ತೆರೆದೇ ಇಲ್ಲ ಬಡಗನೂರು ಗ್ರಂಥಾಲಯ
Team Udayavani, Feb 15, 2019, 7:12 AM IST
ಬಡಗನ್ನೂರು : ಬಡಗನ್ನೂರು ಗ್ರಾಮದ ಗ್ರಂಥಾಲಯದ ಬಾಗಿಲು ಮುಚ್ಚಿ ಏಳು ತಿಂಗಳು ಕಳೆದಿವೆ. ಗ್ರಾಮದ ಜನರಿಗೆ ಓದಲು ಇರುವ ಕೇಂದ್ರವಾಗಿದ್ದ ಗ್ರಂಥಾಲಯದ ಸ್ಥಿತಿ ಅಧೋಗತಿಗೆ ತಲುಪಿದೆ. ಸದಾ ಓದುಗರಿಂದ ತುಂಬಿ ಜ್ಞಾನಕೇಂದ್ರವಾಗಿದ್ದ ಗ್ರಂಥಾಲಯ ಈಗ ಭೂತಬಂಗಲೆಯಂತಾಗಿದೆ.
ಬಡಗನ್ನೂರು ಗ್ರಾಮಕ್ಕೊಂದು ಐತಿಹ್ಯ ಇದೆ. ಕೋಟಿಚೆನ್ನಯರ ಹುಟ್ಟೂರಾದ ಈ ಗ್ರಾಮ ಬಡಗನ್ನೂರು ಮತ್ತು ಪಡುವನ್ನೂರು ಎಂದು ಎರಡು ಭಾಗಗಳಿವೆ. ಗ್ರಾಮದಲ್ಲಿ ಒಟ್ಟು 9 ಸಾವಿರ ಜನಸಂಖ್ಯೆ ಹೊಂದಿದೆ.
ಅಚ್ಚುಮೆಚ್ಚಿನ ಕೇಂದ್ರವಾಗಿತ್ತು
ಜನರ ಬೇಡಿಕೆಗೆ ಅನುಸಾರವಾಗಿ ಗ್ರಾಮದಲ್ಲೊಂದು ಗ್ರಂಥಾಲಯವನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭ ಮಾಡಲಾಗಿತ್ತು. ಇದರಲ್ಲಿ ಸಾಕಷ್ಟು ಪುಸ್ತಕ ಭಂಡಾರಗಳಿವೆ. ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಪುಸ್ತಕಗಳೂ ಇಲ್ಲಿವೆ. ಮಕ್ಕಳ ಕಥೆ ಪುಸ್ತಕಗಳೂ ಇವೆ. ಗೃಹಿಣಿಯರು ಫ್ರೀ ಟೈಮ್‌ನಲ್ಲಿ ಓದಬೇಕಾದ ಕಾದಂಬರಿಗಳೂ ಇಲ್ಲಿವೆ. ಈ ಕಾರಣಕ್ಕೆ ಗ್ರಾಮದ ಬಹುತೇಕ ಮಂದಿ ಇಲ್ಲಿಗೆ ಬಂದು ಓದಿ ಹೋಗುತ್ತಿದ್ದರು. ಕೆಲವರು ಪುಸ್ತಕವನ್ನು ಮನೆಗೂ ಕೊಂಡೊಯ್ಯುತ್ತಿದ್ದರು. ತೀರಾ ಗ್ರಾಮೀಣ ಪ್ರದೇಶವಾದ ಬಡಗನ್ನೂರಿನಲ್ಲಿ ಗ್ರಂಥಾಲಯ ಜನರಿಗೆ ಅಚ್ಚುಮೆಚ್ಚಿನ ಕೆಂದ್ರವೂ ಆಗಿತ್ತು.
ಬಾಗಿಲು ತೆರೆದಿಲ್ಲ
ಗ್ರಂಥಪಾಲಕರಾಗಿದ್ದ ರಾಜೇಶ್ ಅವರು ಅನಾರೋಗ್ಯದ ಕಾರಣದಿಂದ ರಜೆ ಹಾಕಿದ ಕಾರಣ ಕೆಲ ತಿಂಗಳ ಹಿಂದೆಯೇ ಗ್ರಂಥಾಲಯಕ್ಕೆ ಬೀಗ ಹಾಕಿ ಹೋಗಿದ್ದರು. ಆ ಬಳಿಕ ಅವರು ಬರಲೇ ಇಲ್ಲ. ಕೊನೆಗೆ ಗ್ರಾ.ಪಂ. ಸಿಬಂದಿ ಗ್ರಂಥಾಲಯದ ಬೀಗದ ಕೀಲಿಯನ್ನು ತಂದಿದ್ದರು. ಗ್ರಂಥಾಲಯ ತೆರೆಯಿರಿ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಆಗ್ರಹಿಸಿದ್ದರು.
ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆದು ಹೊಸ ಸಿಬಂದಿ ನೇಮಕ ಮಾಡುವಂತೆ ಮನವಿ ಮಾಡುವ ಕುರಿತು ಭರವಸೆ ನೀಡಲಾಗಿತ್ತು. ಆದರೆ ಏಳು ತಿಂಗಳು ಕಳೆದರೂ ಭರವಸೆ ಈಡೇರಲೇ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪತ್ರ ಬರೆಯಲಾಗಿದೆ
ಗ್ರಂಥಾಲಯ ಬಾಗಿಲು ಮುಚ್ಚಿದ ಬಗ್ಗೆ ಗ್ರಾ.ಪಂ. ಪಿಡಿಒ ಅವರಲ್ಲಿ ಕೇಳಿದರೆ, ಸಿಬಂದಿ ಇಲ್ಲದ ಕಾರಣ ಬಾಗಿಲು ತೆರೆದಿಲ್ಲ. ಸಿಬಂದಿ ನೇಮಕ ಮಾಡುವಂತೆ ಕೇಂದ್ರ ಗ್ರಂಥಾಲಯಕ್ಕೆ ಪತ್ರ ಬರೆದಿದ್ದೇವೆ. ಗ್ರಾಮಸಭೆಯಲ್ಲಿ ನಿರ್ಣಯ ಮಾಡಿದ್ದೇವೆ. ಸಿಬಂದಿ ನೇಮಕವಾದ ಬಳಿಕ ಗ್ರಂಥಾಲಯ ತೆರೆಯಲಾಗುವುದು ಎಂದಿದ್ದಾರೆ.
ಓದುಗರಿಗೆ ನಿರಾಸೆ
ಪ್ರತೀದಿನ 60ಕ್ಕೂ ಮಿಕ್ಕಿ ಗ್ರಾಮಸ್ಥರು, ಹಾಗೂ ಗ್ರಾ.ಪಂ. ಕಚೇರಿಗೆ ಬರುವ ಜನರು ಗ್ರಂಥಾಲಯಕ್ಕೆ ಆಗಮಿಸಿ ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದರು. ಇಲಾಖೆಯ ಬೇಜವಾಬ್ದಾರಿಯಿಂದಾಗಿ ಓದುಗರಿಗೆ ನಿರಾಸೆ ಉಂಟಾಗಿದೆ ಎನ್ನುವ ಮಾತು ಸ್ಥಳೀಯವಾಗಿ ಕೇಳಿಬಂದಿದೆ.
ಇಲಾಖೆಯ ನಿರ್ಲಕ್ಷ್ಯ
ತೀರಾ ಗ್ರಾಮೀಣ ಪ್ರದೇಶವಾದ ಬಡಗನ್ನೂರು ಗ್ರಾಮದಲ್ಲಿರುವ ಏಕೈಕ ಗ್ರಂಥಾಲಯ ಸಿಬಂದಿ ಇಲ್ಲದೆ ಬಾಗಿಲು ಮುಚ್ಚಿದ ವಿಚಾರ ಕೇಂದ್ರ ಗ್ರಂಥಾಲಯಕ್ಕೆ ಗೊತ್ತಿದೆ. ಗ್ರಂಥಾಲಯ ತೆರೆಯುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿರುವ ವಿಚಾರವೂ ಗೊತ್ತಿದೆ. ಆದರೂ ಇಲಾಖೆಯ ನಿರ್ಲಕ್ಷ್ಯ ದಿಂದ ಗ್ರಂಥಾಲಯ ಇದ್ದರೂ ಜನರಿಗೆ ಪ್ರಯೋಜನವಿಲ್ಲದಂತಾಗಿದೆ.
ಭರವಸೆ ದೊರೆತಿದೆ
ಸಿಬಂದಿ ಇಲ್ಲದೆ ಗ್ರಂಥಾಲಯ ಮುಚ್ಚಿದೆ. ಮೇಲಧಿಕಾರಿಗಳು ಸಿಬಂದಿ ನೇಮಕ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೆಲವೇ
ವಾರಗಳಲ್ಲಿ ಮತ್ತೆ ಬಾಗಿಲು ತೆರೆಯಬಹುದು ಎನ್ನುವ ಭರವಸೆ ಇದೆ.
– ವಸೀಂ ಗಂಧದ, ಪಿಡಿಒ
ಓದುಗರಿಗೆ ಅನ್ಯಾಯ
ಸಾರ್ವಜನಿಕರ ಜ್ಞಾನ ಕೇಂದ್ರವಾದ ಗ್ರಂಥಾಲಯವನ್ನು ಶೀಘ್ರ ತೆರೆಯುವಂತೆ ಕ್ರಮ ಕೈಗೊಳ್ಳಬೇಕಿದೆ. ಮುಚ್ಚಿರುವ ಕ್ರಮ ಸರಿಯಾದುದಲ್ಲ. ಓದುಗರಿಗೆ ಅನ್ಯಾಯವಾಗಿದೆ.
– ಕೆ.ಪಿ. ಸಂಜೀವ ರೈ, ಸಾಹಿತಿ, ಲೇಖಕರು
ದಿನೇಶ್ ಪೇರಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.