ಪಾದೂರು ಯೋಜನೆ ಅನ್ಯರಾಜ್ಯದ ಪಾಲು? ಭೂಸ್ವಾಧೀನ ವಿಳಂಬ
ಕುಂಟುತ್ತಿರುವ ಭೂಗತ ಕಚ್ಚಾತೈಲ ಸಂಗ್ರಹಾಗಾರ ವಿಸ್ತರಣೆ
Team Udayavani, Jun 4, 2022, 7:15 AM IST
ಮಂಗಳೂರು: ದೇಶದಲ್ಲೇ ಅತೀ ದೊಡ್ಡದಾದ ಪಾದೂರು ಭೂಗತ ತೈಲ ಸಂಗ್ರಹಾಗಾರ ವಿಸ್ತರಣೆ ಯೋಜನೆ ಭೂಸ್ವಾಧೀನ ಸಮಸ್ಯೆ ಯಿಂದಾಗಿ ವಿಳಂಬ ಗೊಳ್ಳುತ್ತಿದೆ. ಇದು ಇನ್ನಷ್ಟು ಕುಂಟುತ್ತ ಸಾಗಿದರೆ ಯೋಜನೆ ಕರಾವಳಿಯ ಕೈತಪ್ಪುವ ಸಾಧ್ಯತೆ ಇದೆ.
ದೇಶದ ವಿವಿಧೆಡೆ ಇಂತಹ ತೈಲ ಸಂಗ್ರಹಾಗಾರ ನಿರ್ಮಿಸುವ ಹೊಣೆ ಯನ್ನು ಭಾರತೀಯ ವ್ಯೂಹಾ ತ್ಮಕ ಪೆಟ್ರೋಲಿಯಂ ಮೀಸಲು ಕಂಪೆನಿ (ಐಎಸ್‌ಪಿಆರ್‌ಎಲ್) ಹೊತ್ತು ಕೊಂಡಿದೆ. ಇದು ದೇಶದ ಮೂರು ಕಡೆ ಭೂಗತ ಸಂಗ್ರಹಾ ಗಾರಗಳನ್ನು ನಿರ್ಮಿಸಿದೆ. ಈಗಾಗಲೇ ಪಾದೂರಿನಲ್ಲಿ 25 ಲಕ್ಷ ಟನ್ ಮತ್ತು ಮಂಗಳೂರಿನ ಪೆರ್ಮುದೆ ಯಲ್ಲಿ 15 ಲಕ್ಷ ಟನ್ ಸಾಮರ್ಥ್ಯದ ಸಂಗ್ರಹಾಗಾರಗಳನ್ನು ನಿರ್ಮಿಸ ಲಾಗಿದೆ. ಇವುಗಳಲ್ಲಿ ಕ್ರಮವಾಗಿ 4 ಮತ್ತು 2 ಭೂಗತ ಸುರಂಗಗಳಿದ್ದು, ಕಚ್ಚಾ ತೈಲ ಸಂಗ್ರಹಿಸಲಾಗಿದೆ. ಇಂತಹ ಇನ್ನೊಂದು ಸಂಗ್ರಹಾಗಾರ ಇರುವುದು ವಿಶಾಖಪಟ್ಟಣದಲ್ಲಿ.ದೇಶದಲ್ಲಿ ಮೊದಲ ಹಂತದ ಯೋಜನೆಯಲ್ಲಿ ಇವು ಮೂರು ನಿರ್ಮಾಣಗೊಂಡಿವೆ.
2ನೇ ಹಂತದಲ್ಲಿ ಒಡಿಶಾದ ಚಂಡಿಕೋಲ್‌ನಲ್ಲಿ 40 ಲಕ್ಷ ಟನ್ ಸಾಮರ್ಥ್ಯದ ಸಂಗ್ರಹಾಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಪಾದೂರಿನಲ್ಲಿ ಮತ್ತೆ 25 ಲಕ್ಷ ಟನ್ ಸಾಮರ್ಥ್ಯದ ಭೂಗತ ಸುರಂಗಗಳನ್ನು ನಿರ್ಮಿಸುವ ಯೋಜನೆ ಇದೆ.
