ಪ.ಪೂ. ಉಪನ್ಯಾಸಕರು, ಸಿಬಂದಿಗೆ ಕೈ ಸೇರದ ವೇತನ
ವೇತನ ಹಂಚಿಕೆಯಲ್ಲಿ ತಾಂತ್ರಿಕ ತೊಂದರೆ
Team Udayavani, Nov 23, 2019, 4:28 AM IST
ಬಂಟ್ವಾಳ: ಅನುದಾನ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಸರಕಾರಿ ನೌಕರರ ವೇತನ ಹಂಚಿಕೆಯಲ್ಲಿ ವೈಪರೀತ್ಯ ಕಂಡುಬರುತ್ತಿದ್ದು, ಈಗ ತಾಂತ್ರಿಕ ಕಾರಣದಿಂದಾಗಿ ರಾಜ್ಯದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬಂದಿಗೆ ವೇತನ ವಿಳಂಬವಾಗಿದೆ. ನ. 20 ದಾಟಿದರೂ ಅಕ್ಟೋಬರ್ ವೇತನ ಅವರ ಕೈ ಸೇರಿಲ್ಲ. ವೇತನಕ್ಕೆ ಮೀಸಲಾಗಿರುವ ಅನುದಾನವನ್ನು ತೆಗೆಯುವ ವೇಳೆ ತಾಂತ್ರಿಕ ತೊಂದರೆ ಉಂಟಾದುದು ಇದಕ್ಕೆ ಕಾರಣ. ಈಗ ಸರಕಾರಿ ಮಟ್ಟದಲ್ಲಿ ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದ್ದು, ವೇತನ ಇನ್ನು ನಾಲ್ಕೈದು ದಿನಗಳಲ್ಲಿ ಕೈ ಸೇರಲಿದೆ ಎನ್ನಲಾಗುತ್ತಿದೆ.
18 ಸಾವಿರಕ್ಕೂ ಅಧಿಕ ಉಪನ್ಯಾಸಕರು
ರಾಜ್ಯದಲ್ಲಿ ಸುಮಾರು 1,971 ಕಾಲೇಜುಗಳಿದ್ದು, ಸರಕಾರದಿಂದ ವೇತನ ಪಡೆಯುವ 18 ಸಾವಿರಕ್ಕೂ ಅಧಿಕ ಉಪನ್ಯಾಸಕರಿದ್ದಾರೆ. 1,204 ಸರಕಾರಿ ಪ.ಪೂ. ಕಾಲೇಜುಗಳಲ್ಲಿ 12,800 ಉಪನ್ಯಾಸಕರು, 637 ಅನುದಾನಿತ ಪ.ಪೂ. ಕಾಲೇಜುಗಳಲ್ಲಿ 5,600 ಉಪನ್ಯಾಸಕರು ಮತ್ತು ಪದವಿ ಕಾಲೇಜುಗಳಿಂದ ಬೇರ್ಪಟ್ಟ ಸುಮಾರು 130 ಅನುದಾನಿತ ಪ.ಪೂ. ಕಾಲೇಜುಗಳಲ್ಲಿ 400ಕ್ಕೂ ಅಧಿಕ ಉಪನ್ಯಾಸಕರಿದ್ದಾರೆ. ಪ್ರತೀ ಕಾಲೇಜುಗಳಲ್ಲಿ ಒಂದೆರಡು ಕಚೇರಿ ಸಿಬಂದಿ ಇದ್ದು, ಎಲ್ಲರಿಗೂ ವೇತನ ವಿಳಂಬದ ಬಿಸಿ ತಟ್ಟಿದೆ. ಸಾಮಾನ್ಯವಾಗಿ ತಿಂಗಳ ಮೊದಲ ದಿನವೇ ವೇತನವಾಗುತ್ತದೆ, ಗರಿಷ್ಠ 5ರಿಂದ 10 ತಾರೀಕಿನೊಳಗೆ ವೇತನವಾಗುತ್ತಿತ್ತು ಎಂದು ಉಪನ್ಯಾಸಕರು ಹೇಳುತ್ತಾರೆ.
ಏನು ತಾಂತ್ರಿಕ ತೊಂದರೆ?
ಸರಕಾರಿ ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬಂದಿಗೆ ತಿಂಗಳ ವೇತನ ವಿತರಣೆಗೆ ಪ್ರತ್ಯೇಕ ವಿಭಾಗಗಳಿವೆ. ಆದರೆ ಪ್ರಸ್ತುತ ಉಪನ್ಯಾಸಕರ ವೇತನವನ್ನು ಉಪಶೀರ್ಷಿಕೆ 002 (ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇತನ) ರಡಿಯಲ್ಲಿ ತೆಗೆಯುವ ಬದಲು ಸಿಬಂದಿ ವೇತನ ಉಪ ಶೀರ್ಷಿಕೆ 003ರಡಿಯಿಂದಲೇ ತೆಗೆಯಲಾಗಿದೆ. ಜತೆಗೆ ಉಪಶೀರ್ಷಿಕೆ 14 (ಇತರ ವೆಚ್ಚ )ರಡಿ ಭರಿಸಬೇಕಾದ ಮೊತ್ತವನ್ನು ತಪ್ಪಾಗಿ ಉಪಶೀರ್ಷಿಕೆ 020 (ವೈದ್ಯಕೀಯ ವೆಚ್ಚ)ರಡಿ ತೆಗೆಯಲಾಗಿದೆ. ಇದರಿಂದ ಉಪಶೀರ್ಷಿಕೆ 003 ಮತ್ತು ಉಪಶೀರ್ಷಿಕೆ 020ಕ್ಕೆ 2019-20ನೇ ಸಾಲಿನಲ್ಲಿ ಒದಗಿಸಿರುವ ಪೂರ್ಣ ಅನುದಾನ ಖರ್ಚಾಗಿದೆ. ವೇತನ ವಿತರಣೆಗೆ ಆಗಿರುವ ತಾಂತ್ರಿಕ ತೊಂದರೆ ಇದು. ಹೀಗಾಗಿ ಈಗ ಅನುದಾನವನ್ನು ಸರಕಾರಿ ಮಟ್ಟದಲ್ಲಿ ಹೊಂದಾಣಿಕೆ ಮಾಡಬೇಕಿದ್ದು, ಅದು ಪೂರ್ಣ ಗೊಂಡ ಬಳಿಕವೇ ವೇತನ ವಿತರಣೆಯಾಗಲಿದೆ. ಈ ಕುರಿತು ಪ.ಪೂ. ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯಿಂದ ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ)ಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
ತಿಂಗಳ ವೇತನ ಡ್ರಾ ಮಾಡಲು ಪ್ರತ್ಯೇಕ ಉಪಖಜಾನೆಗಳಿವೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಒಂದೇ ಉಪಖಜಾನೆಯಿಂದ ವೇತನ ತೆಗೆದ ಪರಿಣಾಮ ತೊಂದರೆ ಎದುರಾಗಿದೆ. ನಾವು ಸಂಘದ ಪರವಾಗಿ ನಾಲ್ಕೈದು ಬಾರಿ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ತಿಳಿಸಿದ್ದು, ಅನುದಾನವನ್ನು ಹೊಂದಾಣಿಕೆ ಮಾಡಿದ ತತ್‌ಕ್ಷಣ ವೇತನ ಸಿಗಲಿದೆ.
– ನಿಂಗೇಗೌಡ ಎ.ಎಚ್.ಇ. ಪ್ರ. ಕಾರ್ಯದರ್ಶಿಗಳು, ರಾಜ್ಯ ಪ.ಪೂ.ಕಾಲೇಜು ಉಪನ್ಯಾಸಕರ ಸಂಘ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.