ಎನ್‌ಸಿಇಆರ್‌ಟಿ ಪರೀಕ್ಷೆ ಈ ಬಾರಿ ಗೊಂದಲದ ಗೂಡು
ಒಂದೇ ಶಾಲೆಯ ಮಕ್ಕಳು 10 ಕೇಂದ್ರಗಳಲ್ಲಿ ಉತ್ತರಿಸಬೇಕು!
Team Udayavani, Nov 5, 2019, 5:45 AM IST
ಸಾಂದರ್ಭಿಕ ಚಿತ್ರ
ವಿಟ್ಲ: ಎನ್‌ಸಿಇಆರ್‌ಟಿಯಿಂದ ಈ ಸಾಲಿನ ನ್ಯಾಶನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ (ಎನ್‌ಎಂಎಂಎಸ್) ಮತ್ತು ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆ (ಎನ್‌ಟಿಎಸ್‌ಇ)ಗಳು ನ. 17ರಂದು ನಡೆಯಲಿವೆ. ಆದರೆ ಹಿಂದಿನ ಪದ್ಧತಿಗೆ ತದ್ವಿರುದ್ಧವಾಗಿ ಈ ಬಾರಿ ಒಂದು ಶಾಲೆಯ ವಿದ್ಯಾರ್ಥಿಗಳನ್ನು ಬೇರೆ ಬೇರೆ ಕೇಂದ್ರಗಳಿಗೆ ಹಂಚಿ ಹಾಕಿರುವುದರಿಂದ ಪರೀಕ್ಷೆ ಬರೆಯುವುದು ಸಮಸ್ಯೆಯಾಗಲಿದೆ. ಮ್ಯಾನ್ಯುವಲ್ ನೋಂದಣಿ ಬದಲು ಈ ಬಾರಿ ಆನ್‌ಲೈನ್ ಕ್ರಮ ಅಳವಡಿಸಿಕೊಂಡದ್ದು ಮತ್ತು ಪರೀಕ್ಷಾ ಕೇಂದ್ರ ನಿಗದಿಪಡಿಸಲು ಮಕ್ಕಳ ಹೆಸರುಗಳನ್ನು ಅಕ್ಷರ ಅನುಕ್ರಮದಲ್ಲಿ ವರ್ಗೀಕರಿಸಿರುವುದು ಸಮಸ್ಯೆಗೆ ಕಾರಣ.
ಹಿಂದೆ ಹೇಗಿತ್ತು?
ಹಿಂದೆ ಇವೆರಡೂ ಪರೀಕ್ಷೆಗಳು ಆಯಾ ತಾಲೂಕಿನ ಎರಡು ಪ್ರಮುಖ ಶಾಲೆಗಳಲ್ಲಿ ನಡೆಯುತ್ತಿದ್ದವು. ವಿವಿಧ ಶಾಲೆಗಳ ಮುಖ್ಯಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪರೀಕ್ಷೆಗಳನ್ನು ಬರೆಯಿಸುತ್ತಿದ್ದರು.
ಈಗ ಏನಾಗಿದೆ ?
ಪ್ರಸಕ್ತ ಸಾಲಿನಲ್ಲಿ ಒಂದು ತಾಲೂಕಿನಲ್ಲಿ 10ರ ವರೆಗೂ ಶಾಲೆಗಳು ಪರೀಕ್ಷಾ ಕೇಂದ್ರಗಳಾಗಿವೆ. ಬಂಟ್ವಾಳ ತಾಲೂಕನ್ನೇ ತೆಗೆದುಕೊಂಡರೆ ವಿಟ್ಲ, ವಗ್ಗ, ಮೊಂಟೆಪದವು, ಕುರ್ನಾಡು, ಕಲ್ಲಡ್ಕ, ಮುಡಿಪು, ಮೊಡಂಕಾಪು, ವಾಮದಪದವು, ಅಳಿಕೆ, ಮಾಣಿ ಮತ್ತಿತರ ಶಾಲೆಗಳಿವೆ. ಈ ಶಾಲೆಗಳ ಮುಖ್ಯಸ್ಥರೊಡನೆ ಚರ್ಚಿಸದೆ, ಮಾಹಿತಿ ನೀಡದೆ ಗುರುತಿಸಿರುವುದು ವಿಶೇಷ. ಆಯಾಯ ಶಾಲೆಗಳ ಮುಖ್ಯಸ್ಥರಿಗೆ ವಿಷಯ ತಿಳಿದುದೇ ಆದೇಶ ಲಭಿಸಿದ ಬಳಿಕ.
