ಎಪಿಟೋಮ್ – 2019: ರಾಷ್ಟ್ರಮಟ್ಟದ ಐಟಿ ಹಾಗೂ ಎಂಜಿನಿಯರಿಂಗ್ ಫೆಸ್ಟ್
Team Udayavani, Mar 12, 2019, 1:09 PM IST
ಮಂಗಳೂರು: ನಗರದಲ್ಲಿರುವ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ (ಸ್ವಾಯತ್ತ) ಇದೇ ಮಾರ್ಚ್ 14 ಮತ್ತು 15ರಂದು ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಮಾಹಿತಿ ತಂತ್ರಜ್ಞಾನ ಫೆಸ್ಟ್ (ಐ.ಟಿ. ಫೆಸ್ಟ್) ನಡೆಯಲಿದೆ. ಈ ಬಾರಿ ನಡೆಯಲಿರುವುದು ಎಪಿಟೋಮ್ ನ 19ನೇ ಆವೃತ್ತಿಯಾಗಿದೆ. ಈ ಎರಡು ದಿನಗಳ ಫೆಸ್ಟ್ ನಲ್ಲಿ ದೇಶದ ವಿವಿಧ ಭಾಗಗಳ ಎಂಜಿನಿಯರಿಂಗ್ ಹಾಗೂ ಐ.ಟಿ. ಕಾಲೇಜುಗಳು ಪಾಲ್ಗೊಳ್ಳಲಿವೆ.
ಮಾರ್ಚ್ 14ರ ಗುರುವಾರದಂದು ಬೆಳಿಗ್ಗೆ 9:15ಕ್ಕೆ ಫೆಸ್ಟ್ ಉದ್ಘಾಟನೆಗೊಳ್ಳಲಿದ್ದು, ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನ ಸಹ-ಸಂಸ್ಥಾಪಕ, ಆಡಳಿತ ನಿರ್ದೇಶಕ ಮತ್ತು ಸಿ.ಇ.ಒ. ಪ್ರವೀಣ್ ಕುಮಾರ್ ಕಲ್ಬಾವಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಎ.ಐ.ಎಂ.ಐ.ಟಿ. ಕ್ಯಾಂಪಸ್ ನಲ್ಲಿರುವ ಅರ್ತೂರ್ ಶೆಣೋಯ್ ಅಡಿಟೋರಿಯಂನಲ್ಲಿ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ಸೈಂಟ್ ಅಲೋಷಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ ಪ್ರಾಂಶುಪಾಲರಾಗಿರುವ ರೆವರಂಡ್ ಫಾದರ್ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮತ್ತು ಎ.ಐ.ಎಂ.ಐ.ಟಿ. ಕ್ಯಾಂಪಸ್ ನ ನಿರ್ದೇಶಕರಾಗಿರುವ ರೆವರಂಡ್ ಫಾದರ್ ಡೆಂಝಿಲ್ ಲೋಬೋ ಎಸ್.ಜೆ. ಅವರು ಜಂಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಐಟಿ ಕಂಪೆನಿಗಳಿಗೆ ಅಗತ್ಯವಾಗಿ ಬೇಕಾಗಿರುವ ಟೆಕ್ ತಂಡವನ್ನು ರಚಿಸುವುದು, ಐ.ಟಿ. ರಸಪ್ರಶ್ನೆ, ಕೋಡಿಂಗ್, ಗೇಮಿಂಗ್, ವೆಬ್ ಡಿಸೈನಿಂಗ್, ಫೊಟೋಗ್ರಾಫಿ ಮತ್ತು ವಿಡಿಯೋಗ್ರಾಫಿ, ನಿಧಿ ಶೋಧ (ಟ್ರೆಷರ್ ಹಂಟ್), ಮೊಬೈಲ್ ಅಪ್ಲಿಕೇಷನ್ ಡೆವಲಪ್ ಮೆಂಟ್, ಐ.ಟಿ. ಮ್ಯಾನೇಜರ್, ಮಾರ್ಕೆಟಿಂಗ್ ಮತ್ತು ಬ್ಯುಸಿನೆಸ್ ಐಡಿಯಾ ಸಂಬಂಧಿತ ವಿಷಯಗಳು ಇತ್ಯಾದಿ ಸ್ಪರ್ಧೆಗಳು ಈ ಫೇಸ್ಟ್ ನ ಪ್ರಮುಖ ಆಕರ್ಷಣೆಯಾಗಿರುತ್ತವೆ. ಇಂತಹ ಸ್ಪರ್ಧೆಗಳು ಎಂಜಿನಿಯರಿಂಗ್ ಮತ್ತು ಐಟಿ ಪದವೀಧರರಿಗೆ ಅತ್ಯಗತ್ಯವಾಗಿರುವ ವೃತ್ತಿ ಕೌಶಲಗಳನ್ನು ಪರೀಕ್ಷಿಸಲು ಸಹಕಾರಿಯಾಗಿರುತ್ತವೆ.
ಎಪಿಟೋಮ್ – 2019 ‘ಪೈರೇಟ್ಸ್ ಆಫ್ ಕೆರಿಬಿಯನ್’ ಎಂಬ ಥೀಮ್ ನಡಿಯಲ್ಲಿ ಈ ಬಾರಿ ನಡೆಯಲಿದೆ. ಮಾಹಿತಿ ತಂತ್ರಜ್ಞಾನ ಮತ್ತು ಬಯೋಇನ್ಫೋಮೆಟ್ರಿಕ್ಸ್ ಕ್ಷೇತ್ರದಲ್ಲಿ ಯುವಪ್ರತಿಭೆಗಳಿಗೊಂದು ಅವಕಾಶವನ್ನು ನಿರ್ಮಿಸಿಕೊಡುವ ಸದುದ್ದೇಶವನ್ನು ಈ ಫೆಸ್ಟ್ ಹೊಂದಿದೆ. 12 ವಿಭಾಗಗಳಲ್ಲಿ ವೈಯಕ್ತಿಕ ಸ್ಪರ್ಧೆಗಳು ನಡೆಯಲಿದೆ ಮತ್ತಿದು ಎರಡು ದಿನಗಳ ಫೆಸ್ಟ್ ಅವಧಿಯಲ್ಲಿ ಉಳಿದ ಕಾರ್ಯಕ್ರಮಗಳ ಜೊತೆಜೊತೆಗೇ ನಡೆಯಲಿದೆ. ಮತ್ತು ಈ ಮೂಲಕ ಅತ್ಯುತ್ತಮ ಪ್ರತಿಭೆಯನ್ನು ಆಯ್ಕೆ ಮಾಡಲಾಗುವುದು.
ಈ ಫೆಸ್ಟ್ ನ ಸಮಾರೋಪ ಸಮಾರಂಭವು ಮಾರ್ಚ್ 15ರಂದು ಸಾಯಂಕಾಲ 4.15ಕ್ಕೆ ನಡೆಯಲಿರುವುದು. ಕೆಥೊಲಿಕ್ ಸಿರಿಯನ್ ಬ್ಯಾಂಕ್ ನ ಸಹಾಯಕ ಮಹಾಪ್ರಬಂಧಕರು ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುತ್ತಾರೆ. ಸೈಂಟ್ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ರೆವರಂಡ್ ಫಾದರ್ ಮೆಲ್ವಿನ್ ಮೆಂಡೋನ್ಸಾ ಅವರು ಗೌರವ ಉಪಸ್ಥಿತಿಯಲ್ಲಿರಲಿದ್ದಾರೆ. ಎಐಎಂಐಟಿ ಬೀರಿ ಇದರ ನಿರ್ದೇಶಕರಾಗಿರುವ ರೆವರಂಡ್ ಫಾದರ್ ಡೆಂಝಿಲ್ ಲೋಬೋ ಅವರು ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.
ಮಂಗಳೂರಿನ ಹೃದಯಭಾಗದಲ್ಲಿರುವ ಕೋಟೆಕಾರು ಬೀರಿಯಲ್ಲಿ ಸೈಂಟ್ ಅಲೋಷಿಯಸ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆ್ಯಂಡ್ ಇಂಫಾರ್ಮೇಶನ್ ಟೆಕ್ನಾಲಜಿ ಸಂಸ್ಥೆ ಇದೆ. ಇಂಫಾರ್ಮೇಶನ್ ಟೆಕ್ನಾಲಜಿ ಮತ್ತು ಬಯೋಇಂಫಾಮೆಟ್ರಿಕ್ಸ್ ಮಾಸ್ಟರ್ಸ್ ಇನ್ ಕಂಪ್ಯೂಟರ್ ಅಪ್ಲಿಕೇಶನ್ (ಎಂ.ಸಿ.ಎ.), ಎಂ.ಎಸ್ಸಿ ಸಾಫ್ಟ್ವೇರ್ ಟೆಕ್ನಾಲಜಿ, ಎಂ.ಎಸ್ಸಿ. ಬಯೋ ಇನ್ಫೋಮೆಟ್ರಿಕ್ಸ್, ಪಿಜಿಡಿಸಿಎ ಮತ್ತು ಹೊಸದಾಗಿ ಪ್ರಾರಂಭಗೊಂಡಿರುವ ಎಂ.ಎಸ್ಸಿ ಬಿಗ್ ಡಾಟಾ ಅನಾಲಿಟಿಕ್ಸ್ ಕೋರ್ಸ್‌ಗಳನ್ನು ಹೊಂದಿದೆ.