“ಜನರ ಮಧ್ಯೆಯೇ ಇದ್ದು ಕೆಲಸ ಮಾಡುವ ಕನಸಿದೆ’
Team Udayavani, Oct 20, 2017, 4:17 PM IST
ಮಂಗಳೂರು: ಡಾ| ಕೆ.ಜಿ. ಜಗದೀಶ್ ವರ್ಗಾವಣೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೂಬ್ಬ ಖಡಕ್, ಉತ್ಸಾಹಿ ಐಎಎಸ್ ಅಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿ ಬಂದಿದ್ದು, ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಮೂಲತಃ ತಮಿಳುನಾಡಿ ನವರಾದ ಸೆಂಥಿಲ್ ಈ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಎರಡೂವರೆ ವರ್ಷಗಳ ಅವಧಿಗೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಲ್ಲಿನವರ ಪ್ರೀತಿ-ಗೌರವಕ್ಕೆ ಪಾತ್ರ ರಾದವರು. ಚಿತ್ರದುರ್ಗದಲ್ಲಿಯೂ ಕೆಲವು ತಿಂಗಳು ಜಿಲ್ಲಾಧಿಕಾರಿಯಾಗಿ, ಶಿವಮೊಗ್ಗದಲ್ಲಿ ಸಿಇಒ ಆಗಿ ಹಾಗೂ ಬಳ್ಳಾರಿಯಲ್ಲಿ ಸಹಾಯಕ ಕಮಿಷನರ್ ಆಗಿ ಸೇವೆ ಸಲ್ಲಿಸಿದ ಅನುಭವವಿದೆೆ. ಜನರ ಮಧ್ಯೆಯೇ ಇದ್ದು ಸೇವೆ ಮಾಡಬೇಕೆನ್ನುವ ವ್ಯಕ್ವಿತ್ವದ ಐಎಎಸ್ ಅಧಿಕಾರಿ ಸೆಂಥಿಲ್ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ನೂತನ ಜಿಲ್ಲಾಧಿಕಾರಿಯಾಗಿ ದ.ಕ.ಕ್ಕೆ ಬಂದಿದ್ದೀರಿ ಏನನಿಸುತ್ತದೆ?
ದ.ಕ. ಪ್ರತಿಷ್ಠಿತ ಜಿಲ್ಲೆ . ಅಭಿವೃದ್ಧಿ ದೃಷ್ಟಿಯಿಂದಲೂ ಮಹತ್ವದ್ದು. ವೈಯಕ್ತಿಕ ವಾಗಿ ಇಲ್ಲಿನ ಬಗ್ಗೆ ಗೊತ್ತಿಲ್ಲ. ಆದರೆ ಜಿಲ್ಲಾಧಿ ಕಾರಿ ಯಾಗಿ ಬಂದಿರುವುದರಿಂದ ಆಗುಹೋಗು ಅರ್ಥಮಾಡಿಕೊಂಡು ಜನಸೇವೆ ಮಾಡು ತ್ತೇನೆ. ನನ್ನದೇ ಆದ ಕೆಲ ಕಲ್ಪನೆಗಳನ್ನು ಹೊಂದಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ, ಒಂದಷ್ಟು ಬದಲಾವಣೆ ತರಬೇಕೆಂಬ ಕನಸು ಹೊತ್ತುಕೊಂಡಿದ್ದೇನೆ.
ಹಿಂದಿನ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಬಗ್ಗೆ ನಿಮ್ಮ ಅಭಿಪ್ರಾಯ?
ಡಾ| ಜಗದೀಶ್ ಅವರು ಐಎಎಸ್ ಅಧಿಕಾರಿಗಳ ಪೈಕಿ ಒಬ್ಬ ದಕ್ಷ ಅತ್ಯುತ್ತಮ ಅಧಿಕಾರಿ. ಅವರು ಕೈಗೊಂಡಿರುವ ಉತ್ತಮ ಕಾರ್ಯಗಳನ್ನು ಮುಂದುವರಿಸುವ ಅವಕಾಶ ಲಭಿಸಿರುವುದು ಖುಷಿ ತಂದಿದೆ. ನನ್ನ ಮೊದಲ ಆದ್ಯತೆಯೂ ಇದೇ ಆಗಿದೆ.
ಐಎಎಸ್ ಅಧಿಕಾರಿಗಳು ದ.ಕ.ಕ್ಕೆ ಬರಲು ಹೆಮ್ಮೆ ಪಡುತ್ತಾರೆ ನಿಜವೇ?
