ದಸರಾ ಹಂಗಾಮ: ಜವುಳಿ ಉದ್ಯಮಕ್ಕೂ ಸಂಭ್ರಮ ತುಂಬುತ್ತಿರುವ ನವರಾತ್ರಿ ಸಡಗರ
ಆನ್‌ಲೈನ್ ಮಾರುಕಟ್ಟೆಯ ಅಬ್ಬರದ ಮಧ್ಯೆಯೂ ಕುಂದದ ಆತ್ಮವಿಶ್ವಾಸ
Team Udayavani, Sep 30, 2019, 5:33 AM IST
ಹಬ್ಬಗಳ ಋತು ಬಂದಾಗ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ ವಹಿವಾಟು ತೇಜಿಗೊಳ್ಳುವುದು ಸಹಜ. ಈ ಸಾಲಿಗೆ ಜವುಳಿ ಉದ್ಯಮವೂ ಸೇರಿದೆ. ಈ ಬಾರಿಯಂತೂ ಹಲವು ತಿಂಗಳುಗಳಿಂದ ನಿರಾಶೆ ಮೂಡಿಸಿದ್ದ ವಸ್ತ್ರೋದ್ಯಮದಲ್ಲಿ ಈಗ ಕಂಡುಬಂದಿರುವ ಚೇತರಿಕೆ ಉದ್ಯಮಿಗಳು, ವ್ಯಾಪಾರಿಗಳಲ್ಲಿ ಖುಷಿ, ಸಮಾಧಾನ ತಂದಿದೆ. ನವರಾತ್ರಿಯಿಂದ ಆರಂಭವಾಗಿರುವ ಈ ಚುರುಕು ಮುಂದಿನ ದೀಪಾವಳಿ ಸಹಿತ ಇನ್ನುಳಿದ ಹಬ್ಬಗಳ ಅವಧಿಗೂ ಮುಂದುವರಿಯುವ ನಿರೀಕ್ಷೆ ಇದೆ.
ಮಂಗಳೂರು/ಉಡುಪಿ: ಹಿಂದೆಲ್ಲ ಹಬ್ಬದ ಸಂಭ್ರಮವೆಂದರೆ ಹೊಸ ಬಟ್ಟೆ ಖರೀದಿಯೇ. ಹಬ್ಬದ ಆಚರಣೆಯ ಕಳೆ ತೋರುತ್ತಿದ್ದುದೇ ನಾವು ತೊಡುತ್ತಿದ್ದ ಹೊಸ ಬಟ್ಟೆಯಿಂದ.
ಕೆಲವು ವರ್ಷಗಳಿಂದ ಇದರ ರೀತಿ ಸ್ವಲ್ಪ ಬದಲಾಗಿದೆ.
ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ತುಂಬಿರುವುದು ಹೊಸ ವಾಹನ, ಹೊಸ ಗೃಹೋಪಯೋಗಿ ಉಪಕರಣಗಳು, ಆಭರಣಗಳ ಖರೀದಿ ಇತ್ಯಾದಿ. ಆದರೂ ಹೊಸ ಬಟ್ಟೆ ತಂದು ಕೊಡುವ ಸಂತಸವೇ ಬೇರೆ. ಅದಕ್ಕೇ ದಸರಾ- ದೀಪಾವಳಿಯೆಂದರೆ ಹೊಸ ಬಟ್ಟೆ ಖರೀದಿಗೂ ಸ್ಥಾನವಿದೆ. ಮಾರುಕಟ್ಟೆಯಲ್ಲಿನ ಚೇತರಿಕೆ ಜವುಳಿ ಉದ್ಯಮಕ್ಕೂ ಕೊಂಚ ಉತ್ಸಾಹವನ್ನು ತುಂಬುತ್ತಿದೆ.
ಉಡುಪಿ ಮತ್ತು ಮಂಗಳೂರಿನ ಜವುಳಿ ಮಳಿಗೆ ಗಳಲ್ಲೂ ಕಳೆ ಕಾಣತೊಡಗಿದೆ. ಇಲ್ಲೂ ನೂರಾರು ಜವುಳಿ ಮಳಿಗೆಗಳಿವೆ. ಕೆಲವಂತೂ ಬಹಳ ಪ್ರಸಿದ್ಧ. ಎಲ್ಲ ಬಗೆಯ ನವನವೀನ ವಿನ್ಯಾಸಗಳಿಂದ ಹಿಡಿದು ಮದುಮಕ್ಕಳಿಗೆ ಬೇಕಾದ ಅಗತ್ಯ ತರಹೇವಾರಿ ವಸ್ತ್ರಗಳು ಇಲ್ಲಿ ಲಭ್ಯ. ಸದ್ಯ ನವರಾತ್ರಿ ಆರಂಭವಾಗಿದ್ದು, ಶುಭಕಾರ್ಯಕ್ರಮಗಳು ಕೂಡ ಆರಂಭವಾಗಿವೆ. ಹೀಗಾಗಿ ಬಟ್ಟೆಗಳ ಖರೀದಿಯೂ ಜೋರಾಗಿದೆ. ಮಂಗಳೂರಿನಲ್ಲಿರುವ ಹಲವು ಪ್ರತಿಷ್ಠಿತ ವಸ್ತ್ರ ಮಳಿಗೆಗಳಲ್ಲೂ ವಸ್ತ್ರಪ್ರಿಯರು ತುಂಬಿ ಕೊಳ್ಳುತ್ತಿದ್ದಾರೆ.
