ಪಾಣೆಮಂಗಳೂರು: ಆಗಬೇಕಾದ ಮೂಲ ಸೌಕರ್ಯಗಳ ಪಟ್ಟಿ ದೊಡ್ಡದು
Team Udayavani, Aug 8, 2018, 11:09 AM IST
ಬಂಟ್ವಾಳ : ಪಾಣೆಮಂಗಳೂರು ಜಂಕ್ಷನ್ ನಲ್ಲಿ ತುರ್ತಾಗಿ ಆಗಬೇಕಿರುವುದು ವೃತ್ತ ನಿರ್ಮಾಣ. ಹೌದು, ಪಾಣೆಮಂಗಳೂರು ಜಂಕ್ಷನ್‌ಗೆ ಬಂದು ಇಲ್ಲಿನ ವಾಹನ ಸಂಚಾರವನ್ನು ಗಮನಿಸಿದಾಗ ಕಾಣುವ ಮೊದಲ ಬೇಡಿಕೆ ವೃತ್ತ ನಿರ್ಮಾಣ. ಯಾಕೆಂದರೆ, ಇಲ್ಲಿನ ಶ್ರೀ ಸತ್ಯದೇವತಾ ಗುಡಿ ಎದುರು ರಾಷ್ಟ್ರೀಯ ಹೆದ್ದಾರಿಗೆ ಸೇರಿಕೊಳ್ಳುವಂತೆ ನರಿಕೊಂಬು, ಬಿ.ಸಿ. ರೋಡ್, ಪಾಣೆಮಂಗಳೂರು ಪೇಟೆ, ಮೆಲ್ಕಾರ್, ಜೈನರಪೇಟೆ-ಹೀಗೆ ಐದು ಕಡೆಗಳಿಂದ ಕೂಡು ರಸ್ತೆ ಸಂಪರ್ಕ ಈ ಜಂಕ್ಷನ್‌ಗಿದೆ. ಜತೆಗೆ ಬಿ.ಸಿ. ರೋಡ್-ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇಲ್ಲಿ ಎರಡು ಬಸ್‌ಗಳು ಅಥವಾ ಯಾವುದೇ ಘನವಾಹನ ಎದುರು ಬದುರಾದರೆ ಕೆಲವು ನಿಮಿಷ ಸಂಚಾರ ಸ್ಥಗಿತ ಖಚಿತ. ಅದಕ್ಕಾಗಿಯೇ ಜಂಕ್ಷನ್‌ಗೆ ಒಂದು ವೃತ್ತ ನಿರ್ಮಾಣವಾಗಬೇಕಿದೆ. ಉಳಿದಂತೆ ಪಾಣೆಮಂಗಳೂರು ಪೇಟೆಗೆ ಪರ್ಯಾಯವಾಗಿ ಬೈಪಾಸ್ ರಸ್ತೆಯಾಗಿದೆ.
ಸಂಪರ್ಕದ ಗ್ರಾಮಗಳು
ನರಿಕೊಂಬು, ಶಂಭೂರು, ಬಾಳ್ತಿಲ, ಪಾಣೆಮಂಗಳೂರು ನಗರ ವ್ಯಾಪ್ತಿಯ ಜನರು ಇದೇ ಜಂಕ್ಷನ್ ಮೂಲಕ ಸಂಚರಿಸುತ್ತಾರೆ. ಈ ಜಂಕ್ಷನ್ ರಾ.ಹೆ.ಯಲ್ಲಿ ಇರುವುದರಿಂದ ವಾಹನ ದಟ್ಟಣೆ ಹೆಚ್ಚು. ದಿನಕ್ಕೆ ಕನಿಷ್ಠ ಎಂದರೂ ರಾತ್ರಿ ಹಗಲೆನ್ನದೇ ಅಂದಾಜು 600ಕ್ಕೂ ಹೆಚ್ಚು ಬಸ್‌ಗಳು, ನೂರಾರು ಕಾರು, ಮತ್ತಿತರ ಘನ ವಾಹನಗಳು, ಆಟೋರಿಕ್ಷಾಗಳು ಸಂಚರಿಸುತ್ತವೆ. ಮಂಗಳೂರು, ಬಿ.ಸಿ.ರೋಡ್, ಪಾಣೆಮಂಗಳೂರು, ಕಲ್ಲಡ್ಕವಾಗಿ ಹೋಗುವ ಎಲ್ಲ ವಾಹನಗಳೂ ಈ ಜಂಕ್ಷನ್ ದಾಟಿಯೇ ಹೋಗಬೇಕು.
ಸದುಪಯೋಗ ಆಗದ ಶೆಲ್ಟರ್
ಪ್ರಯಾಣಿಕರ ಸೌಕರ್ಯಕ್ಕಾಗಿ ಪುರಸಭೆ ಕಳೆದ ವರ್ಷ ಎರಡು ತಂಗುದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿತ್ತು. ಆದರೆ ಜನರು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕಾರಣ, ಬಸ್ ನಿಲ್ಲುವುದು ಒಂದು ಕಡೆ ಶೆಲ್ಟರ್ ಇನ್ನೊಂದು ಕಡೆ ಎಂಬಂತಾಗಿದೆ.
