ಒಂದು ಲೋಡ್ ತ್ಯಾಜ್ಯ ಎಸೆತ: ಕ್ರಮಕ್ಕೆ ಮುಂದಾದ ಗ್ರಾ.ಪಂ.
Team Udayavani, Aug 1, 2018, 11:09 AM IST
ಬಜಪೆ : ಬಜಪೆ ಹಾಗೂ ಮಳವೂರು ಗ್ರಾಮ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ರವಿವಾರ ರಾತ್ರಿ ಯಾರೋ ವಾಹನದಲ್ಲಿ ಬಂದು ಒಂದು ಲೋಡ್ ತ್ಯಾಜ್ಯ ಬಿಸಾಡಿ ಹೋಗಿದ್ದಾರೆ. ಬಜಪೆ ಮಾರ್ನಿಂಗ್ ಸ್ಟಾರ್ ಶಾಲೆ ಸಮೀಪದ ಬಜಪೆ ಹಳೆ ವಿಮಾನ ನಿಲ್ದಾಣ ರಸ್ತೆಯ ಬದಿ ತ್ಯಾಜ್ಯ ಬಿಸಾಡಲಾಗಿದೆ. ಈ ಪ್ರದೇಶದಲ್ಲಿ ತ್ಯಾಜ್ಯ ಬಿಸಾಡದಂತೆ ಮಳವೂರು ಗ್ರಾಮ ಪಂಚಾಯತ್ ವತಿಯಿಂದ ನೆಟ್ ಹಾಕಿ, ಫಲಕ ಕೂಡ ಅಳವಡಿಸಲಾಗಿತ್ತು. ಬಳಿಕ ಇಲ್ಲಿ ತ್ಯಾಜ್ಯ ಬಿಸಾಕುವುದು ಕಡಿಮೆಯಾಗಿದೆ. ಆದರೆ ರವಿವಾರ ರಾತ್ರಿ ಒಂದು ಲಾರಿಯಷ್ಟು ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಇದರಲ್ಲಿ ತರಕಾರಿ ಹಾಗೂ ಇತರ ಕೋಳಿ ತ್ಯಾಜ್ಯವೂ ಸೇರಿದೆ.
ಬಜಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ನಿತ್ಯವೂ ಆಗುತ್ತಿದೆ. ಹೀಗಾಗಿ ಇಷ್ಟೊಂದು ತ್ಯಾಜ್ಯ ಎಲ್ಲಿಂದ ಬಂತು ಎಂಬ ಶಂಕೆ ಸ್ಥಳೀಯರಲ್ಲಿ ಕಾಡುತ್ತಿದೆ. ಬಜಪೆ ಮತ್ತು ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಪ್ರದೇಶದಲ್ಲಿರುವ ಈ ತ್ಯಾಜ್ಯ ವನ್ನು ವಿಲೇವಾರಿ ಮಾಡಲು ಬಜಪೆ ಮತ್ತು ಮಳವೂರು ಗ್ರಾಮ ಪಂಚಾಯತ್ ವತಿಯಿಂದ ಬಜಪೆ ತ್ಯಾಜ್ಯ ವಿಲೇವಾರಿ ಮಾಡುವವರಿಗೆ ಸೂಚಿಸಲಾಗಿದೆ.
ಕಾನೂನು ಕ್ರಮಕ್ಕೆ ಸಿದ್ಧವಾದ ಗ್ರಾ.ಪಂ.
ಇತ್ತೀಚೆಗಷ್ಟೇ ಇಲ್ಲಿ ಶಾಲಾ ಮಕ್ಕಳು, ಹೆತ್ತವರು, ಬಜಪೆ ಹಾಗೂ ಮಳವೂರು ಗ್ರಾಮ ಪಂಚಾಯತ್, ಬಜಪೆ ರೋಟರಿ ಕ್ಲಬ್ ವತಿಯಿಂದ ಸ್ವಚ್ಛಗೊಳಿಸಲಾಗಿತ್ತು. ಇಲ್ಲಿ ತ್ಯಾಜ್ಯ ತಂದು ಸುರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಜಪೆ ಗ್ರಾಮ ಪಂಚಾಯತ್ ಸಜ್ಜಾಗಿದೆ.
ಈ ಪ್ರದೇಶದಲ್ಲಿ ತ್ಯಾಜ್ಯ ಬಿಸಾಡುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ದಂಡ ವಿಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ತ್ಯಾಜ್ಯ ಬಿಸಾಡುವವರು ಕಂಡು ಬಂದರೆ ಸ್ಥಳೀಯರು ಚಿತ್ರ ಸಹಿತಿ ವಾಟ್ಸಪ್ ಮಾಹಿತಿಯನ್ನು ಮೊ.ಸಂ. 9480862292ಗೆ ಮಾಹಿತಿ ನೀಡಬಹುದು. ಅ ಪ್ರದೇಶದಲ್ಲಿ ಎಚ್ಚರಿಕೆ ಫಲಕವನ್ನು ಹಾಕಲಾಗುವುದು. ಈಗ ಅಲ್ಲಿರುವ ತ್ಯಾಜ್ಯವನ್ನು ತೆಗೆದು ನೆಟ್ ಹಾಕಲಾಗುತ್ತದೆ ಎಂದು ಬಜಪೆ ಗ್ರಾಮ ಪಂಚಾಯತ್ ಪಿಡಿಒ ಸಾಯಿಶ್ ಚೌಟ ತಿಳಿಸಿದ್ದಾರೆ.