ನಾವೆಲ್ಲ ಐಎಎಸ್ ಎಂಬ ಸೇವೆಯಿಂದ ಜನ ಸೇವೆಗೆ ಬರುತ್ತಿದ್ದೇವೆ. ಅದು ಮಂಗಳೂರು ಇರಲಿ ಅಥವಾ ರಾಯಚೂರು ಇರಲಿ; ಜನರ ಸಮಸ್ಯೆಗಳನ್ನು ಸರಿಯಾಗಿ ಬಗೆಹರಿಸದೆ ಹೋದರೆ ಪ್ರಯೋಜನವಾಗುವುದಿಲ್ಲ. ಹೀಗಾಗಿ, ಯಾವುದೇ ಜಿಲ್ಲೆಯನ್ನು ಒಂದು ಜಿಲ್ಲೆಯಾಗಿ ಪರಿಗಣಿಸಿಕೊಂಡು ಸೇವೆ ಮಾಡಬೇಕಾಗುತ್ತದೆ ಎನ್ನುವುದು ಅಭಿಪ್ರಾಯ.
ಮಂಗಳೂರು ನಗರದ ಅಭಿವೃದ್ಧಿಗೆ ನಿಮ್ಮ ಯೋಚನೆ ಏನು?
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರು ನಗರಕ್ಕೆ ತನ್ನದೆ ಆದ ವೈಶಿಷ್ಟ , ವಿಭಿನ್ನತೆಗಳಿವೆ. ಮಂಗಳೂರಿಗೂ ಒಂದು ವ್ಯವಸ್ಥಿತ ಮಹಾನಗರವಾಗಿ ಬೆಳೆಯುವುದಕ್ಕೆ ವಿಪುಲ ಅವಕಾಶವಿದೆ. ಅಭಿವೃದ್ಧಿಯಲ್ಲೂ ಒಂದಷ್ಟು ಬದಲಾವಣೆಗೆ ಯತ್ನಿಸುವೆ.
ಇಲ್ಲಿಗೆ ಬಂದವರಿಗೆಲ್ಲ ಕೋಮುಗಲಭೆ ಸವಾಲಾಗುತ್ತಿದೆ. ನಿಮಗೆ?
ಯಾವ ಜನರೂ ಹಿಂಸೆ ಬಯಸಲ್ಲ. ಕೆಲವು ಮಂದಿ ಮಾತ್ರ ಅಶಾಂತಿ ಸೃಷ್ಟಿಸಿ ಗಲಭೆಗೆ ಯತ್ನಿಸುತ್ತಾರೆ. ಇಲ್ಲೂ ಹಾಗೇ ಇದೆ. ಬೆರಳೆಣಿಕೆಯಷ್ಟಿರುವ ಈ ಗಲಭೆ ಕೋರರನ್ನು ಮಟ್ಟ ಹಾಕಿದರೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಜಿಲ್ಲೆಯ ಜನತೆ ಸುಸಂಸ್ಕೃತರು. ಕೆಲವು ಮಂದಿ ಉಂಟು ಮಾಡುವ ಅಶಾಂತಿಗೆ ಇಡೀ ಜಿಲ್ಲೆಯನ್ನು ದೂಷಿಸುವುದು ಸಲ್ಲ. ಗಲಭೆಗೆ ಕಾರಣ ರಾಗುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸರಿಯಾದ ಶಿಕ್ಷೆ ಕೊಟ್ಟರೆ ಎಲ್ಲವೂ ಸರಿಹೋಗುತ್ತದೆ.
ಹಾಗಾದರೆ ಗಲಭೆ ಸೃಷ್ಟಿಸುವವರನ್ನು ಮಟ್ಟ ಹಾಕುತ್ತೀರಾ?
ಖಂಡಿತ. ಜಿಲ್ಲೆಯಲ್ಲಿ ಯಾರು ಶಾಂತಿ ಕದಡುವ ಕೆಲಸಕ್ಕೆ ಕೈಹಾಕುತ್ತಾರೆಯೋ ಅಂಥವರನ್ನು ಯಾವುದೇ ಕಾರಣಕ್ಕೂ ನಾನು ಸಹಿಸುವುದಿಲ್ಲ. ಅಶಾಂತಿ ಸೃಷ್ಟಿಸುವವರನ್ನು ಮೊದಲು ಪತ್ತೆ ಮಾಡಲಾಗುವುದು.
