ಪೇಜಾವರ ಶ್ರೀಗಳಿಗೆ ದ.ಕ. ಬಿಜೆಪಿ, ವಿಹಿಂಪ ಶ್ರದ್ಧಾಂಜಲಿ
Team Udayavani, Jan 1, 2020, 11:11 PM IST
ಮಂಗಳೂರು: ಉನ್ನತ ವಿಚಾರ, ಶ್ರೇಷ್ಠ ಚಿಂತನೆ, ಸಮಾಜ ಮುಖೀ ಚಟುವಟಿಕೆಗಳಿಂದ ದೇಶ ವಿದೇಶಗಳಲ್ಲಿಯೂ ಜನಮನ್ನಣೆ ಗಳಿಸಿ ಕೃಷ್ಣೆಕ್ಯರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಬಿಜೆಪಿ ದ.ಕ. ಜಿಲ್ಲಾ
ಸಮಿತಿ ಶ್ರದ್ಧಾ ನಮನಗಳನ್ನು ಸಲ್ಲಿಸಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡುಬಿದಿರೆ ನುಡಿನಮನ ಸಲ್ಲಿಸಿ, ಪೇಜಾವರ ಶ್ರೀಗಳು ಕೇವಲ ಜನಸಾಮಾನ್ಯರ ಹೃದಯದಲ್ಲಿ ಮಾತ್ರವಲ್ಲ ದೇಶದ ಸಂತ ವಲಯಗಳಲ್ಲಿಯೂ ಗೌರವದ ಸ್ಥಾನ ಪಡೆದಿದ್ದರು. ಆಧ್ಯಾತ್ಮಿಕ, ಧಾರ್ಮಿಕ ಮಾತ್ರವಲ್ಲದೆ ದೇಶದ ಸಾಮಾಜಿಕ, ಶೈಕ್ಷಣಿಕ,
ರಾಜಕೀಯ ಕ್ಷೇತ್ರಗಳಲ್ಲಿನ ನಾಯಕ ರಿಗೆ ಯೋಗ್ಯ ಮಾರ್ಗದರ್ಶನ ಮಾಡಿ ಜನಮನ್ನಣೆ ಗಳಿಸಿದ್ದರು ಎಂದರು.
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಶಾಸಕರಾದ ಡಾ| ವೈ. ಭರತ್ ಕುಮಾರ್ ಶೆಟ್ಟಿ, ಡಿ. ವೇದವ್ಯಾಸ್ ಕಾಮತ್, ಪ್ರಮುಖರಾದ ಯೋಗೀಶ್ ಭಟ್, ಪದ್ಮನಾಭ ಕೊಟ್ಟಾರಿ, ರುಕ್ಮಯ್ಯ ಪೂಜಾರಿ, ಜಯರಾಮ ಶೆಟ್ಟಿ, ಕೆ. ಮೋನಪ್ಪ ಭಂಡಾರಿ, ರವಿಶಂಕರ ಮಿಜಾರ್, ಕಿಶೋರ್ ರೈ, ಸತೀಶ್ ಕುಂಪಲ, ಸುಲೋಚನಾ ಭಟ್ ಉಪಸ್ಥಿತರಿದ್ದರು.
ಆಧ್ಯಾತ್ಮ ಲೋಕದ ನಕ್ಷತ್ರ
ಮಂಗಳೂರು: ಅಧ್ಯಾತ್ಮ ಲೋಕದ ನಕ್ಷತ್ರ ಪೇಜಾವರ ಶ್ರೀಗಳು. ಎಲ್ಲರನ್ನು ಸಮಾನ ಮನಸ್ಸಿನಿಂದ ನೋಡಿ, ಎಲ್ಲ ವಿಚಾರಧಾರೆಗಳನ್ನು ಗೌರವಿಸಿದ ಅವರು ವಿಶ್ವಗುರುವಾಗಿ ನಮ್ಮ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ವಿಶ್ವ ಹಿಂದೂ ಪರಿಷತ್ ಮಂಗಳೂರು ವತಿಯಿಂದ ಬುಧವಾರ ನಗರದ ಸಂಘನಿಕೇತನದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಶ್ರದ್ಧಾಂಜಲಿ “ಗುರು ಸ್ಮರಣೆ’ಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಚರ್ಚೆಯನ್ನು ಸಮರ್ಥವಾಗಿ ಎದುರಿಸಿ ಅಷ್ಟೇ ಚಾಕಚಕ್ಯತೆಯಿಂದ ಉತ್ತರಿಸುವ ಅಗಾಧ ಶಕ್ತಿ ಅವರಲ್ಲಿತ್ತು. ಪ್ರಕೃತಿಯ ಉಳಿವಿಗಾಗಿ ಅತಿ ಹೆಚ್ಚು ಹೋರಾಟ ಮಾಡಿದ ಏಕೈಕ ಸಂತ ಪೇಜಾವರ ಶ್ರೀಗಳು ಎಂದರು.
ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರೊ| ಎಂ.ಬಿ. ಪುರಾಣಿಕ್ ಮಾತನಾಡಿ, ಹರಿಭಕ್ತಿ ಮತ್ತು ದೀನ ದಲಿತರ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ ಯತಿಶ್ರೇಷ್ಠರು ಅವರು ಎಂದು ಹೇಳಿದರು.
ಆರೆಸ್ಸೆಸ್ ಹಿರಿಯ ಪ್ರಚಾರಕ ಭಾ.ಮಾ. ರವೀಂದ್ರ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ನಿಟ್ಟೆ ವಿ.ವಿ. ಕುಲಪತಿ ಎನ್. ವಿನಯ ಹೆಗ್ಡೆ, ಸೇವಾ ಭಾರತಿ ಟ್ರಸ್ಟಿ ಪ್ರಮೀಳಾ, ಆರೆಸ್ಸೆಸ್ ಪ್ರಾಂತ ಸಹ ಸಂಘ ಚಾಲಕ ಡಾ| ವಾಮನ ಶೆಣೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.