‘ಹಲ್ಲೆ ಮಾಡಿಲ್ಲ, ಕಟೀಲಿನಲ್ಲಿ ಆಣೆಗೆ ಸಿದ್ಧ
Team Udayavani, Nov 1, 2017, 12:16 PM IST
ಮಹಾನಗರ: ವಾಚ್ ಮೆನ್ ಪತ್ನಿಯ ಮೇಲೆ ಮೇಯರ್ ಕವಿತಾ ಸನಿಲ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಚಾರ ಮಂಗಳವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ನೂಕಾಟ-ತಳ್ಳಾಟಕ್ಕೆ ವೇದಿಕೆ ಒದಗಿಸಿತು. ಮೇಯರ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದಂತೆ, ‘ನಾನು ಯಾರಿಗೂ ಹಲ್ಲೆ ಮಾಡಿಲ್ಲ. ಇದನ್ನು ನಾನು ನಂಬುವ ಶ್ರೀ ಕ್ಷೇತ್ರ ಕಟೀಲಿನ ತಾಯಿಯ ಮುಂದೆ ಆಣೆ ಮಾಡಿ ಹೇಳಲು ಸಿದ್ಧಳಿದ್ದೇನೆ’ ಎಂದು ಹೇಳುವ ಮೂಲಕ ಮೇಯರ್ ಕವಿತಾ ಸನಿಲ್ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಸಭೆಯ ಆರಂಭದಲ್ಲಿ ಮೇಯರ್ ಪಾಲಿಕೆಯ ಕೆಲವು ಸಾರ್ವಜನಿಕ ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯುವುದಕ್ಕೆ ಚಾಲನೆ ನೀಡುವ ವಿಷಯವನ್ನು ಪ್ರಸ್ತಾಪಿಸಿದರು. ಆಗ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಮಾತನಾಡಿ, ಮೇಯರ್ 8 ತಿಂಗಳಿನಿಂದ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆಗ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಮಗುವನ್ನು ಎಸೆಯುವ ಮೂಲಕ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿದ್ದಾರೆ ಎನ್ನುತ್ತ ಬಿಜೆಪಿ ಸದಸ್ಯರು ಮೇಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯೆ ಅಪ್ಪಿ ಪ್ರತಿಕ್ರಿಯಿಸಿ, ಮೇಯರ್ ಸ್ಥಾನದಲ್ಲಿ ಮಹಿಳೆ ಇರುವುದರಿಂದ ಗೌರವ ಕೊಟ್ಟು ಮಾತನಾಡಬೇಕು ಎಂದು ಹೇಳಿದರು.
ಎ.ಸಿ.ವಿನಯ್‌ರಾಜ್ ಮಾತನಾಡಿ, ಆ ಪ್ರಕರಣದ ಬಗ್ಗೆ ಮೇಯರ್ ಈಗಾಗಲೇ ಸಿಸಿಟಿವಿ ದೃಶ್ಯದ ಜತೆಗೆ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಮಾತ್ರವಲ್ಲದೆ ಪೊಲೀಸ್ ತನಿಖೆ ಆಗುತ್ತಿದೆ. ಹೀಗಾಗಿ ಇದನ್ನು ಇಲ್ಲಿ ಮಾತನಾಡುವುದು ಸರಿಯಲ್ಲ. ಮಂಗಳೂರಿನ ಅಭಿವೃದ್ಧಿ, ಸಮಸ್ಯೆ ಕುರಿತು ಚರ್ಚೆ ನಡೆಸೋಣ. ಒಂದು ವೇಳೆ ಮಹಿಳೆಗೆ ಅನ್ಯಾಯ ಆಗಿದ್ದೇ ಹೌದಾದರೆ, ಆ ಕ್ಷಣದಲ್ಲಿಯೇ, ಆಕೆಯನ್ನು ಪೊಲೀಸ್ ಠಾಣೆ ಮತ್ತು ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಅದು ಬಿಟ್ಟು ಬಿಜೆಪಿಯವರು ತಮ್ಮ ಕಚೇರಿಗೆ ಕರೆದುಕೊಂಡು ಹೋಗುವ ಅಗತ್ಯ ಏನಿತ್ತು
ಎಂದು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪಗಳು ಆರಂಭವಾಗಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಸದಸ್ಯರ ಹೊಕೈ..!
ಬಿಜೆಪಿ ಸದಸ್ಯರು ಮೇಯರ್ ವಿರುದ್ಧ ಧಿಕ್ಕಾರ ಕೂಗುತ್ತಾ ಪೀಠದೆದುರು ತೆರಳಿ, ‘ಮೇಯರ್ ರಾಜೀನಾಮೆ ಕೊಡಿ’ ಎಂದು ಆಗ್ರಹಿಸಿದರು.
