ಮೂಲಸೌಕರ್ಯವಿಲ್ಲದೆ ಮೂಲೆ ಸೇರಿದ ಚೆಂಡೆಮೂಲೆ!
Team Udayavani, Jun 8, 2018, 2:05 AM IST
ಸುಳ್ಯ: ಸುಳ್ಯ ನಗರದ ತುತ್ತ ತುದಿಯಲ್ಲಿ ನಿಂತು ನೋಡಿದರೆ ಈ ಪರಿಶಿಷ್ಟ ಜಾತಿ ಕಾಲನಿ ಕಾಣುತ್ತದೆ. ಈ ಕಾಲನಿ ಇರುವುದು ನಗರ ವ್ಯಾಪ್ತಿಯ ಕೂಗಳತೆ ದೂರದಲ್ಲಿ. ಇಲ್ಲಿನ ಸ್ಥಿತಿಗೇನು ಕಾರಣ ಎಂದರೆ, ಬ್ರಹ್ಮನೇ ಬಲ್ಲ! ನಗರ ವ್ಯಾಪ್ತಿಯೊಳಗೆ ಮಣ್ಣಿನ ಗೋಡೆಯ ಮನೆಯೊಳಗೆ ಬದುಕು ಕಟ್ಟಿಕೊಂಡ ಕುಟುಂಬಗಳಿಗೆ ಕುಡಿಯುವ ನೀರು, ಸಂಪರ್ಕ ರಸ್ತೆಯೇ ದೊಡ್ಡ ಸಮಸ್ಯೆಯಾಗಿದೆ. ಈ ಕಾಲನಿಯ ಹೆಸರು ಚೆಂಡೆಮೂಲೆ. ಹಿರಿಯರು ಈಗಲೂ ಅದೇ ಹೆಸರಿನಿಂದ ಗುರುತಿಸುತ್ತಾರೆ. ಸುಳ್ಯ ಮುಖ್ಯ ಪೇಟೆಯ ಹಳೆಗೇಟಿನಿಂದ ತೆರಳಲು ಸಮೀಪದ ದಾರಿಯಿದ್ದರೂ ಅದರಲ್ಲಿ ನಡೆದು ಹೋಗವುದಷ್ಟೇ ಸಾಧ್ಯ. ಸರಕಾರಿ ರಬ್ಬರ್ ಪ್ಲಾಂಟೇಶನ್ ಬಳಸಿ ಈ ದಾರಿ ಸಾಗುತ್ತಿದ್ದು, ಅಲ್ಲಿ ರಸ್ತೆ ಅಭಿವೃದ್ಧಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಸೋಣಂಗೇರಿ ಮೂಲಕ ಸುತ್ತು ಬಳಸಿ ಹೋಗಬೇಕಷ್ಟೇ.
ಒಟ್ಟು 9 ದಲಿತ ಕುಟುಂಬಗಳು ಇಲ್ಲಿ ವಾಸವಿವೆ. ಅಕ್ಕಪಕ್ಕ ಇತರೆ ಕುಟುಂಬಗಳಿವೆ. ಹಳೆಯ ಮನೆಗಳು. ಕೆಲವು ಮನೆಗಳಲ್ಲಿ 2-3 ಕುಟುಂಬಗಳಿವೆ. ಮಕ್ಕಳು ಪ್ರತ್ಯೇಕ ಮನೆ ನಿರ್ಮಿಸಲು ಜಾಗವಿಲ್ಲ. ಹಕ್ಕುಪತ್ರ ಇನ್ನಿತರ ಸರಕಾರಿ ದಾಖಲೆಗಳು ಇಲ್ಲ. ಹೀಗಾಗಿ ನಿರ್ಮಾಣ ಹಂತದ ನಿವೇಶನಗಳು ಅರ್ಧಕ್ಕೆ ನಿಂತಿವೆ. ಇವರ ಜೀವನ ನಡೆಯುವುದು ಕೂಲಿ ಕೆಲಸದಿಂದಲೇ.
ಹಳೆಯ ಮಣ್ಣಿನ ಮನೆಯೊಳಗೆ ಪುಟ್ಟ ಮಕ್ಕಳು, ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳಬೇಕಾದ ಸ್ಥಿತಿ. ಮಳೆಗಾಲದಲ್ಲಿ ಬೀಸುವ ಗಾಳಿ ಮನೆಯನ್ನು ಅಲ್ಲಾಡಿಸುತ್ತದೆ. ಎಲ್ಲಿ ಹಾರಿ ಹೋಗುವುದೋ, ಕುಸಿದು ಬೀಳುವುದೋ ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ.
