ಕಂಗಾಲಾದ ಕೃಷಿಕರು ವರುಣ ದೇವನಿಗೆ ಶರಣು
Team Udayavani, Jul 12, 2017, 6:45 PM IST
ಕೋಟೇಶ್ವರ: ಬಿತ್ತನೆ ಬೀಜ ಹಾಕಿರುವ ಕೃಷಿಕರು ಇಳಿಮುಖವಾಗಿರುವ ಮಳೆಯಿಂದಾಗಿ ಕಸಿವಿಸಿಗೊಂಡಿದ್ದು ಮುಂದಿನ 1 ತಿಂಗಳಲ್ಲಿ ಸರಿಸುಮಾರು ಮಳೆಯಾಗದಿದ್ದಲ್ಲಿ ಭತ್ತದ ಬೆಳೆಗೆ ಮಳೆ ನೀರಿನ ಅಭಾವದಿಂದ ಪ್ರಭಾವ ಬೀರಲಿದ್ದು, ಈ ಬಾರಿ ನಿರೀಕ್ಷೆಯಷ್ಟು ಬೆಳೆಯಾಗುವುದೇ ಎಂಬ ಭೀತಿಯಲ್ಲಿ ವರುಣನಿಗೆ ಶರಣು ಹೋಗಿದ್ದಾರೆ.
ಗುರಿ ಸಾಧನೆಯ ನಿರೀಕ್ಷೆ
ಕುಂದಾಪುರ ತಾಲೂಕಿನಲ್ಲಿ ಈ ಬಾರಿ 9,500 ಹೆಕ್ಟೇರ್ ಭೂಮಿಯಲ್ಲಿ ಈವರೆಗೆ ನಾಟಿಯಾಗಿದೆ. ಸರಿಸುಮಾರು 18,250 ಹೆಕ್ಟೇರ್ ಬೆಳೆಯ ಗುರಿ ಸಾಧನೆಯ ನಿರೀಕ್ಷೆ ಹೊಂದಿರುವ ಕೃಷಿ ಇಲಾಖೆಯು ಜುಲೈ ಅಂತ್ಯದೊಳಗೆ ಅದು ಪರಿಪೂರ್ಣವಾಗುವುದೆಂದು ಅಭಿಪ್ರಾಯ ಪಟ್ಟಿದ್ದಾರೆ.
331.1 ಮಿ.ಮೀ. ಮಳೆ
2015-16 ರ ಸಾಲಿನಲ್ಲಿ 18,150 ಹೆಕ್ಟೇರ್ ಭೂಮಿಯಲ್ಲಿ ನಾಟಿಯಾಗಿತ್ತು. ಆದರೆ ಈ ಬಾರಿ ಇಷ್ಟರ ತನಕ ಆಗಿರುವ ನಾಟಿಯಾದ ಭತ್ತದ ಗದ್ದೆಯನ್ನು ಅವಲೋಕಿಸಿದಾಗ ಸುಮಾರು ಅರ್ಧದಷ್ಟು ಮಾತ್ರ ಆಗಿರುವುದು ಗಮನೀಯ. ಒಟ್ಟಾರೆ ಈ ಬಾರಿ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ ಈ ಬಾರಿ 331.1 ಮಿ.ಮೀ. ಮಳೆಯಾಗಿದ್ದು ಕಳೆದ ವರುಷ ಜೂನ್ ತಿಂಗಳಲ್ಲಿ 341.5 ಮಿ.ಮೀ. ಮಳೆಯಾಗಿತ್ತು.
