ಈಶ್ವರಮಂಗಲ – ಸುಳ್ಯಪದವು ರಸ್ತೆಗೆ ಡಾಮರು ಮರೀಚಿಕೆ?
Team Udayavani, May 29, 2018, 4:55 AM IST
ಸುಳ್ಯಪದವು: ನೆಟ್ಟಣಿಗೆ ಮುಟ್ನೂರು ಮತ್ತು ಪಡುವನ್ನೂರು ಗ್ರಾಮದಲ್ಲಿ ಹಾದುಹೋಗುವ ಈಶ್ವರ ಮಂಗಲ-ಗೋಳಿತ್ತಡಿ- ಪದಡ್ಕ- ಸುಳ್ಯಪದವು ಜಿ.ಪಂ. ರಸ್ತೆ ದಶಕಗಳಿಂದ ನಾದುರಸ್ತಿಯಲ್ಲಿದ್ದು, ಪೂರ್ಣ ಪ್ರಮಾಣದಲ್ಲಿ ಡಾಮರು ಮರೀಚಿಕೆಯಾಗಿದೆ. ರಸ್ತೆ ತೀರಾ ಹದಗೆಟ್ಟಿದ್ದು, ನಡುವೆ ಹಲವಾರು ಹೊಂಡ – ಗುಂಡಿಗಳಾಗಿ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಕೇರಳ ರಾಜ್ಯವನ್ನು ಸಂಪರ್ಕಿಸುವ ರಸ್ತೆ ಇದು. ಕರ್ನಾಟಕ ಕೇರಳ ಗಡಿ ಪ್ರದೇಶವಾದ ನೆಟ್ಟಣಿಗೆಮುಟ್ನೂರು ಮತ್ತು ಪಡುವನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಈಶ್ವರಮಂಗಲ – ಸುಳ್ಯಪದವು ರಸ್ತೆ ಹಾದುಹೋಗುತ್ತಿದ್ದು, ಬ್ರಿಟಿಷರ ಕಾಲದಲ್ಲಿ ಬಸ್ಸು ವ್ಯವಸ್ಥೆ ಇದ್ದ ತಾಲೂಕಿನ ಕೆಲವೇ ಕೆಲವು ರಸ್ತೆಗಳಲ್ಲಿ ಇದೂ ಒಂದು. ಈಗಿನ ಶಾಸಕರು ಪ್ರಥಮ ಆದ್ಯತೆಯ ಮೇಲೆ ರಸ್ತೆ ಅಭಿವೃದ್ಧಿಗೊಳಿಸುವ ವಿಶ್ವಾಸ ಇಲ್ಲಿನ ಗ್ರಾಮಸ್ಥರಲ್ಲಿದೆ.
ಈಶ್ವರಮಂಗಲದಿಂದ ಸುಮಾರು 100 ಮೀ. ಕಾಂಕ್ರೀಟ್ ರಸ್ತೆಯ ಕಾಮಗಾರಿ ಮುಗಿದಿದೆ. ಮೀನಾವು ಎಂಬಲ್ಲಿ ಪ್ರಕೃತಿ ವಿಕೋಪ ನಿಧಿಯಿಂದ 200 ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಅದು ಬಿಟ್ಟರೆ ಉಳಿದ ಪ್ರದೇಶ ನಾದುರಸ್ತಿಯಲ್ಲಿದೆ. ಯಡಿಯೂರಪ್ಪ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿರುವಾಗ 54 ಲಕ್ಷ ರೂ. ವೆಚ್ಚದಲ್ಲಿ 2.2 ಕಿ.ಮೀ. ರಸ್ತೆ ಡಾಮರು ಕಂಡಿದೆ. ಈಗ ಅದೂ ಮಳೆ ನೀರಿಗೆ ಕೊಚ್ಚಿ ಹೋಗಿ, ನಾದುರಸ್ತಿಯಲ್ಲಿದೆ.