ಶುಭ ಕಾರ್ಯಕ್ರಮಗಳಿಗೆ ಮುನ್ನುಡಿ
ಮಂಗಳೂರಿನ ಸಂಜೀವ ಶೆಟ್ಟಿ ಟೆಕ್ಸ್‌ಟೈಲ್ಸ್‌ನ ಮಾಲಕರಾದ ಮಹೇಂದ್ರ ಅವರು ಹೇಳುವ ಪ್ರಕಾರ, ಕೆಲವು ತಿಂಗಳುಗಳಿಂದ ವಸ್ತ್ರ ಮಾರುಕಟ್ಟೆ ಕೂಡ ಕೊಂಚ ಕುಸಿತ ಕಂಡಿತ್ತು. ಶುಭ ಕಾರ್ಯಕ್ರಮಗಳು ಕಡಿಮೆ ಆಗಿದ್ದವು. ಆದರೆ ಈಗ ನವರಾತ್ರಿ ಬಂದಿರುವುದು ಮತ್ತು ಶುಭ ಕಾರ್ಯಕ್ರಮಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಹಿವಾಟನ್ನು ನಿರೀಕ್ಷಿಸಲಾಗುತ್ತಿದೆ.
ಈ ಅಭಿಪ್ರಾಯವನ್ನು ಅನುಮೋದಿಸುವ ಉಡುಪಿಯ ಗೀತಾಂಜಲಿ ಸಿಲ್ಕ್$Õನ ಆಡಳಿತ ಪಾಲುದಾರ ಆರ್.ಕೆ. ನಾಯಕ್, ಈ ಹಬ್ಬಗಳಿಗೆಂದೇ ಹೊಸ ವಿನ್ಯಾಸಗಳನ್ನು ತರಿಸುತ್ತೇವೆ. ಎಂಬ್ರಾಯxರಿ ಸ್ಟೋನ್ ವರ್ಕ್ ಮತ್ತು ಜರಿಯಂತಹ ಡಿಸೈನ್‌ಗಳು ಈಗ ಕಡಿಮೆಯಾಗಿವೆ. ಮಹಿಳೆಯರು ಹೆಚ್ಚಾಗಿ ಎಂಬೋಸ್ಡ್ ಡ್ರೆಸ್ ಡಿಸೈನ್‌ಗಳನ್ನು ಇಷ್ಟಪಡುತ್ತಾರೆ. ಸ್ಲಿಮ್ ಫಿಟ್ಟಿಂಗ್ ಉಡುಗೆಗಳು ಮಹಿಳೆಯರು ಮತ್ತು ಪುರುಷರಿಗೆ ಅಚ್ಚುಮೆಚ್ಚು. ಈ ಟ್ರೆಂಡ್ ಅನುಸರಿಸಿ ಹೊಸ ವಿನ್ಯಾಸದವುಗಳನ್ನು ತರಿಸಿಕೊಂಡಿದ್ದೇವೆ. ಕೆಲವು ಯುವಜನರು ಆನ್‌ಲೈನ್ ಕಡೆಗೆ ಆಕರ್ಷಿತರಾಗುತ್ತಿದ್ದರೂ ಮಳಿಗೆಗೆ ಬಂದು ಹೊಸ ಡಿಸೈನ್‌ಗಳನ್ನು ನೋಡಿ ಆಸ್ವಾದಿಸಿ ಖರೀದಿಸುವ ಕ್ರೇಝ್ ಕಡಿಮೆಯಾಗಿಲ್ಲ ಎನ್ನುತ್ತಾರೆ.
“ಆನ್‌ಲೈನ್ ಮಾರ್ಕೆಟಿಂಗ್ ಇಂದು ದೊಡ್ಡ ಮಟ್ಟದಲ್ಲಿ ವ್ಯಾಪಿಸಿರುವುದರಿಂದ ಮಳಿಗೆಗಳಿಗೆ ಜನರು ಬರುವ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಹಬ್ಬದ ಸೀಸನ್ ಶುರುವಾಗಿದ್ದರಿಂದ ಜನರು ಬರತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವ್ಯಾಪಾರವನ್ನು ನಿರೀಕ್ಷಿಸುತ್ತಿದ್ದೇವೆ’ ಎನ್ನುತ್ತಾರೆ ನಗರದ ಕುಲ್ಯಾಡಿಕಾರ್ನ ಮಾಲಕರಾದ ಸುಧೀರ್ ಪೈ.