ಮೈಯೆಲ್ಲಾ ಕಣ್ಣಾಗಬೇಕು
ನರಿಕೊಂಬು ಶಂಭೂರಿನಿಂದ ಬರುವ ವಾಹನಗಳು ಪಾಣೆಮಂಗಳೂರು ಪೇಟೆಗೆ ಹೋಗಲು ಹರಸಾಹಸ ಪಡುತ್ತವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಶರವೇಗದಿಂದ ಬರುವ ವಾಹನಗಳು ತನ್ನ ಎಡಬಲದಿಂದ ಬಂದು ಹೆದ್ದಾರಿ ಹಾದು ಹೋಗುವ ವಾಹನಗಳಿಗೆ ಅವಕಾಶ ನೀಡದಿರುವ ದೊಡ್ಡ ಸಮಸ್ಯೆ ಇಲ್ಲಿ ಕಾಡುತ್ತಿದೆ. ಇದಕ್ಕೆ ತುರ್ತು ಪರಿಹಾರ ಕಾಣಬೇಕು.
ಅನೇಕ ಸಂದರ್ಭಗಳಲ್ಲಿ ವಾಹನ ಢಿಕ್ಕಿಯಂತಹ ಘಟನೆಗಳು ನಡೆದಿವೆ. ಶಾಲಾ ಮಕ್ಕಳು ಇಲ್ಲಿ ರಸ್ತೆ ದಾಟುವುದು ಅತ್ಯಂತ ಅಪಾಯಕಾರಿ. ದೊಡ್ಡವರು ಇಲ್ಲದೇ ರಸ್ತೆ ದಾಟುವಂತಿಲ್ಲ. ಆಟೋ ಸಹಿತ ಇತರ ವಾಹನಗಳು ಅಡ್ಡ ದಾಟುವಾಗ ಮೈಯೆಲ್ಲಾ ಕಣ್ಣಾಗಿಟ್ಟುಕೊಳ್ಳುವ ಅನಿವಾರ್ಯತೆ ತೊಲಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಅನೇಕ ಸಂದರ್ಭಗಳಲ್ಲಿ ಇಲ್ಲಿನ ಸತ್ಯಶ್ರೀ ಗುಡಿಯ ಎದುರಿಗೆ ದೈವದ ಪ್ರಸಾದ ಪಡೆಯಲು ವಾಹನ ಚಾಲಕರು ಕೆಲವೇ ಸೆಕುಂಡುಗಳ ಕಾಲ ಬಸ್ಸು ಮತ್ತು ಇತರ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ಸಣ್ಣದೊಂದು ತೊಡಕಾಗುತ್ತಿದೆ. ಗುಡಿಯ ಎದುರಿನ ಬದಲು ಸ್ವಲ್ಪ ಮುಂದೆ ವಾಹನವನ್ನು ನಿಲ್ಲಿಸಿದರೆ ಸಮಸ್ಯೆ ಬಗೆಹರಿಯುತ್ತದೆ.
ಹಾಗೆಯೇ ಇಲ್ಲಿನ ಹಾಲ್‌ನಲ್ಲಿ ಕಾರ್ಯಕ್ರಮಗಳು ಇದ್ದಾಗ ವಾಹನ ನಿಲುಗಡೆ ಜಾಗ ಸಾಕಾಗದು. ಸಿಕ್ಕಸಿಕ್ಕಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಅನಗತ್ಯವಾಗಿ ಹೆದ್ದಾರಿಯ ವಾಹನ ಮತ್ತು ಜನ ಸಂಚಾರಕ್ಕೂ ಅಡಚಣೆ ಆಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ.
ಇಲ್ಲಿನ ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವದ ಗುಡಿ ಜಂಕ್ಷನ್‌ಗೆ ರಕ್ಷಕವಚದಂತೆ ಇದೆ. ಅತ್ಯಂತ ಕಾರಣೀಕ ಗುಡಿಯಾಗಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು. ಮಂಗಳವಾರ ದಿನ ಇಲ್ಲಿ ಅಗೇಲು ಸೇವೆ ನಡೆಯುತ್ತದೆ. ಪ್ರಸ್ತುತ ಗುಡಿಯು ರಸ್ತೆಯ ಅಂಚಿನಲ್ಲಿದೆ. ಮುಂದಕ್ಕೆ ಇಲ್ಲಿ ಷಟ್‌ಪಥ ರಸ್ತೆ ಆಗುವಾಗ ( ಸಿಕ್ಸ್ ಲೇನ್) ದೈವದ ಗುಡಿಯ ಎದುರು ಸಾಕಷ್ಟು ಸ್ಥಳವನ್ನು ದೈವದ ಉದ್ದೇಶಕ್ಕೆ ನೀಡಬೇಕು. ಇದರಿಂದ ಇಲ್ಲಿನ ಸಂಚಾರದ ಒತ್ತಡವನ್ನು ವಿಂಗಡಿಸಿದಂತಾಗಲಿದ್ದು, ಅನುಕೂಲವಾಗಲಿದೆ.
