ಫೆ. 23-25: ಪಡುಮಲೆ ದೈವಸ್ಥಾನ ಬ್ರಹ್ಮಕಲಶ, ಸರ್ವ ಸಿದ್ಧತೆ
Team Udayavani, Feb 7, 2018, 12:25 PM IST
ಬಡಗನ್ನೂರು: ಮಾನವತ್ವದಿಂದ ದೈವತ್ವಕ್ಕೆ ಏರಿದ ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ – ಚೆನ್ನಯರ ಜನ್ಮಭೂಮಿ, ಶ್ರೀ ಮಹಾವಿಷ್ಣು ಕೂರ್ಮಾವ ತಾರವನ್ನು ತಳೆದ ನಾಡು,’ಆದಿ ಪರ್ಮಲೆ, ಅಂತ್ಯ ಪುತ್ತಿಗೆ’ ಎಂಬ ನುಡಿಗಟ್ಟುಳ್ಳ ಉಳ್ಳಾಕುಲು ಎಂಬುದಾಗಿ ಕರೆಸಿಕೊಳ್ಳುವ ಪೂಮಾಣಿ – ಕಿನ್ನಿಮಾಣಿಗಳು ಬಂದಿಳಿದ ಕ್ಷೇತ್ರ ಪಡುಮಲೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ.
ದೈವಸ್ಥಾನ ನಿರ್ಮಾಣ
ಇಲ್ಲಿನ ಪ್ರಧಾನ ದೈವ ವ್ಯಾಘ್ರ ಚಾಮುಂಡಿ (ಹುಲಿಭೂತ) ಹಾಗೂ ಪೂಮಾಣಿ- ಕಿನ್ನಿಮಾಣಿ (ಉಳ್ಳಾಕುಲು) ದೈವಗಳಿಗೆ ದೈವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಈ ದೈವಸ್ಥಾನಗಳು ನಿರ್ಮಾಣವಾಗದೆ ಪಡುಮಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ ಎಂಬ ಮಾತೂ ಇದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ಫೆ. 23 ಹಾಗೂ 25ರಂದು ನಡೆಯಲಿದೆ.
ಪೂಮಾಣಿ -ಕಿನ್ನಿಮಾಣಿ ಕಥೆ
ತುಳುನಾಡಿನಲ್ಲಿ ಜನರು ಧರ್ಮಮಾರ್ಗವನ್ನು ಮರೆತು ಅಧರ್ಮದಲ್ಲಿ ನಡೆಯ ತೊಡಗಿದಾಗ ಮಹಾವಿಷ್ಣುವು ದೈವಾರಾಧನೆ ಹೊಸ ಪದ್ಧತಿಯ ಮೂಲಕ ಜನರು ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡಲು ಅವತರಿಸುವ ಸಂಕಲ್ಪವನ್ನು ತಾಳಿ ತಲಕಾವೇರಿ ಕ್ಷೇತ್ರದಲ್ಲಿ ಕಮಲದ ಹೂವಿನ ಎಸಳಿನಲ್ಲಿ ಮೂವರು ತೇಜಪೂರ್ಣರಾದ ಶಿಶುಗಳ ರೂಪದಲ್ಲಿ ಮೈದಳೆಯುತ್ತಾರೆ. ಆ ಶಿಶುಗಳನ್ನು ಅರ್ಚಕರೊಬ್ಬರು ಲಾಲನೆ, ಪೋಷಣೆ ಮಾಡುತ್ತಾರೆ. ಕಮಲದ ಹೂವಿನಲ್ಲಿ ಉದ್ಭವವಾದ ಮಕ್ಕಳಾಗಿರುವುದರಿಂದ ಆ ಮಕ್ಕಳಲ್ಲಿ ಹಿರಿಯವನಿಗೆ ಪೂಮಾಣಿ, ಕಿರಿಯವನಿಗೆ ಕಿನ್ನಿಮಾಣಿ ಹಾಗೂ ಹೆಣ್ಣು ಮಗುವಿಗೆ ಅದು ದೇವಿ ಸ್ವರೂಪವೆಂದು ತಿಳಿದು ದೆಯ್ನಾರೆ ಎಂದು ಹೆಸರಿಡುತ್ತಾರೆ.
