Mangaluru: ವೆನ್ಲಾಕ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಅಂಗಾಂಗ ದಾನ
ಮೂವರಿಗೆ ಜೀವದಾನ ನೀಡಿದ ಶಿವಮೊಗ್ಗದ ರೇಖಾ
Team Udayavani, Jan 10, 2025, 5:21 PM IST
ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗಾಂಗ ದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಿವಮೊಗ್ಗ ಮೂಲದ ಈ ಮಹಿಳೆ ಮೂವರು ವ್ಯಕ್ತಿಗಳಿಗೆ ಜೀವದಾನ ಮಾಡಿದ್ದಾರೆ.
ಶಿವಮೊಗ್ಗದ ಶಾಂತಿನಗರ ರಾಗಿಗುಡ್ಡೆಯ ನಿವಾಸಿ ರೇಖಾ (41) ಅಂಗಾಂಗ ದಾನದ ಮೂಲಕ ಮಾದರಿಯಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಜ. 5ರಂದು ಕುಸಿದು ಬಿದ್ದು ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ರೇಖಾ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಮೆದುಳು ರಕ್ತಸ್ರಾವ ಉಂಟಾಗಿ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿದ್ದರು.
ಮನೆ ಮಂದಿಯ ಮನವೊಲಿಕೆ
ಆಸ್ಪತ್ರೆಯ ಜೀವ ಸಾರ್ಥಕತೆಯ ತಂಡದ ಪದ್ಮಾ ಹಾಗೂ ಡಾ| ವಿಜಯ್ ಅವರ ಮೂಲಕ ಕುಟುಂಬಸ್ಥರಿಗೆ ಅಂಗಾಂಗ ದಾನದ ಬಗ್ಗೆ ವಿವರಿಸಲಾಯಿತು. ಇದಕ್ಕೆ ಒಪ್ಪಿಗೆ ಸೂಚಿಸಿದ ರೇಖಾ ಅವರ ತಾಯಿ ಮತ್ತು ಸಹೋದರರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ. ಬಳಿಕ ಜೀವ ಸಾರ್ಥಕತೆ ಪೋರ್ಟಲ್ ಮೂಲಕ ಅಂಗಾಂಗ ಕಸಿ ನೋಂದಣಿ ಮಾಡಿರುವ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಮಹಿಳೆಯ ಬ್ಲಿಡ್ ಗ್ರೂಪ್ ಹಾಗೂ ಇತರ ಮಾಹಿತಿ ಹಂಚಿಕೊಳ್ಳಲಾಗಿತ್ತು.
ಮೈಸೂರಿನ ಅಪೋಲೊ ಆಸ್ಪತ್ರೆಯ ಡಾ| ರಾಜು ಗೌಡ ನೇತೃತ್ವದ ತಂಡ ಲಿವರ್ ಶಸ್ತ್ರಕ್ರಿಯೆ ನಡೆಸಿದ್ದು, ಡಾ| ಸುಮನಾ ಕಾಮತ್ ನೇತೃತ್ವದಲ್ಲಿ ಕಣ್ಣಿನ ಸರ್ಜರಿ ನಡೆಸಿದ್ದಾರೆ. ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ| ಮೇಘನಾ ಮಡಿ, ಡಾ| ಮಧುರ ಮುಂದ್ರಾ, ಡಾ| ತರುಣ್ ಗುಪ್ತಾ ಸಹಕರಿಸಿದ್ದರು.
ಬಡ ಕುಟುಂಬಕ್ಕೆ ನೆರವು
ಮೃತ ರೇಖಾ ಅವರ ಕುಟುಂಬ ಅರ್ಥಿಕವಾಗಿ ಹಿಂದುಳಿದವರಾಗಿರುವ ಕಾರಣ ಐಎಂಎ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಹಾಗೂ ವೈದ್ಯರು ನೆರವು ನೀಡಿದ್ದಾರೆ. ಹಾಗೂ ಮೃತದೇಹ ರವಾನಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಆಸ್ಪತ್ರೆಯಲ್ಲಿ ಮೃತದೇಹಕ್ಕೆ ಅಂತಿಮ ಗೌರವ ಸಲ್ಲಿಸಲಾಗಿದೆ.
ಮೂವರಿಗೆ ಜೀವದಾನ
ರೇಖಾ ಅವರ ದೇಹದ ಬಹು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಲಾಗಿತ್ತಾದರೂ ವಿವಿಧ ಕಾರಣಗಳಿಂದಾಗಿ ಸಾಧ್ಯವಾಗಿಲ್ಲ. ಅಂತಿಮವಾಗಿ ಯಕೃತ್ ಹಾಗೂ ಕಣ್ಣುಗಳ ಕಾರ್ನಿಯಾವನ್ನು ಬೇರ್ಪಡಿಸಲಾಗಿದೆ. ಯಕೃತ್ತನ್ನು ಮೈಸೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ಮೂಲಕ ರವಾನಿಸಲಾಗಿದೆ. ಕಾರ್ನಿಯಾಗಳನ್ನು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಹೋದರಿ ರೇಖಾ ಅವರ ಮೃತದೇಹದ ಅಂತ್ಯ ಸಂಸ್ಕಾರದಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ಪ್ರತಿಯೊಬ್ಬರಿಗೆ ಸಾವು ನಿಶ್ಚಿತವಾಗಿದ್ದು, ಕುಟುಂಬಸ್ಥರು ಗಟ್ಟಿ ಮನಸ್ಸು ಮಾಡಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಆ ಮೂಲಕ ಕನಿಷ್ಠ ಸಾವಿನಲ್ಲಾದರೂ ಇತರರ ಬಾಳಿಗೆ ಬೆಳಕಾಗಲು ಸಾಧ್ಯವಿದೆ.
– ಶೇಷಾದ್ರಿ, ಮೃತ ರೇಖಾ ಅವರ ಸಹೋದರ
ರೇಖಾ ಅವರ ಮೆದುಳು ನಿಷ್ಕ್ರಿಯವಾದ ಕಾರಣ ಅವರನ್ನು ಉಳಿಸುವ ಸಾಧ್ಯತೆ ಇರಲಿಲ್ಲ. ಆಕೆಯ ಸಾವಿನ ಸಂದರ್ಭದಲ್ಲಿ ಕುಟುಂಬಸ್ಥರು ಸರ್ವಶ್ರೇಷ್ಠ ನಿರ್ಧಾರ ಕೈಗೊಂಡಿದ್ದಾರೆ. ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.
– ಡಾ| ಶಿವಪ್ರಸಾದ್, ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು
ಇದನ್ನೂ ಓದಿ: Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.