ನಮ್ಮ ಸೇವಾ ಕಾರ್ಯ ಕ್ರೈಸ್ತರಿಗೆ ಸೀಮಿತವಲ್ಲ
Team Udayavani, Jul 10, 2018, 2:52 PM IST
ಮಂಗಳೂರು: ಎರಡು ದಶಕಗಳ ಕಾಲ ಮಂಗಳೂರು ಧರ್ಮ ಪ್ರಾಂತದ ಆಡಳಿತ ಚುಕ್ಕಾಣಿ ಹಿಡಿದು ಕೆಥೋಲಿಕ್ ಸಮಾಜವನ್ನು ಮುನ್ನಡೆಸಿರುವ ಧರ್ಮಾಧ್ಯಕ್ಷ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಸದ್ಯದಲ್ಲಿಯೇ ನೂತನ ಧರ್ಮಾಧ್ಯಕ್ಷ ರೆ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೋಜಾ ತಮ್ಮ 22 ವರ್ಷಗಳ ಸೇವಾವಧಿಯ ಪ್ರಮುಖ ವಿಚಾರಗಳ ಬಗ್ಗೆ “ಉದಯವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
- ಕೆಲವರು ಕ್ರೈಸ್ತರ ಸೇವೆ ಹೆಸರಲ್ಲಿ ಮತಾಂತರ ಮಾಡುತ್ತಾರೆ ಎಂಬ ಆರೋಪವಿದೆಯಲ್ಲ?
ದೇವರ ಪ್ರೀತಿ ಮತ್ತು ಪರರ ಪ್ರೀತಿ ಕ್ರೈಸ್ತ ಧರ್ಮದ ಪ್ರಮುಖ ತಿರುಳು. ಅದನ್ನು ಸೇವಾ ಕಾರ್ಯದ ಮೂಲಕ ಸಾಕಾರಗೊಳಿಸುತ್ತಾರೆ. ಆದರೆ ಕ್ರೈಸ್ತರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಗೆ ಕೆಲವರು ಅಪಾರ್ಥ ಕಲ್ಪಿಸಿ ಮತಾಂತರದ ಆರೋಪ ಹೊರಿಸುತ್ತಾರೆ. ಇದರಿಂದ ತುಂಬಾ ಬೇಸರ ವಾಗುತ್ತದೆ. ನಮ್ಮ ಶಿಕ್ಷಣ, ಆರೋಗ್ಯ ಮತ್ತು ಇತರ ಸಾಮಾಜಿಕ ಸೇವಾ ಸಂಸ್ಥೆಗಳಿಂದ ಸಮಾಜದ ಎಲ್ಲ ವರ್ಗಗಳ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಇದುವರೆಗೆ ಯಾರನ್ನೂ ಬಲವಂತದಿಂದ ಮತಾಂತರ ಮಾಡಿಲ್ಲ ಮತ್ತು ಅದು ಎಂದಿಗೂ ಸಲ್ಲದು ಕೂಡ. ನಾವು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕಳೆದ ವರ್ಷ 18 ಕೋಟಿ ರೂ. ಮೌಲ್ಯದ ಉಚಿತ ಸೇವೆಯನ್ನು ಒದಗಿಸಲಾಗಿದೆ. ಕಳೆದ 20 ವರ್ಷಗಳಿಂದ ಕಾರ್ಯಾ ಚರಿಸುತ್ತಿರುವ ಎಚ್‌ಐವಿ/ ಏಡ್ಸ್ ಸೇವಾ ಕೇಂದ್ರದಲ್ಲಿ 452 ಮಂದಿ ಇದ್ದು, ಅವರಲ್ಲಿ ಕ್ರೈಸ್ತರು ಕೇವಲ 10 ಮಂದಿ ಮಾತ್ರ.
- ನಿಮ್ಮ ಸೇವಾವಧಿಯಲ್ಲಿ ಆಗಿರುವ ಪ್ರಮುಖ ಕೆಲಸಗಳೇನು?
ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಪ್ರಾಂತ ಅಧೀನದ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ; ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು, ಐಟಿಐ ಸ್ಥಾಪನೆ, ನರ್ಸಿಂಗ್ ಸ್ಕೂಲ್/ ಕಾಲೇಜು ಆರಂಭ, ಬಡ ರೋಗಿಗಳಿಗೆ ನೆರವಾಗಲು ವೈದ್ಯ ಕೀಯ ನಿಧಿ ಸ್ಥಾಪನೆ, ಜಪ್ಪು ಸಂತ ಅಂತೋಣಿ ಆಶ್ರಮ ದಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ನೂರು ಹಾಸಿಗೆಗಳ ಪ್ರತ್ಯೇಕ ಕಟ್ಟಡ ಯೋಜನೆ, ಮನೆ ದುರಸ್ತಿಗೆ ನೆರವು, ಶೌಚಾಲಯ ನಿರ್ಮಾಣ, 200 ಕುಟುಂಬಗಳಿಗೆ ಹೆಂಚಿನ ಮನೆ, ಅವಿಭಜಿತ ಮಂಗಳೂರು ಧರ್ಮ ಪ್ರಾಂತ ದಲ್ಲಿ 161 ಮನೆ ನಿರ್ಮಾಣ, ಧರ್ಮ ಪ್ರಾಂತದ 125ನೇ ವರ್ಷಾಚರಣೆ ಸಂದರ್ಭದಲ್ಲಿ 125 ಮನೆ ನಿರ್ಮಾಣ, ನಿರಾಶ್ರಿತರಿಗಾಗಿ ತಲಪಾಡಿ ಯಲ್ಲಿ 24 ಮನೆ ನಿರ್ಮಾಣ ಇತ್ಯಾದಿ. ಧರ್ಮಾಧ್ಯಕ್ಷ ಹುದ್ದೆಯ ದಶಮಾನೋತ್ಸವ ಸಂದರ್ಭದಲ್ಲಿ ಬಡ ರೋಗಿಗಳಿಗೆ ವೈದ್ಯಕೀಯ ನಿಧಿ ಸ್ಥಾಪಿಸಲಾಗಿದ್ದು, ಕಳೆದ 10 ವರ್ಷಗಳಲ್ಲಿ 1,000ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.
- ನಿವೃತ್ತಿಯಾಗುವ ಸಂದರ್ಭದಲ್ಲಿ ಮಂಗಳೂರಿನ ಜನತೆಗೆ ನಿಮ್ಮ ಸಂದೇಶವೇನು?
ಪರಸ್ಪರ ಪ್ರೀತಿ, ಸಹನೆ ಮತ್ತು ಸೇವಾ ಮನೋಭಾವದಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಪರಸ್ಪರ ಗೌರವ ಮತ್ತು ಹೊಂದಾಣಿಕೆಯಿಂದ ಬದುಕುವುದೇ ನಮ್ಮ ಧರ್ಮವಾಗಬೇಕು. ನಾವೆಲ್ಲರೂ ಭಾರತೀಯರು ಎಂದು ಭಾವಿಸಿ, ಸಂವಿಧಾನವನ್ನು ಗೌರವಿಸಿ ಒಮ್ಮನಸ್ಸಿನಿಂದ ಬದುಕಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು.
- ನಿವೃತ್ತಿ ಬಳಿಕ ವಿಶ್ರಾಂತ ಜೀವನದ ಅವಧಿಯನ್ನು ಹೇಗೆ ಕಳೆಯುವಿರಿ?
ವಿಶ್ರಾಂತ ಜೀವನವನ್ನು ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ಕಳೆಯಲು ಇಚ್ಛಿಸಿದ್ದೇನೆ. ಆಧ್ಯಾತ್ಮಿಕ, ಧಾರ್ಮಿಕ ನೆರವು ಕೋರಿ ಬರುವ ಜನರಿಗೆ ಸೇವೆ ಮತ್ತು ಮಾರ್ಗದರ್ಶನ ನೀಡುತ್ತೇನೆ.
- ನೂತನ ಧರ್ಮಾಧ್ಯಕ್ಷರಿಗೆ ನಿಮ್ಮ ಮಾರ್ಗದರ್ಶನ ವೇನು?
ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿರುವ ರೆ| ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಅವರಿಗೆ ಪ್ರೀತಿಯ ಸ್ವಾಗತ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ತಾಲೂಕನ್ನು ಒಳಗೊಂಡ ಮಂಗಳೂರು ಧರ್ಮ ಪ್ರಾಂತದ 3 ಲಕ್ಷ ಕೆಥೋಲಿಕರ ಸಹಿತ ಎಲ್ಲ ಸಮುದಾಯಗಳ ಜನರು ಪರಸ್ಪರ ಪ್ರೀತಿ ಮತ್ತು ಸಾಮರಸ್ಯದಿಂದ ಬದುಕುವಂತೆ ಅವರು ಮಾರ್ಗದರ್ಶನ ನೀಡಲಿ. ಧರ್ಮ ಪ್ರಾಂತವು ಅವರ ಸೇವಾವಧಿಯಲ್ಲಿ ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗಲಿ.
22 ವರ್ಷಗಳ ಸೇವಾವಧಿಯನ್ನು ಹೇಗೆ ವಿಶ್ಲೇಷಣೆ ಮಾಡುವಿರಿ?
ಯೇಸು ಕ್ರಿಸ್ತರ ಬೋಧನೆಯ ಪ್ರಕಾರ ಸಮುದಾಯದ ಜನರನ್ನು ಕ್ರೈಸ್ತ ವಿಶ್ವಾಸ ಮತ್ತು ಭಕ್ತಿಯಿಂದ ಸರಿ ದಾರಿಯಲ್ಲಿ ಮುನ್ನಡೆಸುವ ಮೂಲ ಸಾಮುದಾಯಿಕ ಜವಾಬ್ದಾರಿಯನ್ನು ನಿರ್ವಹಿಸಿದ ಸಂತೃಪ್ತಿ ಇದೆ. ಧರ್ಮಪ್ರಾಂತದ ಮತ್ತು ಈ ಪ್ರದೇಶದ ಜನರ ಅಭಿವೃದ್ಧಿ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಜನರಲ್ಲಿ ಸೇವಾ ಮನೋಭಾವ ಹೆಚ್ಚಾಗಿದೆ. ಅನೇಕ ಕ್ರೈಸ್ತ ಮುಖಂಡರು ಹುಟ್ಟಿಕೊಂಡು ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನರ ಆವಶ್ಯಕತೆಯನ್ನು ಗಮನಿಸಿ ಯೋಜನೆ ರೂಪಿಸಿ ಪ್ರಯೋಜನ ಒದಗಿಸಿದ ತೃಪ್ತಿ ಇದೆ.
ಮಂಗಳೂರನ್ನು ಪೂರ್ವದ ರೋಮ್ ಎಂದು ಹೇಳುವುದರಲ್ಲಿ ಔಚಿತ್ಯವಿದೆಯೇ?
ಭಾರತದಲ್ಲಿಯೇ ಮಂಗಳೂರು ಧರ್ಮ ಪ್ರಾಂತದಲ್ಲಿ ಕ್ರೈಸ್ತರ ಸಂಖ್ಯೆ ಜಾಸ್ತಿ ಇದೆ. 124 ಚರ್ಚ್‌ಗಳಿದ್ದು, ಅನೇಕ ಕಾನ್ವೆಂಟ್‌ಗಳಿವೆ. ಧರ್ಮ ಗುರುಗಳು ಮತ್ತು ಧರ್ಮ ಭಗಿನಿಯರು ಅಧಿಕ ಸಂಖ್ಯೆ ಯಲ್ಲಿದ್ದಾರೆ. ದೇಶ-ವಿದೇಶಗಳಲ್ಲಿ 35 ಮಂದಿ ಬಿಷಪರು ಮಂಗಳೂರಿನವರಿದ್ದಾರೆ. 450ರಷ್ಟು ಧರ್ಮಗುರುಗಳು 1,500ಕ್ಕೂ ಮಿಕ್ಕಿ ಧರ್ಮ ಭಗಿನಿಯರಿದ್ದಾರೆ. ಪಾಕಿಸ್ಥಾನದ ಈ ಹಿಂದಿನ ಬಿಷಪ್ ಮಂಗಳೂರಿನವರಾಗಿದ್ದರು ಎನ್ನುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.