ತುಳುನಾಡಿನಲ್ಲಿ ಧರ್ಮ ಜಾಗೃತಿಯನ್ನು ಸ್ಥಾಪಿಸಲು ಬೆಳ್ಳಿ ಕುದುರೆಯನ್ನೇರಿ ಹೊರಟ ಪೂಮಾಣಿ-ಕಿನ್ನಿಮಾಣಿಯರು ಪರ್ಮಲೆಗೆ ಆಗಮಿಸಿದ ವೇಳೆ ಇಲ್ಲಿ ಕಿರಿಯ ಬಲ್ಲಾಳನಿಗೆ ಅಧಿಕಾರ ದೊರೆಯುತ್ತದೆ. ನೆರೆಯ ಪುತ್ತೂರಿನ ಅರಸನು ಗಡಿ ವಿಷಯದಲ್ಲಿ ಪರ್ಮಲೆಯ ಬಲ್ಲಾಳನನ್ನು ಸೆರೆಹಿಡಿದು ಬಂಧನದಲ್ಲಿಡುತ್ತಾನೆ. ಕ್ಷೇತ್ರಕ್ಕೆ ಬಂದವರಲ್ಲಿ ರಾಜಮಾತೆ ದುಃಖವನ್ನು ಹೇಳಿಕೊಳ್ಳುತ್ತಾಳೆ. ಆಗ ದೈವಗಳು ಪರ್ಮಲೆಯಲ್ಲಿ ಮಾಡ ಕಟ್ಟಿ ಆರಾಧನೆ ಮಾಡುವುದಾದರೆ ನಿನ್ನ ಮಗನನ್ನು ಬಿಡಿಸಿಕೊಂಡು ಬರುತ್ತೇವೆ ಎಂದು ಮಾತು ಕೊಡುತ್ತಾರೆ. ರಾಜಮಾತೆಯು ಮಾಡ ಕಟ್ಟಿ ಹಲಸಿನ ಮರದ ಪಾಪೆ ಬಂಡಿಯನ್ನು ನಿರ್ಮಿಸುವುದಾಗಿ ಹರಕೆ ಹೇಳಿಕೊಳ್ಳುತ್ತಾಳೆ. ದೈವಗಳು ಮಾಯವಾಗಿ, ಸೆರೆಮನೆಯಲ್ಲಿದ್ದ ಬಲ್ಲಾಳರ ಕೊಠಡಿಯ ಬಾಗಿಲುಗಳು ತನ್ನಿಂದ ತಾನೆ ತೆರೆದುಕೊಳ್ಳುತ್ತವೆ.
ಅನಂತರದಲ್ಲಿ ಇಡೀ ತುಳುನಾಡಿನಲ್ಲಿ ಆ ಕಾಲಕ್ಕೆ ಹೊಸತಾದ ಭೂತಾರಾಧನೆ ಸಂಪ್ರದಾಯಕ್ಕೆ ಬಲ್ಲಾಳರು ನಾಂದಿ ಹಾಡುತ್ತಾರೆ. ಪಾಡ್ಡನಗಳಲ್ಲಿ ಬರುವಂತೆ ಅರಸು ದೈವಗಳಾದ ಉಳ್ಳಾಕುಲುಗಳ ಆದಿ ಮಾಡ ಪರ್ಮಲೆ ( ಪಡುಮಲೆ) ಆಗಿದ್ದರೆ, ಅಂತ್ಯ ಮಾಡ ಕುಂಬ್ಳೆ ಸಮೀಪ ಪತ್ತೆಯಾಗಿದೆ. ನಡು ಆರ್ಲಪದವು ಪಾಡಿಕೋಡಿ ಕದಿಕೆ ಚಾವಡಿ, ಮಧ್ಯದಲ್ಲಿ ಸಿಗುವಂಥದ್ದು ಕುಕ್ಕುಮುಗೇರು ರಾಜನ್ ಮಾಡ ಎನ್ನುವ ನಂಬಿಕೆಯಿದೆ.