ನಡೆಯದ ಭೂಸ್ವಾಧೀನ
ಪಾದೂರಿನಲ್ಲಿ 210 ಎಕ್ರೆ ಹೆಚ್ಚುವರಿ ಭೂಸ್ವಾಧೀನ ನಡೆಯಬೇಕಿದ್ದು, ಅದನ್ನು ಮಂಗಳೂರಿನ ಕೆಐಎಡಿಬಿ ಅಧಿಕಾರಿಗಳು ಮಾಡಬೇಕಿದೆ. ಈಗಾಗಲೇ ಪ್ರಾಥಮಿಕ ಸರ್ವೇ ನಡೆಸಿದ್ದು, 227 ಭೂಮಾಲಕರಿಗೆ ನೋಟಿಸ್ ನೀಡಲಾಗಿದೆ.
ಭೂಮಾಲಕರು ಸ್ಥಳೀಯ ಮಾರುಕಟ್ಟೆ ದರಕ್ಕಿಂತ ಹಲವು ಪಟ್ಟು ಹೆಚ್ಚು ದರ ಕೇಳುತ್ತಿರುವುದು ತಲೆನೋವಾಗಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.
ಯೋಜನೆ ಸ್ಥಳಾಂತರ?
ಇತ್ತೀಚೆಗೆ ಮಂಗಳೂರಿಗೆ ಐಎಸ್‌ಪಿಆರ್‌ಎಲ್‌ನ ಸಿಇಒ ಎಚ್. ಪಿ. ಎಸ್. ಅಹುಜಾ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದ್ದು, ಒಂದು ವೇಳೆ ಪಾದೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ವೇಗ ಪಡೆಯದಿದ್ದರೆ ಯೋಜನೆಯನ್ನು ಒಡಿಶಾ ಅಥವಾ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಬೇಕಾಗುತ್ತದೆ ಎಂದಿದ್ದಾರೆ.
ಪ್ರಸ್ತುತ ಪಾದೂರು ಗ್ರಾಮದ 201 ಮತ್ತು ಕಳತ್ತೂರು ಗ್ರಾಮದ 9 ಎಕ್ರೆ ಸಹಿತ 210 ಎಕ್ರೆ ಭೂಮಿಯನ್ನು ಯೋಜನೆಗೆ ಗುರುತಿಸಲಾಗಿದೆ. 25 ಲಕ್ಷ ಟನ್ ಸಾಮರ್ಥ್ಯದ ಸುರಂಗಗಳು ಕಚ್ಚಾತೈಲದಿಂದ ಭರ್ತಿಯಾದರೆ ಅದು ದೇಶಕ್ಕೆ ತುರ್ತು ಸಂದರ್ಭಗಳಲ್ಲಿ 9 ದಿನಗಳ ಕಾಲ ಬಳಸಲು ಸಾಕಾಗುತ್ತದೆ.
ಪಾದೂರಿನಲ್ಲಿ ಎರಡನೇ ಹಂತದ ಯೋಜನೆಗೆ ಭೂಸ್ವಾಧೀನ ವಿಳಂಬವಾದರೆ ವಿಶಾಖಪಟ್ಟಣ ಅಥವಾ ಒಡಿಶಾಕ್ಕೆ ಸ್ಥಳಾಂತರ ಗೊಳ್ಳುವ ಸಾಧ್ಯತೆ ಇದೆ. ಭೂಮಾಲಕರಿಗೆ ಗರಿಷ್ಠ ಮಿತಿಯಲ್ಲಿ ಪರಿಹಾರ ನಿಗದಿಪಡಿಸಲಾಗಿದೆ. ಹಾಗಾಗಿ ಅವರು ಭೂಮಿ ನೀಡುವ ನಿರೀಕ್ಷೆ ಇದೆ.
- ಬಿನೋಯ್, ವಿಶೇಷ ಭೂಸ್ವಾಧೀನ ಅಧಿಕಾರಿ, ಕೆಐಎಡಿಬಿ, ಮಂಗಳೂರು
- ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.