ಬಿಜೆಪಿಯಿಂದ ಪರಿವರ್ತನೆಗಾಗಿ ನಮ್ಮ ನಡಿಗೆ: ರಾಯಿಯಲ್ಲಿ ಸಭೆ
Team Udayavani, Jan 17, 2018, 3:37 PM IST
ಪುಂಜಾಲಕಟ್ಟೆ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸಿ ಮತೀಯ ಗಲಭೆಯನ್ನು ಸೃಷ್ಟಿಸುತ್ತಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಆರೋಪಿಸಿದ್ದಾರೆ.
ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ
ಮುಂದಾಳತ್ವದಲ್ಲಿ ಜ. 14ರಂದು ಆರಂಭವಾದ 13 ದಿನಗಳ ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆಯು 2ನೇ ದಿನವಾದ ಸೋಮವಾರ ರಾತ್ರಿ ರಾಯಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೆಮ್ಮದಿ-ಅಭಿವೃದ್ಧಿ ಬಿಜೆಪಿ ಅಜೆಂಡಾವಾದರೆ, ಕಾಂಗ್ರೆಸ್‌ಗೆ ಅಧಿಕಾರದ ದಾಹ ಮಾತ್ರ. ಕಾಂಗ್ರೆಸ್ ಮುಕ್ತ ಕರ್ನಾಟಕವಾಗಬೇಕಾದರೆ ಬಂಟ್ವಾಳ, ಮೂಡಬಿದಿರೆಯಲ್ಲೂ ಕಾಂಗ್ರೆಸ್ ಮುಕ್ತವಾಗಬೇಕು. ಇದಕ್ಕೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಉಳಿಪ್ಪಾಡಿ ಮತ್ತು ಬೆಳ್ಳಿಪ್ಪಾಡಿಯ ಮಧ್ಯೆ ಸ್ಪರ್ಧೆಯಲ್ಲಿ ಈ ಬಾರಿ ಉಳಿಪ್ಪಾಡಿಗೆ ಗೆಲುವು ನಿಶ್ಚಿತ ಎಂದರು.
ಮೋದಿ ಕೈ ಬಲಪಡಿಸಿ: ಹರಿಕೃಷ್ಣ
ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶವನ್ನು ವಿಶ್ವ ಗುರುವನ್ನಾಗಿ ನಿರ್ಮಿಸುವ ಪ್ರಧಾನಿ ಮೋದಿ ಅವರ ಕನಸಿಗೆ ಎಲ್ಲ ಭಾರತೀಯರು ಕೈ ಜೋಡಿಸಬೇಕು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಸಚಿವ ರಮಾನಾಥ ರೈಮಂಗಳೂರು-ಬಂಟ್ವಾಳ ಹೊರತುಪಡಿಸಿದರೆ ರಾಜ್ಯದ ಬೇರೆ ಯಾವುದೇ ಜಿಲ್ಲೆಗಳಿಗೆ ಪ್ರವಾಸ ಮಾಡದಿದ್ದರೂ ಕಳೆದ 32 ತಿಂಗಳಿನಲ್ಲಿ 67.99 ಲಕ್ಷ ರೂ. ಪ್ರಯಾಣ ಭತ್ಯೆಯನ್ನು ಪಡೆದುಕೊಂಡಿದ್ದಾರೆ. ಜನಾರ್ದನ ಪೂಜಾರಿ ಅವರ ಆರೋಗ್ಯವನ್ನು ಕಾಂಗ್ರೆಸ್ ನಾಯಕರು ವಿಚಾರಿಸಲಿಲ್ಲ. ಆದರೆ ಬಿಜೆಪಿ ನಾಯಕರು ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಮಹಾರಾಷ್ಟ್ರದ
ಕೋರೆಂಗಾವ್‌ನಲ್ಲಿ ದಲಿತರು ಮತ್ತು ಮರಾಠರ ನಡುವೆ ಗಲಭೆ ಸೃಷ್ಟಿಸಿರುವ ಗುಜರಾತಿನ ನೂತನ ಶಾಸಕ ಜಿಗ್ನೇಶ್
ಮೆವಾನಿಯ ನೀತಿಯನ್ನು ಅವರು ಖಂಡಿಸಿದರು.