ಕನ್ನಡ್ಕ ರಕ್ಷಿತಾರಣ್ಯದ ಮೂಲಕ ಹಾದುಹೋಗುವ ಈ ರಸ್ತೆ ಡಾಮರು ಕಾಣದೆ ಹಲವು ವರ್ಷಗಳೇ ಕಳೆದಿದ್ದು, ಮಳೆನೀರು ಹರಿದುಹೋಗಲು ಚರಂಡಿ ವ್ಯವಸ್ಥೆಗಳೇ ಇಲ್ಲಿಲ್ಲ. ಚರಂಡಿಯಲ್ಲಿಯೇ ವಿದ್ಯುತ್ ಕಂಬ, ಕೊಳವೆಬಾವಿ, ವಿದ್ಯುತ್ ಶೆಡ್‌ಗಳು ಕಾಣಸಿಗುತ್ತವೆ. ಹೊಂಡ – ಗುಂಡಿಗಳಿಂದಲೇ ತುಂಬಿಕೊಂಡಿರುವ ರಸ್ತೆಯಲ್ಲಿ ಡಾಮರಿನ ಅವಶೇಷಗಳಷ್ಟೇ ಉಳಿದುಕೊಂಡಿದೆ. ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಜನಸಂಚಾರಕ್ಕೂ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ರಸ್ತೆ ಅಭಿವೃದ್ಧಿ ಚಿಂತನೆ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಗಡಿಪ್ರದೇಶದ ಅಭಿವೃದ್ಧಿಗಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆ, ರಸ್ತೆಗಳ ಅಭಿವೃದ್ಧಿಗಾಗಿಯೇ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಗಳಿಗೆ ಅನುದಾನವಿದ್ದರೂ ಈ ರಸ್ತೆಗೆ ತಟ್ಟಿದ ಶಾಪಕ್ಕೆ ಇನ್ನೂ ವಿಮೋಚನೆ ಸಿಗುವ ಕಾಲ ಕೂಡಿಬಂದಂತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಡಾಮರು ಎದ್ದು ಹೋಗಿ ಸೃಷ್ಟಿಯಾಗಿ ರುವ ಹೊಂಡಗಳಲ್ಲಿ ಮಳೆಗಾಲದಲ್ಲಿ ಮಳೆನೀರು ತುಂಬಿಕೊಳ್ಳುತ್ತದೆ. ರಸ್ತೆಯಲ್ಲೇ ನೀರು ಹರಿದು ಹೋಗುತ್ತಿರುವುದರಿಂದ ಇದು ರಸ್ತೆ ಎಂದು ಹೇಳಲೂ ಸಾಧ್ಯವಾಗುತ್ತಿಲ್ಲ. ಈಶ್ವರಮಂಗಲದಲ್ಲಿ ಬ್ಯಾಂಕ್, ಗ್ರಾಮ ಲೆಕ್ಕಿಗರ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ವಾಣಿಜ್ಯ ಮಳಿಗೆ, ಕಾಲೇಜು, ದೂರವಾಣಿ ವಿನಿಮಯ ಕೇಂದ್ರ ಮುಂತಾದವಕ್ಕೆ ಗ್ರಾಮಸ್ಥರು, ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು ವಾಹನಗಳಲ್ಲಿ ಸರ್ಕಸ್ ಮಾಡುತ್ತಾ ತೆರಳಬೇಕಾಗಿದೆ. ಖಾಸಗಿ ಜಾಗೆಗಳಿಂದ ನೀರು ನೇರವಾಗಿ ರಸ್ತೆಗೆ ಬರುವುದರಿಂದ ರಸ್ತೆಯೆಲ್ಲ ಕೆಸರುಮಯವಾಗುತ್ತಿದೆ.
ವಿಶ್ವಾಸ ಇದೆ
ಈಶ್ವರಮಂಗಲ-ಪದಡ್ಕ ರಸ್ತೆ ತೀರ ನಾದುರಸ್ತಿಯಲ್ಲಿದೆ. ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣ ಬೇಕಾಗಿದೆ. ಮಾಜಿ ಶಾಸಕರು ಈ ರಸ್ತೆಯ ಬಗ್ಗೆ ಕಾಳಜಿ ವಹಿಸಿಲ್ಲ. ಈಗಿನ ಶಾಸಕರು ಪ್ರಥಮ ಆದ್ಯತೆಯ ಮೇಲೆ ರಸ್ತೆ ಅಭಿವೃದ್ಧಿ ಮಾಡುತ್ತಾರೆ ಎಂದು ವಿಶ್ವಾಸ ಇದೆ.
– ಉದಯ ಕುಮಾರ್ ಕನ್ನಡ್ಕ, ರಿಕ್ಷಾ ಚಾಲಕ
— ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.