![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jan 12, 2019, 6:52 AM IST
ಪುಂಜಾಲಕಟ್ಟೆ : ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಬಡ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮ ಬಂಟ್ವಾಳ ತಾಲೂಕಿನಲ್ಲಿ ವಿಫಲವಾಗಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾದ ತಿಂಗಳಲ್ಲೇ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿ ಮುಗಿಯುತ್ತಾ ಬಂದಿದ್ದರೂ ಸರಕಾರಿ ಶಾಲೆಗಳಿಗೆ ಈವರೆಗೂ ಸೈಕಲ್ ವಿತರಣೆಯಾಗಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿದೆ.
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಮತ್ತೆ ಸರಕಾರಿ ಶಾಲೆಗಳತ್ತ ಆಕರ್ಷಿಸಲು ಹಾಗೂ ಕೆಲವು ಕಡೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ 2006-2007ರಲ್ಲಿ ಅಂದಿನ ಸರಕಾರ ಸೈಕಲ್ ಯೋಜನೆ ಜಾರಿಗೊಳಿಸಿತ್ತು. ಸೈಕಲ್‌ಗಳ ತಯಾರಿಕಾ ಹಂತ ಮತ್ತು ವಿತರಣೆಯ ಅನಂತರವೂ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಆದರೆ ಪ್ರಸಕ್ತ ವರ್ಷದಲ್ಲಿ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಸೈಕಲ್‌ಗಳು ಸುಮಾರು ಮೂರು ತಿಂಗಳುಗಳಿಂದ ಕಲ್ಲಡ್ಕ ಹಾಗೂ ಮುಡಿಪು ಸರಕಾರಿ ಪ್ರಾಥಮಿಕ ಶಾಲೆಯಲ್ಲೇ ಉಳಿದುಕೊಂಡಿವೆ.ಇದರಿಂದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಸೈಕಲ್ ಭಾಗ್ಯದಿಂದ ವಂಚಿತರಾಗಿದ್ದಾರೆ.
ಸರಕಾರವು ಈ ಯೋಜನೆಯ ಗುತ್ತಿಗೆಯನ್ನು ಹೀರೋ ಕಂಪೆನಿಗೆ ನೀಡಿದ್ದು ಎನ್ನಲಾಗಿದ್ದು, ಈ ಕಂಪೆನಿಯ ಸುಮಾರು 4 ಸಾವಿರ ಸೈಕಲ್‌ಗಳನ್ನು ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳಿಗೆ ಈ ವರ್ಷ ಮಂಜೂರು ಮಾಡಿತ್ತು. ಅದರಂತೆ ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಮುಡಿಪು ಸರಕಾರಿ ಶಾಲೆಯ ಮೈದಾನಕ್ಕೆ ಸೈಕಲ್‌ಗಳ ಬಿಡಿಭಾಗಗಳನ್ನು ತಂದು ಹಾಕಿಸಿ, ಅದನ್ನು ಜೋಡಿಸುವ ಕಾರ್ಯಕ್ಕೆ ಕಾರ್ಮಿಕರನ್ನು ನೇಮಿಸಿ ಕೆಲಸ ಮಾಡಿಸಿತ್ತು. ಜೋಡಿಸುವ ಕೆಲಸ ಪೂರ್ಣಗೊಂಡು ಸುಮಾರು ಮೂರು ತಿಂಗಳಾಗುತ್ತಾ ಬಂದರೂ ಸೈಕಲ್‌ಗಳು ಮಾತ್ರ ವಿದ್ಯಾರ್ಥಿಗಳಿಗೆ ವಿತರಣೆಯಾಗದೆ ಇನ್ನೂ ಅದೇ ಸ್ಥಳದಲ್ಲಿದ್ದು, ತುಕ್ಕು ಹಿಡಿಯುತ್ತಿವೆ ಎಂದು ಶಿಕ್ಷಣಾಭಿಮಾನಿಗಳು ಆರೋಪಿಸಿದ್ದಾರೆ.
