ಯಕ್ಷಗಾನ,ಕರಕುಶಲ ಕಲೆ ಕರಗತ;ಫೋಟೋಗ್ರಫಿಗೂ ಸೈ ಎಂದ ವಿಶೇಷ ಮಕ್ಕಳು!
ಶುಕ್ರವಾರ ಕದ್ರಿಪಾರ್ಕ್‌ನಲ್ಲಿ ಔಟ್‌ಡೋರ್ ಶೂಟ್
Team Udayavani, Apr 30, 2019, 6:00 AM IST
ತರಬೇತಿಯಲ್ಲಿ ಪಾಲ್ಗೊಂಡ ವಿಶೇಷ ಸಾಮರ್ಥ್ಯದ ಮಕ್ಕಳು.
ವಿಶೇಷ ವರದಿ –ಮಹಾನಗರ: ಕರಕುಶಲ ವಸ್ತುಗಳ ತಯಾರಿಕೆಯಲ್ಲಷ್ಟೇ ತೊಡಗಿಸಿಕೊಂಡ ವಿಶೇಷ ಮಕ್ಕಳಿಗೆ ಛಾಯಾಚಿತ್ರಗ್ರಹಣ ತರಬೇತಿಯನ್ನು ನೀಡಿ ಅವರನ್ನು ಛಾಯಾಚಿತ್ರಗ್ರಾಹಕರನ್ನಾಗಿ ರೂಪಿ ಸಲು ನಗರದ ಸಂಸ್ಥೆಯೊಂದು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ವಿಶೇಷ ಮಕ್ಕಳಿಗೆ ವಿಶೇಷ ಛಾಯಾಚಿತ್ರ ಕಲಿಕೆ ತರಬೇತಿ ಆರಂಭಿಸಿದೆ.
ಕಂಕನಾಡಿ ಸುಲ್ತಾನ್‌ಗೊàಲ್ಡ್ ಹಿಂಭಾಗದಲ್ಲಿರುವ ಅನಿರ್ವೇದ-ರಿಸೋರ್ಸ್ ಸೆಂಟರ್ ಫಾರ್ ಸೈಕಾಲಾಜಿಕಲ್ ವೆಲ್‌ಬಿàಯಿಂಗ್ ಎಂಬ ಸಂಸ್ಥೆಯೇ ವಿಶೇಷ ಮಕ್ಕಳಿಗೆ ವಿಶೇಷ ಫೋಟೋಗ್ರಫಿ ತರಬೇತಿ ನೀಡುತ್ತಿರುವ ಸಂಸ್ಥೆಯಾಗಿದೆ. ಮಾನಸಿಕ ಸಮಸ್ಯೆ ಎದುರಿಸುವವರಿಗೆ, ವಿಶೇಷ ಮಕ್ಕಳಿಗೆ ಚಿಕಿತ್ಸೆ ನೀಡುವ ಈ ಸಂಸ್ಥೆಯಲ್ಲಿ ಫೋಟೋಗ್ರಫಿ ಮೂಲಕ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನ ನಡೆಯುತ್ತಿದೆ. ಬಹುಶಃ ವಿಶೇಷ ಮಕ್ಕಳಿಗೆ ಫೋಟೋಗ್ರಫಿ ತರಬೇತಿ ನೀಡುವ ಸಂಸ್ಥೆ ನಮಗೆ ತಿಳಿದಂತೆ ಭಾರತದಲ್ಲಿ ಬೇರೆಡೆ ಇಲ್ಲ ಎನ್ನುತ್ತಾರೆ ತರಬೇತುದಾರರು.