ಕಾಂಕ್ರೀಟ್ ಆಗಬೇಕು
ಬಸ್‌ಗಳು ಹೆದ್ದಾರಿ ಡಾಮರು ರಸ್ತೆಯಿಂದ ಶೆಲ್ಟರ್‌ಗಳ ಹತ್ತಿರಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಹಾಯ ಆಗುವಂತೆ ಇಲ್ಲಿನ ಹೊಂಡಗಳನ್ನು ತುಂಬಿಸಿ ಡಾಮರು ಅಥವಾ ಕಾಂಕ್ರೀಟು ಕಾಮಗಾರಿ ಆದರೆ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಇದರೊಂದಿಗೆ ಸಾರ್ವಜನಿಕ ಶೌಚಾಲಯ, ಕಸ ಸಂಗ್ರಹ ತೊಟ್ಟಿ, ಬಸ್ ಶೆಲ್ಟರ್‌ನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು.
ಸಂಚಾರ ಪೊಲೀಸ್ ನೇಮಿಸಿ
ಈ ಜಂಕ್ಷನ್‌ನಲ್ಲಿ ನಿತ್ಯವೂ ಒಬ್ಬ ಸಂಚಾರ ಪೊಲೀಸರನ್ನು ನೇಮಿಸಬೇಕು (ಈಗ ಗೃಹರಕ್ಷಕ ಸಿಬಂದಿ ಸೇವೆ ಇದೆ). ಖಾಸಗಿ ವಾಹನ ನಿಲುಗಡೆಯ ಅಗತ್ಯಗಳನ್ನೂ ಪೂರೈಸಬೇಕು.
ನಿಯಂತ್ರಣಕ್ಕೆ ಕ್ರಮ
ಹೆದ್ದಾರಿ ವಿಸ್ತರಣೆ ಆಗುವ ಯೋಜನೆ ಜಾರಿಗೊಂಡರೆ ಜಂಕ್ಷನ್ ಸಮಸ್ಯೆ ನಿವಾರಣೆ ಆಗಬಹುದು. ವೃತ್ತವನ್ನು ನಿರ್ಮಿಸಿ ಅದರ ಮೂಲಕವೇ ಎಲ್ಲ ವಾಹನಗಳು ಸಾಗಿಹೋಗಬೇಕೆಂದು ನಿಯಮ ಮಾಡಿದರೆ ಸಂಚಾರದ ಒತ್ತಡ ನಿಯಂತ್ರಣಕ್ಕೆ ಬರಲಿದೆ. ಮಂಗಳೂರಿಂದ-ಕಲ್ಲಡ್ಕದ ಕಡೆಗೆ ಹೋಗುವ ಬಸ್‌ಗಳು ಇಲ್ಲಿನ ತಂಗುದಾಣಕ್ಕೆ ಬರುತ್ತಿಲ್ಲ. ಅಲ್ಲಿ ಡಾಮರು ಹಾಕಿದರೆ ಅನುಕೂಲ.
– ಯಲ್ಲಪ್ಪ ಎಸ್. ಎಸ್‌ಐ, ಬಂಟ್ವಾಳ ಸಂಚಾರ ಠಾಣೆ
ಅಭಿವೃದ್ಧಿಗೆ ಬದ್ಧ
ಬಿ.ಸಿ. ರೋಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಿರ್ಮಾಣದ ಬಳಿಕ ವಾಹನಗಳು ಶಿಸ್ತುಬದ್ಧವಾಗಿ ವೃತ್ತದ ನಿರ್ದಿಷ್ಟ ಬದಿಯಲ್ಲಿ ಸಾಗುವಂತಾಗಿದೆ. ಇದೇ ಮಾದರಿಯನ್ನು ಪಾಣೆಮಂಗಳೂರು ಜಂಕ್ಷನ್‌ಗೂ ಅನ್ವಯಿಸಬೇಕು. ಸಾರ್ವಜನಿಕ ಅವಶ್ಯವಾದ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಗ್ರಾ.ಪಂ. ಬದ್ದ. ಮುಂದಕ್ಕೆ ಈ ರಾಷ್ಟ್ರೀಯ ಹೆದ್ದಾರಿ ಆರು ಪಥವಾಗುವಾಗ ತಂಗುದಾಣ ಸಹಿತ ಎಲ್ಲ ಅನುಕೂಲಗಳನ್ನು ಕಲ್ಪಿಸಲು ಗ್ರಾ.ಪಂ. ಸಹಕಾರ ನೀಡಲಿದೆ.
- ಯಶೋಧರ ಕರ್ಬೆಟ್ಟು
ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.