ಗಿಡಗಳ ನಿರ್ವಹಣೆಗೆ ಮುಂದಾದ ಸಂಘಟನೆ
Team Udayavani, Feb 25, 2022, 4:10 AM IST
ಮಹಾನಗರ: ಸ್ಮಾರ್ಟ್‌ಸಿಟಿ ಮತ್ತು ಪಾಲಿಕೆ ವತಿಯಿಂದ ನಗರದ ವಿವಿಧ ಕಡೆಗಳ ರಸ್ತೆಗಳ ಡಿವೈಡರ್‌ಗಳಲ್ಲಿ ನೆಟ್ಟಂತಹ ಕೆಲವೊಂದು ಗಿಡಗಳು ಸೊರಗಿದ್ದು, ಇದೀಗ ನಿರ್ವಹಣೆಗೆ ಸಂಘಟನೆಯೊಂದು ಮುಂದೆ ಬಂದಿದೆ.
ಲೇಡಿಹಿಲ್‌ನಿಂದ ಉರ್ವ ರಸ್ತೆಯಲ್ಲಿನ ಗಿಡಗಳ ನಿರ್ವಹಣೆಯನ್ನು ಗಿರಿಜ ಚಾರಿಟೆಬಲ್ ಟ್ರಸ್ಟ್ ನಿರ್ವಹಿಸುತ್ತಿದೆ. ಸದ್ಯ ಗಿಡಗಳ ಬುಡದಿಂದ ಮಣ್ಣು ತೆಗೆಯುವ ಕೆಲಸ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಗಿಡಗಳ ಪೂರ್ಣ ನಿರ್ವಹಣೆಯನ್ನೂ ನಡೆಸಲಿದೆ. ಈ ಟ್ರಸ್ಟ್ ವತಿಯಿಂದ ಕೆಲವು ವರ್ಷಗಳಿಂದ ಮಣ್ಣಗುಡ್ಡ-ಉರ್ವಸ್ಟೋರ್ ನಡುವಣ ಡಿವೈಡರ್ ಗಿಡಗಳಿಗೆ ನೀರುಣಿಸುವುದು, ನಿರ್ವಹಣೆ ಸಹಿತ ಹಲವು ಸೇವಾ ಕಾರ್ಯದಲ್ಲಿ ಈ ಸಂಘಟನೆ ತೊಡಗಿಸಿಕೊಂಡಿದೆ. ನಗರದಲ್ಲಿ ನೆಟ್ಟಂತಹಾ ಗಿಡಗಳು ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಬಗ್ಗೆ “ಉದಯವಾಣಿ ಸುದಿನ’ ಕೆಲವು ದಿನಗಳ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು.
ಗಿರಿಜಾ ಚಾರಿಟೆಬಲ್ ಟ್ರಸ್ಟ್‌ನ ಲೋಕೇಶ್ ಪುತ್ರನ್ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಗಿಡಗಳ ನಿರ್ವಹಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ನಗರ ವ್ಯಾಪ್ತಿ ಡಿವೈಡರ್‌ಗಳಲ್ಲಿ ನೆಟ್ಟಂತ ಗಿಡಗಳ ಆರೈಕೆಯ ಕುರಿತಂತೆ ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ಈಗಾಗಲೇ ಮನವಿ ಮಾಡಿದ್ದರೂ ಪೂರಕ ಸ್ಪಂದನೆ ವ್ಯಕ್ತವಾಗಿಲ್ಲ. ಮಣ್ಣಗುಡ್ಡೆ-ಉರ್ವಸ್ಟೋರ್ ನಡುವಣ ಡಿವೈಡರ್‌ಗಳಲ್ಲಿ ನೆಟ್ಟ ಗಿಡಗಳ ಆರೈಕೆಯನ್ನು ಕೆಲವು ವರ್ಷ
ಗಳಿಂದ ಸಂಘಟನೆ ಮಾಡುತ್ತಿದೆ. ಕೆಲವು ಕಡೆಗಳಲ್ಲಿ ಗಿಡಗಳು ಸೊರಗಿರುವ ಬಗ್ಗೆ ಸುದಿನ ವರದಿ ಪ್ರಕಟಿಸಿದ್ದು, ಸದ್ಯ ಕುಂಟಿಕಾನ ಪ್ರದೇಶದಲ್ಲಿಯೂ ಡಿವೈಡರ್ ಗಿಡಗಳಿಗೆ ನೀರುಣಿಸಲು ಮುಂದಾಗಿದ್ದೇವೆ’ ಎನ್ನುತ್ತಾರೆ.
ನಗರದ ಡಿವೈಡರ್‌ಗಳಲ್ಲಿ ನೆಟ್ಟಂತಹ ಸಾವಿರಾರು ಗಿಡಗಳ ಪೈಕಿ ಕೆಲವೊಂದು ಗಿಡಗಳು ಸದ್ಯ ಬದುಕುಳಿದಿಲ್ಲ. ಪಾಲಿಕೆ ವತಿಯಿಂದ ನಗರದ ಕೆಲವೊಂದು ರಸ್ತೆ ವಿಭಾಜಕಗಳಲ್ಲಿ ಕರವೀರ, ಬೋಲನ್ ವಿಲ್ಲ, ಅರೆಲಿಯಾ ಗಿಡಗಳನ್ನು ನೆಡಲಾಗಿದೆ. ಕೆಲವು ಗಿಡಗಳ ನಿರ್ವಹಣೆ ಮಾಡುವಲ್ಲಿ ಆಗುತ್ತಿರುವ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಕೆಲವು ಕಡೆಗಳಲ್ಲಿ ಡಿವೈಡರ್‌ಗಳಲ್ಲಿ ನೆಟ್ಟಂತಹಾ ಗಿಡಗಳು ಎತ್ತರಕ್ಕೆ ಬೆಳೆದಿದ್ದು, ಅವುಗಳನ್ನು ಕಟಾವು ಮಾಡಲಾಗಿಲ್ಲ. ಇದರಿಂದಾಗಿ ಪಾದಚಾರಿಗಳು, ವಾಹನ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಇದೀಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಂಘಟನೆಯೊಂದು ಮುಂದೆ ಬಂದಿದ್ದು ಶ್ಲಾಘನೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.