ಮತ್ತೆ ಮಾತು ಆರಂಭಿಸಿದ ಎ.ಸಿ.ವಿನಯ್ ರಾಜ್, ಕಾಲೇಜು ಹುಡುಗಿ ಸಾವು ಪ್ರಕರಣ ಸಹಿತ ವಿವಿಧ ಪ್ರಕರಣಗಳಲ್ಲಿ ಬಿಜೆಪಿಯವರು ಯಾಕೆ ಕಾಳಜಿ ತೋರುತ್ತಿಲ್ಲ. ಈ ವಿಚಾರದಲ್ಲಿ ಮಾತ್ರ ಯಾಕೆ ಆಸಕ್ತಿ ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಸದಸ್ಯ ಮಧು ಕಿರಣ್ ಅವರು ಎ.ಸಿ.ವಿನಯ್‌ರಾಜ್‌ಗೆ ಮಾತನಾಡುವ ನೈತಿಕತೆಯೇ ಇಲ್ಲ ಎನ್ನುತ್ತ, ಅವರ ಬಳಿ
ತೆರಳಿ ಅವರ ಕೈಯಲ್ಲಿದ್ದ ಕಾಗದವನ್ನು ಎಳೆದು ಬಿಸಾಡಿದರು. ಬಿಜೆಪಿಯ ಇತರ ಸದಸ್ಯರೂ ವಿನಯರಾಜ್ ಬಳಿ ಬಂದಾಗ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ ಹಾಗೂ ಮಾಜಿ ಮೇಯರ್ ಹರಿನಾಥ್ ಅವರು ತಡೆಯಲೆತ್ನಿಸಿದಂತೆ ಭಾಸವಾಯಿತು. ಈ ಸಂದರ್ಭ ಕೆಲವು ಕ್ಷಣ ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ಮಧ್ಯೆ, ನೂಕಾಟ-ತಳ್ಳಾಟ ಸಂಭವಿಸಿತು. ವಿಪಕ್ಷದ ಸದಸ್ಯರು ‘ಡೌನ್ ಡೌನ್ ಮೇಯರ್’ ಎಂದು ಕೂಗುತ್ತಿದ್ದರೆ, ಆಡಳಿತದ ಪಕ್ಷದ
ಸದಸ್ಯರು ‘ಮೇಯರ್‌ಗೆ ಜೈ’ ಎನ್ನುತ್ತಿದ್ದರು.
ವಿಪಕ್ಷ ಸದಸ್ಯರು ಮೇಯರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಕಲಾಪ ಮುಂದುವರಿಸದಂತೆ ಪ್ರಯತ್ನಿಸಿದರು.
ಆದರೆ, ಅಷ್ಟರವರೆಗೆ ಎಲ್ಲವನ್ನು ಮೌನವಾಗಿ ಆಲಿಸುತ್ತಿದ್ದ ಮೇಯರ್ ಆಗ, ಮಧ್ಯ ಪ್ರವೇಶಿಸಿ, ‘ನನಗೆ ಮಾತನಾಡಲು ಅವಕಾಶ ಕೊಡಿ. ನೀವು ಮಾತನಾಡುವುದನ್ನು ಪೂರ್ಣವಾಗಿ ಕೇಳಿದ್ದೇನೆ. ಘಟನೆಯ ಬಗ್ಗೆ ನಾನು ಸ್ಪಷ್ಟೀಕರಣ ನೀಡುತ್ತೇನೆ’ ಎಂದಾಗ ವಿಪಕ್ಷದವರು ಅವಕಾಶ ನೀಡಲಿಲ್ಲ.
ಅವಕಾಶ ನೀಡದ್ದಕ್ಕೆ ಬೇಸರ
ಮಾಜಿ ಮೇಯರ್ ಹರಿನಾಥ್ ಮಾತನಾಡಿ, ಇದು ಕೌನ್ಸಿಲ್‌ಗೆ ಸಂಬಂಧ ಪಡದ ವಿಚಾರ. ಹೀಗಾಗಿ, ಸದನದಲ್ಲಿ ಇದನ್ನುಪ್ರಸ್ತಾಪಿಸುವ ಅಗತ್ಯವಿಲ್ಲ. ವಿಪಕ್ಷ ಸದಸ್ಯರು ಅನುಸರಿಸಿದ ನೀತಿ ಸರಿಯಿಲ್ಲ ಎಂದಾಗಲೂ ವಿಪಕ್ಷದವರು ‘ಮೇಯರ್ ರಾಜೀನಾಮೆ ನೀಡಲೇ ಬೇಕು’ ಎಂದು ಆಗ್ರಹಿಸುತ್ತಿದ್ದರು. ಮೇಯರ್ ಮತ್ತೂಮ್ಮೆ, ‘ನಾನು ಮಾತನಾಡುವುದನ್ನು ಕೇಳಿ. ಅನಂತರ ನೀವು ಮಾತನಾಡಿ. ನೀವು ಈ ರೀತಿ ವರ್ತಿಸುವುದು ಶೋಭೆ ಅಲ್ಲ’ ಎಂದರು.