ವಿಶೇಷ ಮಕ್ಕಳಲ್ಲಿ ಗ್ರಹಿಕಾ ಸಾಮರ್ಥ್ಯ ತುಂಬಾ ಇದೆ. ಅಲ್ಲದೆ, ಕಲಿಕಾಸಕ್ತಿಯೂ ಇದೆ. ಛಾಯಾಚಿತ್ರಗ್ರಹಣದ ಸೃಜನಾತ್ಮಕ ಕಲೆಯನ್ನಷ್ಟೇ ಅವರಿಗೆ ಕಲಿಸಲಾಗುತ್ತದೆ. ತಾಂತ್ರಿಕತೆಯ ಬಗ್ಗೆ ಹೇಳಿಕೊಡಲಾಗುವುದಿಲ್ಲ. ಪ್ರಾಯೋಗಿಕವಾಗಿ ಈ ತರಬೇತಿಯನ್ನು ಆರಂಭಿಸಲಾಗಿದ್ದು, ಇದರ ಫಲಿತಾಂಶ ನೋಡಿಕೊಂಡು ಮುಂದೆ ಇನ್ನಷ್ಟು ಮಕ್ಕಳಿಗೆ ಕಲಿಸುವ ಇರಾದೆ ಸಂಸ್ಥೆಯದ್ದು ಎನ್ನುತ್ತಾರೆ ತರಬೇತುದಾರರಲ್ಲೋರ್ವರಾದ ಶ್ರೀನಿವಾಸ ಪೆಜತ್ತಾಯ.
ಫೋಟೋಗ್ರಫಿಗೆ ಶಕ್ತರು
ಬೆಂಗಳೂರು ಸಹಿತ ಕೆಲವು ಮೆಟ್ರೋ ಸಿಟಿಗಳಲ್ಲಿ ವೀಲ್‌ಚೇರ್ ಫೋಟೋಗ್ರಾಫರ್ ಅಸೋಸಿಯೇಶನ್ ಎಂಬ ಸಂಘಟನೆಗಳಿವೆ. ಅಶಕ್ತರು ಛಾಯಾಚಿತ್ರಗ್ರಹಣ ಮಾಡುವಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೀಗಿರುವಾಗ, ವಿಶೇಷ ಸಾಮರ್ಥ್ಯದ ಮಕ್ಕಳಿಗೂ ಇದು ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಈ ಹೆಜ್ಜೆಯನ್ನು ಇಡಲಾಗಿದೆ.
ಐಕ್ಯೂ ಪ್ರಮಾಣ 70ಕ್ಕಿಂತ ಕಡಿಮೆ
ಐಕ್ಯೂ ಸಾಮರ್ಥ್ಯ 70ಕ್ಕಿಂತ ಕಡಿಮೆ ಇರುವ ಎಲ್ಲ ಮಕ್ಕಳೂ ವಿಶೇಷ ಸಾಮರ್ಥ್ಯದಡಿಗೆ ಬರುತ್ತಾರೆ. ಆದರೆ, ಇವರಲ್ಲಿ “ವಿಶೇಷ ಸಾಮರ್ಥ್ಯ’ವೂ ಇದೆ. ಅದನ್ನು ಒರೆಗೆ ಹಚ್ಚಲು ತರಬೇತಿ ಅಗತ್ಯ. ಮೊದಲ ಹಂತದಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಎಂಟು ಮಕ್ಕಳಲ್ಲಿ ಆರು ಮಂದಿ ಕಡಿಮೆ ಐಕ್ಯೂ ಹೊಂದಿರುವವರು, ಮತ್ತಿಬ್ಬರು ಕಲಿಕಾ ನ್ಯೂನತೆ ಇರುವವರಾಗಿದ್ದಾರೆ. ಅವರ ಕಲಿಕಾಸಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಗಮನಿಸಿಕೊಂಡು ಆಯ್ದ ಮಕ್ಕಳಿಗೆ ತರಬೇತಿ ನಡೆಯುತ್ತಿದೆ.
ಕದ್ರಿ ಪಾರ್ಕ್‌ನಲ್ಲಿ ಔಟ್‌ಡೋರ್ ಶೂಟ್
ಒಂದು ವಾರದ ತರಬೇತಿ ಇದಾಗಿದ್ದು, ಶುಕ್ರವಾರ ಔಟ್‌ಡೋರ್ ಫೋಟೋಗ್ರಫಿಗೆ ನಗರದ ಕದ್ರಿ ಪಾರ್ಕ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರು ತೆಗೆದ ಛಾಯಾಚಿತ್ರಗಳನ್ನು ಶನಿವಾರ ಅನಿರ್ವೇದದಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ.
