ನೀರಿನ ಮಟ್ಟ 3 ಅಡಿಗಳಿಗೆ ಕುಸಿತ
ಬಂಟ್ವಾಳ: ನೇತ್ರಾವತಿ ನದಿ ತುಂಬೆ ಡ್ಯಾಂ
Team Udayavani, Apr 9, 2019, 6:00 AM IST
ಬಂಟ್ವಾಳ: ನೇತ್ರಾವತಿ ನದಿ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಎ. 8ರಂದು 5.11 ಮೀಟರ್‌ಗೆ ಕುಸಿದಿದೆ. (ಸುಮಾರು ಮೂರು ಅಡಿ). ಈ ಹಿಂದೆ ಮಾ. 21ರಂದು ನೀರಿನ ಮಟ್ಟವು 4.96 ಮೀಟರ್‌ಗೆ ಕುಸಿದಿತ್ತು. ಆಗ ಶಂಭೂರು ಎಎಆರ್ ಡ್ಯಾಂನಿಂದ ನೀರನ್ನು ಹರಿಯ ಬಿಡುವ ಮೂಲಕ ಮಟ್ಟವನ್ನು ಹೆಚ್ಚಿಸಿಕೊಂಡಿದ್ದು ಮಾ. 23ರಂದು ಆರು ಅಡಿಗಳಷ್ಟು ಭರ್ತಿ ಮಾಡಲಾಗಿತ್ತು.
ಇದೀಗ ಕೇವಲ 17 ದಿನಗಳಲ್ಲಿ ನೀರಿನ ಮಟ್ಟ ಹೆಚ್ಚು ಕಡಿಮೆ ಮೂರು ಅಡಿಗಳಷ್ಟು ಕುಸಿಯುವ ಮೂಲಕ ಮುಂದಿನ ಮಳೆಗಾಲದ ತನಕ ಪ್ರಸ್ತುತ ಸಂಗ್ರಹ ಇರುವ ನೀರನ್ನು ವಿತರಿಸುವಲ್ಲಿ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿಯನ್ನು ಮಂಗಳೂರು ಮನಪಾ ಎದುರಿಸಬೇಕಾಗಿದೆ.
ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟವು 3 ಮೀಟರ್‌ಗಳಷ್ಟಿದೆ. ಅಲ್ಲಿಯೂ ನೀರಿನ ಮಟ್ಟ ಬಿರು ಬಿಸಿಲಿನಿಂದ ಅವಿಯಾಗಿ ಕುಸಿಯಲು ಅರಂಭಿಸಿದೆ.ತುಂಬೆ ಡ್ಯಾಂನಲ್ಲಿ ಮುಂದಿನ ಬಳಕೆಗೆ ಮೂರು ಮೀಟರ್‌ನಷ್ಟು ನೀರು ಸಿಗಲಿದೆ.
ರೈತರಿಗೆ ಹೊಡೆತ
ನದಿಯಲ್ಲಿ ಕುಡಿ ಯುವ ನೀರು ಕಡಿಮೆ ಆಗುತ್ತಿದ್ದಂತೆ ರೈತಾಪಿ ವರ್ಗದ ಮೇಲೆ ಮೊದಲ ಹೊಡೆತ ಬೀಳುತ್ತದೆ. ರೈತರ ಪಂಪ್‌ಸೆಟ್‌ನಿಂದ ನೀರನ್ನು ತೆಗೆಯದಂತೆ ತಡೆ ಆಗುವುದರಿಂದ ಅವರಿಂದ ಪ್ರತಿಭಟನೆ ಕಾವು ಏರುವುದು ಒಟ್ಟಾರೆಯಾಗಿ ಒಂದೇ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಎದುರಾಗುವುದು.
ಎಎಂಆರ್ ಡ್ಯಾಂನಲ್ಲಿ ತಳದ ಒಂದೂವರೆ ಮೀಟರ್ ನೀರು ಕೂಡಾ ಬಳಕೆಗೆ ದೊರೆಯುವುದಿಲ್ಲ. ಈಗಾ ಗಲೇ ಸುಮಾರು ಒಂದು ಮೀಟರ್‌ನಷ್ಟು ಹೂಳು ತುಂಬಿದ್ದಾಗಿ ಮಾಹಿತಿ ಮೂಲ ಗಳು ಹೇಳಿದ್ದು ಅಲ್ಲಿಯೂ 4.3 ಮೀಟರ್ ನೀರು ಬಳಕೆಗೆ ಸಿಗುವುದು. ಆದರೆ ಅದನ್ನು ತುಂಬೆ ಡ್ಯಾಂಗೆ ಹರಿಸಿ ಅಲ್ಲಿಂದ ಎತ್ತಬೇಕು. ನೀರು ತುಂಬೆಗೆ ಹರಿದು ಅಲ್ಲಿ ದಾಸ್ತಾನಾಗಲು ಕನಿಷ್ಟ 24 ಗಂಟೆಗೆ ಅವಧಿ ಬೇಕು. ಉರಿ ಬಿಸಿಲಿಗೆ ದಿನಕ್ಕೆ ಕನಿಷ್ಟ 1ರಿಂದ 2 ಇಂಚು ನೀರು ಆವಿಯಾಗುವುದಾಗಿ ಹೇಳಲಾಗುತ್ತದೆ. ಇದರ ನಡುವೆ ಕೃಷಿ, ಕುಡಿಯುವ ನೀರೆತ್ತುವ ವಿವಿಧ ಸ್ಥಾವರ, ಬೃಹತ್ ಉದ್ದಿಮೆಗಳ ಬಳಕೆ ಎಂದು ಲೆಕ್ಕ ಹಾಕಿದರೆ ಮುಂದಿನ 30ದಿನಗಳಲ್ಲಿ ನೀರಿನ ದಾಸ್ತಾನು ಮುಗಿಯುವುದು ಖಚಿತ.