ಇಕ್ಕಟ್ಟಾದ ಮನೆ, ನೀರು ಹರಿದು ಹೋಗಲು ಸಮಸ್ಯೆ, ಕಾಲನಿಯ ತ್ಯಾಜ್ಯ ಅಲ್ಲೆ ಮನೆಯ ಪಕ್ಕ ರಾಶಿ ಬಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಹುಟ್ಟಿಸಿದೆ. ಎಲ್ಲ ಮನೆಗಳಿಗೆ ಶೌಚಾಲಯ ನೀಡಲಾಗಿದ್ದು, ಅದಕ್ಕೂ ನೀರಿನ ಸಮಸ್ಯೆ ಇದೆ. ಜನಸಂಖ್ಯೆ ಹೆಚ್ಚಿದಂತೆ ಅದು ಸಾಲುತ್ತಿಲ್ಲ. ಶೌಚಾಲಯದ ಹೊಂಡ ಮನೆಗಳ ಮುಂಭಾಗದಲ್ಲಿದ್ದು, ಮಳೆಗಾಲದಲ್ಲಿ ಉಕ್ಕಿದರೆ ಇರುವುದೇ ಕಷ್ಟ ಎನ್ನುತ್ತಾರೆ ಕಾಲನಿ ನಿವಾಸಿಗಳು.
ನೆಂಟರು ಬಂದರೆ ಮುಜುಗರ
ಕುಡಿಯಲು ಹಾಗೂ ಇತರ ಬಳಕೆಗೆ ನೀರಿನ ವ್ಯವಸ್ಥೆ ಇಲ್ಲ. ಬಾವಿ ಇದ್ದರೂ ನೀರೆತ್ತಲು ಅನುಕೂಲವಿಲ್ಲ. ನಗರ ಪಂಚಾಯತ್ ಕಾಲನಿ ಪಕ್ಕದಲ್ಲೇ ಬೋರ್ ನಿರ್ಮಿಸಿದೆ. ಅದು ಜಾಳ್ಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ಕಾಲನಿ ಇರುವುದು ನಗರ ಹಾಗೂ ಜಾಳ್ಸೂರು ಗ್ರಾ.ಪಂ. ಗಡಿಯಲ್ಲಿ. ಹೀಗಾಗಿ ಬೋರ್ ಬಳಕೆ ನಮಗೆ ಸಿಗುತ್ತಿಲ್ಲ. ಮೂಲಸೌಕರ್ಯಗಳು ಇಲ್ಲದ ಕಾರಣ, ನೆಂಟರಿಷ್ಟರು ಬಂದರೆ ಮುಜುಗರ ಆಗುತ್ತದೆ ಎನ್ನುತಾರೆ ಇಲ್ಲಿಯ ನಾಗರಿಕರು.
ಕೆಲವು ಮನೆಗಳ ಮುಂಭಾಗದ ಸ್ನಾನಗೃಹಗಳು ಬೀಳುವ ಹಂತದಲ್ಲಿವೆ. ಟಾರ್ಪಾಲು, ಗೋಣಿ ಚೀಲ ಹಾಕಿ ಸ್ನಾನಗೃಹ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಅದರ ಕಥೆ ಹೇಳಿ ಸುಖವಿಲ್ಲ. ಪುಟ್ಟ ಮಕ್ಕಳು ಕಾಲನಿಯಲ್ಲಿದ್ದು, ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ವೇಳೆ ತತ್‌ಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯೋಣ ಎಂದರೆ ಸಂಪರ್ಕಕ್ಕೆ ಮೊಬೈಲ್ ಸಹಿತ ಯಾವ ವ್ಯವಸ್ಥೆಗಳೂ ಇಲ್ಲ. ಕಾಲನಿಯಲ್ಲಿ ಮಕ್ಕಳು ಆಗಾಗ ಜ್ವರಪೀಡಿತರಾಗುತ್ತಾರೆ. ಆರೋಗ್ಯ ಇಲಾಖೆಯವರೂ ಇತ್ತ ಸುಳಿಯುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಕಾಲನಿಯಲ್ಲಿ ಚರಂಡಿ ಎಂಬುದೇ ಇಲ್ಲ. ಮಳೆ ನೀರು, ತ್ಯಾಜ್ಯ ನೀರು ಸಮರ್ಪಕವಾಗಿ ಹರಿಯುತಿಲ್ಲ. ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿದೆ. ಮನೆಗಳಿಗೆ ಸರಿಯಾದ ಸಂಪರ್ಕ ವ್ಯವಸ್ಥೆಗಳಿಲ್ಲ. ಕಾಲನಿ ಮತ್ತು ಪರಿಸರದ ಮಕ್ಕಳು ಸೋಂಣಂಗೇರಿ ಪೇಟೆಯ ಶಾಲೆಗಳಿಗೆ ತೆರಳಲು 4-5 ಕಿ.ಮೀ. ನಡೆಯಬೇಕಾಗಿದೆ.ಹಿರಿಯರ ಕಾಲದಿಂದಲೂ ಇಲ್ಲಿದ್ದೇವೆ. ಮುಳಿ ಮಾಡಿನ ಮನೆಗಳಿದ್ದವು. ವಿದ್ಯುತ್ ಇರುವುದೇ ಕಮ್ಮಿ. ಕುಡಿಯುವ ನೀರು, ಸಂಪರ್ಕ ಮಾರ್ಗ, ಬೆಳಕಿನ ವ್ಯವಸ್ಥೆ ಇತ್ಯಾದಿ ಬೇಡಿಕೆಗಳನ್ನು ಹತ್ತಾರು ವರ್ಷಗಳಿಂದ ಇರಿಸಿದ್ದೇವೆ. ಇನ್ನೂ ವ್ಯವಸ್ಥೆ ಆಗಿಲ್ಲ. ಯಾರ ಬಳಿ ಹೇಳಬೇಕೋ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಕಾಲನಿಯ ನಿವಾಸಿ ಚನಿಯ.