ಸೈಕಲ್ ವಿತರಣೆಗೆ ಮನವಿ
ನವೆಂಬರ್ ತಿಂಗಳಲ್ಲಿ ಕಲ್ಲಡ್ಕ ಸರಕಾರಿ ಶಾಲೆಯ ಆಟದ ಮೈದಾನದಲ್ಲಿ ಸೈಕಲ್ ಬಿಡಭಾಗಗಳನ್ನು ತಂದು ಜೋಡಿಸುವ ಕಾರ್ಯ ಮಾಡಲಾಗಿತ್ತು. ಆದರೆ, ಇಲ್ಲಿಯ ವರೆಗೂ ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯ ಮಾಡಿಲ್ಲ. ಅಲ್ಲದೆ, ಸೈಕಲ್‌ನ ಬಿಡಿಭಾಗಗಳನ್ನು ಸರಿಯಾಗಿ ಜೋಡಣೆ ಮಾಡಿಲ್ಲ. ಇಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಸೈಕಲ್‌ಗಳನ್ನು ಜೋಡಿಸಿಟ್ಟಿರುವುದರಿಂದ ಮಕ್ಕಳಿಗೂ ತೊಂದರೆಯಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಶೀಘ್ರ ಗುಣಮಟ್ಟದ ಸೈಕಲ್ ವಿತರಣೆ ಮಾಡಬೇಕಾಗಿದೆ ಎಂದು ಕಲ್ಲಡ್ಕ ಶಾಲೆಯ ಹಳೆಯ ವಿದ್ಯಾರ್ಥಿ ಮುಸ್ತಫಾ ಅವರು ಮನವಿ ಮಾಡಿದ್ದಾರೆ.
ಸರಕಾರ ಆದೇಶಿಸಿದರೆ ಶೀಘ್ರ ವಿತರಣೆ
ರಾಜ್ಯದ ಕೆಲವೆಡೆ ಈ ವರ್ಷ ವಿತರಿಸಿದ ಸೈಕಲ್‌ಗಳು ದೋಷಪೂರಿತ ಹಾಗೂ ಕಳಪೆ ಗುಣಮಟ್ಟದ ಬಗ್ಗೆ ಇಲಾಖೆಗೆ ದೂರುಗಳು ಹೋದ ಹಿನ್ನೆಲೆಯಲ್ಲಿ ಗುಣಮಟ್ಟ ಪರಿಶೀಲಿಸಿದ ಬಳಿಕವೇ ಸೈಕಲ್‌ಗಳನ್ನು ವಿತರಿಸಬೇಕೆಂದು ಸರಕಾರ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶ ನೀಡಿದ್ದರಿಂದ ಬಂಟ್ವಾಳ ತಾಲೂಕಿನ ಸೈಕಲ್‌ಗಳ ವಿತರಣೆಯನ್ನು ತಡೆಹಿಡಿಯಲಾಗಿದೆ. ಸರಕಾರದ ಆದೇಶದಂತೆ ಇಲಾಖೆಯ ತಂಡವು ಈಚೆಗೆ ಕಲ್ಲಡ್ಕ ಹಾಗೂ ಮುಡಿಪು ಶಾಲೆಗೆ ತೆರಳಿ ಸೈಕಲ್‌ಗಳ ಗುಣಮಟ್ಟ ಪರಿಶೀಲಿಸಿ, ಮೇಲಧಿಕಾರಿಗಳಿಗೆ ವರದಿ ನೀಡಿದೆ. ಸೈಕಲ್‌ಗಳ ವಿತರಣೆಗೆ ಸರಕಾರ ಆದೇಶ ಬಂದ ಕೂಡಲೇ ವಿತರಣೆ ಮಾಡಲಾಗುವುದು.
– ಶಿವಪ್ರಕಾಶ್
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ
You seem to have an Ad Blocker on.
To continue reading, please turn it off or whitelist Udayavani.