ನವನವೀನ ಆಯ್ಕೆಗೆ ಆದ್ಯತೆ
ಹಬ್ಬ-ಹರಿದಿನಗಳಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗುತ್ತದೆ. ಎಲ್ಲ ವಯೋಮಾನದವರಿಗೂ ಅನುಕೂಲವಾಗುವಂತೆ ದಿನಂಪ್ರತಿ ನವನವೀನ ವಿನ್ಯಾಸಗಳ ವಸ್ತ್ರಗಳನ್ನು ತರಿಸಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಉತ್ತಮವಾಗಿದೆ. ಈಗ ಸೀಸನ್ ಆರಂಭವಾಗಿದೆ. ಮತ್ತಷ್ಟು ಗ್ರಾಹಕರ ನಿರೀಕ್ಷೆ ಹೊಂದಲಾಗಿದೆ. ಪ್ರತಿ ಸೀಸನ್‌ನಲ್ಲೂ ಸಾವಿರಾರು ಮಂದಿ ವಸ್ತ್ರ ಪ್ರಿಯರನ್ನು ನಮ್ಮ ಸದಸ್ಯರನ್ನಾಗಿ ಮಾಡಿಕೊಳ್ಳುವುದೇ ನಮ್ಮ ಉದ್ದೇಶ. ನವರಾತ್ರಿ ಆರಂಭ ರವಿವಾರವಾದ್ದರಿಂದ ವ್ಯಾಪಾರ ಚೆನ್ನಾಗಿಯೇ ಇದೆ. ಗ್ರಾಹಕರ ಈ ಜೋಶ್ ಹೀಗೆಯೇ ಮುಂದುವರಿಯುವ ವಿಶ್ವಾಸವಿದೆ ಎನ್ನುತ್ತಾರೆ ಉದ್ಯಾವರದ ಜಯಲಕ್ಷ್ಮೀ ಸಿಲ್ಕ್$Õನ ಮಾಲಕ ವೀರೇಂದ್ರ ಹೆಗ್ಡೆ.
ಪಾವನಿ ಟೆಕ್ಸ್‌ಟೈಲ್ಸ್‌ನ ಪಾಲುದಾರರಾದ ಗೌತಮ್ ಅವರ ಪ್ರಕಾರ, ಮಾರುಕಟ್ಟೆ ಕುಸಿತದ ಮಧ್ಯೆಯೇ ಹಬ್ಬದ ಸಡಗರದಿಂದಾಗಿ ವ್ಯಾಪಾರದ ನಿರೀಕ್ಷೆ ಹೆಚ್ಚಿದೆ. ಹೊಸ ಬಟ್ಟೆಗಳ ಸಂಗ್ರಹ ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರು ಸ್ಪಂದಿಸುವ ವಿಶ್ವಾಸವಿದೆ.
ಹೊಸ ಡಿಸೈನ್‌ಗಳತ್ತ ಚಿತ್ತ
ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸಲು ನಾವು ಸದಾ ಪ್ರಯತ್ನಿಸುತ್ತೇವೆ ಎಂದು ಹೇಳುವ ಉಡುಪಿಯ ವೇದಾಸ್ ವಸ್ತ್ರ ಮಳಿಗೆಯ ಮಾಲಕರಾದ ದೇವಾನಂದ ಶೆಣೈ, ಹಬ್ಬ- ಮದುವೆ ಸೀಸನ್ ಪ್ರಯುಕ್ತ ವಿಶೇಷ ಆಫರ್‌ಗಳನ್ನು ನೀಡ ಲಾಗುತ್ತಿದೆ. ಹ್ಯಾಂಡ್‌ಲೂಮ್ಸ್ ಪ್ರಾಡಕ್ಟ್ಗಳಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗಿದ್ದಾರೆ. ಹೊಸ ವಿನ್ಯಾಸಗಳ ಉಡುಗೆಗಳಿಗೆ ಬೇಡಿಕೆ ಹೆಚ್ಚು. ಸೀಸನ್ ಈಗ ಆರಂಭವಾಗಿದ್ದು, ವ್ಯಾಪಾರ ಚೇತರಿಕೆ ಕಾಣತೊಡಗಿದೆ. ಆನ್‌ಲೈನ್‌ನಲ್ಲಿ ಶೇ. 2ರಷ್ಟು ಮಂದಿ ಮಾತ್ರ ಖರೀದಿಸುತ್ತಾರೆ. ಉಳಿದವರು ಮಳಿಗೆಗಳಿಗೆ ಬಂದು ಡಿಸೈನ್ ಮತ್ತು ಗುಣಮಟ್ಟವನ್ನು ಖುದ್ದು ಪರಿಶೀಲಿಸಿ ಖರೀದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.