ಈಗ ಎಸೆಸೆಲ್ಸಿ ಬೋರ್ಡ್‌ಗೆ ಜವಾಬ್ದಾರಿ
ಹಿಂದೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ಪರೀಕ್ಷೆಗಳನ್ನು ನಡೆಸುತ್ತಿತ್ತು. ಈ ಬಾರಿ ಎಸೆಸೆಲ್ಸಿ ಬೋರ್ಡ್‌ಗೆ ಜವಾಬ್ದಾರಿ ನೀಡಲಾಗಿದೆ. ಈ ವರ್ಷ ಆನ್‌ಲೈನ್‌ನಲ್ಲಿ ನೋಂದಣಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.
ಉಪಯೋಗ ಏನು?
ಎನ್‌ಎಂಎಂಎಸ್ ಪರೀಕ್ಷೆಯನ್ನು 8, 9ನೇ ತರಗತಿಯ ಮತ್ತು ಎನ್‌ಟಿಎಸ್‌ಇ ಪರೀಕ್ಷೆಯನ್ನು ಎಸೆಸೆಲ್ಸಿ ವಿದ್ಯಾರ್ಥಿಗಳು ಬರೆಯುತ್ತಾರೆ. ಉತ್ತೀರ್ಣರಾದವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸ್ಕಾಲರ್‌ಶಿಪ್ ಸಿಗುತ್ತದೆ. ವಾರ್ಷಿಕ ವಾಗಿ ಬೇರೆ ಬೇರೆ ತರಗತಿ ವಿದ್ಯಾರ್ಥಿಗಳಿಗೆ 6 ಸಾವಿರ ರೂ.ಗಳಿಂದ 12 ಸಾವಿರ ರೂ. ತನಕ ವಿದ್ಯಾರ್ಥಿ ವೇತನ ದೊರಕುತ್ತದೆ.
ಗೊಂದಲಕ್ಕೆ ಕಾರಣವೇನು?
ಈ ಬಾರಿ ವಿದ್ಯಾರ್ಥಿಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲು ಅವಕಾಶ ನೀಡಲಾಗಿದೆ. ಬಳಿಕ ಆಂಗ್ಲ ಅಕ್ಷರಮಾಲೆಯ ಅನುಕ್ರಮದಲ್ಲಿ ವಿದ್ಯಾರ್ಥಿಗಳ ಹೆಸರನ್ನು ವಿಭಜಿಸಲಾಗಿದೆ. ಕೆಲವು ಶಾಲೆಗಳಲ್ಲಿ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದು, ಇವರು 10 ಕೇಂದ್ರಗಳಲ್ಲಿ ಹಂಚಿಹೋಗಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವುದು ತಲೆನೋವಾಗಿದೆ. ಹಳ್ಳಿಯಿಂದ ಬಂಟ್ವಾಳ ತಾಲೂಕಿನ ಕೆಲವು ಕೇಂದ್ರಗಳಿಗೆ 50 ಕಿ.ಮೀ.ಗಳಿಗೂ ಅಧಿಕ ದೂರವಿದೆ. ಜತೆಗೆ ಊಟ- ತಿಂಡಿ, ಪರೀಕ್ಷಾ ವ್ಯವಸ್ಥೆಯ ಲೋಪಗಳು ಮಕ್ಕಳ ಉತ್ತರಿಸುವಿಕೆಗೆ ಅಡ್ಡಿಯಾಗಬಹುದು.
ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕೆಂದು ಆನ್‌ಲೈನ್ ವ್ಯವಸ್ಥೆ ತರಲಾಗಿದೆ. ಸ್ಥಳೀಯ ಮಕ್ಕಳಿಗೆ ಅನುಕೂಲವಾಗಬೇಕೆಂದು ಅನೇಕ ಕೇಂದ್ರಗಳನ್ನು ತೆರೆಯ ಲಾಗಿದೆ. ಎಸೆಸೆಲ್ಸಿ ಬೋರ್ಡ್ ಪರೀಕ್ಷೆ ಆಯೋಜಿಸುತ್ತಿರುವುದರಿಂದ ಎಸೆಸೆಲ್ಸಿ ಕೇಂದ್ರ ಗಳಲ್ಲೇ ಆಯೋಜಿಸಲಾಗುತ್ತದೆ. ಈ ಪರೀಕ್ಷೆಗಳು ಪ್ರೌಢಶಾಲೆ ಮಕ್ಕಳಿಗೆ ನಡೆಯುತ್ತಿರುವುದರಿಂದ ಶಿಕ್ಷಕರಿಗೆ ಬೇರೆ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು ಕಷ್ಟವಾಗಲಾರದು. ಎಕ್ಸಾಮ್ ಗೈಡ್‌ಲೈನ್ ಬಂದ ಬಳಿಕ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಮೇಲಧಿಕಾರಿಗಳು ಮಾರ್ಗದರ್ಶನ ನೀಡಲು ಒಪ್ಪಿಕೊಂಡಿದ್ದಾರೆ.
– ಚಂದ್ರಾವತಿ, ಜಿಲ್ಲಾ ನೋಡಲ್ ಅಧಿಕಾರಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.