ಬೆಟ್ಟಂಪಾಡಿ ಸ.ಪ್ರೌ.ಶಾಲೆಗೆ ಮಕ್ಕಳ ಕೊರತೆ ಇಲ್ಲ
Team Udayavani, Jun 9, 2018, 2:05 AM IST
ನಿಡ್ಪಳ್ಳಿ: 1996-97ರಲ್ಲಿ ಸ್ಥಾಪಿತವಾದ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆ ನಿಡ್ಪಳ್ಳಿಯು ಗ್ರಾಮದ ವಿದ್ಯಾರ್ಥಿಗಳಿಗೆ ಇದ್ದ ಸರಕಾರಿ ಪ್ರೌಢಶಾಲೆಯ ಕೊರತೆಯನ್ನು ನೀಗಿಸಿದೆ. ಇದರಿಂದ ಬಡ ಮಕ್ಕಳ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದಂತಾಗಿದೆ. ಈ ಸಂಸ್ಥೆ ಎಸ್ಸೆಸಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 97 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ವರ್ಷ ಹೆಚ್ಚು ದಾಖಲಾತಿಯನ್ನು ಪಡೆದಿದೆ. ಶಾಲೆಯ ದುರಸ್ತಿಗಾಗಿ ಒಂದೂವರೆ ವರ್ಷಗಳ ಹಿಂದೆ ಅಂದಿನ ಶಾಸಕರಾದ ಶಕುಂತಳಾ ಟಿ. ಶೆಟ್ಟಿ ಅವರು ಸುಮಾರು 5 ಲಕ್ಷ ರೂ. ಅನುದಾನವನ್ನು ಮಂಜೂರುಗೊಳಿಸಿದ್ದರು. ಆದರೆ ಅಷ್ಟು ಮೊತ್ತದ ದುರಸ್ತಿ ಕಾಮಗಾರಿಯು ಶಾಲೆಯಲ್ಲಿ ಇಲ್ಲದಿರುವುದರಿಂದ, ಒಂದು ನೂತನ ಕೊಠಡಿ ನಿರ್ಮಾಣ ಮಾಡುವ ಕಾಮಗಾರಿಗೆ ಆ ಮೊತ್ತವನ್ನು ಬಳಸಲಾಯಿತು. ಕಾಮಗಾರಿ ಆರಂಭವಾಗಿ ಸದ್ಯ ಗೋಡೆಯವರೆಗೆ ಸಾಗಿದ್ದು, ಈಗ ಅರ್ಧದಲ್ಲಿ ನಿಂತಿದೆ.
ಮುಖ್ಯ ಶಿಕ್ಷಕಿ ಹುದ್ದೆ ಖಾಲಿ
ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಶಿಕ್ಷಕಿ ಪೂರ್ಣಿಮಾ ಅವರು ವರ್ಗಾವಣೆಗೊಂಡ ಮೇಲೆ ಮುಖ್ಯಶಿಕ್ಷಕಿ ಹದ್ದೆಗೆ ನೇಮಕಾತಿ ನಡೆದಿಲ್ಲ. ಸದ್ಯ ಕಳೆದ ವರ್ಷದಿಂದ ಉಪ್ಪಳಿಗೆ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾರಾಯಣ ಕೆ. ಅವರು ನಿಯೋಜಿತ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತೆರವಾಗಿರುವ ಈ ಶಾಲೆಗೆ ಮುಖ್ಯ ಶಿಕ್ಷಕರನ್ನು ನೇಮಿಸುವ ಅವಶ್ಯಕತೆ ಇದೆ.
ನೇಮಕಾತಿಗಳು ಆಗಬೇಕಿದೆ
ಸದ್ಯ ಒಂದು ದೈಹಿಕ ಶಿಕ್ಷಣ ಶಿಕ್ಷಕರ ಸಹಿತ 6 ಶಿಕ್ಷಕರು ಖಾಯಂ ಆಗಿ ಸೇವೆಯಲ್ಲಿದ್ದಾರೆ. ಆದರೆ ಕನ್ನಡ ಶಿಕ್ಷಕರ ಹುದ್ದೆ ಖಾಲಿಯಿದ್ದು ಭರ್ತಿಯಾಗಬೇಕಿದೆ. ಸಂಗೀತ ಶಿಕ್ಷಕಿ ಹುದ್ದೆಯೂ ಮಂಜೂರಾಗಿದ್ದು ಅದೂ ಕೂಡ ಖಾಲಿಯಿದೆ. ಈ ಎರಡು ಹುದ್ದೆಗಳು ಹಾಗೂ ಮುಖ್ಯ ಶಿಕ್ಷಕರ ಹುದ್ದೆ ಭರ್ತಿಯಾದರೆ ಸದ್ಯ ಶಿಕ್ಷಕರ ಕೊರತೆ ನೀಗಿದಂತಾಗುತ್ತದೆ.