ಮಾತನಾಡಲು ಅವಕಾಶ ಸಿಗದಿದ್ದಕ್ಕೆ ಕೋಪಗೊಂಡ ಮೇಯರ್, ‘ತಮ್ಮ ತಪ್ಪನ್ನು ಮುಚ್ಚಿಹಾಕಲು ಈ ರೀತಿ ನೀವು
ನಾಟಕವಾಡುತ್ತಿದ್ದೀರಿ. ಯಾಕೆ ನನಗೆ ಮಾತನಾಡಲು ಬಿಡುವುದಿಲ್ಲ. ತಾವು ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಈಗ ನನಗೆ ಮಾತನಾಡಲು ಬಿಡಿ’ ಎಂದರೂ ವಿಪಕ್ಷದ ಸದಸ್ಯರು ಪೂರಕವಾಗಿ ಸ್ಪಂದಿಸಲಿಲ್ಲ. ‘ನಾನು ಅನ್ಯಾಯ ಮಾಡಿದ್ದರೆ ನನಗೆ, ನೀವು ಮಾಡಿದ್ದರೆ ನಿಮಗೆ ಅದರ ಫಲ ತಟ್ಟೀತು’ ಎನ್ನುತ್ತ ಮೇಯರ್ ಸಭೆಯನ್ನು ಸ್ಥಗಿತಗೊಳಿಸಿ ಹೊರ ನಡೆದರು.
ಆಣೆ ಮಾಡಲು ಸಿದ್ಧ
ಸುಮಾರು 12 ನಿಮಿಷಗಳ ಬಳಿಕ ಸಭೆ ಆರಂಭವಾದಾಗ ವಿಪಕ್ಷ ಸದಸ್ಯರು ಮತ್ತೆ ಮೇಯರ್ ವಿರುದ್ಧ ಧಿಕ್ಕಾರ
ಮುಂದುವರಿಸಿದರು. ಇದರ ನಡುವೆಯೇ ಮೇಯರ್ ಕವಿತಾ ಸನಿಲ್ ಮಾತನಾಡುತ್ತಾ, ‘ನಾನು ಯಾವ ಹಲ್ಲೆಯನ್ನೂ ಮಾಡಿಲ್ಲ. ನಾನು ಮಾತನಾಡಲು ಯಾಕೆ ಬಿಡುತ್ತಿಲ್ಲ ಹೇಳಿ’ ಎಂದು ಪ್ರಶ್ನಿಸಿ, ನೀವು ದೇವರನ್ನು ನಂಬುತ್ತೀರಾದರೆ, ಕಟೀಲಿನಲ್ಲಿ ಬಂದು ನಾನು ಹಲ್ಲೆ ಮಾಡಿದ್ದೇನೆಂದು ಹೇಳಿ. ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಮೇಯರ್ ಆಗಿ ನೋಡದೆ ಒಬ್ಬ ತಾಯಿಯ ನೆಲೆಯಲ್ಲಿ ನೋಡಿ. ನಾನೂ ಎರಡು ಮಕ್ಕಳ ತಾಯಿ. ನಾನು ಹಲ್ಲೆ ಮಾಡಿಲ್ಲ ಎಂದು ಕಟೀಲು ದೇವಿ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಆದರೆ ನನ್ನ ಮಗಳ ಪರಿಸ್ಥಿತಿ ಏನಾಗಿದೆ ಎಂದು ನೀವು ತಿಳಿದುಕೊಳ್ಳಿ’ ಎಂದು
ಹೇಳುತ್ತಾ ಕಣ್ಣೀರಿಟ್ಟರು.ಬಿಜೆಪಿ ಸದಸ್ಯರು ಪಟ್ಟುಬಿಡದೆ ಪ್ರತಿಭಟನೆ ಮುಂದುವರಿಸಿದರು.
ಗದ್ದಲ ಮುಂದುವರಿಯುವ ಸಂದರ್ಭದಲ್ಲಿಯೇ, ಮುಖ್ಯ ಸಚೇತಕರು ಕಾರ್ಯಸೂಚಿಯನ್ನು ಓದಿ ಒಪ್ಪಿಗೆ
ಪಡೆದುಕೊಳ್ಳುವ ಮೂಲಕ ಸಭೆಯನ್ನು ಕೊನೆಗೊಳಿಸಲಾಯಿತು. ಉಪ ಮೇಯರ್ ರಜನೀಶ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ನಾಗವೇಣಿ, ಸಬಿತಾ ಮಿಸ್ಕಿತ್, ಪ್ರತಿಭಾ ಕುಳಾಯಿ ಹಾಗೂ ಆಯುಕ್ತ ಮಹಮ್ಮದ್ ನಝೀರ್
ಉಪಸ್ಥಿತರಿದ್ದರು.
ನಾನು ವಾಚ್‌ಮೆನ್‌ನ ಮಗುವನ್ನು ಅಂದು ನೋಡಲೇ ಇಲ್ಲ. ಇದನ್ನು ಯಾವ ದೇವಸ್ಥಾನದಲ್ಲಿ ಬೇಕಾದರೂ ಹೇಳಲು ಸಿದ್ಧಳಿದ್ದೇನೆ ಎನ್ನುತ್ತಾ ಮೇಯರ್ ಪೀಠದಲ್ಲೇ ಕಣ್ಣೀರಿಟ್ಟರು. ಆಗ ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಹಾಗೂ ಸದಸ್ಯೆ ಅಪ್ಪಿ ಅವರು ಸಮಾಧಾನಪಡಿಸಲೆತ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.