ಆತಂಕದ ವಾತಾವರಣ
2015-16 ರ ಸಾಲಿನಲ್ಲಿ ಮೇ. ತಿಂಗಳಲ್ಲಿ 105.6 ಮಿ.ಮೀ. ಮಳೆಯಾಗಿದ್ದು ಜೂ. ತಿಂಗಳಲ್ಲಿ 1520.4 ಮಿ.ಮೀ. ಮಳೆಯಾಗಿದೆ. ಜುಲೈನಲ್ಲಿ 752.2 ಮಿ.ಮೀ. ಮಳೆ ಬಿದ್ದಿದೆ. 2017ರಲ್ಲಿ ಮೇ. ತಿಂಗಳಲ್ಲಿ 188 ಮಿ.ಮೀ. ಮಳೆಯಾಗಿದ್ದು ಜೂನ್‌ನಲ್ಲಿ 1,127.9 ಮಿ.ಮೀ. ಮಳೆಯಾಗಿದೆ. ಆದರೆ ಜುಲೈ 7 ರ ಶುಕ್ರವಾರದವರೆಗಿನ ಪ್ರಮಾಣವನ್ನು ಲೆಕ್ಕಿಸಿದರೆ ಈ ಬಾರಿ ಕೇವಲ 240.5 ಮಿ.ಮೀ. ಮಳೆಯಾಗಿರುವುದು ಕೃಷಿಕರ ಪಾಲಿಗೆ ಆತಂಕದ ವಾತಾವರಣ ಸೃಷ್ಟಿಸುತ್ತಿದೆ.
ಎಂ.ಒ.4 ಬೀಜದ ಕೊರತೆ
2017 ರ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಎಂ.ಒ. 4 ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆಯಿದೆ. ಆದರೆ ಯಥೇಷ್ಟ ಸರಬರಾಜು ಆಗದಿರುವುದು ಕೃಷಿಕರಿಗೆ ಸ್ಪಲ್ಪಮಟ್ಟಿನ ತೊಂದರೆಗೆ ಕಾರಣವಾಗಿದ್ದರೂ ಎಂ.ಒ. 16 (ಉವå) ಹಾಗೂ ಜ್ಯೋತಿ ಬಿತ್ತನೆ ಬೀಜವನ್ನು ಅವರು ಅವಲಂಬಿಸಬೇಕಾಯಿತು. ಇಲಾಖೆಯ ಮಾಹಿತಿಯಂತೆ ಕಳೆದ ವರುಷ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಬರಗಾಲ ಎದುರಾಗಿದ್ದ ಕಾರಣ ಕರ್ನಾಟಕ ರಾಜ್ಯ ಬೆಳೆ ನಿಗಮದವರು ಎಂ.ಒ. 4 ಬಿತ್ತನೆ ಬೀಜವನ್ನು ಶಿವಮೊಗ್ಗಕ್ಕೆ ಹೆಚ್ಚು ಸರಬರಾಜು ಮಾಡಿರುವುದು ಈ ಭಾಗಕ್ಕೆ ಸ್ಪಲ್ಪಮಟ್ಟಿನ ಅಭಾವಕ್ಕೆ ಕಾರಣವಾಯಿತು.
ಸರಾಸರಿ ಮಳೆಯಾದಲ್ಲಿ ಕೃಷಿಕರ ಆತಂಕಕ್ಕೆ ಪರಿಹಾರ
ಈ ಬಾರಿ ಕುಂದಾಪುರ ತಾಲೂಕಿನಲ್ಲಿ 765 ಕ್ವಿಂಟಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಕಳೆದ ಬಾರಿ 1082 ಕ್ವಿಂಟಾಲ್ ಬೀಜ ಹಂಚಲಾಗಿತ್ತು. ಇತರ ಬಿತ್ತನೆ ಬೀಜವನ್ನು ರೈತರಿಗೆ ಒದಗಿಸಲಾಗಿದ್ದರೂ ಅದರಿಂದ ಇಳುವರಿ ಕಡಿಮೆಯಾಗುವುದಿಲ್ಲವೆಂದು ಸ್ಪಷ್ಟಪಡಿಸಿರುವ ಇಲಾಖೆಯು ಮುಂಬರುವ ದಿನಗಳಲ್ಲಿ ಸರಾಸರಿ ಮಳೆಯಾದಲ್ಲಿ ಕೃಷಿಕರ ಆತಂಕಕ್ಕೆ ಪರಿಹಾರ ದೊರಕಲಿದೆ ಎಂದಿರುತ್ತಾರೆ.
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.