ನಂಬರ್ 1 ದೇಗುಲ ಇನ್ನು ಕಡಬ ತಾ| ಮಡಿಲಿಗೆ
Team Udayavani, Nov 24, 2018, 12:22 PM IST
ಸುಬ್ರಹ್ಮಣ್ಯ : ಕಡಬ ನೂತನ ತಾಲೂಕಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ರಾಜ್ಯದ ಶ್ರೀಮಂತ ದೇವಸ್ಥಾನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಇನ್ನು ಮುಂದಕ್ಕೆ ಕಡಬ ತಾಲೂಕಿಗೆ ಸೇರಲಿದೆ.
ಕಡಬ ತಾಲೂಕಿಗೆ ಸುಬ್ರಹ್ಮಣ್ಯ ಸೇರಿ ಸುಳ್ಯ ತಾಲೂಕಿನ 7 ಗ್ರಾಮಗಳು ಸೇರುವು ದರಿಂದ ತಾಲೂಕಿಗೆ ಮುಕುಟ ಪ್ರಾಯದಂತೆ ಇದ್ದ ರಾಜ್ಯದ ನಂ. 1 ದೇಗುಲ ಕುಕ್ಕೆ ಸುಬ್ರಹ್ಮಣ್ಯ, ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠ ಹಾಗೂ ಎಡಮಂಗಲ ರೈಲು ನಿಲ್ದಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಪಂಜ ಸೀಮೆ ಪರಿವಾರ ಶ್ರೀಪಂಚಲಿಂಗೇಶ್ವರ ದೇವಸ್ಥಾನ, ಚಾರಿತ್ರಿಕ ವೀರರಾದ ಕೋಟಿ-ಚೆನ್ನಯರ ಎಣ್ಮೂರಿನ ಆದಿಬೈದೆರ್‌ಗಲ ಗರಡಿ, ಪಂಜ ಚರ್ಚ್, ಎಣ್ಮೂರು ಮಸೀದಿ ಇನ್ನು ಕಡಬ ತಾಲೂಕಿನ ಜತೆ ಗುರುತಿಸಿಕೊಳ್ಳಲಿದೆ. ವಿವಿಧ ಗ್ರಾಮಗಳ ಹಲವು ಮಹತ್ವದ ಸ್ಥಳಗಳು ಕಡಬಕ್ಕೆ ಸೇರಲಿದೆ.
ಸುಬ್ರಹ್ಮಣ್ಯ ಹೋಬಳಿ ಕೇಂದ್ರ
ಕಡಬ ತಾ| ಅನುಷ್ಠಾನಗೊಂಡಲ್ಲಿ ಸುಬ್ರಹ್ಮಣ್ಯ ನಗರವನ್ನು ಹೋಬಳಿ ಕೇಂದ್ರವಾಗಿಸುವ ಚಿಂತನೆ ಅಧಿಕಾರಿಗಳಲ್ಲಿದೆ. ಆದರೆ ಸುಳ್ಯ ತಾ| ಪಟ್ಟಿಯಲ್ಲಿ ಉಳಿದುಕೊಂಡಿರುವ ಪಂಜ ಈಗ ಇರುವ ಹೋಬಳಿ ಕೇಂದ್ರವಾಗಿದೆ. ಹತ್ತು ಕಂದಾಯ ಗ್ರಾಮಗಳಿಗೆ ಇದು ಹೋಬಳಿ ಕೇಂದ್ರವಾಗಿ ಕರ್ತವ್ಯ ನಿರ್ವಹಿಸುತ್ತದೆ. ಪಂಜ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಐವತ್ತೂಕ್ಲು ಮತ್ತು ಕೂತ್ಕುಂಜ ಗ್ರಾಮಗಳು ಸುಳ್ಯ ತಾಲೂಕಿನಲ್ಲೆ ಉಳಿದುಕೊಂಡಿದ್ದು, ಈ ಗ್ರಾಮಗಳನ್ನು ಕಡಬಕ್ಕೆ ಸೇರಿಸಬೇಕು. ಪಂಜ ಹೋಬಳಿ ಕೇಂದ್ರವಾಗಿ ಉಳಸಿಕೊಳ್ಳಬೇಕೆಂಬ ಬೇಡಿಕೆ ಇದೆಯಾದರೂ, ಅವುಗಳಿಗೆ ಇನ್ನೂ ಮನ್ನಣೆ ದೊರಕಿಲ್ಲ.