ಅನಿಮಲ್ ಅಸಿಸ್ಟೆಡ್ ಥೆರಪಿ
ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಪ್ರಾಣಿಗಳ ಸಹಾಯದಿಂದ ವಿಶಿಷ್ಟ ಚಿಕಿತ್ಸೆ ನೀಡುವ ಎನಿಮಲ್ ಅಸಿಸ್ಟೆಡ್ ಥೆರಪಿಯನ್ನೂ ಆರಂಭಿಸಲು ಈ ಸಂಸ್ಥೆ ಮುಂದಾಗಿದೆ. ಕುದುರೆ, ನಾಯಿ, ಬೆಕ್ಕುಗಳೊಂದಿಗೆ ಮಕ್ಕಳನ್ನು ಆಟವಾಡಲು ಬಿಡುವ ಮೂಲಕ ಪ್ರಾಣಿಗಳ ಒಡನಾಟ, ಆ ಮೂಲಕ ಭಾವನಾತ್ಮಕ ಸಂಬಂಧಗಳ ವೃದ್ಧಿಗೆ ಸಹಕರಿಸುವುದು ಇದರ ಉದ್ದೇಶ. ಕೆಲವು ಮಕ್ಕಳು ಅತಿಯಾದ ವರ್ತನೆ ಹೊಂದಿರುತ್ತಾರೆ. ಪ್ರಾಣಿಗಳ ಒಡನಾಟದಿಂದ ಅವರಲ್ಲಿ ಬದಲಾವಣೆ ಸಾಧ್ಯ. ಬೆಂಗಳೂರು, ಮಹಾರಾಷ್ಟ್ರಗಳಲ್ಲಿ ಈ ಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿದೆ. ಅದಕ್ಕಾಗಿ ಮಂಗಳೂರಿನಲ್ಲಿಯೂ ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಈಗಾಗಲೇ ಕಾರ್ಯಾಗಾರವನ್ನೂ ನಡೆಸಲಾಗಿದೆ.
ಫೋಟೋಗ್ರಫಿ ಬದುಕಿಗೆ ನೆರವು
ವಿಶೇಷ ಸಾಮರ್ಥ್ಯದ ಮಕ್ಕಳು ಈಗಾಗಲೇ ತರಬೇತಿ ಪಡೆದುಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಮುಖವರ್ಣಿಕೆ, ಹೂಕುಂಡಗಳ ಅಲಂಕಾರ, ವಿವಿಧ ಕಲಾಕೃತಿಗಳನ್ನು ತಯಾರಿಸುವಲ್ಲಿ ನಿಪುಣರಾಗಿದ್ದಾರೆ. ಯಕ್ಷಗಾನ ಪ್ರದರ್ಶನವನ್ನೂ ನೀಡಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ, ಅಂತಹ ಮಕ್ಕಳನ್ನು ಕೇವಲ ಕರಕುಶಲ ವಸ್ತು ತಯಾರಿಕೆಗಷ್ಟೇ ಸೀಮಿತಗೊಳಿಸದೆ, ಫೋಟೋಗ್ರಫಿ ಕ್ಷೇತ್ರವನ್ನೂ ಅವರಿಗೆ ಪರಿಚಯಿಸಿಕೊಡಬೇಕು. ಇದರಿಂದ ಅವರ ಉದ್ಯೋಗಕ್ಕೂ ನೆರವಾಗಬಹುದು ಎಂಬ ನಿಟ್ಟಿ ನಲ್ಲಿ ಫೋಟೋಗ್ರಫಿ ತರಬೇತಿ ನೀಡಲಾಗುತ್ತಿದೆ ಎಂದು ಅನಿರ್ವೇದ ಸಂಸ್ಥೆಯ ಸ್ಥಾಪಕಿ ಕೆ.ಟಿ. ಶ್ವೇತಾ ಹೇಳುತ್ತಾರೆ.