ಜಿಲ್ಲೆಯ ಭ್ರಷ್ಟ ಅಧಿಕಾರಿಗಳಿಗೆ ನಿಮ್ಮ ಎಚ್ಚರಿಕೆ ಏನು?
ಎಚ್ಚರಿಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಭ್ರಷ್ಟ ಅಧಿಕಾರಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ದೂರುಗಳು ಬಂದರೆ ಸುಮ್ಮನೆ ಕೂರುವುದಿಲ್ಲ. ನಿಯ ಮಾನು ಸಾರ ಕ್ರಮ ಜರುಗಿಸಿ ಅದಕ್ಕೆ ಅಂತ್ಯ ಕಾಣಿಸುತ್ತೇನೆ.
ದ.ಕ. ಜನತೆ ನಿಮ್ಮಿಂದ ಏನು ನಿರೀಕ್ಷಿಸಬಹುದು?
ಎಲ್ಲರ ಸಮಸ್ಯೆ-ಬೇಡಿಕೆಗಳಿಗೆ ಸ್ಪಂದಿಸುವ ಒಬ್ಬ ಜಿಲ್ಲಾಧಿಕಾರಿಯನ್ನು ನಿರೀಕ್ಷಿಸಬಹುದು. ಸರಕಾರದಿಂದ ಜನರಿಗೆ ಜಾರಿಗೆ ಬರುವ ಯೋಜನೆ ಅರ್ಹರಿಗೆ ತಲುಪಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇಲ್ಲಿ ನಾನು ಜನರ ಸಲಹೆ ಸೂಚನೆಗಳಿಗೆ ಸ್ಪಂದಿಸುವ ಒಬ್ಬ ಪ್ರತಿನಿಧಿಯಷ್ಟೇ.
ದ.ಕ. ಜಿಲ್ಲೆ ಬಗ್ಗೆ ನಿಮ್ಮ ಕನಸೇನು?
ನನ್ನ ಯೋಚನೆಗಳಿರುವುದು ಶೋಷಿತರು ಹಾಗೂ ದುರ್ಬಲ ವರ್ಗದವರ ಏಳಿಗೆ ಬಗ್ಗೆ. ಬಾಲ್ಯ ದಿಂದಲೂ ಜನಪರ ದನಿಯಾಗುವ ಕನಸಿತ್ತು. ಅಧಿ ಕಾರಿಯಾಗಿಯೂ ಆ ತುಡಿತ, ಮನೋ ಭಾವ ಇದೆ. ಮುಂದುವರಿದ ಜಿಲ್ಲೆ ಯಾದ ದ.ಕ.ದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಮಾದರಿ ಯಾಗುವಂತೆ ಮಾಡಿ ತೋರಿಸುವ ಅವಕಾಶ ವಿದೆ. ಜನರಿಗೆ ಉಪಯೋಗ ಆಗುವ ವಿಚಾರ ಗಳಿಗೆ ಆದ್ಯತೆ ನೀಡುವುದಕ್ಕೆ ಯತ್ನಿಸು ತ್ತೇನೆ. ಜನರಿಗೆ ಅನುಕೂಲವಾಗುವ, ಜನರ ಮಧ್ಯೆಯೇ ಕೆಲಸ ಮಾಡಬೇಕೆಂಬ ಕನಸು ಹೊತ್ತೇ ಇಲ್ಲಿಗೆ ಬಂದಿದ್ದೇನೆ.
ದ.ಕ.ದಲ್ಲಿ ಮರಳು ಮಾಫಿಯಾಗೆ ಕಡಿವಾಣ ಹಾಕುವಿರಾ?
ಮರಳು ಮಾಫಿಯಾ ಇರಬಹುದು ಅಥವಾ ಇತರೆ ಯಾವುದೇ ಅಕ್ರಮ ಚಟುವಟಿಕೆ ಗಳಿರಬಹುದು. ಸಮಾಜದಲ್ಲಿ ಪ್ರತಿಯೊಂದು ಅನ್ಯಾಯ ವನ್ನೂ ಮಟ್ಟ ಹಾಕುವುದಕ್ಕೆ ಕಾನೂನು ಗಳಿವೆ. ಜಿಲ್ಲಾಧಿಕಾರಿಯಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ. ರಾಜಿ ಪ್ರಶ್ನೆಯೇ ಇಲ್ಲ.
– ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.