ದೇಶದಲ್ಲಿ ಬದಲಾವಣೆ: ರಾಜೇಶ್ ನಾೖಕ್
ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾೖಕ್ ಉಳಿಪಾಡಿಗುತ್ತು ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ
ಅವರಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಕ್ಷೇತ್ರದ ಪರಿವರ್ತನೆಗಾಗಿ ಈ ಪಾದಯಾತ್ರೆಯನ್ನು ನಡೆಸ
ಲಾಗುತ್ತಿದ್ದು, ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಮೂಢ
ನಂಬಿಕೆಯ ಹೆಸರಿನಲ್ಲಿ ಮೂಲ ನಂಬಿಕೆಗೆ ಹೊಡೆತ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ
ಎಂದು ಆರೋಪಿಸಿದರು.
ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್ ಮಾತನಾಡಿ, ಬಂಟ್ವಾಳ
ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಮುಂದಿನ ಚುನಾವಣೆಯಲ್ಲಿ ರಾಜೇಶ್ ನಾೖಕ್
ಉಳಿಪ್ಪಾಡಿಗುತ್ತು ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ್
ಬಂಟ್ವಾಳ, ಮೋನಪ್ಪ ದೇವಸ್ಯ, ಮಾಜಿ ತಾ.ಪಂ. ಸದಸ್ಯರಾದ ರತ್ನಕುಮಾರ್ ಚೌಟ, ವಸಂತ ಅಣ್ಣಳಿಕೆ, ಜಿಲ್ಲಾ
ಎಸ್‌ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್
ರಾಯಿಬೆಟ್ಟು, ಪ್ರಮುಖರಾದ ತುಂಗಮ್ಮ, ನಂದಕಿಶೋರ್, ರಾಜರಾಮ ನಾಯಕ್, ಪುರುಷೋತ್ತಮ ಶೆಟ್ಟಿ, ಹರೀಶ್
ಆಚಾರ್ಯ, ಗಣೇಶ್ ರೈ, ಸೀತಾರಾಮ ಪೂಜಾರಿ, ಪರಮೇಶ್ವರ ರಾಯಿ, ರಮಾನಾಥ ರಾಯಿ, ಪುಷ್ಪಲತಾ,
ರಶ್ಮಿತ್ ಕೈತ್ರೋಡಿ, ರೊನಾಲ್ಡ್ ಡಿ’ಸೋಜಾ, ಮಧುಕರ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಇತ್ತೀಚೆಗೆ
ನಿಧನ ಹೊಂದಿದ ರಾಯಿಕೊಯಿಲ ಅರಳ ಹಿಂದೂ ಧರ್ಮೋತ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಲ| ದೇವಪ್ಪ ಶೆಟ್ಟಿ
ಮಾವಂತೂರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅರಳ ಗ್ರಾ.ಪಂ. ಸದಸ್ಯ ಡೋಂಬಯ್ಯ ಅರಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಾಜೇಶ್ ನಾೖಕ್
ಅವರು ರಾಯಿಯಲ್ಲಿ ದಾಮೋದರ ಬಂಗೇರ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಿದರು.
ಹದಗೆಟ್ಟ ಕಾನೂನು ಸುವ್ಯವಸ್ಥೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಿಳೆಯರು ದಾರಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಯ, ಸತ್ಯ, ಧರ್ಮಮಾಯವಾಗಿದೆ. ಹಿಂದೂ ಯುವಕರ ಹತ್ಯೆ,
ವಿನಾಕಾರಣ ಪ್ರಕರಣ ದಾಖಲಿಸುವ ಮೂಲಕ ಸಿದ್ದರಾಮಯ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಎಲ್ಲ ಭಾಗ್ಯಗಳಿಗಿಂತ ಇಲ್ಲಿ ನೆಮ್ಮದಿಯ ಭಾಗ್ಯ ಬೇಕಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಹೇಳಿದರು.