ಫುಟ್‌ಪಾತ್ ಇಲ್ಲದೇ ಪಾದಚಾರಿಗಳಿಗೆ ತೀವ್ರ ಸಮಸ್ಯೆ
Team Udayavani, Dec 21, 2017, 3:39 PM IST
ಬಂಟ್ವಾಳ: ಅಭಿವೃದ್ಧಿಯತ್ತ ಸಾಗುತ್ತಿರುವ ಬಿ.ಸಿ. ರೋಡ್ ಪಟ್ಟಣದಲ್ಲಿ ಜನಸಂಚಾರಕ್ಕೆ ಸರಿಯಾದ ಫುಟ್‌ಪಾತ್ (ಕಾಲುದಾರಿ) ಇರದ ಕಾರಣ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಪಟ್ಟಣದ ಹಲವೆಡೆ ಇಂದಿಗೂ ಜನರು ರಸ್ತೆ ಮಧ್ಯೆ ನಡೆಯ ಬೇಕಿದೆ. ರಸ್ತೆ ದಾಟಲು ಹರಸಾಹಸ ಪಡಬೇಕಿದೆ.
ಒಂದು ದಶಕದ ಹಿಂದಿನ ಬೇಡಿಕೆಯಾದ ಸರ್ವಿಸ್ ರಸ್ತೆ ಪ್ರಸ್ತುತ ಸಂಸದರ ನಿಧಿಯಲ್ಲಿ ಕಾಂಕ್ರಿಟೀಕರಣಗೊಳ್ಳುತ್ತಿದೆ. ಆದರೆ ಇಲ್ಲಿಯೂ ಸಮರ್ಪಕ ಪುಟ್ ಪಾತ್ ನಿರ್ಮಾಣವಾಗಿಲ್ಲ. ಬಿ.ಸಿ. ರೋಡ್‌ನಲ್ಲಿ ಮಾತ್ರವಲ್ಲ, ಬಂಟ್ವಾಳ ಪೇಟೆಯಲ್ಲೂ ಇದೇ ಪರಿಸ್ಥಿತಿ ಇದೆ.
ಸಮಸ್ಯೆ
ಬಂಟ್ವಾಳ, ಬಿ.ಸಿ.ರೋಡ್, ಬಡ್ಡಕಟ್ಟೆ , ಜಕ್ರಿಬೆಟ್ಟು, ಬಂಟ್ವಾಳಪೇಟೆ, ಬಂಟ್ವಾಳ ಪುರಸಭೆ, ಪೊಲೀಸ್ ಠಾಣೆ, ಬಿ.ಸಿ.ರೋಡ್‌ನ ಸರ್ವಿಸ್ ರಸ್ತೆ , ಕೈಕುಂಜೆ ರಸ್ತೆ, ಸಂಚಯಗಿರಿ ರಸ್ತೆಗಳ ಸಹಿತ ಹಲವು ರಸ್ತೆಗಳಲ್ಲಿ ಪಾದಚಾರಿಗಳಿಗೆ ಸೂಕ್ತ ಸ್ಥಳವಿಲ್ಲ. ವೇಗವಾಗಿ ದ್ವಿಚಕ್ರ, ಘನ ವಾಹನಗಳು ಬಂದಾಗ ಸಾರ್ವಜನಿಕರು ದಿಕ್ಕೆಡುವ ಸ್ಥಿತಿ ಇದೆ.
ಚರಂಡಿ ಸ್ಲ್ಯಾಬ್
ಕೆಲ ಭಾಗಗಳಲ್ಲಿ ಚರಂಡಿ ಇದ್ದ ಜಾಗದಲ್ಲಿ ಸ್ಲಾéಬ್‌ಗಳನ್ನು ಹಾಕಿ ಅದನ್ನೇ ಫುಟ್‌ಪಾತ್ ಎಂದು ಬಿಂಬಿಸಲಾಗಿದೆ. ಆದರೆ ಆ ಜಾಗದಲ್ಲಿ ದ್ವಿಚಕ್ರವೋ ಅಥವಾ ಚತುಶ್ಚಕ್ರದ ವಾಹನಗಳೇನಾದರೂ ಬಂದು ನಿಂತರೆ ನಡೆಯುವುದೂ ಕಷ್ಟ .
