“ಉಡುಪಿ ಸೀರೆ”ಗೆ ಅಡಿಕೆ ಚೊಗರಿನ ವರ್ಣಛಾಯೆ!
Team Udayavani, Jul 28, 2023, 7:43 AM IST
ಮಂಗಳೂರು: ಅಡಿಕೆಯ ಚೊಗರನ್ನು ಬಟ್ಟೆಗಳಿಗೆ ನೈಸರ್ಗಿಕ ಬಣ್ಣವಾಗಿ ಬಳಸುವ ವಿಧಾನ ವರ್ಷದಿಂದ ವರ್ಷಕ್ಕೆ ಜನಮನ್ನಣೆ ಗಳಿಸುತ್ತಿದೆ. ಪ್ರಸ್ತುತ ಕಿನ್ನಿಗೋಳಿಯಲ್ಲಿ ತಯಾರಾಗುವ ಹೆಸರಾಂತ “ಉಡುಪಿ ಸೀರೆ”ಗಳೂ ಈಗ ಅಡಿಕೆ ಚೊಗರಿನ ವರ್ಣಗಳೊಂದಿಗೆ ಹೊಸ ರೂಪಗಳಿಸಿವೆ.
ನಾಲ್ಕಾರು ತಿಂಗಳಿನಿಂದ ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ನೇಕಾರರು ಕೈಮಗ್ಗದ ಬಟ್ಟೆಗಳಿಗೆ ಅಡಿಕೆ ಚೊಗರಿನ ಬಣ್ಣ ನೀಡುವ ಪ್ರಯೋಗ ದಲ್ಲಿ ತೊಡಗಿಸಿಕೊಂಡಿದ್ದು ಯಶ ಸಾಧಿಸಿದ್ದಾರೆ.
ಆಧುನೀಕರಣದ ಭರಾಟೆಯಲ್ಲಿ ಮೂಲೆಗುಂಪಾಗುತ್ತಿದ್ದ ಉಡುಪಿ ಸೀರೆಗಳಿಗೆ ಕದಿಕೆ ಟ್ರಸ್ಟ್ ಸಹಕಾರ ವನ್ನಿತ್ತು ಮತ್ತೆ ಹಿಂದಿನ ಜನಪ್ರಿಯತೆ ಗಳಿಸಿಕೊಳ್ಳುವಲ್ಲಿ ನೆರವಾಗಿದೆ. ಈಗ ಉಡುಪಿ ಸೀರೆಯನ್ನು ಅದರಲ್ಲೂ ನೈಸರ್ಗಿಕ ಬಣ್ಣ ಬಳಸಿರುವ ಕೈಮಗ್ಗದ ಸೀರೆಯನ್ನು ಗ್ರಾಹಕರು ಕಾದಿರಿಸಿ ಕಾಯುವ ಪರಿಸ್ಥಿತಿ ಇದೆ. ಇಳಕಲ್ ಸೀರೆಗಳಲ್ಲಿ ಕೂಡ ಅಡಿಕೆ ಚೊಗರು ಬಳಸಿ ಯಶಸ್ವಿಯಾಗಿದ್ದಾರೆ.
ನಾಲ್ಕಾರು ಛಾಯೆ
ತಾಳಿಪಾಡಿ ಸಂಘವು ಅಡಿಕೆಯ ಚೊಗರು ಬಳಸಿಕೊಂಡು ಕಂದು, ಕೆಂಪು ಸಹಿತ ನಾಲ್ಕಾರು ಛಾಯೆ ಗಳುಳ್ಳ ಸೀರೆಗಳನ್ನು ಸಿದ್ಧಪಡಿಸಿದೆ. ಒಂದೇ ದ್ರಾವಣವನ್ನು 2-3 ಬಾರಿ ಬಳಸಬಹುದು. ಪರಿಸರ ಸ್ನೇಹಿಯಾಗಿರುವ ಇದರಲ್ಲಿ ನೂಲನ್ನು ಪ್ರತೀ ಬಾರಿ ಸಂಸ್ಕರಿಸಿದಾಗಲೂ ಛಾಯೆ ಬದಲಾಗುತ್ತದೆ ಎನ್ನುತ್ತಾರೆ ಕದಿಕೆ ಟ್ರಸ್ಟ್‌ನ ಮಮತಾ ರೈ.