ಅಭಿವೃದ್ಧಿ ಕಾರ್ಯ
7 ವರ್ಷಗಳಿಂದ ಅಭಿ ವೃದ್ಧಿ ದೃಷ್ಟಿಯಿಂದ ದೈವಗಳನ್ನು ಬಾಲಾಲಯದಲ್ಲಿರಿಸಿ, ವರ್ಷಾವಧಿ ಉತ್ಸವಗಳನ್ನು ಕ್ಷೇತ್ರದಲ್ಲಿ ನಿಲ್ಲಿಸಲಾಗಿದೆ. ದೈವಜ್ಞರ ಮೂಲಕ ಪ್ರಶ್ನಾಚಿಂತನೆ ನಡೆಸಿದಾಗ ಶೀಘ್ರವಾಗಿ ದೈವಗಳ ಮೂಲಾಲಯ ನಿರ್ಮಿಸಿ ಉತ್ಸವಗಳನ್ನು ನಡೆಸಿದರೆ ಮಾತ್ರ ಭಕ್ತರಿಗೆ ಕ್ಷೇಮವಾಗಬಹುದೆಂದು ಗೋಚರವಾಗಿರುವ ಹಿನ್ನೆಲೆಯಲ್ಲಿ ದೈವಸ್ಥಾನ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ಪೂಮಾಣಿ -ಕಿನ್ನಿಮಾಣಿ ದೈವಸ್ಥಾನದ ನೂತನ ಗರ್ಭಗುಡಿ, ವ್ಯಾಘ್ರ ಚಾಮುಂಡಿ (ಪಿಲಿಭೂತ ರಾಜನ್ ದೈವ) ದೈವಕ್ಕೆ
ಪ್ರತ್ಯೇಕ ಗರ್ಭಗುಡಿ ನಿರ್ಮಾಣವಾಗುತ್ತಿದೆ. ದೈವಗಳ ವಾಹನ ಮರದ ಹುಲಿ ಮತ್ತು ಕುದುರೆಯನ್ನು, ಬಂಡಿ ನಿಲ್ಲಿಸುವ ಕಟ್ಟಡ, ಸ್ನಾನಗೃಹ, ಶೌಚಾಲಯ, ಆವರಣ ರಚನೆ ಕಾಮಗಾರಿಗಳು 2 ಕೋಟಿ ರೂ. ವೆಚ್ಚದಲ್ಲಿ ಭರದಿಂದ ನಡೆಯುತ್ತಿದ್ದು, ಬ್ರಹ್ಮ ಕಲಶಕ್ಕೆ ಸಿದ್ಧತೆ ಆಗುತ್ತಿದೆ.
ಅನುದಾನಕ್ಕೆ ಬೇಡಿಕೆ
ಪಡುಮಲೆಯ ಐತಿಹಾಸಿಕ ಪೂಮಾಣಿ -ಕಿನ್ನಿಮಾಣಿ, ವ್ಯಾಘ್ರಚಾಮುಂಡಿ ದೈವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಊರವರ, ಗಣ್ಯರ ಸಹಕಾರದಿಂದ ನಡೆಸಲಾಗುತ್ತಿದೆ. 2 ಕೋಟಿ ರೂ. ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣಗೊಂಡು ಫೆ. 24, 25ರಂದು ಬ್ರಹ್ಮಕಲಶೋತ್ಸವ ಬಳಿಕದಲ್ಲಿ ನೇಮ ನಡೆಯಲಿದೆ. ಸರಕಾರದಿಂದಲೂ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಶೀಘ್ರದಲ್ಲಿ ಸಿಗುವ ನಿರೀಕ್ಷೆಯಿದೆ.
– ರವಿರಾಜ್ ಶೆಟ್ಟಿ ಅಣಿಲೆ
ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ
ಶ್ರಮದಾನ
ದೈವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಊರ, ಪರವೂರ ಭಕ್ತರು ಶ್ರಮದಾನ ನಡೆಸುತ್ತಿದ್ದಾರೆ. ವ್ಯಾಘ್ರ ಚಾಮುಂಡಿ
ದೈವಸ್ಥಾನದ ಪಕ್ಕ ತೀರ್ಥ ಬಾವಿಯನ್ನು ನಿರ್ಮಾಣ ಮಾಡಿದ್ದಾರೆ. ವ್ಯಾಘ್ರ ಚಾಮುಂಡಿ ದೈವಸ್ಥಾನ ನಿರ್ಮಿಸಲು
ಬೆಳ್ಳಿಪ್ಪಾಡಿ ದಯಾ ವಿ. ರೈ ಮತ್ತು ಕುಟುಂಬದವರು ಸ್ಥಳದಾನ ಮಾಡಿದ್ದಾರೆ. ಪಡುಮಲೆ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ 20 ಲಕ್ಷ ರೂ. ಇಟ್ಟಿದ್ದರೂ ಇದುವರೆಗೆ ಲಭಿಸಿಲ್ಲ. ದೈವಸ್ಥಾನದ ಎದುರು ಐತಿಹಾಸಿಕ 12 ಮುಡಿ ಗದ್ದೆ ಇರುವುದು ವಿಶೇಷ.
ದಿನೇಶ್ ಬಡಗನ್ನೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.