ರಾಷ್ಟ್ರೀಯ ಅಥವಾ ರಾಜ್ಯ, ಸ್ಥಳೀಯ ರಸ್ತೆ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ಹಿಂದೆಲ್ಲ ಪಾದಚಾರಿಗಳಿಗೆ ರಸ್ತೆಯ ಎರಡು ಬದಿ ಒಂದು ಅಡಿ ಎತ್ತರಕ್ಕೆ ಕಾಲುದಾರಿ ನಿರ್ಮಿಸಲಾಗುತ್ತಿತ್ತು. ಈ ವ್ಯವಸ್ಥೆ ಈಗಿಲ್ಲ. ಬಿ.ಸಿ.ರೋಡ್‌ನ ಬಸ್ ನಿಲ್ದಾಣದ ಹಿಂಭಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆ ನಿಷೇಧ ಬೋರ್ಡು ಇರುವಲ್ಲಿಯೇ ಬೈಕುಗಳನ್ನು ನಿಲ್ಲಿಸಲಾಗುತ್ತದೆ.
ವಾಕಿಂಗ್ ಪಾಥ್
ಬಿ.ಸಿ. ರೋಡ್‌ನ ನಾರಾಯಣಗುರು ವೃತ್ತದಿಂದ ಗೂಡಿನಬಳಿಯಲ್ಲಿರುವ ಪ.ಪೂ. ಕಾಲೇಜುವರೆಗಿನ ಜಾಗದಲ್ಲಿ ಈಗ ಸಿಆರ್‌ಎಫ್ ನಿಧಿಯಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿಯ ಸಂದರ್ಭ ವಾಕಿಂಗ್ ಪಾಥ್‌ನ್ನು ಇಂಟರ್ ಲಾಕ್ ಲಾಕಿ ನಿರ್ಮಿಸುವ ಕಾರ್ಯ ಆರಂಭಗೊಂಡಿದೆ. ಇಂಥದ್ದೇ ವ್ಯವಸ್ಥೆ ಬೇರೆಡೆಗೂ ಬೇಕೆಂಬುದು ಸಾರ್ವಜನಿಕರ ಆಗ್ರಹ.
ಸರ್ವಿಸ್ ರಸ್ತೆಯಲ್ಲಿ ಫುಟ್ ಪಾತ್ ಇಲ್ಲ
ಬಿ.ಸಿ.ರೋಡ್‌ನ ಸರ್ವೀಸ್ ರಸ್ತೆ ಒಂದೂವರೆ ಕೋ.ರೂ. ವೆಚ್ಚದಲ್ಲಿ ಸಂಪೂರ್ಣ ಕಾಂಕ್ರೀಟ್ ಹಾಕುವ ಮೂಲಕ ಅಭಿವೃದ್ಧಿಗೊಳ್ಳುತ್ತಿದೆ. ಈ ರಸ್ತೆಯನ್ನು ಜನರಿಗೆ ಅನುಕೂಲವಾಗುವಂತೆ ವಿಸ್ತರಣೆಗೊಳಿಸುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದರು. ಈಗ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಕಾಮಗಾರಿ ನಡೆಯುತ್ತಿರುವ ರೀತಿ ನೋಡಿದರೆ ಫುಟ್‌ಪಾತ್ ಮಾಡುವುದಕ್ಕೆ ಅವಕಾಶವೇ ತೋರುತ್ತಿಲ್ಲ ಎನ್ನಲಾಗಿದೆ.
ಬಂಟ್ವಾಳ ಪುರಸಭೆ ವ್ಯಾಪ್ತಿ ಸುಂದರಗೊಳಿಸುವ ನಿಟ್ಟಿನಲ್ಲಿ ಬುಡಾ ಹಲವು ಯೋಜನೆ ಹಾಕಿಕೊಂಡಿದೆ. ಎಲ್ಲ ಕಟ್ಟಡಗಳ ಎದುರು ಇರುವ ಶೀಟ್‌ಗಳನ್ನು ತೆರವುಗೊಳಿಸುವಂತೆ ಈಗಾಗಲೇ ಪುರಸಭೆಗೆ ತಿಳಿಸಿದ್ದೇನೆ. ಅತ್ಯಗತ್ಯ ಫುಟ್‌ಪಾತ್ ನಿರ್ಮಿಸುವ ಕುರಿತು ಗಮನಹರಿಸಲಾಗುವುದು.
– ಸದಾಶಿವ ಬಂಗೇರ ಅಧ್ಯಕ್ಷರು,
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ
ರಾಜಾ ಬಂಟ್ವಾಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.