ವಿಶೇಷ ಪ್ರತಿಭೆ
ಚೇತನಾ ವಿಶೇಷ ಶಾಲೆಯ ಮಕ್ಕಳು ಈ ಹಿಂದೆ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದರು. ಕೋಟೆಕಣಿಯೆ ರೋಮನ್ ಮತ್ತು ಕ್ಯಾಥರಿನ್ ಲೋಬೋ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದ ರವಿ ಅಲೆವೂರಾಯ ಅವರ ನೇತೃತ್ವದಲ್ಲಿ ಹಲವಾರು ಬಾರಿ ವಿವಿಧೆಡೆ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಶಕ್ತಿನಗರ “ಸಾನ್ನಿಧ್ಯ’ ವಿಶೇಷ ಸಾಮರ್ಥ್ಯದ ವಸತಿ ಶಾಲೆಯ ಮಕ್ಕಳು ಯಕ್ಷಗಾನ ಮುಖವರ್ಣಿಕೆ, ವೈವಿಧ್ಯ ಕಲಾಕೃತಿಗಳನ್ನು ರಚಿಸಿ ಮಾರಾಟ ಮಾಡುವ ಮೂಲಕ ತಮ್ಮ ಜೀವನಕ್ಕೆ ತಾವೇ ನೆರವಾಗುತ್ತಿದ್ದಾರೆ. ಹೀಗೆ ವಿಶೇಷ ಸಾಮರ್ಥ್ಯದ ಮಕ್ಕಳು ವಿಶೇಷ ಪ್ರತಿಭೆ ಹೊಂದಿದ್ದಾರೆ. ಹೀಗಿರುವಾಗ ಫೋಟೋಗ್ರಫಿಯೂ ಅವರ ನೆಚ್ಚಿನ ಹವ್ಯಾಸವಾಗಬಹುದು ಎಂಬ ಉದ್ದೇಶ ಅನಿರ್ವೇದ ಸಂಸ್ಥೆಯದ್ದು.
ಫೋಟೋಗ್ರಫಿಗೆ ಖಂಡಿತಾ ಶಕ್ತರು
ವಿಶೇಷ ಮಕ್ಕಳಲ್ಲಿ ವಿಶೇಷ ಸಾಮರ್ಥ್ಯವಿದೆ. ಫೋಟೋಗ್ರಫಿ ಮಾಡಲು ಅವರು ಖಂಡಿತಾ ಶಕ್ತರಾಗಿದ್ದಾರೆ. ಅಲ್ಪಸ್ವಲ್ಪ ಫೋಟೋಗ್ರಫಿ ತಿಳಿದ ಸಾಮಾನ್ಯ ಜನರಿಗೆ ತರಬೇತಿ ನೀಡುವುದು ಕಷ್ಟ. ಆದರೆ, ವಿಶೇಷ ಮಕ್ಕಳಿಗೆ ತರಬೇತಿ ಸುಲಭವಾಗುತ್ತದೆ. ಅವರಲ್ಲಿ ಗ್ರಹಿಕಾ ಸಾಮರ್ಥ್ಯ ಮತ್ತು ಆಸಕ್ತಿತಯನ್ನು ಮೊದಲ ತರಗತಿಯಲ್ಲೇ ಗಮನಿಸಿದ್ದೇನೆ. ಹೇಳಿಕೊಟ್ಟದನ್ನು ಮರೆಯದೆ, ಪ್ರಸ್ತುತಪಡಿಸುತ್ತಾರೆ.
– ಡಾ| ಕೃಷ್ಣ ಮೋಹನ್ ಮೂಡುಬಿದಿರೆ
ತರಬೇತಿ ನೀಡುತ್ತಿರುವ ಛಾಯಾ ಗ್ರಾಹಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.