ಚನಿಯ-ಕಮಲ ದಂಪತಿಯ ಪುತ್ರ ರಮೇಶ್ ಪ್ರತ್ಯೇಕ ಮನೆ ಕಟ್ಟಿದ್ದು, ಪತ್ನಿಗೆ ಅನಾರೋಗ್ಯ ಕಾಡುತ್ತಿದೆ. ಮನೆ ನಂಬ್ರ, ಪಡಿತರ ಇಲ್ಲದೆ ಮನೆ ಕಟ್ಟಲು ಧನಸಹಾಯ ಸಿಗುತ್ತಿಲ್ಲ. ಆರ್ಧಕ್ಕೆ ನಿಂತ ಮನೆಯಲ್ಲಿ ಮೂವರು ಪುಟ್ಟ ಮಕ್ಕಳ ಜತೆಗೆ ಮಳೆ, ಗಾಳಿಗೆ ಸೊಳ್ಳೆ ಕಡಿಯದಂತೆ ಬೆಂಕಿ ಹಾಕಿ ರಾತ್ರಿ ಕಳೆಯುತ್ತಾರೆ.
ಸಮಸ್ಯೆ ಆಲಿಸುವೆ
ಕಾಲನಿಯ ನೀರು ಸರಬರಾಜಿನ ಪಂಪ್ ಕೆಟ್ಟಿದೆ. ನೀರಿನ ಪೂರೈಕೆಯಲ್ಲಿ ಅಡಚಣೆ ಆಗಿದೆ. ಪಂಪ್ ದುರಸ್ತಿಗೊಳಿಸಲಾಗಿದೆ. ಆದನ್ನು ಇನ್ನೆರಡು ದಿನಗಳಲ್ಲಿ ಶೀಘ್ರ ಅಳವಡಿಸಿಕೊಡುತ್ತೇವೆ. ನೀರಿನ ತೊಟ್ಟಿ ನೀಡಿದ್ದು, ಅದಕ್ಕೆ ಅಳವಡಿಸಿದ ಪೈಪ್‌ಗ್ಳನ್ನು ಯಾರೋ ಹಾಳುಗೆಡವಿದ್ದಾರೆ. ಅಲ್ಲಿಯ ಸಮಸ್ಯೆಗಳ ಕುರಿತು ಗಮನಹರಿಸುವೆ.
– ಶೀಲಾವತಿ ಮಾಧವ, ನ.ಪಂ. ಅಧ್ಯಕ್ಷೆ, ಸುಳ್ಯ
ಗಾಳಿ ಬಂದಾಗ ಹೊರಗೆ ಓಡುತ್ತೇವೆ
ಗಾಳಿ – ಮಳೆ ಬಂದಾಗ ಹೊರಗೋಡಿ ಪಕ್ಕದ ಮನೆಯಲ್ಲಿ ರಕ್ಷಣೆ ಪಡೆಯುತ್ತೇವೆ. ಕಾಲನಿಗೆ ಇತ್ತೀಚೆಗೆ ಶಾಸಕ ಎಸ್. ಅಂಗಾರರು ಭೇಟಿ ನೀಡಿದ್ದರು. ಅವರ ಬಳಿ ಸಮಸ್ಯೆ ಹೇಳಿಕೊಂಡಿದ್ದೇವೆ. ಪರಿಹಾರದ ನಿರೀಕ್ಷೆಯಲ್ಲಿ ಇದ್ದೇವೆ.
– ಕಮಲಾ, ಕಾಲನಿ ಮಹಿಳೆ
— ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.