ಹಿಂದಿನಿಂದಲೂ ಉಡುಪಿ ಸೀರೆಗಳಿಗೆ ನೈಸರ್ಗಿಕ ಬಣ್ಣಗಳನ್ನೇ ಬಳಸಲಾಗುತ್ತಿದೆ. ಉದಾಹರಣೆಗೆ ಮಂಜಿಷ್ಟ ಗಿಡದ ಬೇರಿನ ಪುಡಿಯಿಂದ ಕೆಂಪು, ನೇರಳೆ, ದಾಳಿಂಬೆ ಸಿಪ್ಪೆಯಿಂದ ಹಳದಿ, ಬೂದು, ಇಂಡಿಗೋದಿಂದ ನೀಲಿ, ಕಾಡು ಬಾದಾಮಿ ಗಿಡದ ಎಲೆಗಳಿಂದ ಹಳದಿ, ಚೆಂಡುಹೂಗಳಿಂದ ಹಳದಿ ವರ್ಣಗಳನ್ನು ಸಿದ್ಧಪಡಿಸಲಾಗುತ್ತದೆ. ಅಡಿಕೆಯ ಚೊಗರು ಅದಕ್ಕೆ ಹೊಸ ಸೇರ್ಪಡೆ. ನೀರುಳ್ಳಿಯ ವರ್ಣ, ಕೆಂಪು, ಗಾಢ ಕಂದು ಬಟ್ಟೆಯನ್ನು ಇದರಲ್ಲಿ ಸಿದ್ಧಪಡಿಸಬಹುದು. ಮಮತಾ ರೈ ಮಾರ್ಗದರ್ಶನದಲ್ಲಿ ವಾಸುದೇವ ಶೆಟ್ಟಿಗಾರ್ ಹಾಗೂ ದಿನೇಶ್ ಶೆಟ್ಟಿಗಾರ್ ಅಡಿಕೆ ಚೊಗರಿನ ಪುಡಿಯಿಂದ ಬಣ್ಣಗಳನ್ನು ಸಿದ್ಧಪಡಿಸಿದರೆ, ಶಾರದಾ ಶೆಟ್ಟಿಗಾರ್ ಮತ್ತು ಸಾಧನ ಶೆಟ್ಟಿಗಾರ್ ಸೀರೆಗಳನ್ನು ನೇಯ್ದಿದ್ದಾರೆ.
ನೈಸರ್ಗಿಕ ಬಣ್ಣ ಬಳಕೆ ಬಗ್ಗೆ ನಬಾರ್ಡ್ ಹಾಗೂ ಇತರ ಸಂಸ್ಥೆಗಳಿಂದ ನೇಕಾರರಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಈಗ ಪೂರ್ಣ ಪ್ರಮಾಣದಲ್ಲಿ ಒಮ್ಮೆ ಅಡಿಕೆ ಚೊಗರಿನ ಸೀರೆ ತಯಾರಿಸುತ್ತಿದ್ದು, ಗ್ರಾಹಕರಿಂದ ಈಗಾಗಲೇ ಬೇಡಿಕೆ ವ್ಯಕ್ತವಾಗಿದೆ. ಸದ್ಯದಲ್ಲೇ ಮಾರುಕಟ್ಟೆಗೆ ತರಲಿದ್ದೇವೆ.
– ಮಾಧವ ಶೆಟ್ಟಿಗಾರ್, ಅಧ್ಯಕ್ಷರು ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘ
ಏನಿದು ಅಡಿಕೆ ಚೊಗರು?
ಮಲೆನಾಡಿನ ಭಾಗಗಳಲ್ಲಿ (ಮುಖ್ಯವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ತಾಲೂಕು) ಅಡಿಕೆ ಸಂಸ್ಕರಣೆ ವೇಳೆ ಉತ್ಪಾದನೆ ಯಾಗುವ ದ್ರವರೂಪದ ಪದಾರ್ಥವಿದು. ಬಿಸಿಲಿಗಿಟ್ಟು ಒಣಗಿಸಿದಾಗ ಮಂದರೂಪಕ್ಕೆ ಬರುತ್ತದೆ. ಗಾಢ ಕಂದು ಬಣ್ಣ. ಚೊಗರನ್ನು ಪುಡಿ ರೂಪಕ್ಕೆ ಪರಿವರ್ತಿಸಿ ದಾಸ್ತಾನು ಮಾಡಲಾಗುತ್ತದೆ. ಇದು ಸುದೀರ್ಘ ಕಾಲ ಬಣ್ಣ ಕಳೆದುಕೊಳ್ಳದಿರುವ ಕಾರಣ ನೈಸರ್ಗಿಕ ಬಣ್ಣವಾಗಿ ಹೆಚ್ಚಿನ ಮನ್ನಣೆ ಪಡೆದಿದೆ ಎನ್ನುತ್ತಾರೆ ಹಿರಿಯ ಕೃಷಿ ಪತ್ರಕರ್ತ ಶ್ರೀ ಪಡ್ರೆ.
ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.