೆಯ ಸಹಾ ಯಕ ಕಾರ್ಯನಿರ್ವಾಹಕ ಅಭಿಯಂತರ ಗೋಕುಲದಾಸ್ ಮಾತನಾಡಿ, ಇಲ್ಲಿ ರಸ್ತೆಯನ್ನು ಐದೂವರೆ ಮೀಟರ್‌ನಿಂದ 7 ಮೀಟರ್‌ಗೆ ಅಗಲಗೊಳಿಸಲಾಗಿದೆ. ತೋಡಿನ ಬದಿಯಿಂದ ರಸ್ತೆ ಹಾದು ಹೋಗಿದ್ದರೂ ಅಲ್ಲಿ ಅಲ್ಯೂಮಿನಿಯಂ ತಡೆಗೋಡೆ ನಿರ್ಮಿಸಲಾಗುವುದು. ಕಿರಿ ದಾದ ಮೋರಿಯನ್ನು ವಿಸ್ತರಿಸಲು ಪ್ರಸ್ತಾ ವನೆ ಸಲ್ಲಿಸಲಾಗುವುದು. ತಡೆಗೋಡೆ ನಿರ್ಮಾಣ ಹಾಗೂ ಮೋರಿ ವಿಸ್ತರಿಸಲು ನೀಲನಕ್ಷೆ ತಯಾರಿಸಿ ಕಳುಹಿಸಲಾಗುವುದು ಎಂದರು.
ಕೋಡಿಂಬಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ತಾ.ಪಂ. ಮಾಜಿ ಅಧ್ಯಕ್ಷ ಜಯಾನಂದ ಕೆ., ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ಮಾಜಿ ಸದಸ್ಯ ಜಯಪ್ರಕಾಶ್ ಬದಿನಾರು, ಎಪಿಎಂಸಿ ನಿದೇರ್ಶಕ ಕೃಷ್ಣನಾಯ್ಕ ಕೃಷ್ಣಗಿರಿ, ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಶೆಟ್ಟಿ ಬರೆಮೇಲು, ಮಾಜಿ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ, ಮಾಧವ ಬರಮೇಲು, ಜಯ ಕರ್ನಾಟಕ ಕೋಡಿಂಬಾಡಿ ಘಟಕದ ಅಧ್ಯಕ್ಷ ವಿಕ್ರಮ್ ಶೆಟ್ಟಿ ಅಂತರ, ನಿರಂಜನ್ ರೈ ಮಠಂತಬೆಟ್ಟು, ಶೇಖರ ಪೂಜಾರಿ ಡೆಕ್ಕಾಜೆ, ಸುರೇಶ್ ಶೆಟ್ಟಿ ಹಾಜರಿದ್ದು, ಅಹವಾಲು ಮಂಡಿಸಿದರು. ಪಿಡಬ್ಲ್ಯುಡಿ ಎಂಜಿನಿಯರ್ ಪ್ರಮೋದ್, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಮಂಜುನಾಥ್ ಕೆ.ಎಂ., ಕೋಡಿಂಬಾಡಿ ಗ್ರಾಮ ಕರಣಿಕ ಚಂದ್ರ ನಾೖಕ್ ಅವರು ಉಪ ವಿಭಾಗಾಧಿಕಾರಿಗೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.