ಇಲ್ಲಿ ಶಿಕ್ಷಕೇತರ ಸಿಬಂದಿ ಹುದ್ದೆಯೂ ಖಾಲಿಯಿದೆ. ಹಿಂದೆ ಕರ್ತವ್ಯದಲ್ಲಿದ್ದ ಒಬ್ಬ ದ್ವಿತೀಯ ದರ್ಜೆ ಸಹಾಯಕ ಇಲ್ಲಿಂದ ಬೇರೆ ಕಡೆ ತೆರಳಿದ ಮೇಲೆ ಈ ಹುದ್ದೆಗೆ ನೇಮಕಾತಿ ನಡೆದಿಲ್ಲ. ಡಿ’ ಗ್ರೂಪ್ ಹುದ್ದೆಯೂ ಖಾಲಿಯಿದ್ದು, ಕಚೇರಿ ಕೆಲಸಗಳನ್ನೂ ಶಿಕ್ಷಕರೆ ನಿರ್ವಹಿಸುವ ಪರಿಸ್ಥಿತಿ ಇದೆ. ಈ ಹುದ್ದೆಯೂ ಭರ್ತಿಯಾದರೆ ಕಚೇರಿ ಕೆಲಸಗಳೂ ನಿರಾತಂಕವಾಗಿ ನಡೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ಬೋಧಕ ಸಿಬಂದಿ.
ಕಾಮಗಾರಿ ಶೀಘ್ರ ಪೂರ್ಣ
ಎಂಜಿನಿಯರ್ ಕ್ರಿಯಾ ಯೋಜನೆ ತಯಾರಿಸಿದ ಪ್ರಕಾರ ಕೊಠಡಿಗೆ 7 ಲಕ್ಷ ರೂ. ವೆಚ್ಚವಾಗಲಿದೆ. ಇನ್ನು 2 ಲಕ್ಷ ರೂ. ಗಳ ಅವಶ್ಯಕತೆ ಇದೆ. ಚುನಾವಣೆಯ ನೀತಿ ಸಂಹಿತೆ ಇದ್ದ ಕಾರಣ ಕೆಲಸ ವಿಳಂಬವಾಗಿದೆ. ಅನುದಾನದ ಅವಶ್ಯಕತೆ ಇದೆ. ಶಾಲಾಭಿವೃದ್ಧಿ ಸಮಿತಿ ವ್ಯವಸ್ಥೆ ಮಾಡಿದರೆ ಕಟ್ಟಡ ಕಾಮಗಾರಿ ಪೂರ್ಣವಾಗಲಿದೆ.
– ಜನಾರ್ದನ ರೈ ಆನಾಜೆ, ಗುತ್ತಿಗೆದಾರರು
ಗುತ್ತಿಗೆದಾರರು ಪೂರೈಸಲಿ
ಹಿಂದಿನ ಶಾಸಕರು ನೂತನ ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಿ ಕಾಮಗಾರಿ ಆರಂಭವಾಗಿ ಅರ್ಧದಲ್ಲಿ ನಿಂತದ್ದು ನಮಗೂ ಅಸಮಾಧಾನ ತಂದಿದೆ. ಕೆಲಸ ಬಾಕಿಯಾದ ಬಗ್ಗೆ ಗುತ್ತಿಗೆದಾರರು ಉತ್ತರಿಸಬೇಕು. ಆದಷ್ಟು ಬೇಗ ಕೆಲಸ ಪೂರ್ತಿಗೊಳಿಸಿ, ಶಾಲೆಗೆ ನುತನ ಕೊಠಡಿಯನ್ನು ಹಸ್ತಾಂತರಿಸಬೇಕು.
– ಕೆ.ಪಿ.ಭಟ್ ಕೋನಡ್ಕ. ಕಾರ್ಯಾಧ್ಯಕ್ಷರು, ಶಾಲಾಭಿವೃದ್ಧಿ, ಸಮಿತಿ
ಸಮಸ್ಯೆ ಶೀಘ್ರವಾಗಿ ಬಗೆಹರಿಯಲಿದೆ
ಶಾಲೆಯ ದ್ವಿತೀಯ ದರ್ಜೆ ಸಹಾಯಕರಾಗಿ ಉಪ್ಪಳಿಗೆ ಶಾಲೆಯ ಮನೋಹರ ಅವರು ವಾರದಲ್ಲಿ 3 ದಿನ ನಿಯೋಜಿತರಾಗಿ ಕರ್ತವ್ಯ ಮಾಡುತ್ತಿದ್ದಾರೆ. ಕನ್ನಡ ಶಿಕ್ಷಕ ಹುದ್ದೆ ಈ ತಿಂಗಳ ಕೊನೆಯಲ್ಲಿ ಬರ್ತಿಯಾಗುವ ನಿರೀಕ್ಷೆ ಇದೆ. ಸಣ್ಣ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಯವರು ಸ್ಪಂದಿಸುವ ವಿಶ್ವಾಸವಿದೆ.
– ನಾರಾಯಣ ಕೆ., ನಿಯೋಜಿತ ಪ್ರಭಾರ ಮುಖ್ಯಶಿಕ್ಷ ಕ
— ಗಂಗಾಧರ ಸಿ.ಎಚ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.