ಮಾಡಬೇಕಾದ್ದು
ಈಗಿಂದಲೇ ನೀರು ಸರಬರಾಜು ನಿಯಂತ್ರಣ ಸಾಧಿಸಬೇಕು. ಮಳೆ ಬರುವ ತನಕ ಅಂದರೆ ಮುಂದಿನ 45 ರಿಂದ 50 ದಿನಗಳ ತನಕ ನೀರಿನ ಹಂಚಿಕೆಯಲ್ಲಿ ಮಿತವ್ಯಯ ಅಗತ್ಯ. ಇದರ ನಡುವೆ ಒಂದೆರಡು ಒಳ್ಳೆಯ ಮಳೆ ಬಂದರೆ ಪರಿಸ್ಥಿತಿ ಸುಧಾರಿಸಬಹುದು.
ಕಳೆದ ವರ್ಷ 2018 ಮಳೆಗಾಲಕ್ಕಿಂತಲೂ ಮೊದಲೇ ನದಿ ಪುನಃ ಭರ್ತಿಯಾಗಿತ್ತು. ಮೇ 21ಕ್ಕೆ ಸುರಿದ ಮಳೆಯಿಂದ ತುಂಬೆ ಡ್ಯಾಂ 6 ಮೀಟರ್ ನೀರು ತುಂಬಿಕೊಂಡು ಹೆಚ್ಚುವರಿ ನೀರು ಹೊರಗೆ ಬಿಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಮಟ್ಟ ಇಳಿಕೆ ಮಾರ್ಚ್ ತಿಂಗಳಿಂದಲೇ ಆರಂಭವಾಗಿದೆ. ಬಿಸಿಲಿನ ತಾಪಕ್ಕೆ ನೀರು ಆವಿಯಾಗಿ ಇಂಚು ಲೆಕ್ಕಾಚಾರದಲ್ಲಿ ನೀರು ಕಡಿಮೆಯಾಗುತ್ತಿದೆ.
ಸಮಾಧಾನದ ಸಂಗತಿ ಎಂದರೆ ಎ. 8ರಂದು ಸಂಜೆ ಘಟ್ಟ ಪ್ರದೇಶಗಳೆಂದು ಗುರುತಿಸಲಾದ ಪುತ್ತೂರು, ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ಕೆಲವು ಕಡೆಗಳಲ್ಲಿ ಮಳೆ ಆಗುತ್ತಿರುವ ಮಾಹಿತಿ ಬಂದಿದೆ.
ತಳಮಟ್ಟದ ನೀರು ಉಪಯೋಗಕ್ಕೆ ಇಲ್ಲ
ಡ್ಯಾಂನಲ್ಲಿ ಈಗ ಮೀಟರ್ ಲೆಕ್ಕದಲ್ಲಿ ಅಷ್ಟು ನೀರಿದೆ ಇಷ್ಟು ನೀರಿದೆ ಎನ್ನುತ್ತಾರೆ. ಆದರೆ ತಳ ಮಟ್ಟದ ಒಂದು ಮೀಟರ್ ನೀರು ಎತ್ತಲು ಸಾಧ್ಯವಿಲ್ಲ. ಹಾಗಾಗಿ ಈಗದ ಲೆಕ್ಕಾಚಾರದ ಪ್ರಕಾರ ನದಿಯಲ್ಲಿ ಇರುವುದು ನಾಲ್ಕು ಮೀಟರ್ ಮಾತ್ರ. ಅಂದರೆ ಮೂರು ಮೀಟರ್ ಬಳಕೆಗಷ್ಟೆ ಲಭ್ಯ. ಅದೂ ನೇರವಾಗಿ ಹಂಚಿಕೆ ಸಾಧ್ಯವಿಲ್ಲ. ಹೂಳು, ಅಂತರ್ಜಲ, ಒಳ ಹರಿವು ಎಂಬಿತ್ಯಾದಿ ಲೆಕ್ಕ ಹಾಕಿದರೆ ಲೆಕ್ಕಕ್ಕೆ ಕಾಣುವುದು ಬಳಕೆಗೆ ಇಲ್ಲವಾಗುತ್ತದೆ.
ತುಂಬೆ ಡ್ಯಾಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.